For the best experience, open
https://m.samyuktakarnataka.in
on your mobile browser.

ಪ್ರಾಣದಾಹುತಿ ಅನಿವಾರ್ಯವಾದರೆ ನಾವು ಸಿದ್ಧ

03:28 AM Nov 07, 2024 IST | Samyukta Karnataka
ಪ್ರಾಣದಾಹುತಿ ಅನಿವಾರ್ಯವಾದರೆ ನಾವು ಸಿದ್ಧ

ವಿದೇಶೀಯರು ಹೇಳಿದ ಪ್ರತಿಯೊಂದನ್ನೂ ಸತ್ಯವೆಂದೇ ನಂಬಿ ಬೌದ್ಧಿಕ ದಾಸ್ಯಕ್ಕೊಳಗಾದ ತರುಣಮನಗಳಲ್ಲಿ ರಾಷ್ಟ್ರೀಯತೆಯ ಬೀಜ ಬಿತ್ತುವ ಆಧ್ಯಾತ್ಮಕೇಂದ್ರಿತ, ನೈತಿಕ ಮೌಲ್ಯ, ಸಂಸ್ಕಾರಾಧಾರಿತ ಶಿಕ್ಷಣ ನೀಡದ ಹೊರತು ಸ್ವಾತಂತ್ರ‍್ಯಪ್ರಾಪ್ತಿ ಕನಸಿನ ಮಾತು. ನಮ್ಮತನವನ್ನು ಮರೆತು ವಿಷಣ್ಣವದನರಾಗಿರುವ ಭಾರತೀಯರ ಕ್ಷಾತ್ರವೃತ್ತಿಯನ್ನು ಜಾಗೃತಗೊಳಿಸುವ ವಿದ್ಯಾವ್ಯವಸ್ಥೆಯನ್ನು ತುರ್ತಾಗಿ ಜಾರಿಗೊಳಿಸುವ ಯೋಜನೆಯ ಏಕಘೋಷ ಸಹಸ್ರಕಂಠಗಳಿಂದ ಮೊಳಗಲಿ' ಎಂಬ ಸ್ಫೂರ್ತಿದಾಯಕ ಮಾತುಗಳಿಂದ ನಿದ್ರಿತ ಭಾರತವನ್ನು ಎಚ್ಚರಿಸಿದ ಛಲದಂಕಮಲ್ಲ ಬಿಪಿನ್ ಚಂದ್ರಪಾಲ್ ಕ್ರಾಂತಿಚಿಂತನೆಗಳ ಜನಕರೆಂದೇ ಲೋಕವಿಖ್ಯಾತರು. ಕ್ರಾಂತಿತವರು ಬಂಗಾಲದ ರಾಮಚಂದ್ರಪಾಲ್-ನಾರಾಯಣೀದೇವಿ ದಂಪತಿಗಳಿಗೆ ಜನಿಸಿದ ಬಿಪಿನ್ ಚಂದ್ರಪಾಲ್, ಹೆತ್ತವರ ಜೀವನರಕ್ಷಾಪಾಠದಲ್ಲಿ ರೂಪುಗೊಂಡ ಅದ್ವಿತೀಯ ಸಾಧಕ. ಸಾಮಾಜಿಕ ಸುಧಾರಣೆಯ ದಾರಿ ಹಾಗೂ ಸ್ವಾತಂತ್ರ‍್ಯ ಸಮರಗಾಥೆಯನ್ನು ಕೇಳಿ ಪೂರ್ಣ ಸ್ವರಾಜ್ಯದ ಕನಸು ಕಂಡ ಬಾಲಕನಿಗೆ ಪರದೇಶಿಗಳ ಆಟಾಟೋಪಕ್ಕೆ ಅಂಕುಶ ಹಾಕುವುದರಲ್ಲೇ ಅಮಿತೋತ್ಸಾಹ. ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನಕ್ಕೆ ತೆರಳಿದರೂ ಅನ್ಯಾನ್ಯ ಕಾರಣಗಳಿಂದ ಉನ್ನತ ಶಿಕ್ಷಣದ ಕನಸು ನನಸಾಗಲಿಲ್ಲ. ಬ್ರಹ್ಮಸಮಾಜದ ಸಮಾಜವಾದಿ ಸುಧಾರಣಾ ಕ್ರಮಗಳಿಂದ ಆಕರ್ಷಿತರಾದ ಪಾಲ್, ರಾಷ್ಟ್ರೀಯ ಜೀವನವನ್ನಾರಂಭಿಸಿ ಭಾರತೀಯ ಸಚ್ಚಿಂತನೆಯ ಪ್ರಸಾರಕ್ಕೆ ಮುಂದಡಿಯಿಟ್ಟರು. ನಾಲ್ಕು ಗೋಡೆಯ ನಡುವೆ ಕಲಿಯಲು ಅವಕಾಶ ಲಭಿಸದಿದ್ದರೂ ಜೀವನ ವಿಶ್ವವಿದ್ಯಾಲಯದ ನಿರಂತರ ವಿದ್ಯಾರ್ಥಿಯಾಗಿ ಭಾರತೀಯ ಸಂಸ್ಕೃತಿ ಮತ್ತು ಉನ್ನತ ಪರಂಪರೆಯ ರಾಯಭಾರಿಯಾಗುವ ಕನಸು ಕಂಡರು. ಅರವಿಂದ ಘೋಷರೊಡಗೂಡಿ ಸಮಗ್ರ ಸ್ವರಾಜ್ಯದ ನೀಲನಕಾಶೆ ರೂಪಿಸಿದ ಬಿಪಿನರು ವಿದೇಶೀ ವಸ್ತುಗಳ ಬಹಿಷ್ಕಾರ ಹಾಗೂ ಸಂಪೂರ್ಣ ಸ್ವದೇಶೀ ಬಳಕೆಗೆ ಆಂದೋಲನವನ್ನೇ ಆರಂಭಿಸಿದರು. ಕಡಿಮೆ ಬೆಲೆಗೆ ಸಿಗುವುದೆಂದು ಭಾವಿಸುವ ವಿದೇಶೀ ವಸ್ತುಗಳು ಆಕರ್ಷಕವಾಗಿರುವುದು ಸಹಜ. ಆದರೆ ಗೃಹಕೈಗಾರಿಕೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಬಡಭಾರತೀಯರ ಹೊಟ್ಟೆಗೆ ಹೊಡೆದು ನಮ್ಮವರನ್ನೇ ಬೀದಿಗೆ ತಳ್ಳುವ ಆರ್ಥಿಕ ಪಾರತಂತ್ರ‍್ಯದ ಬಗ್ಗೆ ಜನಜಾಗೃತಿಗೈದ ಚಂದ್ರಪಾಲರು ವಿದೇಶೀ ವ್ಯಾಮೋಹವನ್ನು ಉಗ್ರವಾಗಿ ಖಂಡಿಸಿದರು. ಆದರ್ಶಗಳು ಪುಸ್ತಕ ಅಥವಾ ಮಾತುಗಳಲ್ಲಿರದೆ ಸ್ವಂತ ಆಚರಣೆಗಳಲ್ಲಿ ಅನುಷ್ಠಾನವಾಗಬೇಕೆಂಬ ಚಿಂತನೆಗೆ ಪೂರಕವಾಗಿ ವಿಧವಾ ವಿವಾಹವನ್ನು ಪ್ರೋತ್ಸಾಹಿಸಿ ವಿಧವೆಯನ್ನೇ ಮದುವೆಯಾದರು. ಜಾತಿಪದ್ಧತಿಯನ್ನು ಬಲವಾಗಿ ವಿರೋಧಿಸಿದ ಬಿಪಿನರು ಹುಟ್ಟಿನಿಂದಲೇ ಜಾತಿ ಹಣೆಪಟ್ಟಿ ಹಚ್ಚುವ ಮನೋಸ್ಥಿತಿಯನ್ನು ಒಪ್ಪದೆ ವೈಚಾರಿಕ ವಿಕಸನವೇ ಶ್ರೇಷ್ಠವೆಂದು ಸಾರಿದ ಮಾನವತಾವಾದಿ. ಪತ್ರ ಹಾಗೂ ಮನವಿಗಳನ್ನು ಸಲ್ಲಿಸಿ ಸ್ವಾತಂತ್ರ‍್ಯವನ್ನು ಅಪೇಕ್ಷಿಸುವುದು ಮೂರ್ಖತನ. ಭಿಕ್ಷೆ ಕೇಳಲು ಸ್ವಾತಂತ್ರ‍್ಯ ಬ್ರಿಟಿಷರ ಮನೆಯ ಆಸ್ತಿಯಲ್ಲ. ಸ್ವರಾಜ್ಯ - ಸ್ವಶಾಸನ ನಮ್ಮ ಹಕ್ಕೆಂಬ ನಿಷ್ಠುರ ನುಡಿಯಿಂದ ರಾಷ್ಟ್ರವ್ಯಾಪಿ ಚಳವಳಿಗೆ ಬಲತುಂಬಿದ ಬಿಪಿನರು ವಂಗಭಂಗ ವಿರೋಧೀ ಹೋರಾಟದ ಅಧ್ವರ್ಯು. ತಿಲಕ್, ಲಾಲಾಜಿ ಜೊತೆ ದೇಶದ ಮೂಲೆಮೂಲೆಗೆ ದೇಸೀಕಾವನ್ನು ಪಸರಿಸಿದ ಚಂದ್ರಪಾಲರುವಂದೇ ಮಾತರಂ' ರಣಮಂತ್ರದ ಅಗತ್ಯತೆಯನ್ನು ಪ್ರತಿಪಾದಿಸಿದರು. ಬಂಗಾಳ ವಿಭಜನೆಯ ಕುತಂತ್ರವನ್ನು ಹಿಮ್ಮೆಟ್ಟಿಸಿ ದೇಶದೇಳಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಲೋಸುಗ ಭಾರತಪರ್ಯಟನೆಗೆ ಹೊರಟ ಪಾಲ್ ಪ್ರಭಾವದಿಂದಲೇ ತೂತುಕುಡಿಯಲ್ಲಿ ಸ್ವದೇಶೀ ಹಡಗು ಪ್ರಯಾಣ ಸಾಧ್ಯವಾಯಿತು. ಶ್ರೇಷ್ಠ ಇತಿಹಾಸವನ್ನು ಮೈಮರೆತು, ಸ್ವಂತಿಕೆಯನ್ನು ಅಡವಿಟ್ಟು ಕೆಂಪಂಗಿಗಳೆದುರು ದೈನ್ಯತೆಯಿಂದ ಕೈಜೋಡಿಸುವ ಕಾಂಗ್ರೆಸ್ ಕಾರ್ಯಸೂಚಿಯನ್ನು ಟೀಕಿಸಿ ಆನಿ ಬೆಸೆಂಟ್ ನೇತೃತ್ವದ ಹೋಂ ರೂಲ್ ಚಳವಳಿಯನ್ನು ಬೆಂಬಲಿಸಿದರು. ನಿರ್ದಿಷ್ಟ ಗುರಿಯಿಲ್ಲದ ಅಸಹಕಾರ ಆಂದೋಲನವನ್ನು ಖಂಡಿಸಿದ ಬಿಪಿನರ ನಿಲುವಿಗೆ ಅಸಮ್ಮತಿ ಸೂಚಿಸಿದ್ದ ಬಹುಮಂದಿಗೆ ಸತ್ಯದರ್ಶನಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ಹಣವನ್ನು ಕಸವೆಂದು ಭಾವಿಸಿ ಗುಣಗ್ರಾಹಿಯಾದ ಬಿಪಿನರು ಕೂಲಿಕಾರ್ಮಿಕರು ಹಾಗೂ ಚಹಾತೋಟಗಳ ಕೆಲಸಗಾರರ ನ್ಯಾಯಕ್ಕಾಗಿ ಅಹರ್ನಿಶಿ ದುಡಿದರು. ಟ್ರಿಬ್ಯೂನ್, ನ್ಯೂ ಇಂಡಿಯಾ, ವಂದೇ ಮಾತರಂ ಪತ್ರಿಕೆಗಳನ್ನು ಆರಂಭಿಸಿ ಲೇಖನಗಳ ಮೂಲಕವೇ ಆಂಗ್ಲಗದ್ದುಗೆಯನ್ನು ಕೆಡವಿದ ಬಿಪಿನ್ ಚಂದ್ರಪಾಲರು ಲೇಖಕರಾಗಿ, ಅದ್ಭುತ ಮಾತುಗಾರರಾಗಿ ಭಾರತೀಯ ಸ್ವಾತಂತ್ರ‍್ಯ ಹೋರಾಟಕ್ಕೆ ಶಕ್ತಿತುಂಬಿದ ಆದರ್ಶ ಕ್ರಾಂತಿಕಾರಿ.
ನಾಡಿನ ಗೌರವರಕ್ಷಣೆ ಹಾಗೂ ಸ್ವಾತಂತ್ರ‍್ಯದ ಗಳಿಕೆ ನಮ್ಮೆಲ್ಲರ ಜವಾಬ್ದಾರಿ. ತಿಂಗಳುಗಳು ಅಥವಾ ವರ್ಷಗಳ ಲೆಕ್ಕದಲ್ಲಲ್ಲ, ಭಾರತದ ದಾಸ್ಯಮುಕ್ತಿಗಾಗಿ ಬದುಕನ್ನೇ ಸಮರ್ಪಿಸಲು ಸಿದ್ಧರಿರುವ ತರುಣಪಡೆಯ ತ್ಯಾಗದಿಂದಷ್ಟೇ ಸರ್ವಶ್ರೇಷ್ಠ ದೇಶ ಕಟ್ಟಲು ಸಾಧ್ಯ. ವಿದೇಶೀಯರ ಆಳ್ವಿಕೆ ಸಹಿಸಿ, ನೊಂದು, ಬೆಂಡಾಗಿ, ಅಸಹಾಯಕ ಸ್ಥಿತಿ ತಲುಪಿ ಆಗಸದತ್ತ ಮುಖ ಮಾಡುತ್ತಿರುವ ಜನಸಾಮಾನ್ಯರ ಜೀವನದಲ್ಲಿ ನೆಮ್ಮದಿಯ ನಾಳೆಗಳು ಬರಲು ತ್ಯಾಗ ಅನಿವಾರ್ಯ. ಭಾರತ ನಮ್ಮದೆಂಬ ಅಭಿಮಾನದಿಂದ ಮುಂದೆ ಸಾಗಿದರೆ ಯಾವ ವಿದೇಶೀ ಶಕ್ತಿಗಳಿಂದಲೂ ನಮ್ಮ ಜನ್ಮಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ. ಏಕಮನಸ್ವಿಗಳಾಗಿ ಉದಾತ್ತ ಗುರಿಯತ್ತ ಮುನ್ನಡೆಯಲು ಇಂದು ಆರಂಭಿಸುತ್ತಿರುವ ವಿದೇಶಕೇಂದ್ರಿತ ಸ್ವದೇಶೀ ಹೋರಾಟದ ವಿರಾಟ್ ಸ್ವರೂಪೀ ಗದರ್ ಚಳವಳಿ ಭಾರತದ ಮೂಲೆಮೂಲೆಗಳನ್ನು ತಲುಪಿದ ಮರುಕ್ಷಣವೇ ನಾಡಿನ ಸ್ವಾತಂತ್ರ‍್ಯ ಧ್ವಜ ನಭದೆತ್ತರ ಹಾರಾಡುವುದು ನಿಶ್ಚಿತ' ಎಂಬ ಪ್ರೇರಣಾದಾಯಿ ಲೇಖನ ಮತ್ತು ಹರಿತವಾದ ಮಾತುಗಳಿಂದ ಹದಿಹರೆಯದ ಚುರುಕುಬುದ್ಧಿಯ ದೇಶಪ್ರೇಮಿಗಳಲ್ಲಿ ಅಮಿತೋತ್ಸಾಹ ತುಂಬಿದ ಪ್ರಸಿದ್ಧ ಕ್ರಾಂತಿಕಾರಿ, ವಿದ್ವಾಂಸ, ಕೃಷಿ ವಿಜ್ಞಾನಿ ಪಾಂಡುರಂಗ ಸದಾಶಿವ ಖಾಂಖೋಜೆ, ಗದರ್ ಹೋರಾಟದ ಆರಂಭದ ದಿನಗಳಿಂದಲೂ ಜೊತೆಯಾಗಿದ್ದ ಹಲವು ರಾಷ್ಟ್ರವಾದಿ ಸಂಘಟನೆಗಳ ಸಂಸ್ಥಾಪಕ. ಮಹಾರಾಷ್ಟ್ರದ ವಾರ್ಧಾದ ಪಂಡಿತ ಪರಂಪರೆಯ ಕುಟುಂಬದಲ್ಲಿ ಜನಿಸಿದ ಪಾಂಡುರಂಗರು, ಪ್ರೌಢಶಾಲಾ ದಿನಗಳಲ್ಲೇ ಸ್ವಾತಂತ್ರ‍್ಯ ಹೋರಾಟದತ್ತ ಆಕರ್ಷಿತರಾದರು. ಲೋಕಮಾನ್ಯ ತಿಲಕರ ಉತ್ಕೃಷ್ಟ ಬರಹಗಳನ್ನೂ, ತೀಕ್ಷ್ಣ ಮಾತುಗಳನ್ನೂ ಓದಿದ-ಕೇಳಿದ ಬಾಲಕನ ಮನಸ್ಸನ್ನು ದೇಶಪ್ರೇಮದ ಗುಂಗು ಆವರಿಸಿತು. ಕೇಸರಿ, ಮರಾಠಾದ ಲೇಖನಗಳನ್ನು ಅಧ್ಯಯನದ ದೃಷ್ಟಿಯಿಂದ ಓದತೊಡಗಿದ ಬಾಲಕ ಪಾಂಡುರಂಗರು, ತಾವೂ ಮನೆಬಿಟ್ಟು ತೆರಳಿ ಹೋರಾಟಗಾರರಾಗುವ ಬಯಕೆ ವ್ಯಕ್ತಪಡಿಸಿದರು. ಓದಿನ ಬಳಿಕ ಮುಂದಿನ ನಿರ್ಧಾರಕ್ಕೆ ಅಡ್ಡಿಯಿಲ್ಲವೆಂಬ ಹಿರಿಯರ ಮಾತನ್ನು ಅಲ್ಲಗಳೆಯದೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕೆಗೆ ತೆರಳಿದ ಪಾಂಡುರಂಗರು ಮುಂದೆ ಭಾರತಕ್ಕೆ ಶಾಶ್ವತವಾಗಿ ಮರಳಿದ್ದು ನಾಲ್ಕು ದಶಕಗಳ ಬಳಿಕ. ವಾಷಿಂಗ್ಟನ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಪಂಡಿತ್ ಕಾನ್ಶಿರಾಮ್, ಲಾಲಾ ಹರದಯಾಳ್, ತಾರಕಾನಾಥ ದಾಸ್ ಮೊದಲಾದ ಅತಿರಥರ ಪರಿಚಯವಾಯಿತು. ಪೋರ್ಟ್ಲ್ಯಾಂಡ್‌ನ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್, ಪೆಸಿಫಿಕ್ ಕೋಸ್ಟ್ ಹಿಂದುಸ್ಥಾನ್ ಅಸೋಸಿಯೇಶನ್, ಗದರ್ ಪಾರ್ಟಿ ಮೊದಲಾದ ಅನೇಕ ರಚನಾತ್ಮಕ ಗುಂಪುಗಳ ಆರಂಭದ ದಿನಗಳಲ್ಲಿ ಅವುಗಳ ಜೊತೆಯಾಗಿದ್ದು ಎತ್ತರಕ್ಕೇರಿಸಿದ ಪಾಂಡುರಂಗರು, ವಿದೇಶಗಳಲ್ಲಿ ವಾಸವಿದ್ದ ಅನೇಕ ಕಾರ್ಯಕರ್ತರನ್ನು ಭೇಟಿ ಮಾಡಿದರಲ್ಲದೆ ವೆಸ್ಟ್ ಕೋಸ್ಟ್ ಮಿಲಿಟರಿ ಅಕಾಡೆಮಿಯ ಸದಸ್ಯತನ ಪಡೆದರು. ಕ್ರಾಂತಿಯನ್ನು ಪ್ರೇರೇಪಿಸುವ ಸಾಹಿತ್ಯ ರಚನೆಯಿಂದ ಭೀತಿಗೊಳಗಾದ ಬ್ರಿಟಿಷರು ಖಾಂಖೋಜೆಯವರನ್ನುಡೇಂಜರಸ್ ಇಂಡಿವಿಜುವಲ್' ಎಂದು ಕರೆದು ಭಾರತದೊಳಗೆ ಕಾಲಿಡದಂತೆ ನಿಷೇಧಿಸಿದರು. ಗಡಿಯಾಚೆ ಇದ್ದರೂ ದೇಶಹಿತದ ಕಾರ್ಯಕ್ಕೆ ಗುಪ್ತವಾಗಿಯೇ ಸಹಕರಿಸಿದ ತರುಣನಿಗೆ ಮೈಯೆಲ್ಲ ಕಣ್ಣು. ತಾಯ್ನೆಲದ ಸೇವೆಗೈಯಲು ಅದಾವ ಅಪಮಾನ, ನೋವನ್ನಾದರೂ ಸಹಿಸುವೆನೆಂದು ಕುಟುಂಬಿಕರಿಗೆ ಪತ್ರ ಬರೆದು, ತಾನು ಸ್ವತಂತ್ರ ಭಾರತ ಸಂಭ್ರಮಕ್ಕೆ ಸಾಕ್ಷಿಯಾಗುವ ಶಪಥಗೈದರು. ಮೆಕ್ಸಿಕೊಗೆ ತೆರಳಿ ಅಲ್ಲಿ ನೆಲೆ ಕಂಡುಕೊಂಡು ರಾಷ್ಟ್ರೀಯ ಕೃಷಿ ಕಾಲೇಜಿನ ಉಪನ್ಯಾಸಕರಾಗಿ ಹೊಸ ಬದುಕನ್ನು ಆರಿಸಿದರೂ ಭಾರತದ ಸ್ವಾತಂತ್ರ‍್ಯಪ್ರಾಪ್ತಿಗಾಗಿ ವಿದೇಶದಲ್ಲಿ ಕುಳಿತೇ ಸಹಕರಿಸಿದರು. ಸ್ವಂತಕ್ಕಾಗಿ ಹಗಲನ್ನೂ, ಹೋರಾಟಕ್ಕಾಗಿ ಇರುಳನ್ನೂ ಆಯ್ದು ಮುನ್ನುಗ್ಗಿದ ಅವರ ಛಲಬಲಕ್ಕೆ ಅವರೇ ಪರ್ಯಾಯ. ಸ್ವಾತಂತ್ರ‍್ಯದ ತರುವಾಯ ಕಷ್ಟನಷ್ಟಗಳನ್ನು ಅನುಭವಿಸಿ ದೇಶಕ್ಕೆ ಮರಳಿ ಸಾಮಾಜಿಕ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿ ಸ್ವರ್ಗಸ್ಥರಾದ ಪಾಂಡುರಂಗ ಸದಾಶಿವ ಖಾಂಖೋಜೆಯವರ ದಿವ್ಯಜೀವನ ನಮ್ಮ ನಾಡಿಗೆ ಸದಾ ಹೆಮ್ಮೆ.
ಭಾರತದ ಸ್ವಾತಂತ್ರ‍್ಯಕ್ಕಾಗಿ ಹಗಲಿರುಳೆನ್ನದೆ ದುಡಿದು, ಜೀವಿತಾವಧಿಯ ಪ್ರತಿಕ್ಷಣವನ್ನೂ ಸಮರ್ಪಿಸಿ ಅಮರರಾದ ಬಿಪಿನ್ ಚಂದ್ರಪಾಲ್ ಮತ್ತು ಪಾಂಡುರಂಗ ಸದಾಶಿವ ಖಾಂಖೋಜೆಯವರ ಜನ್ಮದಿನವಿಂದು. ನಾಡಿನ ಸಮುನ್ನತಿಗಾಗಿ ಸರ್ವೋಚ್ಚ ತ್ಯಾಗಗೈದ ಉಭಯ ಮಹಾವೀರರನ್ನು ಸ್ಮರಿಸಿ ಅವರ ಜೀವನ ಮೌಲ್ಯಗಳನ್ನು ಅಳವಡಿಸಿ ಮುಂದಡಿಯಿಡುವುದಕ್ಕೆ ಇಂದಿಗಿಂತ ಶುಭವಾದ ಮತ್ತೊಂದು ದಿನ ಸಿಗದು.