For the best experience, open
https://m.samyuktakarnataka.in
on your mobile browser.

ಪ್ರಾಣಲಿಂಗದ ಪೂಜೆ

03:00 AM Feb 19, 2024 IST | Samyukta Karnataka
ಪ್ರಾಣಲಿಂಗದ ಪೂಜೆ

ಈ ಪ್ರಾಣಲಿಂಗದ ಅನುಸಂಧಾನದ ವಿಧಾನವು ವೀರಶೈವ ಸಿದ್ಧಾಂತದಲ್ಲಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ನಿರೂಪಿಸಲ್ಪಟ್ಟಿದೆ. ನೂರೊಂದು ಸ್ಥಳಗಳಲ್ಲಿ ಪ್ರಾಣಲಿಂಗಾರ್ಚನವೆಂಬ ಸ್ಥಳವೊಂದುಂಟು. ಈ ಸ್ಥಳದಲ್ಲಿ ಈ ಪ್ರಾಣಲಿಂಗದ ಪೂಜೆಗೆ ಬಾಹ್ಯ ಪದಾರ್ಥಗಳು ನಿರುಪಯೋಗಿ, ಕಾರಣ ಆಂತರಿಕ ಭಾವ ವಸ್ತುಗಳಿಂದಲೇ ಅದನ್ನು ಪೂಜಿಸಬೇಕೆಂದು ಸೂಚಿಸಲಾಗಿದೆ. ಸಾಮಾನ್ಯವಾಗಿ ಸಾಧಕನು ಇಷ್ಟಲಿಂಗವನ್ನು ಜಲ, ಭಸ್ಮ, ಹೂ-ಪತ್ರಿ, ಧೂಪ ದೀಪ ಮುಂತಾದ ಉಪಚಾರಗಳಿಂದ ಪೂಜಿಸುತ್ತಾನೆ. ಆದರೆ ಈ ಪ್ರಾಣಲಿಂಗದ ಪೂಜೆಗೆ ಆಂತರಿಕ ಸದ್ಗುಣಗಳನ್ನು ಉಪಚಾರಗಳ ರೂಪದಲ್ಲಿ ಉಪಯೋಗಿಸಿಕೊಳ್ಳಬೇಕಾಗುತ್ತದೆ.
ಕ್ಷಮಾಭಿಷೇಕ ಸಲಿಲಂ ವಿವೇಕೋ ವಸ್ತ್ರಮುಚ್ಯತೇ |
ಸತ್ಯಮಾಭರಣಂ ಪ್ರೋಕ್ತಂ ವೈರಾಗ್ಯಂ ಪುಷ್ಪಮಾಲಿಕಾ ||
ಗಂಧಃ ಸಮಾಧಿಸಂಪತ್ತಿರಕ್ಷತಾ ನಿರಹಂಕೃತಿಃ |
ಶ್ರದ್ಧಾ ಧೂಪೋ ಮಹಾಜ್ಞಾನಂ ಜಗದ್ಭಾಸಿ ಪ್ರದೀಪಿಕಾ ||
ಭ್ರಾಂತಿಮೂಲಪ್ರಪಂಚಸ್ಯ ನಿವೇದ್ಯಂ ತನ್ನಿವೇದನಂ|
ಮೌನಂ ಘಂಟಾಪರಿಸ್ಪಂದಸ್ತಾಂಬೂಲಂ ವಿಷಯಾರ್ಪಣಮ್
ವಿಷಯಭ್ರಾಂತಿರಾಹಿತ್ಯಂ ತತ್ ಪ್ರದಕ್ಷಿಣಕಲ್ಪನಾ |
ಬುದ್ದೇಸ್ತದಾತ್ಮಿಕಾ ಶಕ್ತಿರ್ನಮಸ್ಕಾರಕ್ರಿಯಾ ಮತಾ |
ಏವಂ ವಿಧೈರ್ಭಾವಪುಷ್ಪೈರುಪಚಾರೈರದೂಷಿತೈಃ |
ಪ್ರತ್ಯುನ್ಮುಖಮನಾ ಭೂತ್ವಾ ಪೂಜೆಯೇಲ್ಲಿಂಗಮಾಂತರಮ್ |
ಸಿದ್ಧಾಂತ ಶಿಖಾಮಣಿಯ ಈ ಶ್ಲೋಕಗಳಲ್ಲಿ ಪ್ರಾಣಲಿಂಗಕ್ಕೆ ಸಲ್ಲುವ ಆಂತರಿಕ ಸದ್ಗುಣಗಳ ಉಪಚಾರಗಳನ್ನು ಪ್ರತಿಪಾದಿಸಲಾಗಿದೆ. ಸ್ತುತಿ-ನಿಂದೆಗಳು ಬಂದಾಗ ಹರ್ಷ-ಶೋಕಗಳಲ್ಲಿ ಮುಳುಗದಿರುವುದು ಕ್ಷೇಮ. ಸಾಧಕ ಇದನ್ನು ತನ್ನಲ್ಲಿ ಅಳವಡಿಸಿಕೊಂಡರೆ ಅದು ಪ್ರಾಣಲಿಂಗಕ್ಕೆ ಅಭಿಷೇಕ ಜಲ. ವಾಸ್ತವಿಕ ಸಂಗತಿಯನ್ನು ಹಿತವಾಗಿ ಪ್ರಿಯವಾಗಿ ಹೇಳುವುದು ಸತ್ಯ. ಇದು ಪ್ರಾಣಲಿಂಗಕ್ಕೆ ಅಲಂಕಾರ, ಇಹ-ಪರ ಭೋಗಗಳ ವಿಷಯದಲ್ಲಿ ನಿರಾಶೆಯೇ ವೈರಾಗ್ಯ ಇದು ಪ್ರಾಣಲಿಂಗಕ್ಕೆ ಪುಷ್ಪಮಾಲೆ. ಧೈಯವಸ್ತುವಿನ ಮೇಲೆ ಮನಸ್ಸಿನ ಕೇಂದ್ರೀಕರಣವು ಸಮಾಧಿ. ಇದುವೆ ಈ ಲಿಂಗಕ್ಕೆ ಗಂಧ, ಅಭಿಮಾನರಾಹಿತ್ಯ ರೂಪವಾದ ನಿರಹಂಕಾರವೇ ಪ್ರಾಣಲಿಂಗಕ್ಕೆ ಅಕ್ಷತೆ, ಗುರು, ಆಪ್ತವಚನ ಮತ್ತು ಇಷ್ಟ ದೇವತೆ ಮುಂತಾದ ಶ್ರದ್ಧೆಯ ವಸ್ತುವಿಷಯಕವಾದ ಶ್ರದ್ಧೆ ಇದಕ್ಕೆ ಧೂಪ. ಬ್ರಹ್ಮಾಂಡದ ಸಮಸ್ತ ವಿಷಯವನ್ನು ಬೆಳಗುವ ಬ್ರಹ್ಮಚೈತನ್ಯದ ಅರಿವು ಇದಕ್ಕೆ ದೀಪ. ಐಂದ್ರಿಯಿಕ ವಿಷಯಗಳ ತ್ಯಾಗವೇ ತಾಂಬೂಲ ಸಮರ್ಪಣೆ. ವಿಷಯಾಸಕ್ತಿಗೆ ಕಾರಣವಾದ ವಿಷಯಗಳಲ್ಲಿ ಸುಖವಿದೆ ಎಂಬ ಭ್ರಾಂತಿಯ ಪರಿತ್ಯಾಗವು ಇದಕ್ಕೆ ಪ್ರದಕ್ಷಿಣೆ. ಆಂತರಿಕ ಜ್ಯೋತಿಸ್ವರೂಪವಾದ ಪ್ರಾಣಲಿಂಗದ ಅನುಸಂಧಾನದಲ್ಲಿ ಬುದ್ಧಿಯನ್ನು ತಾದಾತ್ಮಗೊಳಿಸುವುದು ಅದಕ್ಕೆ ನಮಸ್ಕಾರ. ಇಂತಹ ಭಾವ ಪದಾರ್ಥಗಳಿಂದ ಪ್ರಾಣಲಿಂಗದ ಪೂಜೆ ಅನುಗೊಳ್ಳುತ್ತದೆ. ಇಂತಹ ಎಲ್ಲ ಉತ್ಕೃಷ್ಟ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಅವುಗಳ ಮೂಲಕ ಪ್ರಾಣಲಿಂಗದ
ಅರ್ಚನೆ ಮಾಡುವ ಸಾಧಕನು ಅಂತರಂಗದ ಯೋಗಸಾಧನೆಯಲ್ಲಿ ಗತಿಯನ್ನು ಪಡೆದುಕೊಳ್ಳತ್ತಾನೆ.