ಪ್ರಾಣಲಿಂಗ
ಜೀವನ್ಮುಕ್ತಿಗೆ ಉಪಾಯವಾದ ಲಿಂಗಗಳಲ್ಲಿ ಮುಖ್ಯವಾಗಿ ಅಂತರ್ಲಿಂಗ ಮತ್ತು ಬಹಿರ್ಲಿಂಗ ಎಂಬುದಾಗಿ ಎರಡು ವಿಧವಾಗಿವೆ. ಅಂತರ್ಲಿಂಗಗಳಲ್ಲಿ ಪ್ರಾಣಲಿಂಗವು ಪ್ರಮುಖವಾದುದು. ಈ ಪ್ರಾಣಲಿಂಗದ ಸ್ವರೂಪವನ್ನು ಉಪದೇಶಿಸುತ್ತ ಸಿದ್ಧಾಂತ ಶಿಖಾಮಣಿಯಲ್ಲಿ
ಪ್ರಾಣಾಪಾನಸಮಾಘಾತಾತ್ ಕಂದಮಧ್ಯಾದ್ಯದುತ್ಥಿತಂ |
ಪ್ರಾಣಲಿಂಗಂ ತದಾಖ್ಯಾತಂ ಪ್ರಾಣಪಾನನಿರೋಧಿಭಿಃ ||
ಎಂದು ನಿರೂಪಿಸಲಾಗಿದೆ.
ಪ್ರಾಣ, ಅಪಾನ, ಸಮಾನ, ಉದಾನ ಮತ್ತು ವ್ಯಾನ ಎಂಬ ಐದು ವಾಯುಗಳಲ್ಲಿ ಶಿವಯೋಗಸಾಧನೆಗೆ ಅನುಕೂಲವಾಗುವ ವಿಶಿಷ್ಟವಾದ ಪ್ರಾಣಾಯಾಮ ಪ್ರಕ್ರಿಯೆಗೆ ಪ್ರಾಣ ಮತ್ತು ಅಪಾನವಾಯುಗಳು ತುಂಬ ಮುಖ್ಯವಾದವುಗಳು. ಶಿವಯೋಗ ಸಾಧಕನು ದೀರ್ಘ ಪ್ರಾಣಾಯಾಮದ ಮೂಲಕ ಬಹಿರ್ಮುಖವಾಗಿ ಹರಿಯುವ ತನ್ನ ಪ್ರಾಣವಾಯುವನ್ನು ಪ್ರಾಣಾಯಾಮದ ಮೂಲಕ ನಿಯಂತ್ರಿಸಿಕೊಂಡು ಅಂತರ್ಮುಖಗೊಳಿಸಿಕೊಂಡು ಅದನ್ನು ಗುದಸ್ಥಾನದಲ್ಲಿರುವ ಅಪಾನವಾಯು ಪರ್ಯಂತವಾಗಿ ಕೊಂಡೊಯ್ದಾಗ ಮತ್ತು ಅಧೋಮುಖವಾಗಿ ಹರಿಯು ಅಪಾನ ವಾಯುವನ್ನು ಊರ್ಧ್ವಮುಖಗೊಳಿಸಿಕೊಂಡಾಗ ಅಂತರಂಗದಲ್ಲಿ ಈ ಪ್ರಾಣ ಮತ್ತು ಅಪಾನ ಈ ಎರಡೂ ವಾಯುಗಳ ಘರ್ಷಣೆಯುಂಟಾಗುತ್ತದೆ. ಆಗ ಮರ ಮರ ಮಂಥನದಿಂದ ಅಗ್ನಿ ಉದ್ಭವಿಸುವಂತೆ ಪ್ರಾಣ ಮತ್ತು ಅಪಾನವಾಯುಗಳ ಘರ್ಷಣೆಯಿಂದ ಅಲ್ಲಿ ಒಂದು ದಿವ್ಯವಾದ ಜ್ಯೋತಿಯು ಉತ್ಪನ್ನವಾಗುತ್ತದೆ. ನೀರು ಅಧೋಮುಖವಾಗಿ ಹರಿಯುವ ಸ್ವಭಾವವನ್ನು ಹೊಂದಿದಂತೆ ಅಗ್ನಿಯು ಊರ್ಧ್ವಮುಖವಾಗಿ ಹರಿಯುವ ಸ್ವಭಾವ ಹೊಂದಿರುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳ ಸಂಘರ್ಷದಿಂದ ಅಂತರಂಗದಲ್ಲಿ ಉತ್ಪನ್ನವಾದ ಈ ಜ್ಯೋತಿಯು ತನ್ನ ಸ್ವಭಾವಕ್ಕನುಗುಣವಗಿ ಊರ್ಧ್ವಮುಖವಾಗಿ ಮೇಲೆ ಬಂದು ಹವಳದ ವರ್ಣದಿಂದ ಹೊಳೆಯುತ್ತ ಹೃದಯಸ್ಥಾನದಲ್ಲಿ ನೆಲೆಗೊಳ್ಳುತ್ತದೆ.
ಛಳಿಗಾಲದ ನಸುಕಿನ ಸಮಯದಲ್ಲಿ ಹುಲ್ಲಿನ ಮೇಲೆ ತೋರುವ ಮಂಜಿನ ಹನಿಗಳು ಸೂರ್ಯೋದಯವಾದ ನಂತರ ಆ ಸೂರ್ಯನ ಪ್ರಖರ ತೇಜದಲ್ಲಿ ವಿಲೀನಗೊಳ್ಳುವಂತೆ ಶಿವಯೋಗ ಸಾಧಕನ ಸಾಧನೆಯ ಬಲದಿಂದ ಹೃದಯಸ್ಥವಾದ ಈ ಜ್ಯೋತಿಯಲ್ಲಿ ಪ್ರಾಣವಾಯು ವಿಲೀನಗೊಳ್ಳುತ್ತ ಹೋಗುತ್ತದೆ. ನಂದಾದೀಪದಲ್ಲಿ ಹನಿ ಹನಿಯಾಗಿ ಬರುವ ಎಣ್ಣೆಯನ್ನು ತನ್ನಲ್ಲಿ ಲೀನಗೊಳಿಸುತ್ತ ದೀಪವು ನಿರಂತರವಾಗಿ ಬೆಳಗುವಂತೆ ಈ ಜ್ಯೋತಿಯು ಪ್ರಾಣವಾಯುವನ್ನು ತನ್ನಲ್ಲಿ ಲೀನಗೊಳಿಸಿಕೊಳ್ಳುತ್ತ ನಿರಂತರ ಬೆಳಗುತ್ತದೆ. ಹೀಗೆ ಪ್ರಾಣವಾಯುವಿನ ಸಹಯೋಗದಿಂದ ನಿರಂತರ ಪ್ರಜ್ವಲಿಸುವ ಈ ಜ್ಯೋತಿರ್ಲಿಂಗವೇ ವೀರಶೈವ ಸಿದ್ಧಾಂತದಲ್ಲಿ ಪ್ರಾಣಲಿಂಗವೆಂದು ಹೆಸರಿಸಲ್ಪಟ್ಟಿದೆ. ಅಂತರಂಗದಲ್ಲಿ ಸ್ಫುರಣಗೊಳ್ಳುವ ಈ ಲಿಂಗವು ಬಹಿರಂಗರದ ದೃಷ್ಟಿಗೆ ಗೋಚರಿಸುವುದಿಲ್ಲ. ಶಿವಯೋಗದಲ್ಲಿ ನಿರತನಾದ ಸಾಧಕನೇ ತನ್ನ ಆಂತರಂಗಿಕ ಸಾಧನೆಯ ಬಲದಿಂದ ಈ ಪ್ರಾಣಲಿಂಗದ ನೆಲೆಕಲೆಗಳನ್ನರಿತು ಅದರ ಅನುಸಂಧಾನದಲ್ಲಿ ತೊಡಗುತ್ತಾನೆ.