ಪ್ರಾಣ ಮತ್ತು ವಾಯು ಒಂದೇ ಅಲ್ಲ
ಪ್ರಾಣಾಯಾಮಕ್ಕೆ ನಮ್ಮ ಧರ್ಮದಲ್ಲಿ ತುಂಬಾ ಮಹತ್ವವಿದೆ. ಉಸಿರಾಟವನ್ನು ದೀರ್ಘಗೊಳಿಸುವುದು ಮತ್ತು ಕುಂಭಕದ ರೂಪದಲ್ಲಿ ಧರಿಸುವುದು ಪ್ರಾಣಾಯಾಮದ ಮುಖ್ಯ ಭಾಗ. ಪ್ರಾಣಾಯಾಮ ಮಾಡುವಾಗ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹೊರಗಿರುವ ವಾಯು ಮತ್ತು ಒಳಗಿರುವ ವಾಯು ಒಂದೆಯೋ ಅಥವಾ ಬೇರೆ ಬೇರೆಯೋ. ಇದೇನು ಮಹಾಪ್ರಶ್ನೆ? ಎರಡು ಒಂದೇ ಎಂಬುದು. ಎಲ್ಲರಿಗೂ ಅನುಭವದಲ್ಲಿದೆಯಲ್ಲವೇ? ಎಂದು ಕೇಳಬಹುದು. ನಿಜ, ಒಂದೇ. ಆದರೂ ಇವೆರಡು ವಾಯುಗಳಲ್ಲಿ ವಿಭಿನ್ನತೆಯೂ ಇದೆ.
ಶರೀರದ ಒಳಗಿರುವ ವಾಯುವು ಆಧ್ಯಾತ್ಮಿಕವಾದರೆ ಹೊರಗಿರುವ ವಾಯುವು ಆಧಿದೈವಿಕ. ಆಧ್ಯಾತ್ಮಿಕ ವಾಯುವಿಗೆ ಪ್ರಾಣ ಎಂಬುದಾಗಿ ಹೆಸರು. ಆಧಿದೈವಿಕಕ್ಕೆ ವಾಯು ಎಂದಷ್ಟೇ ಹೆಸರು. ಪ್ರಾಣಕ್ಕೆ ವಾಯುವಿನ ಅನುಗ್ರಹ ಬೇಕು. ಇವೆರಡರ ಮೂಲತತ್ವ ಒಂದೇ ಆದರೂ ಪ್ರಾಣ ನೇರವಾಗಿ ನಮ್ಮ ಮನಸ್ಸಿನ ಒಳಗೆ ಹೊಂದಿಕೊಂಡಿದೆ. ಪ್ರಾಣಾಯಾಮದಿಂದ ಮನಸ್ಸು ಸ್ಥಿರಗೊಳ್ಳುತ್ತದೆ. ಮನಸ್ಸಿನಲ್ಲಿ ತೀವ್ರವಾದ ಸಿಟ್ಟು ಮುಂತಾದ ತೀವ್ರಭಾವಗಳು ಉಂಟಾದಾಗ ಅದರ ಪರಿಣಾಮ ಉಸಿರಾಟದ ಮೇಲೆ ಆಗುತ್ತದೆ. ವಾಯುವಿಗೆ ಮನಸ್ಸಿನೊಳಗೆ ಸಂಬಂಧ ಅಷ್ಟಾಗಿ ನೇರವಾಗಿ ಇಲ್ಲ. ಪ್ರಾಣವು ಸೂಕ್ಷ್ಮ ಶರೀರದ ಮುಖ್ಯ ಭಾಗ. ಸೂಕ್ಷ್ಮ ಶರೀರದಲ್ಲಿ ಮನಸ್ಸು ಸೂಕ್ಷ್ಮ ಇಂದ್ರಿಯಗಳು ಇರುತ್ತವೆ. ಆದ್ದರಿಂದಲೇ ಪ್ರಾಣದ ನಿಯಮದಿಂದ ಮನಸ್ಸಿನಲ್ಲಿ ನಿಯಮಿತ ಆಗುತ್ತದೆ.
ಇನ್ನೊಂದು ವಿಶೇಷ ಹೊರಗಿನ ವಾಯುವಿಗೂ, ಒಳಗಿನ ಪ್ರಾಣಕ್ಕೂ ಇರುವ ಅಂತರವನ್ನು ಸೂಚಿಸುತ್ತದೆ. ಮರಣಾನಂತರ ಶರೀರದೊಳಗೆ ಬಾಹ್ಯವಾಯುವನ್ನು ತುಂಬಿದರೆ ಪುನಃ ಜೀವ ಬರುವುದಿಲ್ಲ. ಒಳಗೆ ಜೀವ ಪ್ರಾಣಗಳು ಇರುವಾಗ ಮಾತ್ರವೇ ಹೊರಗಿನ ವಾಯುವನ್ನು ತುಂಬಿದರೆ ಪ್ರಯೋಜನವಾಗುತ್ತದೆ. ಇದರಿಂದ ಹೊರಗಿನ ವಾಯುವಿಗೂ ಒಳಗಿರುವ ಪ್ರಾಣಕ್ಕೂ ಸಂಬಂಧವಿದೆ, ಆದರೆ ಇವೆರಡೂ ಬೇರೆ ಎಂಬುದು ಗೊತ್ತಾಗುತ್ತದೆ.
ಒಳಗಿರುವ ಪ್ರಾಣವನ್ನು ಉಪನಿಷತ್ತು `ಆಪೋಮಯ' ಎಂದು ಕರೆಯುತ್ತದೆ. (ಅನ್ನಮಯಂ ಹಿ ಸೋಮ್ಯ ಮನಃ, ಆಪೋ ಮಯಃ ಪ್ರಾಣ: ತೇಜೋಮಯೀ ವಾಕ್.) ಪ್ರಾಣದಲ್ಲಿ ನೀರು ತುಂಬಿ ಕೊಂಡಿರುತ್ತದೆ. ಕನ್ನಡಿಯ ಮೇಲೆ ಉಸಿರು ಬಿಟ್ಟರೆ ಕನ್ನಡಿಯು ಆರ್ದ್ರವಾಗುವುದನ್ನು ಕಾಣಬಹುದು. ಉಪವಾಸವಿದ್ದಾಗ ನೀರು ಕುಡಿಯುತ್ತಿದ್ದರೆ ಪ್ರಾಣ ಹೋಗುವುದಿಲ್ಲ ಎಂಬುದಾಗಿಯೂ ಉಪನಿಷತ್ತು ಹೇಳುತ್ತದೆ. ಹೊರಗಿನ ವಾಯುವಿನಲ್ಲಿ ಈ ರೀತಿಯಲ್ಲಿ ನೀರಿನ ಕಣಗಳು ಇರುವುದಿಲ್ಲ. ವಾಯುವಿನಲ್ಲಿಯೂ ಅತ್ಯಲ್ಪ ಪ್ರಮಾಣದಲ್ಲಿ ನೀರು ಇರುತ್ತದೆಯೆಂದು ಹೇಳುತ್ತಾರೆ. ಆದರೆ ಪ್ರಾಣದಲ್ಲಿರುವಷ್ಟು ಇರುವುದಿಲ್ಲ. ಇದರಿಂದಲೂ ಪ್ರಾಣ-ವಾಯುಗಳ ವಿಭಿನ್ನತೆ ಗೊತ್ತಾಗುತ್ತದೆ.
ವಿಭಿನ್ನತೆಯಿದ್ದರೂ ಸಂಬಂಧ ಇರುವುದರಿಂದಲೇ ವಾಯುವಿನಲ್ಲಿ ಉಸಿರಾಟ ಮಾಡುವ ಮೂಲಕ ನಾವು ಬದುಕಿದ್ದೇವೆ. ಈ ಉಸಿರಾಟವನ್ನೇ ಕ್ರಮವರಿತು ಮಾಡಿದರೆ ಪ್ರಾಣಾಯಾಮ. ಅದರಿಂದಲೇ ಅನೇಕ ಸಾಧನೆ.