ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ರಾಣ-ಲಿಂಗ-ಪ್ರೀತಿ

05:15 AM Sep 02, 2024 IST | Samyukta Karnataka

ಸಾಮಾನ್ಯವಾಗಿ ಗುರುವು ದೀಕ್ಷೆಯನ್ನು ದಯಪಾಲಿಸಿ ಲಿಂಗವನ್ನು ಕರುಣಿಸಿ “ಪ್ರಾಣವದ್ಧಾರಣೀಯಂ ತತ್ ಪ್ರಾಣಲಿಂಗಮಿದಂ ತವ” ನಿನ್ನ ಚೈತನ್ಯವನ್ನು ತನ್ನಲ್ಲಿ ಆರೂಢಿಸಿಕೊಂಡ ಈ ಪ್ರಾಣರೂಪವಾದ ಇಷ್ಟಲಿಂಗವನ್ನು ನಿನ್ನ ಪ್ರಾಣವೆಂದೇ ಭಾವಿಸಿ ಧರಿಸು ಎಂದು ಉಪದೇಶಿಸುವನು. ಇಲ್ಲಿ ನಿನ್ನ ಪ್ರಾಣದಂತೆ ಧರಿಸು ಎಂಬ ಮಾತಿನ ತಾತ್ಪರ್ಯವೇನು? ಈ ದೇಹದ ಉಪಸ್ಥಿತಿಗೆ ಅತ್ಯಂತ ಅವಶ್ಯಕವಾದ ಪ್ರಾಣವು ಲಿಂಗದೊಡನೆ ತಾದಾತ್ಮ ಹೊಂದಬೇಕು. ಲಿಂಗದಲ್ಲಿ ಪ್ರಾಣ, ಪ್ರಾಣದಲ್ಲಿ ಲಿಂಗ ಒಂದರಲ್ಲೊಂದು ಪರಸ್ಪರ ಒಂದಾಗಬೇಕು. ಪ್ರಾಣವು ದೇಹವನ್ನು ತ್ಯಜಿಸಿದಾಕ್ಷಣವೇ ಮನುಷ್ಯನ ಸಾವು ನಿಶ್ಚಿತ. ಇದರಂತೆಯೇ ದೇಹದ ಮೇಲೆ ಧರಿಸಿದ ಲಿಂಗವು ದೇಹದಿಂದ ಅಗಲಿದರೆ ದೇಹಪಾತವಾಗಬೇಕು (ಸಾಯಬೇಕು) ಅಂತೆಯೇ ಸಿದಾಂತ ಶಿಖಾಮಣಿಯು ….
ಯದಿ ಪ್ರಮಾದಾತ್ ಪತಿತೇ ಲಿಂಗೇ ದೇಹಾನ್ಮಹೀತಲೇ |
ವಿಮುಂಚ ಸಹಸಾ ಪ್ರಾಣಾನ್ ಪ್ರಾಪ್ತಯೇ ಮೋಕ್ಷಸಂಪದಃ ||
ಪ್ರಮಾದವಶಾತ್ ಆಕಸ್ಮಾತ್ ದೇಹದಿಂದ ಲಿಂಗವು ಅಗಲಿದರೆ ತಕ್ಷಣ ಪ್ರಾಣ ತ್ಯಜಿಸಿ ಮೋಕ್ಷ ಹೊಂದಬೇಕು ಎಂದು ನಿರೂಪಿಸಿದೆ. ಈ ವ್ಯವಸ್ಥೆಯನ್ನು ಕುರಿತು ಕೂಡಲಸಂಗನ ವಚನ ಏನೆನ್ನುವುದು ಕೇಳಿ….
ಪ್ರಾಣಲಿಂಗ ಪ್ರತಿಗ್ರಾಹಕನಾದ ಬಳಿಕ
ಲಿಂಗವಿರಹಿತನಾಗಿ ನಡೆವ ಪರಿಯಂತೂ?
ಲಿಂಗವಿರಹಿತನಾಗಿ ನುಡಿವ ಪರಿಯಂತೋ?
ಪಂಚೇಂದ್ರಿಯ ಸುಖವನು ಲಿಂಗವಿರಹಿತನಾಗಿ ಭುಂಜಿಸಲಾಗದು ಲಿಂಗವಿರಹಿತನಾಗಿ ಉಗುಳ ನುಂಗಲಾಗದು
ಇಂತೆಂದುದು ಕೂಡಲಸಂಗನ ವಚನ.
ಲಿಂಗದ ಮೇಲಿನ ಭಕ್ತಿಯು ಪರಾಕಾಷ್ಠಾ ಹಂತವನ್ನು ತಲುಪಿದಾಗ ಸಾಧಕನಿಗೆ ಈ ಸ್ಥಿತಿ ಅಳವಡುತ್ತದೆ. ದೇಹದಿಂದ ಲಿಂಗವಿಯೋಗವಾದಾಗ ಸಾಧಕನು ಸಾವನ್ನಪ್ಪಬೇಕೆಂಬ ಉಪದೇಶದ ಹಿನ್ನೆಲೆಯನ್ನು ಇಲ್ಲಿ ಗಮನಿಸಬೇಕು. ಸಾಮಾನ್ಯವಾಗಿ ನಮ್ಮ ಪ್ರಾಣವು ನಮ್ಮ ದೇಹದಲ್ಲಿ ಮಾತ್ರ ಇರುವುದಿಲ್ಲ. ನಾವು ಪ್ರಗಾಢವಾಗಿ ಪ್ರೀತಿಸುವ ವಸ್ತುಗಳಲ್ಲೂ ಭಾವನಾತ್ಮಕವಾಗಿ ಪ್ರಾಣದ ಕೈಗಳು ಚಾಚಿಕೊಂಡಿರುತ್ತವೆ. ಅಂತೆಯೇ ಧನಪ್ರೇಮಿಯಾದ ಮನುಷ್ಯನಿಗೆ ಮನೆಯಲ್ಲಿ ಬಚ್ಚಿಟ್ಟ ಅಪಾರ ಸಂಪತ್ತನ್ನು ಕಳ್ಳ ದೋಚಿಕೊಂಡು ಹೋದನೆಂಬ ವಿಷಯ ತಿಳಿದಾಕ್ಷಣ ಆತನ ಪ್ರಾಣಪಕ್ಷಿ ಹಾರಿಹೋಗುತ್ತದೆ. (ಹೃದಯಾಘಾತವಾಗಿ ಸಾಯುತ್ತಾನೆ) ಇದರಂತೆ ಮಡದಿಯನ್ನು ಅತಿಯಾಗಿ ಪ್ರೀತಿಸುವವನು ಮಡದಿಯ ವಿಯೋಗದಿಂದ, ಪುತ್ರ ವ್ಯಾಮೋಹಿ ಮನುಷ್ಯ ಪುತ್ರವಿಯೋಗದಿಂದ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುವ ಅನೇಕ ಘಟನೆಗಳು ಪ್ರಪಂಚದಲ್ಲಿ ನೋಡದೊರೆಯುತ್ತವೆ. ಇಂಥ ಘಟನೆಗಳೆಲ್ಲ ನಮ್ಮ ಪ್ರಾಣವು ನಮ್ಮ ದೇಹದಲ್ಲಿ ಮಾತ್ರ ನೆಲೆಸದೆ ನಾವು ಹೃದಯದಿಂದ ಪ್ರೀತಿಸುವ ವಸ್ತುಗಳಲ್ಲೂ ಭಾವನಾತ್ಮಕವಾಗಿ ವ್ಯಾಪಿಸಿಕೊಂಡಿರುತ್ತದೆ ಎಂಬುದಕ್ಕೆ ನಿದರ್ಶನವಾಗಿ ನಿಲ್ಲುತ್ತವೆ. ಅಲ್ಲದಿದ್ದರೆ ಸಮೀಪದ ವಸ್ತು-ವ್ಯಕ್ತಿಗಳು ಅವರಿಂದ ಅಗಲಿದ ಮಾತ್ರಕ್ಕೆ ಅವರೇಕೆ ಸಾವನ್ನಪ್ಪಬೇಕು? ಧರಿಸಿದ ಇಷ್ಟಲಿಂಗ ದೇಹದಿಂದ ವಿಯೋಗವಾದಾಗ ಪ್ರಾಣ ಹೋಗಬೇಕು ಎಂಬ ಉಪದೇಶದ ತಾತ್ಪರ್ಯ ನಾವು ಆ ಲಿಂಗವನ್ನು ಅಷ್ಟು ಪ್ರಗಾಢವಾಗಿ ಪ್ರೀತಿಸಬೇಕೆಂಬುದಾಗಿದೆ. ಲಿಂಗದ ನಿಷ್ಠೆ ಪ್ರಗಾಢವಾಗಿದ್ದರೆ ಲಿಂಗ ಅಗಲಿದಾಕ್ಷಣವೇ ಪ್ರಾಣ ತನ್ನಷ್ಟಕ್ಕೆ ತಾನೇ ಹೋಗುತ್ತದೆ. ಅದನ್ನು ಆಗಲಿ ಅರಘಳಿಗೆ ಕೂಡ ಇರದಷ್ಟು ಆಳವಾಗಿ ಅದನ್ನು ಪ್ರೀತಿಸಬೇಕೆಂಬ ಉದ್ದೇಶದಿಂದ ವೀರಶೈವ ದರ್ಶನದಲ್ಲಿ ಲಿಂಗದ ವಿಷಯದಲ್ಲಿ ಇಂಥ ಮಾತುಗಳನ್ನು ಉಪದೇಶಿಸಲಾಗುತ್ತದೆ. ಇದನ್ನರಿಯದೆ ಕೆಲವರು ಲಿಂಗ ಅಗಲಿದಾಕ್ಷಣ ಒತ್ತಾಯಪೂರ್ವಕ ಪ್ರಾಣ ಕಳೆದುಕೊಳ್ಳುತ್ತಾರೆ. ಇದು ಸಲ್ಲದ ಮಾತು. ಭಾರತದಲ್ಲಿ ಹಿಂದೊಂದು ಕಾಲದಲ್ಲಿ ಪ್ರಚಲಿತದಲ್ಲಿದ್ದ ಪತಿಯು ಸಾವನ್ನಪಿದಾಗ ಅವನ ಹಿಂದೆ ಸತಿ ಹೋಗುವ ಪದ್ಧತಿಯು ಪತಿಯನ್ನು ಅಷ್ಟು ನಿಷ್ಠೆಯಿಂದ ಪ್ರೇಮಿಸಬೇಕೆಂಬ ಉದ್ದೇಶದಿಂದಲೇ ಇದ್ದಿರಬಹುದು. ಕ್ರಮೇಣ ಅದು ಅನಿವಾರ್ಯ ಆಚರಣೆಯ ರೂಪ ಪಡೆದುಕೊಂಡಿರಬಹುದು ಆ ಮಾತು ಬೇರೆ. ಪ್ರಸ್ತುತ ಪ್ರಸಂಗದಲ್ಲಿ ಲಿಂಗವನ್ನು ಕೇವಲ ಧರಿಸಿದರೆ ಸಾಲದು ಅದನ್ನು ಆರಾಧಿಸಬೇಕು. ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸಬೇಕು.

Next Article