ಪ್ರಿಯಾಂಕ್ ಅವರಿಂದ ದುರ್ಬುದ್ಧಿ ಪ್ರದರ್ಶನ: ಶ್ರೀರಾಮುಲು
ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ದುರ್ಗುಣಗಳನ್ನೂ ಪ್ರಿಯಾಂಕ್ ಖರ್ಗೆ ಮೈಗೂಡಿಸಿಕೊಂಡಿದ್ದಾರೆ. ಹೀಗಾಗಿ ಪದೇ ಪದೇ ದುರ್ಬುದ್ಧಿಯ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಕಿಡಿ ಕಾರಿದರು.
ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಣ್ಣ ಖರ್ಗೆ ಅವರು ತಮ್ಮ ಪಕ್ಷದ ಬಗ್ಗೆ ಅಧ್ಯಯನ ಮಾಡಿ ತಿಳಿದುಕೊಳ್ಳಲಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಂದಿಗ್ಧ ಪರಿಸ್ಥಿತಿಗೆ ಸಿಲುಕಿರುವ ಕಾರಣ ಕಲಬುರ್ಗಿಯಲ್ಲಿ ಚುನಾವಣೆ ಎದುರಿಸುತ್ತಿಲ್ಲ. ಬದಲಾಗಿ ಅವರ ಅಳಿಯನನ್ನ ಕಣಕ್ಕಿಳಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿ ಏನೆಂಬುದನ್ನು ಪ್ರಿಯಾಂಕ್ ಖರ್ಗೆ ತಿಳಿದುಕೊಳ್ಳಲಿ ಎಂದರು.
ಗ್ಯಾರಂಟಿ ಯೋಜನೆಗಳು ಮತಗಳಾಗಿ ಪರಿವರ್ತನೆ ಆಗುತ್ತವೆ ಎಂಬ ನಂಬಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಆದರೆ, ದೇಶದ ಜನರು ಬಿಜೆಪಿಯ ಪರವಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಬಿಜೆಪಿ, ಪ.ಜಾ ಹಾಗೂ ಪ.ಪಂ. ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿದೆ. ಅದರಿಂದ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಹೀಗಾಗಿ ನಮ್ಮ ಜನ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬಾರದು ಎಂದು ತಿಳಿಸಿದರು.
ಸಚಿವ ಸಂತೋಷ್ ಲಾಡ್ ಅವರು ಗಣಿಗಾರಿಕೆ ಶಾಲೆಯಲ್ಲಿಯೇ ಓದಿದವರು. ಒಂದೇ ಶಾಲೆಯಲ್ಲಿ ಓದಿದವರು ಈ ರೀತಿ ಆರೋಪ ಮಾಡುವಾಗ ವಿಚಾರ ಮಾಡಬೇಕು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ. ಶಿವಕುಮಾರ್ ಹಾಗೂ ನಾಗೇಂದ್ರ ಅವರ ಮೇಲೆ ಆರೋಪಗಳಿರುವುದು ಲಾಡ್ ಅವರಿಗೆ ಗೊತ್ತಿಲ್ಲವೆ.
ಕಾಂಗ್ರೆಸ್ ಸರ್ಕಾರದ ಅರ್ಧ ಡಜನ್‌ಗೂ ಹೆಚ್ಚು ಸಚಿವರ ಮೇಲೆ ಭ್ರಷ್ಟಾಚಾರ ರೂಪಗಳಿವೆ. ಆದಾಯ ತೆರಿಗೆ ಹಾಗೂ ಈಡಿ ಇಲಾಖೆಗಳಿಂದ ತನಿಖೆಗ ನಡೆಯುತ್ತಿದೆ ಎಂದರು.
ಜನಾರ್ದನ್ ರೆಡ್ಡಿ ಬಿಜೆಪಿ ಪಕ್ಷ ಸೇರ್ಪಡೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಶ್ರೀರಾಮುಲು ಸಮರ್ಥನೆ ಮಾಡಿಕೊಂಡರು.