ಫಲಕಾರಿಯಾಗದ ಚಿಕಿತ್ಸೆ: ಎಎಸ್ ಐ ಸಾವು
ಹುಬ್ಬಳ್ಳಿ: ಇಲ್ಲಿನ ಹಳೇ ಕೋರ್ಟ್ ಬಳಿಯಲ್ಲಿ ತೆರಳುತ್ತಿದ್ದಾಗ ಪ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ನಾಭಿರಾಜ್ ದಯಣ್ಣವರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕಳೆದ ಸೆ.10 ರಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಭದ್ರತಾ ಕರ್ತವ್ಯ ನಿರ್ವಹಿಸಿ ಠಾಣೆಗೆ ತೆರಳುತ್ತಿದ್ದ ನಾಭಿರಾಜ್ ದಯಣ್ಣವರ ಮೇಲೆ ಕೋರ್ಟ್ ವೃತ್ತದ ಬಳಿಯ ಪ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಮೇಲಿನಿಂದ ಕಬ್ಬಿಣದ ರಾಡ್ ಬಿದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತಿತ್ತು.
ಬಳಿಕ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದಿಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ಪ್ರಸಾದ್ ಅಬ್ಬಯ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಅಷ್ಟಾಗಿಯೂ ಪ್ಲೈಓವರ್ ಕಾಮಗಾರಿ ನಡೆಸುವ ವೇಳೆ ನಿರ್ಲಕ್ಷ್ಯ ವಹಿಸಿದ ಝಂಡು ಕನ್ಸಕ್ಷನ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಎಸ್ಐ ನಾಭಿರಾಜ್ ಬೆಳಗಿನ ನಾಲ್ಕು ಗಂಟೆಗೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಧಾರವಾಡದ ಸತ್ತೂರಿನ ನಿವಾಸಿಯಾಗಿರುವ ದಯಣ್ಣವರ ಒಂದು ವರ್ಷದಿಂದ ಉಪನಗರ ಠಾಣೆಯಲ್ಲಿ ಎಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.