ಫೆಬ್ರವರಿ 28 ಕೊನೆಯ ದಿನ: ಪಾಲಿಸದಿದ್ದಲ್ಲಿ ಪರವಾನಗಿ ರದ್ದು
ಬೆಂಗಳೂರು: ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ, ಆದೇಶ ಪಾಲನೆಗೆ ಫೆಬ್ರವರಿ 28 ಕೊನೆಯ ದಿನ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಅನ್ವಯ ಬೆಂಗಳೂರಿನ ಎಲ್ಲಾ ಅಂಗಡಿ, ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದೆ. ಆದೇಶ ಪಾಲನೆಗೆ ಫೆಬ್ರವರಿ 28 ಕೊನೆಯ ದಿನವಾಗಿದೆ. ಪಾಲಿಸದಿದ್ದಲ್ಲಿ ಪರವಾನಗಿ ರದ್ದು ಮಾಡುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ."
ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆ ಶೇ. 60ರಷ್ಟು ಮತ್ತು ಮೇಲ್ಭಾಗದಲ್ಲಿ ಪ್ರದರ್ಶಿತವಾಗಬೇಕು: ನಗರ ಸಹಿತ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯ ಮತ್ತು ಆದ್ಯತೆಯೊಂದಿಗೆ ಪ್ರದರ್ಶಿಸುವ ಸಂಬಂಧದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ಮಸೂದೆ- 2024′ ಮಂಗಳವಾರ ಮೇಲ್ಮನೆಯಲ್ಲೂ ಅಂಗೀಕಾರಗೊಂಡಿತು. ಇದರೊಂದಿಗೆ ಕನ್ನಡಿಗರು ವಿಶೇಷವಾಗಿ ಕನ್ನಡಪರ ಸಂಘಟನೆಗಳ ಬಹುದಿನಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಂಡಿಸಿದ ಮಸೂದೆಯನ್ನು ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಬೆಂಬಲಿಸಿದರು. ಈ ಕಾಯ್ದೆ ಕೇವಲ ಕಡತಕ್ಕೆ ಸೀಮಿತಗೊಳ್ಳದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳ್ಳಬೇಕು ಎಂದಿದ್ದಾರೆ.