ಫೈನಾನ್ಸ್ ಸಾಲದ ಸಂಕಷ್ಟ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಬೆಳಗಾವಿ: ಫೈನಾನ್ಸ್‌ನಲ್ಲಿ ಸಾಲ ಮಾಡಿ ಬೇರೆಯವರಿಗೆ ಕೊಟ್ಟಿದ್ದ ಮಹಿಳೆಯೊಬ್ಬಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕಾಕತಿ ಸಮೀಪದ ಬರ್ಡೆ ಧಾಬಾ ಹಿಂಬದಿಯಲ್ಲಿ ನಡೆದಿದೆ.
ಹುಕ್ಕೇರಿ ತಾಲೂಕಿನ ಶಿರೂರ ಗ್ರಾಮದ ಸರೋಜಾ ಕಿರಬಿ(೫೨) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೈನಾನ್ಸ್‌ನಲ್ಲಿ ಸಾಲ ಪಡೆದಿದ್ದ ಮಹಿಳೆ ಸಬ್ಸಿಡಿ ಆಸೆಗೆ ಬಿದ್ದು ಯಮನಾಪುರ ಗ್ರಾಮದ ಹೊಳೆಪ್ಪ ದಡ್ಡಿ ಎಂಬಾತನಿಗೆ ಸಾಲ ತೆಗೆಸಿ ಕೊಟ್ಟಿದ್ದಳು. ಸಾಲದ ಹಣದಲ್ಲಿ ಅರ್ಧದಷ್ಟು ಹಣವನ್ನು ತಾವೇ ತುಂಬುವುದಾಗಿ ಹೊಳೆಪ್ಪ ದಡ್ಡಿ ನಂಬಿಸಿದ್ದ. ಆದರೆ, ನುಡಿದಂತೆ ನಡೆಯದೇ ಸಾಲದ ಕಂತು ತುಂಬದೇ ಕೈ ಎತ್ತಿದ್ದ.
ಹೀಗಾಗಿ, ತಮ್ಮದೇ ದಾಖಲೆ ನೀಡಿ ಫೈನಾನ್ಸ್ನಲ್ಲಿ ಸರೋಜಾ ಸಾಲ ಪಡೆದಿದ್ದಳು. ಅಲ್ಲದೇ, ಅದರಲ್ಲಿಯ ಅರ್ಧ ಹಣವನ್ನು ದಡ್ಡಿಗೆ ನೀಡಿದ್ದಳು. ಎಲ್ಲ ಕಂತುಗಳನ್ನು ತಾವೇ ತುಂಬುತ್ತೇನೆ. ಎರಡು ವರ್ಷಗಳ ಕಾಲ ಬಡ್ಡಿ ಸಮೇತ ಹಣ ತುಂಬುವುದಾಗಿ ಹೇಳಿದ್ದ. ಆದರೆ ಕೆಲವು ಕಂತು ತುಂಬಿದ ಬಳಿಕ ಬಾಕಿ ತುಂಬದೆ ವಂಚಿಸಿದ್ದಾನೆ ಎಂದು ಮಹಿಳೆಯ ಮಗ ದೂರಿದ್ದಾನೆ.
ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹೊಳೆಪ್ಪ ದಡ್ಡಿ ಎಂಬಾತನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.