ಬಂಡೀಪುರ ಅರಣ್ಯ ರಾತ್ರಿ ವಾಹನ ಸಂಚಾರ ಅನಗತ್ಯ
ಬಂಡೀಪುರ ಅಭಯಾರಣ್ಯದ ಮೂಲಕ ತಮಿಳುನಾಡು ಮತ್ತು ಕೇರಳಕ್ಕೆ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಇವುಗಳಲ್ಲಿ ರಾತ್ರಿ ೯ರಿಂದ ಬೆಳಗ್ಗೆ ೬ ಗಂಟೆವರೆಗೆ ಮೋಟಾರು ವಾಹನ ಸಂಚಾರ ನಿಷೇಧಿಸಿ ೧೪ ವರ್ಷಗಳು ಕಳೆದುಹೋಗಿವೆ. ಈಗ ವೈನಾಡ್ ಲೋಕಸಭೆ ಚುನಾವಣೆ ಪ್ರಚಾರದ ಕಾಲದಲ್ಲಿ ಮತ್ತೆ ಈ ವಿಚಾರ ಪ್ರಸ್ತಾಪಕ್ಕೆ ಬಂದಿರುವುದು ದುರ್ದೈವ. ಕರ್ನಾಟಕ ಮೊದಲಿನಿಂದಲೂ ರಾತ್ರಿ ನಿಷೇಧಕ್ಕೆ ಬದ್ಧವಾಗಿದೆ. ಈ ನಿಲುವಿನಲ್ಲಿ ಬದಲಾವಣೆ ಬೇಡ. ಸರ್ಕಾರಗಳು ಬದಲಾಗಬಹುದು, ಸಚಿವರು ಬದಲಾಗಬಹುದು, ನಮ್ಮ ನಿಲುವಿನಲ್ಲಿ ಬದಲಾವಣೆ ಬರಕೂಡದು. ೨೦೦೯ರಲ್ಲಿ ರಾತ್ರಿ ವಾಹನಗಳ ಸಂಚಾರದಿಂದ ೨೧೫ ಪ್ರಾಣಿಗಳು ಸಾವನ್ನಪ್ಪಿದವು. ಆಗ ಕರ್ನಾಟಕ ಹೈಕೋರ್ಟ್ ಈ ಆದೇಶ ಹೊರಡಿಸಿತು. ಇದನ್ನು ಪ್ರಶ್ನಿಸಿ ಕೇರಳ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು. ೨೦೧೯ರಲ್ಲಿ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿದೆ. ಅಲ್ಲದೆ ಅಭಯಾರಣ್ಯಗಳ ಒಳಗೆ ಯಾವುದೇ ಹೆದ್ದಾರಿ ನಿರ್ಮಿಸಬೇಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನೂ ನೀಡಿದೆ. ಹೀಗಿರುವಾಗ ನ್ಯಾಯಾಲಯಗಳ ಆದೇಶಗಳಿಗೆ ವಿರುದ್ಧವಾಗಿ ಸರ್ಕಾರ ಚಿಂತನೆ ನಡೆಸುವುದು ತರವಲ್ಲ. ರಾತ್ರಿ ವೇಳೆ ವಾಹನ ಸಂಚಾರ ಇದ್ದಲ್ಲಿ ಕಾಡುಪ್ರಾಣಿಗಳಿಗೆ ಸಂಚಾರ ನಡೆಸುವುದು ಕಷ್ಟವಾಗುತ್ತದೆ. ಅಲ್ಲದೆ ಮೋಟಾರು ವಾಹನಗಳ ಹೆಡ್‌ಲೈಟ್ ನೋಡಿ ಪ್ರಾಣಿಗಳು ಅವುಗಳ ಸಮೀಪ ಬಂದು ದಾಳಿ ಮಾಡಿ ಪ್ರಾಣ ಕಳೆದುಕೊಳ್ಳುವುದುಂಟು. ಅಲ್ಲದೆ ಎರಡೂ ರಾಜ್ಯದ ಜನ ರಾತ್ರಿ ಓಡಾಟಕ್ಕೆ ಈ ರಸ್ತೆ ಬೇಕು ಎಂದೂ ಕೇಳಿಲ್ಲ. ಕೇರಳ ಸರ್ಕಾರವೊಂದೇ ಇದಕ್ಕೆ ಹಿಂದಿನಿಂದಲೂ ಒತ್ತಾಯಿಸುತ್ತ ಬಂದಿದೆ. ಈಗ ವೈನಾಡ್ ಚುನಾವಣೆಯಲ್ಲಿ ಇದು ಭರವಸೆಯ ಪಟ್ಟಿಯಲ್ಲಿ ಸೇರಿದೆ. ಪ್ರಾಣಿಗಳ ಜೀವದೊಂದಿಗೆ ಚೆಲ್ಲಾಟವಾಡುವುದು ಸರಿಯಲ್ಲ. ಬಂಡೀಪುರ ಮತ್ತು ನಾಗರಹೊಳೆ ಅಭಯಾರಣ್ಯ ಈಗ ವಿಶ್ವಭೂಪಟದಲ್ಲಿದೆ. ಇದಕ್ಕೆ ಸಂತೋಷಪಡಬೇಕೇ ಹೊರತು ಅದನ್ನು ಹಾಳು ಮಾಡುವ ಕೆಲಸ ಮಾಡಬಾರದು. ಕೇರಳ ಸರ್ಕಾರದ ಒತ್ತಾಯಕ್ಕೆ ಕಾರಣವೇನು ಎಂಬುದು ಈಗ ಸ್ಪಷ್ಟಗೊಂಡಿಲ್ಲ. ಅಲ್ಲದೆ ಕರ್ನಾಟಕ ಮತ್ತು ತಮಿಳುನಾಡು-ಕೇರಳಗಳ ನಡುವೆ ಸಂಚಾರಕ್ಕೆ ಬೇರೆ ರಸ್ತೆ ಸಂಪರ್ಕವಿದೆ. ವೈನಾಡ್‌ಗೆ ಕರ್ನಾಟಕದಿಂದ ಸಂಪರ್ಕ ಇರುವುದು ಇಲ್ಲಿ ಮಾತ್ರ ಎಂಬುದು ನಿಜ. ವೈನಾಡ್‌ನಲ್ಲಿ ದನದ ಮಾಂಸ ವಿದೇಶಗಳಿಗೆ ರಫ್ತು ಹೆಚ್ಚಿನ ಪ್ರಮಾಣದಲ್ಲಿದೆ. ಅಲ್ಲಿಗೆ ಕರ್ನಾಟಕದ ದನಕರುಗಳು ಕಳ್ಳಸಾಗಣೆಯಾಗುತ್ತಿರುವುದು ಇಂದು ನಿನ್ನೆಯ ಕತೆಯಲ್ಲ. ನಿಷ್ಠಾವಂತ ಐಎಎಸ್ ಅಧಿಕಾರಿ ಮದನಗೋಪಾಲ್ ಇಲ್ಲಿ ಉಪವಿಭಾಗಾಧಿಕಾರಿಯಾಗಿ ದನಕರುಗಳನ್ನು ವೈನಾಡಿಗೆ ಸಾಗಿಸುವುದನ್ನು ತಡೆದು ದೊಡ್ಡ ಸುದ್ದಿಯನ್ನೇ ಮಾಡಿದ್ದರು. ಅಂದಿನಿಂದಲೂ ರಾತ್ರಿ ವಾಹನ ಸಂಚಾರ ಬೇಡಿಕೆ ಇದ್ದೇ ಇದೆ. ಇದನ್ನು ಕರ್ನಾಟಕ ಮೊದಲಿನಿಂದಲೂ ಒಪ್ಪಿಲ್ಲ. ಈ ನಿಲುವಿನಲ್ಲಿ ಬದಲಾವಣೆ ಬೇಡ. ಹಿಂದೆ ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಜೆಡಿಎಸ್ ಅಧಿಕಾರ ಇದ್ದಾಗ ಸಚಿವರೊಬ್ಬರು ಬಂಡೀಪುರದಲ್ಲಿ ಫ್ಲೈಓವರ್ ನಿರ್ಮಿಸುವ ಆಲೋಚನೆ ಮಾಡಿದ್ದರು. ಕಾಡಾನೆಗಳ ಮುಂದೆ ಯಾವ ಫ್ಲೆಓವರ್ ಉಳಿಯುವುದಿಲ್ಲ ಎಂದು ತಿಳಿದ ಮೇಲೆ ಸುಮ್ಮನಾದರು.
ಅದೇರೀತಿ ಈ ಅಭಯಾರಣ್ಯದಲ್ಲಿ ಒಂದು ಹುಲ್ಲುಕಡ್ಡಿಯನ್ನೂ ಮುಟ್ಟುವ ಹಾಗಿಲ್ಲ ಎಂದು ನಿಯಮ ಮಾಡಿರುವುದರಿಂದ ಇಲ್ಲಿ ಅನಧಿಕೃತವಾಗಿ ಪ್ರವೇಶ ಮಾಡುವುದೇ ತಪ್ಪು. ರಾತ್ರಿ ಸಫಾರಿಯನ್ನು ಅರಣ್ಯ ಇಲಾಖೆಗೆ ವ್ಯವಸ್ಥೆ ಮಾಡಿದರೂ ಅರಣ್ಯಪ್ರೇಮಿಗಳು ಅದನ್ನೂ ಒಪ್ಪುವುದಿಲ್ಲ. ಪ್ರಾಣಿಗಳ ಜೀವನಕ್ಕೆ ತೊಂದರೆಯಾಗುತ್ತದೆ ಎನ್ನುತ್ತಾರೆ. ಹೀಗಿರುವಾಗ ಮೋಟಾರು ವಾಹನ ರಾತ್ರಿ ಸಂಚರಿಸಿದರೆ ಅಲ್ಲಿಯ ವನ್ಯಜೀವಿಗಳ ಗತಿ ಏನು ಎಂಬುದನ್ನು ಚಿಂತಿಸಬೇಕು. ಹಿಂದೆ ಐಎಎಸ್ ಅಧಿಕಾರಿಯೊಬ್ಬರು ರಾತ್ರಿ ಕಾಡುಮೊಲ ಬೇಟೆಯಾಡಿ ಸಿಕ್ಕಿಬಿದ್ದು ಬಂಧನಕ್ಕೆ ಒಳಗಾಗಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಹಳ ಪ್ರಬಲವಾಗಿದೆ. ಅಲ್ಲದೆ ವನ್ಯಜೀವಿ ಸಂರಕ್ಷಣಾ ಮಂಡಳಿ ಯಾವುದೇ ಬದಲಾವಣೆಗೂ ಒಪ್ಪಿಗೆ ನೀಡುವುದಿಲ್ಲ. ಸುಪ್ರೀಂ ಕೋರ್ಟ್ ಕೂಡ ವನ್ಯಜೀವಿಗಳ ರಕ್ಷಣೆಗೆ ಆದ್ಯತೆ ನೀಡುತ್ತಿದೆ. ಬಂಡೀಪುರದ ರಸ್ತೆಯಲ್ಲಿ ರಾತ್ರಿ ಮೋಟಾರು ವಾಹನ ಸಂಚಾರಕ್ಕೆ ಮರುಚಿಂತನೆ ನಡೆಸಲು ಅವಕಾಶವಿಲ್ಲ. ಏನಾದರೂ ಮಾಡುವುದಿದ್ದರೆ ಬಂಡೀಪುರದ ಸುತ್ತ ತಲೆ ಎತ್ತಿರುವ ಎಲ್ಲ ರೆಸಾರ್ಟ್‌ಗಳನ್ನು ಎತ್ತಂಗಡಿ ಮಾಡಿಸಬೇಕು. ಅದರಿಂದ ಪರಿಸರ ಹಾನಿ ಅಧಿಕಗೊಳ್ಳುತ್ತಿದೆ. ಅರಣ್ಯ ಮೋಜಿನ ತಾಣವಲ್ಲ. ನಾವು ನಗರಗಳಲ್ಲಿ ವಾಸಿಸುವ ಹಾಗೆ ಕಾಡುಪ್ರಾಣಿಗಳು ಅಲ್ಲಿ ವಾಸಿಸುತ್ತವೆ. ಅವುಗಳಿಗೆ ತಮ್ಮಷ್ಟೇ ಬದುಕುವ ಹಕ್ಕಿದೆ ಎಂಬುದು ತಿಳಿದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ. ರಸ್ತೆ ಸಂಚಾರದಿಂದ ಅರಣ್ಯದಲ್ಲಿ ಕಾಡುಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿಯಾಗುವುದು ನಿಸ್ಸಂದೇಹ. ಪರಿಸರವಾದಿಗಳು ಮೊದಲಿನಿಂದಲೂ ಇದೇ ಮಾತನ್ನು ಹೇಳುತ್ತ ಬಂದಿದ್ದಾರೆ. ಆಡಳಿತಕ್ಕೆ ಬಂದ ರಾಜಕಾರಣಿಗಳು ಹೊಸ ಯೋಜನೆಗಳ ಬಗ್ಗೆ ಚಿಂತಿಸುತ್ತಾರೆ. ಅಧಿಕಾರ ಕಳೆದುಕೊಂಡವರು ಅದನ್ನು ವಿರೋಧಿಸುತ್ತಾರೆ. ಬಂಡೀಪುರದ ರಸ್ತೆ ಸಂಚಾರ ಸಮಸ್ಯೆ ಕೂಡ ಹಲವು ದಶಕಗಳಿಂದ ಮುಂದುವರಿದಿದೆ.