ಬಕೆಟ್ ಹಿಡಿದರೆ ಟಿಕೆಟ್
ದೊಡ್ಡ ಭಯಂಕರ ಚುನಾವಣೆ ಬಂದೇ ಬಿಟ್ಡಿದೆ. ನೀವು ಟಿಕೆಟ್ ಗಾಗಿ ಕಾಯುತ್ತಿರಬಹುದು… ಟಿಕೆಟ್ ಅಂದರೆ ಹಾಗೇ ಸಿಗುವುದಿಲ್ಲ… ನೀವು ಬಕೆಟ್ ಹಿಡಿದರೆ ಮಾತ್ರ ಟಿಕೆಟ್ ಇದು ನನ್ನ ಹೊಸ ಪಕ್ಷದ ಮಾನ ಮತ್ತು ದಂಡ… ನಿಮಗೆ ಟಿಕೆಟ್ ಬೇಕಾದರೆ ಬನ್ನಿ ಎಂದು ತಿಗಡೇಸಿ ಮಹಾರಾಜರು ಹಾದಿ ಬೀದಿಯಲ್ಲಿ ಫ್ಲೆಕ್ಸ್ ಹಾಕಿಸಿದ್ದಾರೆ… ಓಣಿಯ ಎಲ್ಲ ಲೈಟಿನ ಕಂಬಗಳಿಗೆ ಪೋಸ್ಟರ್ ಗಳನ್ನು ನೇತು ಹಾಕಿದ್ದಾರೆ… ಬಕೆಟ್ ಹಿಡಿದರೆ ಟಿಕೆಟ್ ಎಂದು ಟಿವಿಗಳಲ್ಲಿ ಒದರುತ್ತಿದ್ದಾರೆ….. ಸೋಷಿಯಲ್ ಮೀಡಿಯಾಗಳಲ್ಲಿ ಒನ್ ಮೋರ್… ಒನ್ ಮೋರ್ ಅನಬಕು ನೀವು ಎಂಬ ಆತನ ಧ್ವನಿ ಮಾರ್ದನಿಸುತ್ತಿದೆ. ಈಗಾಗಲೇ ನಾನೇ ಕ್ಯಾಂಡಿಡೇಟು ಎಂದು ಎಲ್ಲರ ಮುಂದೆ ಹೇಳಿಕೊಂಡು ತಿರುಗಾಡುತ್ತಿರುವ ಕರಿ ಭಾಗೀರತಿ…ಅಲ್ಲಿಂದ ಟಿಕೆಟ್ ತೆಗೆದುಕೊಳ್ಳಬೇಕು ಅಂದರೆ ಕೋಟಿ…ಕೋಟಿ ಅಂತಾರೆ… ಅದಕ್ಕಿಂತ ಇದೇ ಬಕೆಟ್ಟೇ ಲೇಸು ಎಂದು ವಿಚಾರ ಮಾಡಿದಳು. ಗ್ಯಾನಮ್ಮನ ಹತ್ತಿರ ಡಿಸಕಸ್ ಮಾಡಿದಾಗ ಆಕೆಯೂ ಸಹ..ಅಲ್ಲ ಬಕೆಟ್ ಹಿಡಿದರೆ ಟಿಕೆಟ್ ಕೊಡುತ್ತಾರೆ ಅಂದರೆ ಇದೇ ಬೆಸ್ಟು ಗೋ ಅಹೆಡ್ ಅಂದಳು. ಬುಸ್ಯವ್ವ… ವಿಚಾರ ಮಾಡು ಅಂದಳು… ಸರ್ಕಲ್ ಹನ್ಮಂತ ಮಾತ್ರ… ಅಲ್ಲ ಬಕೆಟ್ ಹಿಡಿದು ಟಿಕೆಟ್ ತೆಗೆದುಕೊಳ್ಳುವುದು ನನಗ್ಯಾಕೋ ಸರಿ ಕಾಣಲ್ಲ ಅಂದ. ಭಾಗೀರತಿ ಮನಸ್ಸಿನಲ್ಲೇ ಅಲಾ ಸರ್ಕಲ್ಲು…. ನನ್ನ ಕಣ್ತಪ್ಪಿಸಿ ನೀನು ಬಕೆಟ್ ಹಿಡಿದು ಟಿಕೆಟ್ ತೆಗೆದುಕೊಳ್ಳಬೇಕು ಅಂತ ಮಾಡಿರುವೆ…. ನನಗೆ ತಿಳಿದಿಲ್ಲ ಅಂದುಕೊಳ್ಳಬೇಡ ಅಂತ ಅಂದುಕೊಂಡಳು. ಓಹೋ ಎಂದು ವ್ಯಂಗ್ಯವಾಗಿ ಅಂದು… ಸೀದಾ ಮನೆಗೆ ಬಂದು ಲಾದುಂಚಿ ರಾಜನಿಗೆ ಫೋನ್ ಮಾಡಿ ಇಂಗಿಂಗೆ ನಾನು ಇಂಟ್ರಸ್ಟೆಡ್ ಇದೀನಿ.. ಬಕೆಟ್ ಟಿಕೆಟ್ ಅಂತಾರ ಹೆಂಗೆ ಅಂದಳು. ಅದಕ್ಕೆ ರಾಜ… ಭಾಗೀರತಿ ಅಕ್ಕಾ ನೀ ಏನೂ ಚಿಂತಿ ಮಾಡಬೇಡ… ನನಗೆ ಬೀಗರು ಕೊಟ್ಟಿರುವ ಹಿತ್ತಾಳಿ ಬಕೆಟ್ ಇನ್ನೂ ಗಟ್ಟಿಮುಟ್ಟಾಗಿದೆ. ಹುಣಸಿಹಣ್ಣು ಹಚ್ಚಿ ತಿಕ್ಕಿ ತಿಕ್ಕಿ ತೊಳೆದರೆ ಫಳಫಳಾಂತ ಹೊಳೀತದೆ. ಅದನ್ನು ಹಿಡಿದುಕೊಂಡು ಟಿಕೆಟ್ ಕೇಳೋಣ ಅಂತ ಹೇಳಿದ. ಭಾಗೀರತಿಗೆ ಸ್ವಲ್ಪ ಸಮಾಧಾನವಾಯಿತು. ಇರಲಿ ಎಂದು ಇರಪಾಪುರ ಮಾದೇವನಿಗೆ ಕಾಲ್ ಮಾಡಿದಾಗ… ಮೊನ್ನೆ ನಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಬಕೆಟ್ ಸೀಳಿದೆ..ಬೇಕಾದರೆ ಅದನ್ನು ರಿಪೇರಿ ಮಾಡಿಸಿಕೊಡುತ್ತೇನೆ ಅಂದಳು. ಕೊನೆಗೆ ಭಾಗೀರತಿ ಲಾದುಂಚಿ ರಾಜನ ಹಿತ್ತಾಳಿ ಬಕೆಟನ್ನು ತಿಕ್ಕಿ ತಿಕ್ಕಿ ತೊಳೆದು ಫಳಫಳ ಅಂತ ಹೊಳೆಯುವ ಹಾಗೆ ಮಾಡಿ ಅದನ್ನು ಬಲಗೈನಲ್ಲಿ ಹಿಡಿದುಕೊಂಡು ತಿಗಡೇಸಿ ಕಚೇರಿ ಮುಂದೆ ಹೋಗಿ ನಿಂತಳು.. ಅಲ್ಲಿ ಭಯಂಕರ ಗದ್ದಲವಿತ್ತು. ಯಾರ ಕೈನಲ್ಲೂ ಬಕೆಟ್ ಇರಲಿಲ್ಲ… ಖುಷಿಯಾದ ಭಾಗೀರತಿ ಗ್ಯಾರಂಟಿ ಟಿಕೆಟ್ ನನಗೇ ಅಂದುಕೊಂಡಳು. ಹಾಗೀಗೆ ಮಾಡಿ ಅಂಥ ಗದ್ದಲದಲ್ಲಿಯೂ ಒಳಗೆ ಹೋದಳು… ತಿಗಡೇಸಿ ಚೇಂಬರ್ ಮುಂದೆ ನಿಂತಳು. ಆತ ಏನಮ್ಮಾ… ಕೈಯಲ್ಲಿ ಏನಿದು ಬಕೆಟ್ ಎಂದು ಗಾಬರಿಯಾದ…. ಅಲ್ಲ ನೀವೇ ಹೇಳಿದ್ದಿರಲ್ಲ… ಬಕೆಟ್ ಹಿಡಿದರೆ ಟಿಕೆಟ್ ಅಂತ. ಅದಕ್ಕೆ ಬಕೆಟ್ ಹಿಡಿದುಕೊಂಡು ಬಂದೆ ಅಂದಳು…. ಇಲ್ಲೆ ಇರಿ ಈಗ ಬಂದೆ ಎಂದು ಚೇಂಬರ್ ನಿಂದ ಎದ್ದು ಹೋದ ತಿಗಡೇಸಿ ಮತ್ತೆ ಚೇಂಬರ್ ಗೆ ಬರಲಿಲ್ಲ…