ಬಡವರ ರಕ್ತ ಬಸಿದು, ಬಲಿಷ್ಠರ ಬದುಕು ಬಂಗಾರ ಮಾಡುವ ಬಜೆಟ್
ಬೆಂಗಳೂರು: ಬಡವರ ರಕ್ತ ಬಸಿದು, ಬಲಿಷ್ಠರ ಬದುಕು ಬಂಗಾರ ಮಾಡುವ ಬಜೆಟ್ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಇದು ಮಧ್ಯಂತರ ಬಜೆಟ್ – ಲೇಖಾನುದಾನ ಮಾತ್ರ. ಹೀಗಾಗಿ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆ ಇರಲಿಲ್ಲ. ಇದು ಅತ್ಯಂತ ಸಾಧಾರಣದಲ್ಲೇ ಸಾಧಾರಣ ಬಜೆಟ್. ಜನರಿಗಿದ್ದ ಎಲ್ಲ ನಿರೀಕ್ಷೆಯನ್ನೂ ಈ ಬಜೆಟ್ ಹುಸಿ ಮಾಡಿದೆ.
ತೆರಿಗೆದಾರರಿಗೆ ಮತ್ತೆ ನಿರಾಶೆಯಾಗಿದೆ. ಕಾರ್ಪೊರೇಟ್ – ಸಾಂಸ್ಥಿಕ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಕೆ ಮಾಡಿರುವುದರಿಂದ ಉದ್ದಿಮೆದಾರರು ಖುಷಿಯಾಗಿರುತ್ತಾರೆ. ಬಡವರ ರಕ್ತ ಬಸಿದು, ಬಲಿಷ್ಠರ ಬದುಕು ಬಂಗಾರ ಮಾಡುವ ಕಾರ್ಯದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೊಡಗಿದೆ ಇದು ಖಂಡನೀಯ.
18 ಲಕ್ಷ ಕೋಟಿ ರೂ. ವಿತ್ತೀಯ ಕೊರತೆಯ ಬಜೆಟ್ ಇದಾಗಿದ್ದು, ಈಗಾಗಲೇ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿರುವ ಕೇಂದ್ರ ಬಿಜೆಪಿ ಸರ್ಕಾರ ದೇಶದ ಜನರ ಮೇಲೆ ಮತ್ತಷ್ಟು ಹೊರೆ ಹೊರಿಸುವುದರಲ್ಲಿ ಸಂದೇಹವಿಲ್ಲ ಎಂದು ಬರೆದುಕೊಂಡಿದ್ದಾರೆ.