ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿ ಬರಲಿ
ಮಂಡ್ಯ: ಮೃತಪಟ್ಟವರ ಹೆಸರಿನಲ್ಲೇ ಆರ್‌ಟಿಸಿಗಳು ಬರುತ್ತಿದ್ದು, ಪೌತಿ ಖಾತೆಗಳನ್ನು ಮಾಡಲು ಸಮಸ್ಯೆ ಏನು? ಇದಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳೇ ಸಲಹೆ ಕೊಡಿ, ಇಲ್ಲಾ ಸರ್ಕಾರದಿಂದ ಏನಾದರೂ ತಪ್ಪಾಗಿದೆಯೇ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕಾರಿಗಳನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸತ್ತವರನ್ನು ಹೇಗೆ ಜಮೀನಿನ ಮಾಲೀಕರೆಂದು ಪರಿಗಣಿಸಲು ಸಾಧ್ಯ? ಎಲ್ಲವನ್ನೂ ಅಕ್ರಮವಾಗಿ ಮಾಡಿದರೆ ಜನರ ಸಮಸ್ಯೆಗಳಿಗೆ ಕೊನೆ ಎಲ್ಲಿ? ಪೌತಿ ಖಾತೆಗಳಿಗೆ ಸಂಬಂಧಿಸಿದಂತೆ ಜಂಟಿ ಖಾತೆ ಕೂರಿಸಿ. ಬದುಕಿರುವವರ ಹೆಸರಿನಲ್ಲಿ ಆರ್‌ಟಿಸಿ ಬರಲಿ ಎಂದು ಸೂಚಿಸಿದರು.
೪೮ ಲಕ್ಷ ಆರ್‌ಟಿಸಿಗಳು ಮೃತರ ಹೆಸರಿನಲ್ಲಿವೆ:
ಇಡೀ ರಾಜ್ಯದಲ್ಲಿ ೪೮ ಲಕ್ಷ ಆರ್‌ಟಿಸಿಗಳು ಈಗಲೂ ಸತ್ತವರ ಹೆಸರಿನಲ್ಲೇ ಇವೆ. ಅವುಗಳಿಗೆ ದಿಕ್ಕುದೆಸೆ ಯಾರು? ಆರ್‌ಟಿಸಿ ಜಮೀನುಗಳಲ್ಲಿ ಮನೆ ನಿರ್ಮಾಣವಾಗಿದೆ. ಅನ್ಯಾಕ್ರಾಂತವಾಗದ ಜಮೀನುಗಳಲ್ಲಿ ಮನೆ ಇದ್ದರೆ ಮನೆ ಹೆಸರಿನಲ್ಲೇ ವಹಿವಾಟು ನಡೆಯಬೇಕು. ಜಮೀನಿನಲ್ಲಿ ಮನೆ ಇರುವ ಬಗ್ಗೆ ಆರ್‌ಟಿಸಿಯಲ್ಲಿ ಮಾರ್ಕ್ ಮಾಡಿ. ಇಲ್ಲದಿದ್ದರೆ ಅಕ್ರಮ ಖಾತೆಗಳು ಹೆಚ್ಚಾಗುತ್ತವೆ. ಡಬಲ್ ಸೇಲ್ ಮತ್ತು ಡೂಪ್ಲಿಕೇಟ್ ಸೇಲ್ ಪ್ರಕರಣಗಳು ಹೆಚ್ಚಾಗುತ್ತವೆ. ಇದಕ್ಕೆ ತಡೆಯೊಡ್ಡಿ ಎಂದು ನಿರ್ದೇಶನ ನೀಡಿದರು.
೩೩ ಸಾವಿರ ಅರ್ಜಿಗಳ ವಿಲೇವಾರಿ:
ಈ ಸಂದರ್ಭ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಜಿಲ್ಲೆಯಲ್ಲಿ ಸುಮೋಟೋ ಆಧಾರದ ಮೇಲೆ ಪೌತಿ ಖಾತಾ ಆಂದೋಲನಗಳನ್ನು ನಡೆಸಿ ೩೪ ಅರ್ಜಿಗಳನ್ನು ಸ್ವೀಕರಿಸಿ, ೩೩ ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ನಾವೇ ನೇರವಾಗಿ ಸುಮೋಟೋ ಮೂಲಕ ಪೌತಿ ಖಾತೆಗಳನ್ನು ಮಾಡಲಾಗದು. ಪೌತಿ ಖಾತೆಗಳಿಗೆ ಸಂಬಂಧಿಸಿದಂತೆ ಮೃತರ ಮರಣ ಪ್ರಮಾಣ ಪತ್ರ, ವಂಶಗಳು ಹಾಗೂ ಇತರ ದಾಖಲೆಗಳನ್ನು ನೀಡಬೇಕು. ಕೌಟುಂಬಿಕ ಸಮಸ್ಯೆಗಳಿಂದ ಕೆಲವರು ದಾಖಲೆಗಳನ್ನು ಕೊಡುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, ೩೪ ಸಾವಿರ ಅರ್ಜಿಗಳನ್ನು ಸ್ವೀಕರಿಸಿ ವಿಲೇವಾರಿ ಮಾಡಲಾಗಿದೆ ಎಂದರೆ ಅದು ಕೇವಲ ಶೇ.೧೧ರಷ್ಟು ಮಾತ್ರ. ಉಳಿದ ಆರ್‌ಟಿಸಿಗಳ ಪೌತಿ ಖಾತೆ ಆಗಬೇಕು. ಜಂಟಿ ಖಾತೆ ಕೂರಿಸಿ. ಸ್ಥಳೀಯವಾಗಿ ಗ್ರಾಮದ ಮುಖಂಡರು, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಿ ಪ್ರಕರಣಗಳನ್ನು ವಿಲೇ ಮಾಡಿ. ಭವಿಷ್ಯದಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಕಂದಾಯಾಧಿಕಾರಿಗಳಿಗೆ ಸೂಚಿಸಿದರು. ಹಾಗೆಯೇ ಆರ್‌ಟಿಸಿಗಳಿಗೆ ಆಧಾರ್ ಸೀಡಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ನಿಗದಿತ ಅವಧಿಯೊಳಗೆ ಗುರಿ ಸಾಧಿಸಿ ಎಂದು ಸಲಹೆ ನೀಡಿದರು.