ಬದ್ಧತೆ ಇದ್ದರೆ ಮಾತ್ರ ಸಂಗೀತ ಕಲೆ ಒಲಿಯುತ್ತದೆ
ಬೆಂಗಳೂರು: ಶಾಸ್ತ್ರೀಯ ಸಂಗೀತ ಕಲಿಕೆಗೆ ಬದ್ಧತೆ ಇದ್ದರೆ ಮಾತ್ರ ಕಲೆ ಒಲಿಯಲು ಸಾಧ್ಯ ಎಂದು ಹಿರಿಯ ಸಂಗೀತ ಪೋಷಕರು ಮತ್ತು ಕಸೂತಿ ಕಲಾವಿದರಾದ ಸುಧಾಮಣಿ ಅವರು ಹೇಳಿದರು.
ಬೆಂಗಳೂರಿನ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯವು ನಗರದ ಬನಶಂಕರಿ ಒಂದನೇ ಹಂತದಲ್ಲಿರುವ (ಪಿಇಎಸ್ ಪದವಿ ಕಾಲೇಜು ಹಿಂಭಾಗ) ಸ್ವಾಮಿ ವಿವೇಕಾನಂದ ವಿದ್ಯಾ ಶಾಲೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಪರಮಹಂಸ ಸದ್ಗುರು ಮುತ್ತುಸ್ವಾಮಿ ದೀಕ್ಷಿತರ ಮತ್ತು ಸಂತ ಕವಿ ಕನಕದಾಸರ ಜಯಂತಿ-ವಿಶೇಷ ಸಂಗೀತ ಕಚೇರಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ವಿದ್ಯೆಗಳಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಒಂದು. ಈ ಕಲೆ ನಮ್ಮ ಮನೆ ಮತ್ತು ಮನೆ-ಮನೆಗಳಲ್ಲಿ ಬೆಳಗಬೇಕು. ಅದಕ್ಕೆ ಅದಕ್ಕೆ ಒಂದು ಸೂಕ್ತವಾದ, ಶಾಸ್ತ್ರ ಬದ್ಧ ತರಬೇತಿ ಅಗತ್ಯ. ಅಂಥಾ ಕೆಲಸವನ್ನು ಅನುಗ್ರಹ ಸಂಗೀತ ಮಹಾವಿದ್ಯಾಲಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಬೆಂಗಳೂರು ಮತ್ತು ತುಮಕೂರಿನಲ್ಲಿ ಕಳೆದ 25 ವರ್ಷಗಳಿಂದ ಸಂಸ್ಥೆ ಮಾತೆಯರಿಗೆ ಪ್ರತಿ ವರ್ಷ ಒಂದು ತಿಂಗಳು ಉಚಿತ ತರಬೇತಿ ಶಿಬಿರ ನಡೆಸಿ, ದಾಸರಪದಗಳನ್ನು ಕಲಿಯುವ ಅವಕಾಶ ನೀಡುತ್ತಿರುವುದು ಮಾದರಿ ಸೇವೆಯಾಗಿದೆ ಎಂದು ಸುಧಾಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶುದ್ಧವಾಗಿ ಹಾಡುವುದೂ ಮುಖ್ಯ: ನಾಡಿನ ಹಿರಿಯ ವಿದ್ವಾಂಸ, ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಾಸರು ಸರಳ, ಸುಲಲಿತ ಮತ್ತು ಸುಂದರವಾದ ಕನ್ನಡ ಭಾಷೆಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ. ಅವುಗಳನ್ನು ಅಷ್ಟೇ ಶುದ್ಧವಾದ ಉಚ್ಛಾರಣೆ ಮತ್ತು ಸ್ವರದಲ್ಲಿ ಹಾಡಬೇಕು. ಭಾಷೆಗೆ ಅಪಚಾರವಾಗಬಾರದು. ಸ್ವಷ್ಟವಾದ ಕನ್ನಡದಲ್ಲಿ ದಾಸರ ಕೀರ್ತನೆ ಹಾಡುವುದೂ ರಾಜ್ಯೋತ್ಸವ ಸಂಭ್ರಮಕ್ಕೆ ಗೌರವಿಸಿದಂತೆ ಎಂದರು.
ಮುತ್ತುಸ್ವಾಮಿ ದೀಕ್ಷಿತರು ವೈಣಿಕರೂ ಆಗಿದ್ದು, ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಮುಂಬರುವ ನಮ್ಮ ಸಂಗೀತ ಕಾರ್ಯಕ್ರಮಗಳಲ್ಲಿ 25 ಕಲಾವಿದರಿಂದ ವೀಣಾವಾದನವನ್ನು ಏಕಕಾಲಕ್ಕೆ ಆಯೋಜಿಸುವ ಚಿಂತನೆ ಇದೆ ಎಂದು ಶ್ರೀಕಂಠ ಭಟ್ ನುಡಿದರು.
ರಂಜಿಸಿದ ಕಛೇರಿಗಳು:
ಈ ಸಂದರ್ಭದಲ್ಲಿ 15 ಕಲಾವಿದರಿಂದ ಏಕಕಾಲಕ್ಕೆ ನೊಟ್ಟು ಸ್ವರ ವೀಣಾ ವಾದನ ಮತ್ತು ವಿದ್ಯಾಲಯದ ವಿದ್ಯಾರ್ಥಿಗಳಿಂದ ನೊಟ್ಟು ಸ್ವರ ಗಾಯನ ಪ್ರಸ್ತುತಿಪಡಿಸಿದ್ದು ರಂಜಿಸಿತು. ವಿದ್ಯಾಲಯವು ಆಯೋಜಿಸಿದ್ದ ವಿಶೇಷ ಉಚಿತ ಶಿಬಿರದಲ್ಲಿ ದಾಸರ ಪದಗಳನ್ನು ಕಲಿತ ಶಿಬಿರಾರ್ಥಿ ಮಾತೆಯರು ಮತ್ತು ವಿದ್ಯಾಲಯದ ವಿದ್ಯಾರ್ಥಿಗಳು ಕನಕದಾಸರು ರಚಿಸಿದ ದೇವರ ನಾಮಗಳನ್ನು ಹಾಡಿ ಎಲ್ಲರ ಗಮನಸೆಳೆದರು. ನಂತರ ವಿದ್ವಾನ್ ಸುಬ್ಬುಕೃಷ್ಣ ಮತ್ತು ವಿದ್ವಾನ್ ನಿರಂಜನ ಎಡಿಲಾಯ ಪ್ರತ್ಯೇಕ ಕಛೇರಿ ನಡೆಸಿ ದೀಕ್ಷಿತರ ಮತ್ತು ದಾಸರ ಕೃತಿಗಳನ್ನು ಮೋಹ ಕಂಠಸಿರಿಯಿಂದ ಪ್ರಸ್ತುತಪಡಿಸಿದರು. ಯುವ ವಿದ್ವಾಂಸ ಶಶಾಂಕ ಚಿನ್ಯ ಅವರ ಕೊಳಲು ವಾದನ ಕಛೇರಿ ಎಲ್ಲರನ್ನೂ ತಲೆಗೂಗುವಂತೆ ಮಾಡಿತು. ವಿದ್ವಾಂಸರಾದ ಅಭಯ್ಉ ಸಂಪಿಗೆತ್ತಾಯ (ಪಿಟೀಲು), ಶಿವಮೊಗ್ಗ ನಿಖಿಲ್ ಕುಮಾರ (ಮೃದಂಗ), ವಿದುಷಿಯರಾದ ದೀಪ್ತಿ ಮತ್ತು ಧನ್ಯಾ(ವೀಣೆ) ಅವರು ಪಕ್ಕವಾದ್ಯದಲ್ಲಿ ಸಹಕಾರ ನೀಡಿ ಕಛೇರಿಗಳು ಕಳೆಗಟ್ಟುವಂತೆ ಮಾಡಿದರು. ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಮತ್ತು ವಸುಮತಿ ಭಟ್ ಹಾಜರಿದ್ದರು.