For the best experience, open
https://m.samyuktakarnataka.in
on your mobile browser.

ಬಯಕೆಗಳಿಂದ ಮುಕ್ತಿಯೇ ನೈಜ ಸಂತೋಷ

04:00 AM May 25, 2024 IST | Samyukta Karnataka
ಬಯಕೆಗಳಿಂದ ಮುಕ್ತಿಯೇ ನೈಜ ಸಂತೋಷ

ಬೆಳಿಗ್ಗೆಯಿಂದ ಸಂಜೆಯತನಕ ನಮ್ಮ ತಲೆಯಲ್ಲೇ ಸಿಲುಕಿಕೊಂಡಿರುತ್ತೇವೆ. ತಲೆಯಿಲ್ಲದಿದ್ದಾಗ ಆಲೋಚನೆಗಳಿಲ್ಲ, ಸಮಸ್ಯೆಗಳಿಲ್ಲ, ಜಗಳಗಳೂ ಇಲ್ಲ. ಆಗ ಕೆಲಸ ಮಾಡುವುದು ಹೃದಯ ಮಾತ್ರ. ಹೃದಯದಿಂದ ಪ್ರೇಮದ, ಸಂತೋಷದ, ಆನಂದದ, ಸರಳತೆಯ, ಮುಗ್ಧತೆಯ ಕಾರಂಜಿಯು ಉಕ್ಕಿ ಹರಿಯುತ್ತದೆ. ಆದರೆ ಮಾಯೆಯು ಎಲ್ಲರನ್ನೂ ಬಲವಾಗಿ ಆವರಿಸಿ ಬಿಡುತ್ತದೆ.
ಮಾಯೆಯ ಶಕ್ತಿ, ಅಜ್ಞಾನದ ಶಕ್ತಿ ಎಷ್ಟು ಪ್ರಬಲವಾಗಿರುತ್ತದೆಯೆಂದರೆ, ಬಹಳ ಬುದ್ಧಿಯುಳ್ಳವರು ಹಾಗೂ ಜ್ಞಾನಿಗಳೂ ಸಹ ಅದರ ವಶವಾಗಿಬಿಡುತ್ತಾರೆ. ಅಶಾಶ್ವತವಾಗಿರುವ ಹಾಗೂ ಹಾದು ಹೋಗಿ ಮಾಯವಾಗಿ ಬಿಡುವಂತಹ ಕ್ಷುಲ್ಲಕ ವಿಷಯಗಳಿಗೆ ನಾವು ಬಹಳ ಪ್ರಾಮುಖ್ಯತೆಯನ್ನು ಕೊಡುತ್ತೇವೆ. ಅವೆಲ್ಲವೂ ಬಂದು, ಹಾಗೇ ಹೊರಟು ಹೋಗುತ್ತವೆ. ಆದ್ದರಿಂದಲೇ ಇದೆಲ್ಲವನ್ನೂ ಮಹಾಮಾಯ ಎಂದು ಕರೆಯುತ್ತಾರೆ. ದುರ್ಗ ಸಪ್ತಶತಿಯಲ್ಲಿ, "ಓ ನನ್ನ ಪ್ರಿಯ ಜಗನ್ಮಾತೆಯೆ, ಮನಸ್ಸಿನ ಭ್ರಮೆಯಿಂದ ಉಂಟಾದ ಲೀಲೆಗಳಿಂದ ನೀನು ನಮ್ಮನ್ನು ವಶಕ್ಕೆ ತೆಗೆದುಕೊಂಡಿರುವೆ" ಎಂದು ಹೇಳಲಾಗಿದೆ. ಚೈತನ್ಯವು ಕೇವಲ ಶಕ್ತಿಯಾಗಿ ಅಥವಾ ಶಾಂತಿಯ ರೂಪದಲ್ಲಿ ಮಾತ್ರವಲ್ಲ, ಭಾಂತ್ರಿಯ ರೂಪದಲ್ಲೂ ಇದೆ. ಚೈತನ್ಯವು ಹಸಿವಿನ ರೂಪದಲ್ಲಿ, ಕ್ಷೋಭೆಯ ರೂಪದಲ್ಲಿ, ಭ್ರಾಂತಿಯ ರೂಪದಲ್ಲೂ ಇದೆ. ಇದೆಲ್ಲವನ್ನೂ ಗಮನಿಸಿದಾಗ ಮನಸ್ಸಿನ ಆಟಗಳನ್ನು ನೋಡಿ ನಗುತ್ತೀರಿ. ನಿಮ್ಮ ಸಣ್ಣ ಮನಸ್ಸನ್ನು ನೀವು ಗೆಲ್ಲಬಲ್ಲಿರಾದರೆ, ಇಡೀ ಜಗತ್ತನ್ನು ನೀವು ಗೆಲ್ಲಬಹುದು.
ಸಣ್ಣ ಮನಸ್ಸು ಆಟವಾಡಿದಾಗ, ಅದರೊಡನೆ ನೀವು ತಾದಾತ್ಮ ಭಾವವನ್ನು ಹೊಂದದೆ ಇದ್ದಾಗ, ನಡೆಯುತ್ತಿರುವುದಕ್ಕಿಂತಲೂ ಅತೀತವಾಗಿ ಹೋಗುತ್ತೀರಿ. ಆಗ ಮಾತ್ರವೇ ಚಿರಶಾಂತಿಯನ್ನು ಹೊಂದಲು ಸಾಧ್ಯ. ಚಿಕ್ಕ ಮನಸ್ಸಿನ ಆಟಗಳಿಗೆ ಅತೀತವಾಗಿ ಹೋದಾಗ ಸಿಗುವ ಶಾಂತಿಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ಸಂತೋಷವು ಕೇವಲ ನಿಮ್ಮ ಮನಸ್ಸಿನ ಸ್ಥಿತಿಯಷ್ಟೆ. ನಮ್ಮ ಹಿರಿಯರು ಆನಂದಮಯೋಭ್ಯಾಸ ಎಂದಿದ್ದಾರೆ, ಎಂದರೆ ಮನಸ್ಸಿನ ಸಂತೋಷವನ್ನು ಪರಿಸ್ಥಿತಿಗಳಿಂದಾಗಿ ಕಳೆದುಕೊಳ್ಳದಿರುವುದು, ಪರಿಸ್ಥಿತಿಗಳಿಂದ ವಿಚಲಿತರಾಗದಿರುವುದು ಮನಸ್ಸು ಗತದ ಸಂಸ್ಕಾರಗಳಿಂದ ಮತ್ತು ಭವಿಷ್ಯದ ಬಯಕೆಗಳಿಂದ ಮುಕ್ತವಾದಾಗ ಸಂತೋಷ ನೆಲೆ ನಿಲ್ಲುತ್ತದೆ.
ನಿಜವಾದ ಸಂತೋಷವೆಂದರೆ, ನಿಮ್ಮ ಗುರುತಿಸಿಕೊಳ್ಳುವಿಕೆಗಳಿಗಿಂತಲೂ ಅತೀತರಾಗಿ ಹೋಗುವುದು. ಪ್ರೌಢವಾದ ಪ್ರೇಮವೆಂದರೆ ಭಾವನೆಗಳಿಗಿಂತಲೂ ಅತೀತವಾಗಿ ಹೋಗಿ, ಏಕತೆಯನ್ನು ಅನುಭವಿಸುವುದು. ನಿಜವಾದ ವಿಶ್ರಾಂತಿಯೆಂದರೆ ನಿಮ್ಮ ಅಸ್ತಿತ್ವದಲ್ಲಿ ವಿಶ್ರಮಿಸುವುದು. ವಿಶ್ರಮಿಸಿ ಮತ್ತು ಇರಿ! ಘಟನೆಗಳೆಲ್ಲವೂ ಹಾದು ಹೋಗಿ ಬಿಡುವಂತವು ಒಂದು ದುಂಬಿಯು ಅನೇಕ ಹೂಗಳಿಂದ ಜೇನನ್ನು ಹೀರಿಕೊಳ್ಳುವಂತೆಯೇ, ಘಟನೆಗಳಿಂದ ಜ್ಞಾನಾಮೃತವನ್ನು ಶೇಖರಿಸಿಕೊಂಡು ಮುನ್ನಡೆಯಿರಿ. ಸದಾ ಕಾರ್ಯನಿರತವಾಗಿರುವ ಒಂದು ದುಂಬಿಯಂತಿರಿ ಮತ್ತು ಅಸ್ತಿತ್ವದಲ್ಲಿ ನೆಲೆಗೊಳ್ಳಿ. ಜೀವನದ ಅಮೃತವೇ ಅನಂತ, ದೈವತ್ವ.