For the best experience, open
https://m.samyuktakarnataka.in
on your mobile browser.

ವೈರಾಗ್ಯ ಎಂದರೇನು?

04:46 AM Sep 21, 2024 IST | Samyukta Karnataka
ವೈರಾಗ್ಯ ಎಂದರೇನು

ಯಾವ ದೊಡ್ಡ ಸಂತೋಷವನ್ನು ನಿಮ್ಮಿಂದ ಹಿಡಿದಿಟ್ಟುಕೊಳ್ಳಲು ಸಾಧ್ಯ? ಬಹಳ ನಕ್ಕು, ಉದ್ರೇಕತನದಲ್ಲಿ ಬಹಳ ಹೊತ್ತು ಇದ್ದ ನಂತರ, ಆ ಉದ್ರೇಕತನವನ್ನು ನಿಮ್ಮ ಮನಸ್ಸು ತಡೆದುಕೊಳ್ಳಲು ಸಾಧ್ಯವಿಲ್ಲವೆಂದು ಗಮನಿಸಿದ್ದೀರೆ? ಒಂದು ರೀತಿಯ ಅಸಹನೀಯ ಭಾವನೆಯುಂಟಾಗಿ ಅದನ್ನು ಬಿಸಾಡಿಬಿಡಬೇಕು, ಸ್ವಲ್ಪ ಹೊತ್ತು ಸುಮ್ಮನಿರಬೇಕು ಎನಿಸುತ್ತದೆ. ಈ ಅನುಭವ ನಿಮಗೆ ಆಗಿದೆಯೆ? ಸಂತೋಷವೂ ವೇದನಕರ ಎಂಬ ಅರಿವು ನಿಮಗುಂಟಾದ ದಿನ ವೈರಾಗ್ಯವು ನಿಮ್ಮಲ್ಲಿ ಉದಯಿಸುತ್ತದೆ. ಸಂತೋಷವು ನಿಮ್ಮಲ್ಲಿ ಗೊಂದಲವನ್ನು, ಉದ್ರೇಕತನವನ್ನು ಉಂಟು ಮಾಡುತ್ತದೆ ಎಂದು ನೀವು ಗಮನಿಸಿದ ದಿನದಿಂದ ವೈರಾಗ್ಯವು ಪ್ರಾರಂಭವಾಗುತ್ತದೆ.
ಸ್ವಲ್ಪ ಪ್ರಶಾಂತವಾಗಿ, ಸುಮ್ಮನಿರಬೇಕು ಎನಿಸುತ್ತದೆ. ಆ ಸೂಕ್ಷ್ಮತೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ಆದ್ದರಿಂದಲೇ ಸಂತೋಷಕ್ಕಾಗಿ, ಏನೋ ದೊಡ್ಡದಕ್ಕಾಗಿ ಹಂಬಲಿಸುವುದು. `ನನಗಿನ್ನೂ ಉತ್ತಮವಾದದ್ದು ಬೇಕು, ನನಗೆ ಇನ್ನಷ್ಟು ಸಂತೋಷವನ್ನು ಕೊಡುವ ಬೇರೆ ಏನಾದರೂ ಬೇಕು ಎನ್ನುವುದೇ ಜ್ವರತೆ. ಒಂದು ಜ್ವರತೆಯಿಂದ ಮತ್ತೊಂದು ಜ್ವರತೆಯೆಡೆಗೆ ಹೋಗುತ್ತೀರಿ. ದುಃಖದ ನೋವೇ ಆ ಜ್ವರತೆ. ಒಂದು ಜ್ವರತೆಯಿಂದ ಮತ್ತೊಂದು ಜ್ವರತೆಗೆ, ಅಲ್ಲಿಂದ ಮತ್ತೊಂದಕ್ಕೆ ಹೋಗುತ್ತ ನಿರಂತರವಾದ ತೊಳಲಾಟದಲ್ಲೇ ಮುಳುಗಿರುತ್ತೇವೆ. ವೈರಾಗ್ಯವೆಂದರೆ ಸುಖ ಮತ್ತು ದುಃಖಗಳಿಗೆ ಅತೀತವಾಗಿರುವ ಒಂದು ನವಿರಾದ ಸಮತೋಲನ.
ನಿಮಗೆ ಎಷ್ಟೇ ದೊಡ್ಡ ಸಂತೋಷ ಬಂದರೂ ಅದರಿಂದ ಅಲುಗಾಡದೆ ಇರುವುದೇ ವೈರಾಗ್ಯ, ಅದೇ ಮೋಕ್ಷ. ನಿಮಗೆ ಸ್ವರ್ಗಗಳನ್ನೇ ಕೊಟ್ಟರೂ ನಿಮ್ಮ ಸ್ಥಾನದಿಂದ ನೀವು ಒಂದಿಂಚೂ ಕದಲುವುದಿಲ್ಲ. ಇದೇ ಸಿದ್ಧಿ. ಸಿದ್ಧಿಯನ್ನು ಪಡೆಯುವ ರಹಸ್ಯವೇ ವೈರಾಗ್ಯ. ನೀವು ಅನೇಕ ಪ್ರಕ್ರಿಯೆಗಳನ್ನು ಕಲಿಯಬಹುದು, ಧ್ಯಾನ ಮಾಡಲು ಕಲಿಯಬಹುದು. ಅನೇಕ ವಿಷಯಗಳನ್ನು ನೀವು ಕಲಿಯಬಹುದಾದರೂ ವೈರಾಗ್ಯವನ್ನು ಮಾತ್ರ ಕಲಿಯಲು ಸಾಧ್ಯವಿಲ್ಲ.
ಗುರುವಿನ ಸಮ್ಮುಖದಲ್ಲಿ, ಗುರುವಿನ ಸಾನ್ನಿಧ್ಯದಲ್ಲಿ ಮಾತ್ರ ಇದು ಅರಳಲು ಸಾಧ್ಯ ಅಥವಾ ಕಾಲಕ್ರಮೇಣವಾಗಿ ಮಾತ್ರ ಅರಳಲು ಸಾಧ್ಯ. ವೈರಾಗ್ಯವು ಅರಳಲು ಮತ್ತೊಂದು ದಾರಿಯಿಲ್ಲ. ಪುಸ್ತಕವನ್ನು ಓದಿ ವೈರಾಗ್ಯವನ್ನು ಪಡೆಯಲು ಸಾಧ್ಯವೇ ಇಲ್ಲ. ಕೇವಲ ಅನುಭವವು ಮಾತ್ರ ನಿಮಗಿದನ್ನು ಬೋಧಿಸಲು ಸಾಧ್ಯ. ಈ ಭೂಮಿಯಲ್ಲಿ ನಾವು ಪಡೆಯಬಹುದಾದ ಅತೀ ದೊಡ್ಡ ಜ್ಞಾನ ಎಂದರೆ ವೈರಾಗ್ಯ. ಏನನ್ನು ಬೇಕಾದರೂ ಅಲುಗಾಡಿಸಬಹುದು, ಆದರೆ ವೈರಾಗ್ಯವನ್ನು ಮಾತ್ರ ಅಲುಗಾಡಿಸಲು ಸಾಧ್ಯವಿಲ್ಲ. ನೀವು ವೈರಾಗ್ಯವನ್ನು ಹೊಂದಿದ್ದರೆ ಈ ಪ್ರಪಂಚದಲ್ಲಿ ಇರುವ ಯಾವುದೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ.