ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬರಲಿದೆ ಕ್ಷೇತ್ರ ಮರುವಿಂಗಡಣೆ ಆಟ-ಕಾದಿದೆ ಮಾಟ

05:14 AM Nov 04, 2024 IST | Samyukta Karnataka

ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಕಾಲಾನುಕಾಲಕ್ಕೆ ಆಗುವುದು ದೇಶದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿರಲಾರದು. ಮುಂಬರುವ ಸಾರ್ವತ್ರಿಕ ಚುನಾವಣೆ ಕ್ಷೇತ್ರಗಳ ಮರುವಿಂಗಡಣೆ ಆಧಾರದ ಮೇರೆಗೆ ನಡೆಯಬೇಕಾಗಿರುವುದರಿಂದ ಸಾರ್ವಜನಿಕ ಬದುಕಿನಲ್ಲಿ ನಿರೀಕ್ಷೆಗೂ ಮೀರಿದ ಬೆಳವಣಿಗೆ ಆಗುವುದಂತೂ ಖಂಡಿತ. ಏಕೆಂದರೆ, ನಿಂತ ನೆಲವೇ ಕುಸಿಯುವ ರೀತಿಯಲ್ಲಿ ಜನಪ್ರತಿನಿಧಿಗಳ ಕ್ಷೇತ್ರಗಳು ಬದಲಾವಣೆಯಾದಾಗ ಸಹಜವಾಗಿಯೇ ಅಯೋಮಯ ವಾತಾವರಣ ಸೃಷ್ಟಿಯಾಗುವುದು ಖಂಡಿತ. ಹೀಗಾಗಿಯೇ ಈಗ ರಾಜಕೀಯ ವಲಯದಲ್ಲಿ ಒಂದು ರೀತಿಯ ಧಾವಂತದ ವಾತಾವರಣ ಕಂಡುಬಂದರೆ ಅದು ಸ್ವಾಭಾವಿಕ ಬೆಳವಣಿಗೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನದಂತೆ ೨೦೨೯ರ ಚುನಾವಣೆಗೆ ಕ್ಷೇತ್ರಗಳ ಮರುವಿಂಗಡಣೆ ಆಗಬೇಕು. ಹಿಂದಿನ ಸರ್ಕಾರ ರೂಪಿಸಿದ ಶಾಸನದ ಬೆಳಕಿನಲ್ಲಿ ಈಗಿನ ಮೋದಿ ಸರ್ಕಾರ ಕ್ಷೇತ್ರಗಳ ಮರುವಿಂಗಡಣೆ ಕಾರ್ಯ ಕೈಗೊಳ್ಳುವ ನಿರ್ಧಾರವನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಅದರ ರೂಪುರೇಷೆಗಳ ಬಗ್ಗೆ ಈಗ ಕುತೂಹಲ. ಕ್ಷೇತ್ರಗಳ ಮರುವಿಂಗಡಣೆ ಉದ್ದೇಶ ಎಲ್ಲಾ ಜಾತಿ ವರ್ಗಗಳಿಗೆ ತಮ್ಮ ತಮ್ಮ ಕ್ಷೇತ್ರಗಳ ಜನಪ್ರತಿನಿಧಿಯಾಗುವ ಅವಕಾಶ ಕಲ್ಪಿಸುವುದು. ಇದಕ್ಕಿರುವ ಏಕೈಕ ಮಾರ್ಗವೆಂದರೆ ರೊಟೇಷನ್ ಪದ್ಧತಿ. ಮೀಸಲು ಹಾಗೂ ಸಾಮಾನ್ಯ ಕ್ಷೇತ್ರಗಳನ್ನು ಬದಲಾವಣೆ ಮಾಡುವುದು ಇದರ ಒಟ್ಟಾರೆ ಗುರಿ. ಮರುವಿಂಗಡಣೆಯ ಹಿಂದಿರುವ ಸದಾಶಯ ಪ್ರಶ್ನಾತೀತ. ಆದರೆ, ಈಗಿರುವ ಸಮಸ್ಯೆ ಎಂದರೆ ಯಾವ ವರ್ಷದ ಜಾತಿಗಣತಿ ಆಧಾರದ ಮೇರೆಗೆ ಕೇಂದ್ರ ಸರ್ಕಾರ ಮರುವಿಂಗಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತದೆ ಎಂಬುದು. ಮುಂದಿನ ವರ್ಷ ಜನಗಣತಿ ಕಾರ್ಯವನ್ನು ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿಯಾಗಿದೆ. ವಾಸ್ತವವಾಗಿ ಈ ಗಣತಿ ಕಾರ್ಯ ಈ ಹಿಂದೆಯೇ ನಡೆಯಬೇಕಿತ್ತು. ಕೊರೋನಾ ಹಾವಳಿಯ ಪರಿಣಾಮವಾಗಿ ಈ ಕಾರ್ಯವನ್ನು ಮುಂದಕ್ಕೆ ಹಾಕಲಾಯಿತು. ಈಗ ಅದಕ್ಕೆ ಕಾಲ ಕೂಡಿಬಂದಿದೆ.
ಜನಸಂಖ್ಯೆಯ ಆಧಾರದ ಮೇರೆಗೆ ಕ್ಷೇತ್ರಗಳನ್ನು ವಿಂಗಡಿಸುವುದು ಇದುವರೆಗೆ ಅನುಸರಿಸಿಕೊಂಡು ಬಂದಿರುವ ಪದ್ಧತಿ. ಕಳೆದ ಚುನಾವಣೆಗೂ ಈಗಿನ ಚುನಾವಣೆಗೂ ಭಾರತದ ಜನಸಂಖ್ಯೆಯನ್ನು ಗಮನಿಸಿದಾಗ ಅದರ ಪ್ರಮಾಣ ಹೆಚ್ಚಿರುವುದು ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ. ಈ ಹೆಚ್ಚಳ ಏಕರೂಪದಲ್ಲಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಉತ್ತರ ಭಾರತದ ರಾಜ್ಯಗಳಲ್ಲಿ ನಿರೀಕ್ಷೆಗೂ ಹೆಚ್ಚಿನ ಪ್ರಮಾಣದ ಜನಸಂಖ್ಯೆ ಏರಿಕೆಯಾಗಿದೆ. ಆದರೆ, ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆ ಏರಿಕೆ ಗಮನಾರ್ಹ ರೀತಿಯಲ್ಲಿ ತಗ್ಗಿದೆ. ಕ್ಷೇತ್ರಗಳ ಮರುವಿಂಗಡಣೆಗೆ ಜನಸಂಖ್ಯೆಯೇ ನಿರ್ಣಾಯಕ ಅಂಶವಾದಾಗ ಸಹಜವಾಗಿಯೇ ಉತ್ತರದ ರಾಜ್ಯಗಳು ರಾಜಕೀಯ ಪ್ರಾಬಲ್ಯವನ್ನು ಗಳಿಸುವುದು ಖಂಡಿತ. ಏಕೆಂದರೆ, ಕ್ಷೇತ್ರಗಳ ಸಂಖ್ಯೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತದೆ. ಇದೇ ಹೊತ್ತಿಗೆ ದಕ್ಷಿಣದ ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳದ ರಾಜ್ಯಗಳ ಕ್ಷೇತ್ರಗಳ ಸಂಖ್ಯೆ ಬಹುತೇಕ ಎಷ್ಟಿದೆಯೋ ಅಷ್ಟಕ್ಕೆ ಸೀಮಿತವಾಗುವ ಸಾಧ್ಯತೆಗಳಿವೆ.
ಇಷ್ಟಲ್ಲದೆ, ಜನಸಂಖ್ಯೆ ಆಧರಿಸಿ ಕೇಂದ್ರ ಸರ್ಕಾರ ಅಭಿವೃದ್ಧಿಗೆ ಸಂಬಂಧಿಸಿದ ನೆರವಿನ ಪ್ರಮಾಣವನ್ನು ನಿರ್ಧರಿಸುವುದರಿಂದ ಹೆಚ್ಚು ಜನಸಂಖ್ಯೆ ಇರುವ ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಮಹಾರಾಷ್ಟ್ರ ಹಾಗೂ ಬಿಹಾರಗಳಿಗೆ ಹೆಚ್ಚಿನ ಪಾಲು ಹೋಗುತ್ತದೆ. ಯಥಾ ಪ್ರಕಾರ, ದಕ್ಷಿಣದ ರಾಜ್ಯಗಳಿಗೆ ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಹ ನೆರವು ದೊರಕುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಏರುಪೇರನ್ನು ಗುರುತಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜನಸಂಖ್ಯೆ ಆಧಾರದ ಮೇರೆಗೆ ಕ್ಷೇತ್ರದ ಮರುವಿಂಗಡಣೆ ಕಾರ್ಯ ಕೂಡದು ಎಂದು ವಾದಿಸುವ ಜೊತೆಗೆ ದಕ್ಷಿಣದ ರಾಜ್ಯಗಳಲ್ಲಿಯೂ ಕೂಡಾ ಹೆಚ್ಚು ಮಕ್ಕಳನ್ನು ಹೆರುವ ಸಂಸ್ಕೃತಿ ಆರಂಭವಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸಾಮಾಜಿಕ ಅಸಮತೋಲನಕ್ಕೆ ಕಾರಣವಾಗುವ ಸಾಧ್ಯತೆಗಳು ಕಂಡುಬರುತ್ತಿವೆ.
ಪರಿಸ್ಥಿತಿಯ ಗಾಂಭೀರ್ಯವನ್ನು ಮನಗಂಡು ದಕ್ಷಿಣ ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಸಮಾಲೋಚನೆ ನಡೆಸಿ ಜಂಟಿ ಮನವಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದು ಸಕಾಲಿಕ ಕ್ರಮ. ಇದರ ಜೊತೆಗೆ ದಕ್ಷಿಣದ ರಾಜ್ಯಗಳ ಸಮಸ್ತ ಸಂಸದರು ಮರುವಿಂಗಡಣೆ ಪರಿಸ್ಥಿತಿಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಮೂಲಕ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಮೂಲಕ ಇಡೀ ದೇಶದಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗುವುದು ಸೂಕ್ತವಾದ ಕ್ರಮವಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರದ ಬಗ್ಗೆ ನಾಯಕತ್ವ ವಹಿಸಿ ಮರುವಿಂಗಡಣೆ ಕಾರ್ಯ ಸರಿದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುವುದರಿಂದ ಅದರ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ.
ನಿಜ. ಕರ್ನಾಟಕದ ಮುಂಬರುವ ವಿಧಾನಸಭಾ ಚುನಾವಣೆಗೂ ಕೂಡಾ ಕ್ಷೇತ್ರಗಳ ಮರುವಿಂಗಡಣೆ ಪದ್ಧತಿಯೇ ಜಾರಿಗೆ ಬರಬೇಕು. ಈಗಿರುವ ೨೨೪ ಕ್ಷೇತ್ರಗಳ ಜೊತೆಗೆ ೨೦ರಿಂದ ೨೫ ಕ್ಷೇತ್ರಗಳು ಹೆಚ್ಚಾಗಬಹುದು ಎಂಬ ಲೆಕ್ಕಾಚಾರದ ಅಭಿಪ್ರಾಯಗಳಿವೆ. ಲೋಕಸಭೆಯ ಈಗಿನ ಸದಸ್ಯ ಬಲ ೫೪೩. ಕ್ಷೇತ್ರ ಮರುವಿಂಗಡಣೆಯ ನಂತರ ಇದು ೬೦೦ರ ಗಡಿಯನ್ನು ದಾಟಿ ಉತ್ತರದ ರಾಜ್ಯಗಳ ಪ್ರಭಾವ ಕೇಂದ್ರದ ಮೇಲೆ ಹೆಚ್ಚಾಗುವ ನಿರೀಕ್ಷೆಗಳು ದಟ್ಟವಾಗಲಿವೆ. ತಜ್ಞರು ಹಾಗೂ ಅನುಭವಿ ರಾಜಕಾರಣಿಗಳು ಅಭಿಪ್ರಾಯಪಡುವಂತೆ ಜನಸಂಖ್ಯೆ ಬದಲಿಗೆ ಭೌಗೋಳಿಕ ಪ್ರದೇಶವನ್ನು ಆಧಾರವಾಗಿಟ್ಟುಕೊಂಡು ಜಿಲ್ಲೆ ಅಥವಾ ತಾಲೂಕನ್ನು ಒಂದು ಘಟಕವನ್ನಾಗಿ ಮಾಡಿ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ವಿಂಗಡಿಸಿದರೆ ಆಗ ದೇಶಕ್ಕೊಂದು ಏಕರೂಪದ ನ್ಯಾಯ ಸಿಗುವುದು ಸುಲಭವಾಗುತ್ತದೆ. ಜನಸಂಖ್ಯೆಯೇ ನಿರ್ಣಾಯಕವಾದರೆ ಪ್ರಾದೇಶಿಕ ಅಸಮತೋಲನ ತಲೆದೋರಿ ಸಾರ್ವಜನಿಕರ ಸಹಕಾರದಿಂದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಣಕ್ಕೆ ತಂದಿರುವ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ.
ಕ್ಷೇತ್ರಗಳ ಮರುವಿಂಗಡಣೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿದ್ಯುಕ್ತವಾದ ಶಾಸನದ ಮೂಲಕ ನಿರ್ಣಯವಾಗಿ ಹೊಸ ಆಯೋಗವೊಂದು ನಿವೃತ್ತ ಸುಪ್ರೀಕೋರ್ಟ್ ನ್ಯಾಯಮೂರ್ತಿಗಳ ನೇತೃತ್ದಲ್ಲಿ ಕಾರ್ಯರೂಪಕ್ಕೆ ಬಂದ ಮೇಲಷ್ಟೆ ಅದರ ಪ್ರಕ್ರಿಯೆ ಆರಂಭವಾಗುತ್ತದೆ. ಈಗಿನಿಂದಲೇ ಕೇಂದ್ರ ಸರ್ಕಾರದ ಮೇಲೆ ಸಾರ್ವಜನಿಕ ಅಭಿಪ್ರಾಯದ ಮೂಲಕ ಜನಸಂಖ್ಯೆ ಆಧರಿಸಿ ಮರುವಿಂಗಡಣೆ ಕಾರ್ಯ ಕೈಗೊಂಡರೆ ಆಗುವ ಅನಾಹುತಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರಷ್ಟೆ ಶಾಸನದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಾಗುತ್ತದೆ. ಕಳೆದ ಬಾರಿ ಆಯೋಗದ ಮುಖ್ಯಸ್ಥರಾಗಿದ್ದ ನ್ಯಾಯಮೂರ್ತಿ ಕುಲ್‌ದೀಪ್ ಸಿಂಗ್ ವ್ಯಾಪಕ ಪ್ರವಾಸ ಹಾಗೂ ಸಮಾಲೋಚನೆಯ ಮೂಲಕ ವಿವಾದ ಮುಕ್ತವಾಗಿ ಮರುವಿಂಗಡಣೆ ಕಾರ್ಯವನ್ನು ಸಕಾಲದಲ್ಲಿ ಪೂರ್ಣಗೊಳಿಸಿದ್ದರೂ ಕರ್ನಾಟದಲ್ಲಿಯೇ ಆಗಿರುವ ಲೋಪದೋಷಗಳು ಆಡಳಿತಾತ್ಮಕವಾಗಿ ಈಗಲೂ ಎದ್ದು ಕಾಣುತ್ತಿವೆ ಎಂಬುದು ಎಚ್ಚರದ ಗಂಟೆಯಾಗಿವೆ.

Next Article