For the best experience, open
https://m.samyuktakarnataka.in
on your mobile browser.

ಬರಿಗೈಯಲ್ಲಿ ಹಿಂತಿರುಗಿದ ಶೇಖ್ ಹಸೀನಾ

03:00 AM Jul 29, 2024 IST | Samyukta Karnataka
ಬರಿಗೈಯಲ್ಲಿ ಹಿಂತಿರುಗಿದ ಶೇಖ್ ಹಸೀನಾ

ಪ್ರಧಾನಿ ಮೋದಿ ಪ್ರಮಾಣವಚನ ಸಮಾರಂಭಕ್ಕೆ ಆಗಮಿಸಿದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ನಂತರ ಪಯಣಿಸಿದ್ದು ಚೀನಾ ದೇಶಕ್ಕೆ, ಹಾಗೆಂದು ಭಾರತದೊಡನೆ ಕೋಪಗೊಂಡೋ ಅಥವಾ ಅಸಮಾಧಾನಗೊಂಡು ಹಸೀನಾ ಚೀನಾ ದೇಶಕ್ಕೆ ಹೋಗಿದ್ದಲ್ಲ. ಅದು ಎರಡು ದೊಡ್ಡ ಶಕ್ತಿಯುತ ದೇಶಗಳ ನಡುವೆ ತೋರಬೇಕಾದ ಸಮತೋಲಿತ ರಾಜತಾಂತ್ರಿಕತೆಯ ಅನಿವಾರ್ಯತೆ. ಹಾಗೆ ನೋಡಿದರೆ ಬಾಂಗ್ಲಾ ದೇಶಕ್ಕೆ, ಚೀನಾ, ನೇಪಾಳ ಹಾಗೂ ಭೂತಾನನಂತೆ ಕೇವಲ ನೆರೆಯ ದೇಶ ಮಾತ್ರ, ಆದರೆ ಭಾರತಕ್ಕೆ ಹಾಗಲ್ಲ ಸರಿಸುಮಾರು ೪,೦೯೬ ಕಿಲೋಮೀಟರ್(ಸುಮಾರು ೨,೫೦೦ ಮೈಲಿ) ಗಡಿಯನ್ನು ಬಾಂಗ್ಲಾದೇಶ ಭಾರತದ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರ ಹಾಗೂ ಮಿಜೋರಾಂ ರಾಜ್ಯಗಳೊಂದಿಗೆ ಹೊಂದಿದೆ. ಆ ಕಾರಣಕ್ಕಾಗಿಯೇ ಬಾಂಗ್ಲಾದೇಶದ ಅರ್ಥವ್ಯವಸ್ಥೆ, ಕಾನೂನು ವ್ಯವಸ್ಥೆ ಅಲ್ಲಿಯ ರಾಜಕೀಯ ಹೀಗೆ ಯಾವುದೇ ವಿಭಾಗದಲ್ಲಿ ಏನೇ ವ್ಯತ್ಯಾಸಗಳು ಕಂಡುಬಂದರೆ ಭಾರತ ಜಾಗರೂಕತೆಯಿಂದ ಅಲ್ಲಿನ ಸ್ಥಿತಿ ಗತಿಗಳಿಗೆ ಸ್ಪಂದಿಸಬೇಕು ಹಾಗೂ ಬಾಂಗ್ಲಾದೊಂದಿಗೆ ಭಾರತದ ಸಂಬಂಧವು ಕೂಡ ಅಷ್ಟೇ ಗಟ್ಟಿಯಾಗಿಯೇ ಇದೆ. ಬಾಂಗ್ಲಾ ದೇಶವೆಂದರೆ ಮೂಲಭೂತವಾದವನ್ನು ಪೋಷಿಸುವ ದೇಶ ಎಂದು ಪಾಕಿಸ್ತಾನದೊಂದಿಗೆ ಹೋಲಿಸಿದರೆ ತಪ್ಪಾದೀತು. ಆ ದೇಶಕ್ಕೆ ಅದರಲ್ಲೂ ಅಲ್ಲಿನ ಕೆಲ ರಾಜಕಾರಣಿಗಳಿಗೆ ಭಾರತ ಹಾಗೂ ಪಾಕಿಸ್ತಾನ ಎಂದು ಸೌಹಾರ್ದದಿಂದಿರುವುದು ಬೇಕಿಲ್ಲ. ಆದರೆ ಬಾಂಗ್ಲಾದ ಕಥೆ ಹಾಗಲ್ಲ. ವಿಮೋಚನಾ ಚಳವಳಿಯನ್ನು ಬೆಂಬಲಿಸಿ ಮುಕ್ತಿವಾಹಿನಿ ಪಡೆಗೆ ಶಕ್ತಿ ತುಂಬಿ ಪಾಕಿಸ್ತಾನದಿಂದ ಮುಕ್ತಿಗೊಳಿಸಿದ್ದು ಭಾರತವೇ. ಇದನ್ನು ಬಾಂಗ್ಲಾ ಕೂಡ ಮರೆತಿಲ್ಲ. ಈಗಲೂ ಢಾಕಾದಲ್ಲಿ ಜಗನ್ನಾಥನ ಉತ್ಸವವನ್ನು ಟ್ರಾಫಿಕ್ ಜಾಮ್ ಆಗುವಷ್ಟು ವಿಜೃಂಭಣೆಯಿಂದ ನಡೆಯುತ್ತಿದೆ. ಆದರೆ ಬದಲಾದ ಸನ್ನಿವೇಶದಲ್ಲಿ ಕೆಲವು ಮೂಲಭೂತವಾದಿ ಸಿದ್ಧಾಂತವನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳು ಬಾಂಗ್ಲಾ ಜನರಲ್ಲಿ ಭಾರತದ ಬಗ್ಗೆ ಪ್ರಯತ್ನಪೂರ್ವಕವಾಗಿ ದ್ವೇಷ ಮನೋಭಾವನೆಯನ್ನು ಬಿತ್ತುವ ಕೆಲಸ ಮಾಡುತ್ತಿವೆ. ಆ ಕಾರಣಕ್ಕಾಗಿಯೇ ಚೀನಾ ದೇಶಕ್ಕೆ ಬಾಂಗ್ಲಾದೇಶದ ಮೇಲೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅಥವಾ ಗಡಿರೇಖೆಯನ್ನು ಹೊಂದಿರುವ ಯಾವುದೇ ದೇಶವಿರಲಿ ಆ ದೇಶದೊಂದಿಗೆ ವ್ಯವಹರಿಸಲು ಚೀನಾ ದೇಶಕ್ಕೆ ಎಲ್ಲಿಲ್ಲದ ಕುಟಿಲೋತ್ಸಾಹ. ಆದ್ದರಿಂದ ಕಾಲದಿಂದ ಕಾಲಕ್ಕೆ ಬಾಂಗ್ಲಾದ ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಲು, ಆಸ್ಪತ್ರೆಗಳನ್ನು ಕಟ್ಟಲು ಹಾಗೂ ನಾನಾ ಮೂಲಸೌಕರ್ಯ ಯೋಜನೆಗಳ ಮೇಲೆ ಹಣ ಸುರಿಯುತ್ತಲೇ ಇದೆ, ಹಾಗೆಂದು ಭಾರತವೂ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಭಾರತವು ಕೂಡ ಆಗಾಗ್ಗೆ ಹಣ ಸಹಾಯ ಮಾಡುತ್ತಲೇ ಇದೆ, ಹಾಗಿದ್ದರೂ ಆಂತರಿಕ ಸಮಸ್ಯೆ, ರಾಜಕೀಯ ಒತ್ತಡ ಇವೆಲ್ಲವೂ ಶೇಖ್ ಹಸೀನಾರನ್ನು ಚೀನಾ ದೇಶದ ಮುಂದೆ ಸಾಲಕ್ಕಾಗಿ ಕೈ ಚಾಚುವಂತೆ ಮಾಡಿತ್ತು. ಚೀನಾ ಕೂಡ ಮೊದಮೊದಲು ಹಣದ ಹರಿವನ್ನು ಸುಗಮಗೊಳಿಸಿತ್ತು, ಆದರೆ ಈಗ ಚೀನಾದ ಆರ್ಥಿಕತೆ ಉತ್ತರದಿಂದ ದಕ್ಷಿಣದ ಕಡೆ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶೇಖ್ ಹಸೀನಾ ಚೀನಾದ ಜಿನ್ ಪಿಂಗ್ ಬಳಿ ೫ ಬಿಲಿಯನ್ ಡಾಲರ್‌ಗಳ ಸಹಾಯ ಕೇಳಿದ್ದರು, ಆದರೆ ಜಿನ್ ಪಿಂಗ್ ಭರವಸೆ ಕೊಟ್ಟಿದ್ದು ಕೇವಲ ೧ ಬಿಲಿಯನ್ ಡಾಲರ್‌ಗಳಿಗೆ, ಈ ಬೆಳವಣಿಗೆಯಿಂದ ಬೇಸತ್ತ ಶೇಕ್ ಹಸೀನಾ ಚೀನಾದ ಗೊಡವೆಯೇ ಬೇಡ ಎಂದು ಪ್ರವಾಸವನ್ನು ಅವಧಿಗೆ ಮುಂಚೆಯೇ ಮೊಟಕುಗೊಳಿಸಿ ಬಾಂಗ್ಲಾದೇಶಕ್ಕೆ ಬರಿಗೈಯಲ್ಲಿ ಹಿಂದಿರುಗಿದ್ದಾರೆ.
ಬರಿಗೈಯಲ್ಲಿ ಹಿಂತಿರುಗಿದ್ದ ಶೇಖ್ ಹಸೀನಾರನ್ನು ಎದುರುಗೊಂಡಿದ್ದು ಮೀಸಲು ಹೋರಾಟದ ಕಿಚ್ಚು. ಹಾಗೆ ನೋಡಿದರೆ ಈ ಹೋರಾಟ ಹೊಸದೇನಲ್ಲ. ೨೦೧೮ರಲ್ಲೂ ಈ ರೀತಿಯ ಹೋರಾಟ ಹುಟ್ಟಿಕೊಂಡಿತ್ತು, ಅದರ ಫಲವಾಗಿ ಅಂದೇ ಉದ್ಯೋಗದಲ್ಲಿ ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಲಾಗಿತ್ತು. ಇತ್ತೀಚೆಗೆ ಅಲ್ಲಿನ ನ್ಯಾಯಾಲಯ ಮೀಸಲಾತಿಯನ್ನು ಮತ್ತೆ ಜಾರಿಗೊಳಿಸಬೇಕೆಂದು ಆದೇಶಿಸಿತ್ತು, ಆದರೆ ಬಾಂಗ್ಲಾ ಯುವಕರಿಗೆ ಈ ಆದೇಶ ಸರಿ ಕಾಣಲಿಲ್ಲ. ಯುವಕರ ರೋಷಾವೇಶಕ್ಕೆ ಕಾರಣವೂ ಇತ್ತು, ಬಾಂಗ್ಲಾದೇಶದಲ್ಲಿ ೨೦೧೮ರ ಮುಂಚೆ ಇದ್ದ ಮೀಸಲಾತಿ ಪ್ರಮಾಣ ೫೬%, ಅದರಲ್ಲಿ ೩೦% ಸ್ವತಂತ್ರ ಹೋರಾಟಗಾರರ ಕುಟುಂಬಕ್ಕೆ, ೧೦% ಮಹಿಳಾ ಮೀಸಲಾತಿ, ೧೦% ಹಿಂದುಳಿದ ಪ್ರದೇಶಗಳಿಗೆ, ೫% ಅಲ್ಪಸಂಖ್ಯಾತರು ಹಾಗೂ ಕೆಲವು ನಿರ್ದಿಷ್ಟ ವರ್ಗಕ್ಕೆ ಹಾಗೂ ೧% ವಿಶೇಷ ಚೇತನರಿಗೆ ಹೀಗೆ ವಿಭಜಿಸಲಾಗಿತ್ತು. ಸರಿಸುಮಾರು ಆರರಿಂದ ಏಳು ವರುಷಗಳ ಕಾಲ ಮೆರಿಟ್ ಆದರದ ಮೇಲೆ ಉದ್ಯೋಗ ಪಡೆದವರನ್ನು ನೋಡಿದ್ದ ಯುವ ಸಮೂಹ ಅವರ ಹಾದಿಯಲ್ಲೇ ತಮಗೂ ಒಳ್ಳೆಯ ಸರ್ಕಾರಿ ಕೆಲಸ ದೊರಕೀತು ಎಂದುಕೊಂಡಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಮತ್ತೆ ಮೀಸಲು ಅಂದಾಗ ಯುವಜನತೆ ಕಂಗಾಲಾಗಿ, ಮೊದಮೊದಲು ಯೂನಿವರ್ಸಿಟಿಯ ಕ್ಯಾಂಪಸುಗಳಲ್ಲಿ ಪ್ರತಿಭಟನೆ ಶಾಂತ ರೂಪದಲ್ಲೇ ಇತ್ತು. ಆದರೆ ಈ ಕಿಚ್ಚು ಫೇಸ್ಬುಕ್ ಸಹಾಯದಿಂದ ಎಲ್ಲೆಡೆ ಕಾಳ್ಗಿಚ್ಚಿನಂತೆ ಹಬ್ಬಿ ನೂರಾರು ವಿದ್ಯಾರ್ಥಿಗಳು ಪ್ರಾಣವನ್ನೇ ಕಳೆದುಕೊಳ್ಳುವಂತಾಯಿತು, ವಿದ್ಯಾರ್ಥಿ ಸಮೂಹದೊಂದಿಗೆ ಅಲ್ಲಿಯ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿಯು ಧುಮುಕಿದಾಗ ಚಳವಳಿ ಉಗ್ರ ರೂಪ ತಾಳಿದೆ. ಕಾರಣವಿಷ್ಟೇ ಬಾಂಗ್ಲಾದೇಶದಲ್ಲಿ ಜನವರಿ ೨೦೨೪ರಲ್ಲಿ ನಡೆದ ಚುನಾವಣೆಯಲ್ಲಿ ಪ್ರಬಲ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಚುನಾವಣೆಯನ್ನೇ ಬಹಿಷ್ಕರಿಸುವ ಎಡವಟ್ಟು ಮಾಡಿ ಕುಳಿತಿತ್ತು, ಪರಿಣಾಮವಾಗಿ ಅವಾಮಿ ಲೀಗ್‌ನ ಶೇಖ್ ಹಸೀನಾ ಐದನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ವಿರೋಧ ಪಕ್ಷ ತನ್ನ ಸ್ವಯಂಕೃತ ಅಪರಾಧದಿಂದಾಗಿ ಸಂಸತ್‌ನಲ್ಲಿ ತನ್ನ ಅಭಿಪ್ರಾಯ ಮಂಡಿಸುವ ಅವಕಾಶವನ್ನೇ ಕಳೆದುಕೊಂಡಿತು. ಆ ಚಡಪಡಿಕೆ ಢಾಕಾದ ರಸ್ತೆ ರಸ್ತೆಗಳಲ್ಲಿ ಈ ಮೀಸಲು ಉಗ್ರ ರೂಪದಲ್ಲಿ ಕಾಣಿಸಿಕೊಂಡಿತು. ಬಹುಶಃ ಬಾಂಗ್ಲಾದೇಶದ ಪರಿಸ್ಥಿತಿಯನ್ನು ನೋಡಿದವರಾರು ಇನ್ನೆಂದು ವಿರೋಧ ಪಕ್ಷಗಳನ್ನೇ ಇಲ್ಲದಂತೆ ಮಾಡುತ್ತೇವೆ ಎಂದು ಹೇಳಲಾರರು. ಸಂಸತ್‌ನಲ್ಲಿ ಪ್ರಬಲ ವಿರೋಧ ಪಕ್ಷ ಇರದೇ ಇದ್ದರೆ ಏನಾದೀತು ಎಂಬುದಕ್ಕೆ ಬಾಂಗ್ಲಾ ನಿದರ್ಶನವಾಗಿ ನಿಲ್ಲಲಿದೆ.
ಬಾಂಗ್ಲಾದ ಯುವಕರು ರೊಚ್ಚಿಗೆದ್ದಿದ್ದರಲ್ಲಿ ಯಾವುದೇ ಆಶ್ಚರ್ಯವಿಲ್ಲ, ಅಲ್ಲಿಯ ಪರಿಸ್ಥಿತಿಯೇ ಹಾಗಿದೆ. ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಗಲ್ಲಿಗಳಿಗೆ ಹೋದರೆ ಅಲ್ಲಿನ ದೃಶ್ಯಗಳೇ ಶ್ರಮಿಕರ, ಕಾರ್ಮಿಕರ ಕಥೆಗಳನ್ನು ಹೇಳುತ್ತವೆ. ಢಾಕಾದ ಯಾವುದೇ ದಾರಿಯಲ್ಲಿ ಹೋದರೂ ಸಿಗುವುದು ಸೈಕಲ್ ರಿಕ್ಷಾ. ಅವು ಅಲ್ಲಿ ಅತ್ಯಂತ ಅಗ್ಗದ ಸಾರಿಗೆ ಸಾಧನ, ಹೀಗೆ ಬಡತನದ ದೃಶ್ಯಗಳು ಯಾವ ವಿವರಣೆಯೂ ಬೇಕಿಲ್ಲದೆ ಅಂಕೆಗೆ ಸಿಗುತ್ತವೆ ಮತ್ತು ಅಲ್ಲಿಯ ಲೇಬರ್ ಇಸ್ ವೆರಿ ಚೀಪ್ ಹಾಗೂ ಅದೇ ಕಾರಣಕ್ಕೆ ಅಲ್ಲಿ ಹೆಚ್ಚು ಹೆಚ್ಚು ಜವಳಿ ಉದ್ಯಮಗಳು ಕಾಣಸಿಗುತ್ತವೆ ಹಾಗೂ ಬಾಂಗ್ಲಾದ ಬೆಳವಣಿಗೆಗೆ ಜವಳಿ ಉದ್ಯಮದ ಕೊಡುಗೆಯು ಅಪಾರ.
ಆದರೆ ಅಲ್ಲಿನ ಯುವಕರು ಅಂಡರ್ ಎಂಪ್ಲಾಯ್ಮೆಂಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಕಲಿತ ಯುವಕರು ಜವಳಿ ಕಾರ್ಖಾನೆಗಳಲ್ಲಿ ಕೇವಲ ಕಾರ್ಮಿಕನಾಗಿ ದುಡಿಯಲು ಸಿದ್ಧರಿಲ್ಲ. ಕಲಿತ ಯುವ ಸಮೂಹದ ಕನಸು ಅದಕ್ಕಿಂತ ದೊಡ್ಡದು ಮೀಸಲು ಅದಕ್ಕೆ ಅಡ್ಡಿ ಉಂಟು ಮಾಡಿತು, ಸಮಯಕ್ಕೆ ಸರಿಯಾಗಿ ವಿರೋಧ ಪಕ್ಷದ ಬೆಂಬಲವು ದೊರಕಿ ನ್ಯಾಯಯುತವಾದ ಹಕ್ಕಿಗಾಗಿ ಶಾಂತಿಯುತವಾಗಿ ನಡೆಯಬೇಕಿದ್ದ ಚಳವಳಿ ಉಗ್ರ ರೂಪ ತಾಳಿ ಯುವಕರ ಪ್ರಾಣ ತೆಗೆದಿದ್ದು ವಿಪರ್ಯಾಸ. ಹಾಗೆಂದು ಶೇಖ್ ಹಸೀನಾ ಆಡಳಿತ ಬಾಂಗ್ಲಾ ಪ್ರಜೆಗಳ ಒಳಿತನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದಾಗಿಯೋ ಅಥವಾ ಅವರ ಆಡಳಿತಾವಧಿಯಲ್ಲಿ ಬಾಂಗ್ಲಾ ಅಭಿವೃದ್ಧಿ ಕಂಡಿಲ್ಲವೆಂದಲ್ಲ. ಒಂದಾನೊಂದು ಕಾಲದಲ್ಲಿ ಪಾಕಿಸ್ತಾನದ ಅತ್ಯಂತ ಹಿಂದುಳಿದ ಪ್ರಾಂತ್ಯಕ್ಕೆ ಸೇರಿದ್ದೇ ಬಾಂಗ್ಲಾದೇಶ ೧೯೭೧ರ ಪಾಕಿಸ್ತಾನದೊಂದಿಗಿನ ಕದನದ ನಂತರ ಬಡತನ, ಕ್ಷಾಮ, ಆರ್ಥಿಕ ಹೊಡೆತಗಳೆಲ್ಲವನ್ನು ಮೆಟ್ಟಿ ನಿಂತು ದೇಶವೇ ನಿಬ್ಬೆರಗಾಗುವಂತೆ ಎದ್ದು ನಿಂತಿದೆ, ಇದರ ಕುರುಹುಗಳು ೨೦೦೫ ಮತ್ತು ೨೦೦೬ರಲ್ಲೇ ಕಂಡುಬಂದಿತ್ತು, ಆದರೆ ಆಗ ಇದು ಕೇವಲ ಕಾಕತಾಳೀಯ ಮತ್ತು ತಾತ್ಕಾಲಿಕ ಎಂದೇ ಬಣ್ಣಿಸಲಾಗಿತ್ತು. ಆದರೆ ಅಂದಿನಿಂದ, ಬಾಂಗ್ಲಾದೇಶದ ವಾರ್ಷಿಕ ಜಿಡಿಪಿ ಬೆಳವಣಿಗೆಯು ಪಾಕಿಸ್ತಾನಕ್ಕಿಂತ ವರ್ಷಕ್ಕೆ ಸುಮಾರು ೨.೫ ಶೇ. ಮೀರಿದೆ. ಬಾಂಗ್ಲಾದೇಶದ ತಲಾ ಆದಾಯವು ಪಾಕಿಸ್ತಾನದ ತಲಾ ಆದಾಯಕ್ಕಿಂತ ವರ್ಷಕ್ಕೆ ಸುಮಾರು ೩.೩ ಶೇಕಡಾವಾರು ವೇಗವಾಗಿ ಬೆಳೆಯುತ್ತಿದೆಯಂತೆ. ಹಾಗಾದರೆ ಒಂದು ಕಾಲಕ್ಕೆ ಪಾಕಿಸ್ತಾನದ ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದ ಬಾಂಗ್ಲಾ ಹೇಗೆ ಪಾಕಿಸ್ತಾನವನ್ನು ಮೀರಿಸುತ್ತಿದೆ ಎಂದು ನೋಡಿದರೆ, ಬಾಂಗ್ಲಾದೇಶ ತನ್ನ ಬೆಳವಣಿಗೆಗಾಗಿ ತನ್ನ ಸಾಮಾಜಿಕ ಸ್ತರಗಳಲ್ಲಿ ಭಾರಿ ಬದಲಾವಣೆಯನ್ನು ಮಾಡಿಕೊಂಡಿತು. ಅದು ಮಹಿಳೆಯರ ಸಬಲೀಕರಣದಿಂದ ಹಿಡಿದು ಇನ್ಕೂಲ್ಯಸಿವ್ ಬ್ಯಾಂಕಿಂಗ್‌ವರೆಗೆ (ಅಂದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕೂಡ ಬ್ಯಾಂಕಿಂಗ್ ಸವಲತ್ತುಗಳನ್ನು ಹೊಂದುವುದು) ಅದರಲ್ಲಿ ಬಹು ದೊಡ್ಡ ಕೊಡುಗೆ ಸರ್ಕಾರೇತರ ಸಂಸ್ಥೆ ಗ್ರಾಮೀಣ ಬ್ಯಾಂಕ್‌ನದು ಹಾಗೂ ಹೆಚ್ಚು ಹೆಚ್ಚು ಮಹಿಳೆಯರು ಸಾರ್ವಜನಿಕ ಕ್ಷೇತ್ರದಲ್ಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಶೇಖ್ ಹಸೀನಾ ಸರ್ಕಾರ ಮಾರ್ಪಾಟುಗಳನ್ನು ಮಾಡುತ್ತಲೇ ಇದೆ. ಒಂದು ಅಂದಾಜಿನ ಪ್ರಕಾರ ಕೇವಲ ೧೦% ಬ್ಯಾಂಕ್ ಖಾತೆಗಳು ಬಾಂಗ್ಲಾದೇಶದಲ್ಲಿ ಡೊರ್ಮಂಟ್ ಅಕೌಂಟ್‌ಗಳು (ಡೊರ್ಮಂಟ್ ಅಕೌಂಟ್ ಅಂದರೆ ಒಂದು ಬ್ಯಾಂಕ್ ಖಾತೆಯನ್ನು ನಿರ್ದಿಷ್ಟ ಅವಧಿಯವರೆಗೆ ಉಪಯೋಗಿಸದೆ ಇದ್ದರೆ ಅದನ್ನು ಡೊರ್ಮಂಟ್ ಎಂದು ಕರೆಯುತ್ತಾರೆ) ಅಂದರೆ ಬಾಂಗ್ಲಾದೇಶದಲ್ಲಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯುವದಷ್ಟೇ ಅಲ್ಲ, ಅದನ್ನು ತಮ್ಮ ದಿನನಿತ್ಯದ ವ್ಯವಹಾರದಲ್ಲಿ ಅಷ್ಟೇ ಹಾಸುಹೊಕ್ಕಾಗಿ ಉಪಯೋಗಿಸುತ್ತಿದ್ದಾರೆ ಎಂದು ಅರ್ಥ. ಈ ಪ್ರಮಾಣ ಭಾರತಕ್ಕೆ ಹೋಲಿಸಿದರೆ ಭಾರತದಲ್ಲಿ Dormant ಅಕೌಂಟ್‌ಗಳು ೮೮% (ಭಾರತದ ಜನಸಂಖ್ಯೆಗೂ ಬಾಂಗ್ಲಾದೇಶದ ಜನಸಂಖ್ಯೆಗೂ ಹಾಗೂ ಭೂಗೋಳಿಕ ಪರಿಧಿಗೂ ತಾಳೆ ಹಾಕುವುದು ಸರಿ ಇಲ್ಲದಿರಬಹುದು. ಆದರೆ ೮೮% ಎಂಬುದು ಬಹು ದೊಡ್ಡ ಅಂಕಿ) ಹಾಗೂ ಬಾಂಗ್ಲಾದೇಶ ತನ್ನ ನೆರೆಹೊರೆಯೊಂದಿಗೆ ಅಂತ್ಯಂತ ಸಕಾರಾತ್ಮಕವಾಗಿ ವ್ಯವಹರಿಸುತ್ತಿದೆ ಮತ್ತು ಭಾರತವು ಕೂಡ ಬಾಂಗ್ಲಾದೇಶದೊಂದಿಗೆ ಮಿತ್ರತ್ವವನ್ನು ಪೋಷಿಸುತ್ತಲೇ ಬಂದಿದೆ. ಬಾಂಗ್ಲಾದೇಶದಲ್ಲಿ ಉಂಟಾದ ಸಾವು-ನೋವು ಎಂದಿಗಾದರೂ ಖಂಡನೀಯವೇ. ಆದರೆ ಶೇಖ್ ಹಸೀನಾ ಕೈಯಲ್ಲಿ ಬಾಂಗ್ಲಾದ ಚುಕ್ಕಾಣಿ ಇದ್ದಷ್ಟು ದಿನ ಬಾಂಗ್ಲಾ ಮತ್ತೊಂದು ಪಾಕಿಸ್ತಾನ ಅದೀತೆಂಬ ಆತಂಕ ಭಾರತಕ್ಕಿರುವುದಿಲ್ಲ, ಹಾಗಾಗ ಬೇಕೆಂದರೆ ಬಾಂಗ್ಲಾ ಮತ್ತೆ ಸಹಜ ಸ್ಥಿತಿಗೆ ಮರಳಬೇಕು. ಬಾಂಗ್ಲಾದ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಮೀಸಲನ್ನು ತೆಗೆದುಹಾಕಲು ಆದೇಶಿಸಿದೆ. ಈ ಬೆಳವಣಿಗೆಯೊಂದಿಗೆ ಬಾಂಗ್ಲಾದಲ್ಲಿ ಮತ್ತೆ ಶಾಂತಿ ನೆಲೆ ನಿಲ್ಲುವ ಸೂಚನೆಗಳು ಕಾಣುತ್ತಿವೆ. ಶೇಖ್ ಹಸೀನಾ ಹಾಗೂ ಅವಾಮಿ ಲೀಗ್ ಅಹಂಕಾರ ಮರೆತು ಆತ್ಮಾವಲೋಕನ ಮಾಡಿಕೊಳ್ಳಲಿ, ವಿರೋಧ ಪಕ್ಷಗಳ ವಿಮರ್ಶೆಗೆ ಕಿವಿಯಾಗಿ ತನ್ನ ತಪ್ಪನ್ನು ತಿದ್ದಿಕೊಳ್ಳಲಿ. ಆಗಲಾದರೂ ಅಲ್ಲಿನ ಯುವ ಪೀಳಿಗೆ ಶೇಖ್ ಹಸೀನಾ ಹಾಗೂ ಅವಾಮಿ ಲೀಗ್ ಪಕ್ಷವನ್ನು ಕ್ಷಮಿಸಲಾಗದಿದ್ದರೂ ಕ್ಷಮಿಸುವ ಆಲೋಚನೆ ಮಾಡೀತು.