ಬಾಂಗ್ಲಾ ಪ್ರಕ್ಷುಬ್ಧ ಸ್ಥಿತಿ ಭಾರತಕ್ಕೆ ತಂತಿಯ ನಡೆ
ಬಾಂಗ್ಲಾದಲ್ಲಿ ಇಸ್ಕಾನ್ ಸಂಸ್ಥೆಯ ಚಿನ್ಮಯ ಕೃಷ್ಣದಾಸ್‌ಬ್ರಹ್ಮಚಾರಿ ಮೇಲೆ ದೇಶದ್ರೋಹ ಆರೋಪ ಹೊರಿಸಿ ಬಂಧಿಸಿ ಜೈಲಿಗೆ ಹಾಕಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ. ರಾಷ್ಟ್ರಧ್ಚಜಕ್ಕೆ ಅಪಮಾನ ಮಾಡಿದರು ಎಂಬುದು ಸಾಬೀತಾಗುವುದಕ್ಕೆ ಮೊದಲೇ ಅವರನ್ನು ಜೈಲಿಗೆ ಹಾಕಿದ್ದು ಘರ್ಷಣೆಗೆ ಕಾರಣವಾಗಿದೆ. ಈ ಘರ್ಷಣೆಯಲ್ಲಿ ವಕೀಲನ ಹತ್ಯೆಯಾಗಿದೆ. ಇಷ್ಟೆಲ್ಲ ಘಟನೆಗಳು ನಡೆದ ಮೇಲೂ ಭಾರತ ಮೌನವಹಿಸುವುದು ಸರಿಯಲ್ಲ. ಬಾಂಗ್ಲಾದಲ್ಲಿ ನಮ್ಮ ಸಹೋದರರೇ ವಾಸಿಸುತ್ತಿದ್ದು ಅವರನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಶೇಕ್ ಹಸೀನಾ ಓಡಿ ಬಂದಾಗ ಆಶ್ರಯ ನೀಡಿದ ಮೇಲೆ ಎರಡೂ ದೇಶಗಳ ಮುಖಂಡರ ನಡುವೆ ಮಾತುಕತೆ ನಡೆಯಬೇಕಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾ ಮೇಲೆ ರಾಜತಾಂತ್ರಿಕ ಒತ್ತಡ ಹಾಕುವುದು ಅಗತ್ಯ. ಇದಕ್ಕೆ ಮುಸ್ಲಿಂ ದೇಶಗಳ ನೆರವು ಪಡೆಯುವುದು ತಪ್ಪೇನಲ್ಲ. ನೊಬಲ್ ಪುರಸ್ಕೃತ ಮೊಹಮದ್ ಯೂನುಸ್ ಕೂಡ ಭಾರತದೊಂದಿಗೆ ಮಾತುಕತೆ ನಡೆಸಲು ಮುಂದಾಗಬೇಕಿತ್ತು. ಅವರು ಶೇಖ್ ಹಸೀನಾ ಅವರ ಮೇಲಿನ ಕೋಪದಿಂದ ಭಾರತ ಸರ್ಕಾರವನ್ನು ದೂರವಿಡಲು ಯತ್ನಿಸುವುದು ಸರ್ವಥಾ ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ಎರಡೂ ದೇಶದ ನಾಯಕರು ಮಾತುಕತೆ ನಡೆಸಿ ಪರಿಹಾರ ಕಂಡು ಹಿಡಿಯುವುದು ಸೂಕ್ತ. ಭಾರತ-ಬಾಂಗ್ಲಾ ವ್ಯಾಪಾರ ಸಂಬಂಧ ಸಹಜಸ್ಥಿತಿಗೆ ಮರಳುವುದು ಕಷ್ಟ. ಪ್ರಮುಖವಾಗಿ ಬಾಂಗ್ಲಾದಲ್ಲಿ ಜವಳಿ ಕಂಪನಿಗಳು ಭಾರತೀಯರ ಕೈಯಲ್ಲಿದೆ. ಬಾಂಗ್ಲಾದ ಪ್ರಮುಖ ಉದ್ಯಮವೇ ಜವಳಿ. ಈಗ ಇದು ಮುಂದುವರಿಯುವುದು ಕಷ್ಟವಾಗಿದೆ. ಹೀಗಾಗಿ ಆರ್ಥಿಕವಾಗಿ ಇಡೀ ದೇಶ ತತ್ತರಿಸಿ ಹೋಗಿದೆ. ಹಿಂದೂ ಸಂಘಟನೆಗಳಲ್ಲಿ ಪ್ರಮುಖವಾದ ಇಸ್ಕಾನ್ ಸಂಸ್ಥೆಗೆ ಸೇರಿದ ಚಿನ್ಮಯ ಕೃಷ್ಣದಾಸ್ ಬ್ರಹ್ಮಚಾರಿ ಬಂಧನದಿಂದ ಭಾರತ ಹಸ್ತಕ್ಷೇಪ ಮಾಡಲಿ ಎಂದೇ ಅಲ್ಲಿಯ ಶಕ್ತಿಗಳು ಉದ್ದೇಶಪೂರ್ವಕವಾಗಿ ಸಂಘರ್ಷ ಏರ್ಪಡಿಸಿದೆ. ಹೀಗಿರುವಾಗ ಭಾರತ ಬಹಳ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ಅಗತ್ಯ. ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾ ನಡುವಿನ ಸಂಬಂಧ ಇಂದು ನಿನ್ನೆಯದಲ್ಲ. ಹಲವು ಕುಟುಂಬಗಳು ಎರಡೂ ಕಡೆ ವಾಸಿಸುತ್ತಿರುವುದು ಹೊಸತೇನಲ್ಲ. ಹೀಗಾಗಿ ಎರಡೂ ದೇಶಗಳ ನಡುವೆ ವ್ಯಾಪಾರ ವ್ಯವಹಾರ ನಡೆಯುತ್ತಿದ್ದು, ಈಗ ಅದಕ್ಕೆ ಧಕ್ಕೆ ಒದಗಿಬಂದಿದೆ. ಈ ವಿಷಯದಲ್ಲಿ ಭಾರತ ಎಚ್ಚರಿಕೆ ವಹಿಸುವುದು ಅಗತ್ಯ. ಸೇನೆ ಬಲ ಬಳಸಿದರೆ ಅದರಿಂದ ಪರಿಸ್ಥಿತಿ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಹೊರತು ಉಪಯೋಗವೇನೂ ಆಗುವುದಿಲ್ಲ.
ಬಾಂಗ್ಲಾ ರಚನೆಯಲ್ಲಿ ಭಾರತದ ಶ್ರಮವೂ ಇದೆ. ಶೇಖ್ ಮುಜಬುರ್ ರೆಹಮಾನ್ ಭಾರತದ ಆತ್ಮೀಯ ಮಿತ್ರರಾಗಿದ್ದರು. ಶೇಖ್ ಹಸೀನಾ ಕೂಡ ಅದೇ ಮಧುರ ಬಾಂಧವ್ಯ ಮುಂದುವರಿಸಿದ್ದರು. ಆದರೆ ಆಗಸ್ಟ್ ೫ರಂದು ಅಲ್ಲಿಯ ವಿದ್ಯಾರ್ಥಿಗಳ ದಂಗೆ ಎದುರಿಸಲು ಸಾಧ್ಯವಾಗದೆ ಶೇಖ್ ಹಸೀನಾ ದೇಶ ತ್ಯಜಿಸಿದರು. ಅವರಿಗೆ ಭಾರತ ಆಶ್ರಯ ನೀಡಿತು. ಈಗ ಅಲ್ಲಿಯ ಹಿಂದೂಗಳ ರಕ್ಷಣೆಗೆ ಹೋಗದೆ ಕೈಕಟ್ಟಿ ಕುಳಿತುಕೊಳ್ಳಲು ಬರುವುದಿಲ್ಲ. ರಾಜತಾಂತ್ರಿಕ ಸಂಬಂಧಗಳ ಮೂಲಕ ಇದಕ್ಕೆ ಪರಿಹಾರ ಕಂಡು ಹಿಡಿಯಲೇಬೇಕು. ಅಲ್ಲಿ ಹೊಸ ಸರ್ಕಾರ ಬಂದರೂ ರಾಜಕೀಯ ಅಸ್ಥಿರತೆ ಹೋಗಿಲ್ಲ. ದೇವಾಲಯ ಮತ್ತು ಹಿಂದೂಗಳ ಹಲ್ಲೆ ನಡೆಸುವುದು ಮುಂದುವರಿದಿದೆ. ಮಧ್ಯಂತರ ಸರ್ಕಾರಕ್ಕೆ ಗಲಭೆಯನ್ನು ಹತ್ತಿಕ್ಕಲು ಸಾಧ್ಯವಾಗುತ್ತಿಲ್ಲ. ಬಾಂಗ್ಲಾದಲ್ಲಿರುವ ಹಿಂದೂಗಳನ್ನು ರಕ್ಷಿಸುವುದು ಭಾರತದ ಕರ್ತವ್ಯ. ಅದನ್ನು ಯಾವ ರೀತಿ ಕೈಗೊಳ್ಳಬೇಕು ಎಂಬುದೇ ಈಗಿರುವ ಪ್ರಶ್ನೆ. ಅಲ್ಲಿ ಈಗ ಕಟ್ಟಾ ಮತೀಯವಾದಿಗಳು ತಮ್ಮದೇ ಮಾತು ನಡೆಯಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಅದರೊಂದಿಗೆ ಸೇನೆ ತನ್ನ ಮಾತು ನಡೆಯಬೇಕೆಂದು ಬಯಸುತ್ತಿದೆ. ಹೀಗಾಗಿ ಅಲ್ಲಿಯ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ. ಇಂಥ ಸಂದರ್ಭದಲ್ಲಿ ಬೇರೆ ದೇಶಗಳು ತಮ್ಮ ಪ್ರಭಾವ ಬೀರಲು ಯತ್ನಿಸುವುದು ಸಹಜ. ಚೀನಾ ಕೂಡ ಇದರಲ್ಲಿ ಮೂಗು ತೂರಿಸಲು ಯತ್ನಿಸಬಹುದು. ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್, ಮಾಲ್ಡೀವ್ಸ್, ಪಾಕಿಸ್ತಾನದಲ್ಲಿ ಚೀನಾ ಹಸ್ತಕ್ಷೇಪ ಮಾಡಿತ್ತು. ಈಗ ಬಾಂಗ್ಲಾ ವಿಷಯದಲ್ಲೂ ಅದು ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸಬಹುದು. ಇದೆಲ್ಲವನ್ನೂ ನೋಡಿಕೊಂಡು ಭಾರತ ಹೆಜ್ಜೆಯನ್ನಿಡಬೇಕಿದೆ. ಅಲ್ಲಿ ಸ್ಥಿರ ಸರ್ಕಾರ ರಚನೆಗೊಳ್ಳುವುದು ಮುಖ್ಯ. ಅಲ್ಲಿಯ ವಿದ್ಯಾರ್ಥಿಗಳಿಗೆ ಶೇಖ್ ಹಸೀನಾ ಸರ್ಕಾರ ಉರುಳಿಸುವುದು ಗೊತ್ತಿತ್ತೇ ಹೊರತು ಹೊಸ ಸರ್ಕಾರ ರಚಿಸುವ ಕಲ್ಪನೆ ಇರಲಿಲ್ಲ. ಹೀಗಾಗಿ ಹಸೀನಾ ಸರ್ಕಾರ ಉರುಳಿದ ಮೇಲೆ ವಿದ್ಯಾರ್ಥಿ ನಾಯಕರಿಗೆ ಏನು ಮಾಡಬೇಕು ಎಂಬುದು ತಿಳಿಯದು. ಅದರಿಂದ ಮತೀಯ ಶಕ್ತಿಗಳು ತಮ್ಮ ಕೈಗೆ ಇಡೀ ದೇಶವನ್ನು ತೆಗೆದುಕೊಳ್ಳಲು ಹಿಂಸಾಕೃತ್ಯದಲ್ಲಿ ತೊಡಗಿವೆ.
ಬಾಂಗ್ಲಾ ಆರ್ಥಿಕವಾಗಿ ಜರ್ಜರಿತಗೊಂಡಿದೆ. ಇದು ಮತ್ತೆ ಚೇತರಿಸಿಕೊಳ್ಳಲು ಬಹಳ ಕಾಲಬೇಕು. ಭಾರತದ ನೆರವಿಲ್ಲದೆ ಬಾಂಗ್ಲಾ ಇರಲು ಸಾಧ್ಯವಿಲ್ಲ. ಈಗ ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಆಫ್ಘನಿಸ್ತಾನ, ಮಾಲ್ಡೀವ್ಸ್ ದೇಶಗಳು ಭಾರತದ ಸ್ನೇಹ ಬಯಸುವುದು ಅನಿವಾರ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಗಮನಾರ್ಹವಾಗಿರುವುದರಿಂದ ಬಾಂಗ್ಲಾ ಕೂಡ ಮುಂಬರುವ ದಿನಗಳಲ್ಲಿ ಭಾರತಕ್ಕೆ ಸಹಾಯಹಸ್ತ ಚಾಚುವುದು ಅನಿವಾರ್ಯವಾಗಲಿದೆ.