For the best experience, open
https://m.samyuktakarnataka.in
on your mobile browser.

ಸಬೂಬು ಬೇಡ ಮೊದಲು ಜಿ.ಪಂ ಚುನಾವಣೆ ನಡೆಸಿ

02:30 AM Nov 29, 2024 IST | Samyukta Karnataka
ಸಬೂಬು ಬೇಡ ಮೊದಲು ಜಿ ಪಂ ಚುನಾವಣೆ ನಡೆಸಿ

ನಿನ್ನೆಯ ದಿನವೇ ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತೇವೆ ಎಂದು ದೇಶಾದ್ಯಂತ ಎಲ್ಲ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಘೋಷಣೆ ಮಾಡಿದರು. ಅದೇ ಸಂವಿಧಾನದ ವಿಧಿ ೭೩ ಮತ್ತು ೭೪ ರಂತೆ ಪ್ರತಿ ೫ ವರ್ಷಕ್ಕೊಮ್ಮೆ ಜಿಲ್ಲಾ ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಡ್ಡಾಯವಾಗಿ ನಡೆಯಬೇಕು. ರಾಜೀವಗಾಂಧಿಯವರೇ ಈ ತಿದ್ದುಪಡಿ ತಂದವರು. ಆದರೆ ಕಳೆದ ೧೦ ವರ್ಷಗಳಿಂದ ಚುನಾವಣೆ ನಡೆದೇ ಇಲ್ಲ. ಕಾನೂನು ರೀತ್ಯ ಅಡಳಿತಾಧಿಕಾರಿಯನ್ನು ಅನಿರ್ದಿಷ್ಟ ಕಾಲ ನೇಮಿಸಲು ಬರುವುದಿಲ್ಲ. ಚುನಾವಣೆ ಮುಂದೂಡುತ್ತ ಬರುತ್ತಿರುವುದಕ್ಕೆ ಕೇವಲ ಪಿಳ್ಳೆನೆವ. ಮೀಸಲಾತಿ ಪಟ್ಟಿ ಪ್ರಕಟಿಸುವುದು. ಹೈಕೋರ್ಟ್ ಕೂಡ ಈ ವಿಷಯದಲ್ಲಿ ಉದಾರ ನಿಲುವು ತಳೆಯಬಾರದು. ಚುನಾವಣೆ ಜನರ ಹಕ್ಕು. ಅದನ್ನು ಕಸಿದುಕೊಳ್ಳಲು ನ್ಯಾಯಾಲಯಕ್ಕೂ ಇಲ್ಲ. ಹೀಗಿರುವಾಗ ದಶಕಗಳ ಕಾಲ ಚುನಾವಣೆ ನಡೆಯುವುದಿಲ್ಲ ಎಂದರೆ ಇದಕ್ಕೆ ಹೊಣೆಯಾರು?
ಕರ್ನಾಟಕದಲ್ಲಿ ಒಟ್ಟು ೫೬೫೦ ಗ್ರಾಮ ಪಂಚಾಯ್ತಿ, ೧೭೬ ತಾಲೂಕು ಪಂಚಾಯ್ತಿ, ೩೦ ಜಿಲ್ಲಾ ಪಂಚಾಯ್ತಿಗಳಿವೆ. ಗ್ರಾಮ ಸಭೆ ದೇಶದ ಬೇರು ಮಟ್ಟದ ಪ್ರಜಾಪ್ರಭುತ್ವಕ್ಕೆ ಸಾಕ್ಷಿ. ಹಿಂದೆ ಪಂಚರು ಗ್ರಾಮದ ಆಡಳಿತ ನೋಡಿಕೊಳ್ಳುತ್ತಿದ್ದರು. ಅಲ್ಲಿಂದ ಬಂದಿದ್ದೇ ಪಂಚಾಯ್ತಿ. ೧೯೯೩ ರಲ್ಲಿ ಜಿಲ್ಲಾ ಪಂಚಾಯ್ತಿ ಕಾಯ್ದೆಗೆ ಅಬ್ದುಲ್ ನಸೀರ್ ಸಾಬ್ ಹೋರಾಟ ನಡೆಸಿ ಜಾರಿಗೆ ತಂದರು. ಮೈಸೂರು ಜಿಲ್ಲಾ ಪಂಚಾಯತ್ ಇಡೀ ದೇಶಕ್ಕೆ ಮಾದರಿಯಾಗಿತ್ತು. ಹಳ್ಳಿಯಿಂದ ಯೋಜನೆಗಳು ಸಿದ್ಧಗೊಳ್ಳಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಯೋಜನಾ ಮಂಡಳಿ, ರಾಜ್ಯ ಮಟ್ಟದಲ್ಲಿ ಯೋಜನಾ ಆಯೋಗ, ರಾಷ್ಟ್ರಮಟ್ಟದಲ್ಲಿ ನೀತಿ ಆಯೋಗ. ಹಳ್ಳಿಯಿಂದ ದಿಲ್ಲಿಗೆ ಎಂಬ ಕಲ್ಪನೆಯೇ ಮಾಯವಾಗಿ ಈಗ ಎಂದಿನಂತೆ ದಿಲ್ಲಿಯಿಂದ ಹಳ್ಳಿಗೆ ಯೋಜನೆಗಳು ಹಾಗೂ ಅನುದಾನ ಬರುವಂತಾಗಿದೆ. ಗ್ರಾಮೀಣ ಜನರಿಗೆ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದನ್ನು ಹೊರತುಪಡಿಸಿದರೆ ಬೇರೆ ಏನೂ ಇಲ್ಲ. ಶಾಸಕರೇ ಅವರ ಕೊನೆಯ ಜನಪ್ರತಿನಿಧಿ. ಜಿಲ್ಲಾ ಪಂಚಾಯತ್ ಕಾಯ್ದೆಯಂತೆ ಗ್ರಾಮ ಪಂಚಾಯ್ತಿ ಸದಸ್ಯರು, ತಾಲೂಕು ಪಂಚಾಯ್ತಿ ಸದಸ್ಯರು, ಜಿಲ್ಲಾ ಪಂಚಾಯ್ತಿ ಸದಸ್ಯರು ಹಿಂದೆ ಕೆಲಸ ಮಾಡುತ್ತಿದ್ದರು. ಗ್ರಾಮೀಣ ಜನರ ಬಹುತೇಕ ಸಮಸ್ಯೆಗಳು ಇಲ್ಲೇ ಬಗೆಹರಿದುಹೋಗುತ್ತಿತ್ತು. ಇದರಿಂದ ಶಾಸಕರಿಗೆ ಜನ ಬರುವುದು ಕಡಿಮೆಯಾಯಿತು. ಪ್ರಭಾವಿ ಜಿಲ್ಲಾ ಪಂಚಾಯತ್ ಸದಸ್ಯರೇ ಶಾಸಕರ ಕೆಲಸ ಮಾಡಲು ಆರಂಭಿಸಿದರು. ಇದನ್ನು ಕಂಡ ಶಾಸಕರು ಮತ್ತು ಸಚಿವರು ಜಿಲ್ಲಾ ಪಂಚಾಯತ್ ವ್ಯವಸ್ಥೆಯ ಕೈಕಾಲು ಮುರಿಯಲು ತೀರ್ಮಾನಿಸಿದರು. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳು ಬೆಂಬಲ ನೀಡಿದವು. ಮೊದಲು ಜಿಲ್ಲಾ ಪಂಚಾಯ್ತಿ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿಗಳಾಗಿದ್ದರು. ಜಿಲ್ಲಾಧಿಕಾರಿ ಅವರ ಕೈಕೆಳಗೆ ಬರುವಂತಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಸಚಿವ ಮಟ್ಟದ ಅಧಿಕಾರ ನೀಡಲಾಗಿತ್ತು. ಎಲ್ಲ ಇಲಾಖೆ ಮುಖ್ಯಸ್ಥರು ಇವರ ಕೈಕೆಳಗೆ ಕೆಲಸ ಮಾಡಬೇಕಾಗಿ ಬಂದಿತು. ಇದು ಅಧಿಕಾರ ವರ್ಗಕ್ಕೆ ಸರಿಕಾಣಲಿಲ್ಲ. ಅವರು ಶಾಸಕರು ಮತ್ತು ಸಚಿವರೊಂದಿಗೆ ಸೇರಿ ಕಾಲಕ್ರಮೇಣ ಜಿಲ್ಲಾ ಪಂಚಾಯ್ತಿ ವ್ಯವಸ್ಥೆಯನ್ನು ಬಲಹೀನಗೊಳಿಸಿದರು. ಈಗ ಚುನಾವಣೆಯನ್ನೂ ಮುಂದೂಡುವ ಕೆಲಸ ನಡೆಯುತ್ತಿದೆ.
ಹಿಂದೆ ಪ್ರತಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಕ್ಷೇತ್ರ ನಿಗದಿ ಮತ್ತು ಮೀಸಲಾತಿ ಪ್ರಕಟಿಸುವುದು ರಾಜ್ಯ ಚುನಾವಣೆ ಆಯೋಗದ ಅಧಿಕಾರ ವ್ಯಾಪ್ತಿಗೆ ಬಂದಿತ್ತು. ಅದರಿಂದ ನಿಗದಿತ ಕಾಲಕ್ಕೆ ಚುನಾವಣೆ ನಡೆಯುತ್ತಿತ್ತು. ಆಯೋಗದ ಈ ಅಧಿಕಾರವನ್ನು ಸರ್ಕಾರ ಕಸಿದುಕೊಂಡಿತು. ಇದರಲ್ಲಿ ಎಲ್ಲ ರಾಜಕೀಯ ಪಕ್ಷಗಳ ಹಸ್ತಕ್ಷೇಪವಿದೆ. ಮೀಸಲಾತಿ ನಿಗದಿಪಡಿಸುವುದನ್ನು ಸಕಾಲಕ್ಕೆ ನಿಗದಿಪಡಿಸದೆ ಕಳೆದ ೧೦ ವರ್ಷಗಳಿಂದ ಸಾರ್ವಜನಿಕ ಚುನಾವಣೆ ನಡೆಯದಂತೆ ಮಾಡಲಾಗಿದೆ. ಈಗ ಉಪಚುನಾವಣೆಗಳು ಮಾತ್ರ ಅಲ್ಲಲ್ಲಿ ನಡೆಯುತ್ತಿವೆ. ಜಿಲ್ಲಾ ಪಂಚಾಯ್ತಿ ಇಲ್ಲದ ಕಾಲದ ಶಾಸಕರೇ ಸಾರ್ವಭೌಮರು. ಅವರು ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡು ಅಧಿಕಾರ ತಮ್ಮಲ್ಲೇ ಕೇಂದ್ರೀಕೃತಗೊಳಿಸಿಕೊಂಡಿದ್ದಾರೆ. ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂದು ಸಂವಿಧಾನ ಹೇಳುತ್ತದೆ. ಅದನ್ನು ಜನಪ್ರತಿನಿಧಿಗಳು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಅಷ್ಟೆ. ಪ್ರಶ್ನಿಸುವ ಧ್ವನಿಯೂ ಇಲ್ಲ. ಈಗ ರಾಜ್ಯ ಚುನಾವಣೆ ಆಯೋಗ ಏಕಾಂಗಿ. ಅದರ ಆಯುಕ್ತರು ನೇರವಾಗಿ ರಾಜ್ಯಪಾಲರಿಗೆ ದೂರು ಸಲ್ಲಿಸಬಹುದು. ರಾಜ್ಯಪಾಲರಿಂದ ನೇರವಾಗಿ ನೇಮಕಗೊಂಡವರು. ನೈಸರ್ಗಿಕ ವಿಕೋಪ, ಕಾನೂನು ಪಾಲನೆ ಸಮಸ್ಯೆ ಹೊರತುಪಡಿಸಿದರೆ ಉಳಿದ ಯಾವ ಕಾರಣಕ್ಕೂ ಚುನಾವಣೆ ಮುಂದೂಡಲು ಬರುವುದಿಲ್ಲ. ಇದು ಹೈಕೋರ್ಟ್ಗೂ ಗೊತ್ತಿದೆ. ಹೀಗಿದ್ದರೂ ಚುನಾವಣೆ ಮುಂದೂಡುತ್ತಿರುವುದು ಜನತಂತ್ರ ವಿರೋಧಿ. ಎಲ್ಲ ರಾಜಕೀಯ ಪಕ್ಷಗಳು ಇದನ್ನು ವಿರೋಧಿಸಿಲ್ಲ. ಗ್ರಾಮೀಣ ಜನರಿಗೆ ಸ್ವಯಂ ಆಡಳಿತ ನಡೆಸಲು ಅವಕಾಶ ನೀಡುವುದನ್ನೇ ಗಾಂಧಿ ಗ್ರಾಮ ಸ್ವರಾಜ್ಯ ಎಂದು ಕರೆದಿದ್ದರು. ಇದಕ್ಕೆ ಈಗಿನ ಜನಪ್ರತಿನಿಧಿಗಳ ಬೆಂಬಲವಿಲ್ಲ. ಅಧಿಕಾರ ವಿಕೇಂದ್ರೀಕರಣ ನಮ್ಮವರೆಗೆ ಮಾತ್ರ ಇರಬೇಕೆಂಬುದು ಶಾಸಕರ ಅಂತರಂಗದ ಮಾತು.