ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಾಂಧವ್ಯ ಬೆಸೆಯುವ ಹಬ್ಬ ಗಣೇಶ ಚತುರ್ಥಿ

03:05 AM Sep 07, 2024 IST | Samyukta Karnataka

ಗಣೇಶ ಚತುರ್ಥಿಯಂದು ಆಚರಿಸಲಾಗುವ ವ್ರತವನ್ನು ಸಿದ್ಧಿವಿನಾಯಕ ವ್ರತ' ಎನ್ನುತ್ತಾರೆ. ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತಿ ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತವನ್ನು ಆಚರಿಸಬೇಕು. ಶಾಸ್ತ್ರೋಕ್ತ ವಿಧಿ ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದಲೇ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯ ವಿಸರ್ಜನೆಯನ್ನು ಗೌರಿಯ ಜೊತೆಗೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆಯನ್ನು ಮಾಡಬೇಕು.

ಭಗ್ನವಾದರೆ ಏನು ಮಾಡಬೇಕು?
ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣ ಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು. ಈ ಘಟನೆಯು ಗಣೇಶ ಚತುರ್ಥಿಯ ದಿನವೇ ನಡೆದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂರ್ತಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂರ್ತಿಯು ಸಂಪೂರ್ಣ ಭಗ್ನವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ `ಅದ್ಭುತ ದರ್ಶನ ಶಾಂತಿ'ಯನ್ನು ಮಾಡಿಸಬೇಕು.
ಗಣೇಶ ಚತುರ್ಥಿಯಂದು ದೀಪ ಆರಿ ಹೋಗುವುದು, ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂರ್ತಿಭಗ್ನ ಇತ್ಯಾದಿ ಘಟನೆಗಳಾದರೆ ಆ ಕುಟುಂಬದಲ್ಲಿ ದ್ರವ್ಯ ಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆಯಿರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.

ಗಣೇಶ ಚತುರ್ಥಿಯ ಮಹತ್ವ
ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳ ತೀವ್ರತೆಯೂ ಹೆಚ್ಚಿಗೆ ಇರುತ್ತದೆ. ಈ ಕಾಲಾವಧಿಯಲ್ಲಿ ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.

ಹಿಂದಿನ ಉದ್ದೇಶವೇನು?
ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ-ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ನೂತನ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫:೫:೫ ಹೀಗಿದ್ದರೆ ಸರ್ವಸಾಧಾರಣ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧:೩:೫ ಹೀಗೆ ಇರುತ್ತದೆ; ಆದ್ದರಿಂದ ಸರ್ವಸಾಧಾರಣ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದವರೆಗೆ ಗ್ರಹಣ ಮಾಡಲಾರನು.

ಗಣೇಶ ಚತುರ್ಥಿಯ ವೈಶಿಷ್ಟ್ಯಗಳು
ಗಣೇಶ ಚತುರ್ಥಿಯ ದಿನ ಚಂದ್ರನ ದರ್ಶನವನ್ನು ಪಡೆದುಕೊಳ್ಳದಿರುವುದು ಮನಸ್ಸಿನ ಚಂಚಲತೆಯು ಸುಮಾರು ಒಂದು ವರ್ಷದವರೆಗೆ ಉಳಿಯುತ್ತದೆ. ಮನಸ್ಸಿನ ಚಂಚಲತೆಯ ಪ್ರಚಂಡ ಪ್ರಭಾವದಿಂದಾಗಿ ಯಾವುದಾದರೊಂದು ಘಟನೆಯು ಘಟಿಸುವ ಮೊದಲೇ ಅದು ಘಟಿಸಿ ಹೋಗಿದೆ ಎಂಬ ತಪ್ಪು ತಿಳಿವಳಿಕೆ ಅಥವಾ ಗಾಳಿ ಸುದ್ದಿ ಹರಡುವ ಸಾಧ್ಯತೆ ಇರುತ್ತದೆ. ಇದನ್ನೇ ಯಾವುದಾದರೊಂದು ಅಡಚಣೆಯನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡುವುದು ಅಶುಭವೆಂದು ತಿಳಿದುಕೊಳ್ಳುತ್ತಾರೆ.

ಜ್ಯೋತಿಷ್ಯ ಮತ್ತು ಚಂದ್ರದರ್ಶನ
ಗಣೇಶ ಚತುರ್ಥಿಯ ದಿನದಂದು ಯಾವ ವ್ಯಕ್ತಿಯ ರಾಶಿಯಲ್ಲಿ ಯಾವುದೇ ಸ್ಥಾನದಲ್ಲಿ ಚಂದ್ರನಿದ್ದರೆ ಅವನು ಚಂದ್ರದರ್ಶನವನ್ನು ಮಾಡಲೇಬಾರದು. ಇಂತಹ ವ್ಯಕ್ತಿಯು ನೀರಿನಲ್ಲಿ ಕಾಣಿಸುವ ಚಂದ್ರನ ಪ್ರತಿಬಿಂಬವನ್ನು ಸಹ ನೋಡಬಾರದು. ಏಕೆಂದರೆ ನೀರಿನಿಂದ ನೆನೆದಿರುವ ಮಣ್ಣಿನಲ್ಲಿಯೂ ಪ್ರಜನನ ಶಕ್ತಿಯು ಹೆಚ್ಚಾಗಿರುವುದರಿಂದ ಅಲ್ಲಿಯೂ ಪ್ರಚಂಡ ಪ್ರಮಾಣದಲ್ಲಿ ರಜೋಗುಣವು ನಿರ್ಮಾಣವಾಗಿರುತ್ತದೆ.

Next Article