ಬಾಗಿಲು ತಟ್ಟುವ ಮೊದಲು
ಪ್ರಸಿದ್ಧ ಲೇಖಕರೊಬ್ಬರ ಮನೆಯ ಗೇಟ್ ಬಳಿ ಕರೆ ಗಂಟೆಯ ಕೆಳಗೆ ಒಂದು ಫಲಕದಲ್ಲಿ `ಭೇಟಿಯಾಗಲು ಪೂರ್ವ ಅನುಮತಿ ಪಡೆದಿದ್ದರೆ ಮಾತ್ರ ಬೆಲ್ ಬಾರಿಸಿರಿ' ಎಂದು ಬರೆಯಲಾಗಿತ್ತು. ಪರಿಚಿತರೇ ಇರಲಿ ಭೇಟಿ ಆಗಬೇಕೆನ್ನುವವರು ಅವರ ಪೂರ್ವಾನುಮತಿ ಪಡೆಯಬೇಕೆಂಬ ಸರಳ ಶಿಷ್ಟಾಚಾರವನ್ನು ಆ ಫಲಕ ಹೇಳುತ್ತಿತ್ತು.
ಕುರಾನಿನ ೨೪ನೇ ಅಧ್ಯಾಯದ ಹೆಸರು ನೂರ್ ಅಂದರೆ ಬೆಳಕು. ಈ ಅಧ್ಯಾಯದ ೨೭ ಹಾಗೂ ೨೮ರ ಶ್ಲೋಕಗಳಲ್ಲಿ ಸಾಮಾಜಿಕ ಶಿಷ್ಟಾಚಾರ ಕುರಿತು ಪ್ರಸ್ತಾಪಿಸಲಾಗಿರುವ ಆಜ್ಞೆಗಳನ್ನು ಬಹಳ ಜನರು ಗಮನಿಸಿಲ್ಲ. ಏಕೆಂದರೆ ಈ ಶಿಷ್ಟಾಚಾರದ ಪಾಲನೆ ತೀರ ವಿರಳ
ಸಮಾಜದಲ್ಲಿಯ ಸಾಮರಸ್ಯ ಜೀವನಕ್ಕೆ ಈ ಶಿಷ್ಟಾಚಾರಗಳ ಪಾಲನೆ ಅವಶ್ಯ. ಅದರಲ್ಲೂ ಇಂದಿನ ಅಸಂತುಷ್ಟ ಸಮಾಜದ ಪರಿಸ್ಥಿತಿಯಲ್ಲಿ ಇದು ಬಹಳ ಅವಶ್ಯಕ. ನೋಡಿ ಕುರಾನ್ ಏನು ಹೇಳುತ್ತದೆ. ನೀವು ಮತ್ತೊಬ್ಬರ ಮನೆಗೆ ಅವರ ಅನುಮತಿ ಇಲ್ಲದೆ ಹೋಗಬಾರದು. ಅವರು ಎದುರಿಗೆ ಬಂದರೆ ಶುಭಾಶಯ ಹೇಳದೆ ಹೋಗಬಾರದು. ಒಂದು ವೇಳೆ ಅಲ್ಲಿ ಯಾರೂ ಇರದಿದ್ದರೆ ಆಗಲೂ ಅನುಮತಿ ಇಲ್ಲದೆ ಒಳಗೆ ಹೋಗಬಾರದು. ಮರಳಿ ಹೋಗಿರಿ ಅಂದರೆ ಮರಳಿ ಹೋಗಬೇಕು. ಅದು ನಿಮ್ಮ ಪಾಲಿಗೆ ಉತ್ತಮ ನಡತೆ.
ಇಂತಹ ಸರಳ ಶಿಷ್ಟಾಚಾರದ ನಡತೆ ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಹುಟ್ಟಿಸುತ್ತದೆ. ಬೇರೆ ಬೇರೆ ಧರ್ಮ ಭಾಷೆಗಳ ಜನರಲ್ಲಿ ಪರಸ್ಪರ ಉತ್ತಮ ಬಾಂಧವ್ಯ ಬೆಸೆಯಲು ಕುರಾನ್ ಬಯಸುತ್ತದೆ. ಈ ಆಜ್ಞೆಗಳಿಂದ ಶಿಷ್ಟಾಚಾರದ ಅನೇಕ ಮುಖಗಳನ್ನು ಕಾಣಬಹುದು. ನೀವು ಯಾರನ್ನು ಭೇಟಿಯಾಗಲು ಬಯಸುತ್ತಿರೋ ಮೊದಲು ಅವರೊಂದಿಗೆ ನಿಮ್ಮ ಭೇಟಿ ಕುರಿತು ಹೇಳಿ ಅವರ ಅನುಮೋದನೆ ಪಡೆಯಬೇಕು. ಆ ವ್ಯಕ್ತಿ ನಿಮ್ಮನ್ನು ಆಗ ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳುತ್ತಾನೆ.
ಯಾವ ಸೂಚನೆ ಇಲ್ಲದೆ ಬೇರೆಯವರ ಮನೆಗೆ ಹೋದಾಗ ಅವರ ಮನೆಯ ಕದವನ್ನು ಮೆಲ್ಲನೆ ತಟ್ಟಿ ಒಳಗಿನವರ ಅನುಮತಿಯನ್ನು ಪಡೆಯಬೇಕು. ಅವರ ಅನುಮತಿ ಇಲ್ಲದೆ ಒಳಗೆ ಹೋಗಬಾರದು. ಒಂದು ವೇಳೆ ಮನೆಯಿಂದ ಯಾವ ಉತ್ತರವೂ ಬಾರದಿದ್ದಾಗ ಮರಳಿ ಹೋಗಬೇಕು. ಮತ್ತೆ ಅವರ ಅನುಮತಿ ಪಡೆದು ಆಮೇಲೆ ಹೋಗಬೇಕು. ಅಕಸ್ಮಾತ್ ಯಾವ ಸೂಚನೆಯೂ ಸಿಗದಿದ್ದರೆ ಅಥವಾ ಒಳಗಿನಿಂದ ಯಾರಾದರೂ ಈಗ ಸಮಯವಿಲ್ಲ. ಬೇರೆ ದಿನ ಬನ್ನಿ ಅಂದರೆ ತಿರುಗಿಬನ್ನಿ. ಅಂದರೆ ತಿರುಗಿ ಹೋಗಬೇಕು. ಈ ಆದೇಶಗಳು ಸಾಮಾನ್ಯವಾಗಿದ್ದರೂ ಸಮಾಜದಲ್ಲಿರುವವರ ಬಾಂಧವ್ಯ ಹೆಚ್ಚಿಸುವವು. ಈ ನೀತಿ ನಿಯಮಗಳು ಕೇವಲ ಅಪರಿಚಿತರಿಗೆ ಅಷ್ಟೇ ಅಲ್ಲ. ಸಂಬAಧಿಕರಿಗೂ ಅನ್ವಯಿಸುತ್ತದೆ.
ನಾವಿರುವ ನಗರ ಬಡಾವಣೆಗಳಲ್ಲಿ ಸೋದರ ವಾತಾವರಣ ಜೀವನಕ್ಕೆ ಪ್ರವಾದಿವರ್ಯ ಮೊಹಮ್ಮದ್ ಅವರು ಅನೇಕ ಶಿಷ್ಟಾಚಾರಗಳನ್ನು ಉಪದೇಶಿಸಿದ್ದಾರೆ. ಕುಟುಂಬ ಸಮಾಜ ಧಾರ್ಮಿಕ ಮುಂತಾದ ಸ್ಥಳಗಳಲ್ಲಿ ಹಾಗೂ ವಿವಿಧ ಸಮಾರಂಭಗಳಲ್ಲಿ ಪಾಲಿಸಬೇಕಾದ
ಶಿಷ್ಟಾಚಾರವನ್ನು ಪದೆ ಪದೇ ಉಪದೇಶಿಸಿದ್ದಾರೆ. ನೀವು ಎಲ್ಲಿಯೂ ಹೋಗಿರಿ. ನೀವು ಧರಿಸುವ ಉಡುಪು ಶುದ್ಧವಾಗಿರಲಿ. ಭೇಟಿಯಾದವರಿಗೆ ಶುಭಾಶಯ ಹೇಳಿರಿ. ಭೇಟಿಯಾದವರು ತೋರಿಸಿದ ಸ್ಥಳದಲ್ಲಿ ಕುಳಿತುಕೊಳ್ಳಿ. ಗುಂಪಿನಲ್ಲಿ ಇದ್ದಾಗ ಅವರಿವರ ಮಾತುಗಳನ್ನು ಗುಟ್ಟಾಗಿ ಕೇಳಬೇಡಿರಿ. ಇಬ್ಬರು ಮಾತನಾಡುವಾಗ ಅವರ ಅನುಮತಿ ಇಲ್ಲದೆ ಮಧ್ಯೆ ಕುಳಿತುಕೊಳ್ಳಬೇಡಿರಿ. ಮಲಗಿರುವವರನ್ನು ಏರು ಧ್ವನಿಯಲ್ಲಿ ಎಚ್ಚರಿಸಬೇಡಿರಿ.