For the best experience, open
https://m.samyuktakarnataka.in
on your mobile browser.

ಬಾಡಿದ ಎಲೆಗಳನ್ನು ಕೀಳಬೇಡಿ

04:17 AM Oct 11, 2024 IST | Samyukta Karnataka
ಬಾಡಿದ ಎಲೆಗಳನ್ನು ಕೀಳಬೇಡಿ

ಬಾಡಿದ ಎಲೆಗಳನ್ನು ಕೀಳದಿರಿ. ಏಕೆಂದರೆ ಒಂದು ದಿನ ಅವು ತಮ್ಮಿಂದ ತಾವೇ ಉದುರಿ ಬೀಳುತ್ತವೆ. ಈ ಎಲೆಗಳನ್ನು ಹಿಡಿದಿರುವ ಟೊಂಗೆಗಳಿಗೆ ಹಣೆ ಹಚ್ಚಿ ನಮಸ್ಕರಿಸಿ ಆಶೀರ್ವಾದ ಪಡೆಯಿರಿ. ಏಕೆಂದರೆ ಈ ಎಲೆಗಳು ನಂತರ ಬರೀ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ.. ಅನಾಮಧೇಯ ಸಂಸ್ಕಾರವಂತನೊಬ್ಬನ ಈ ಮಾತುಗಳು ವೃದ್ಧಾಪ್ಯದಲ್ಲಿ ಇರುವವರನ್ನು ಕುರಿತಂತಾಗಿದೆ. ವೃದ್ಧಾಪ್ಯವನ್ನು ಜಗತ್ತಿನ ಎಲ್ಲ ಧರ್ಮಗಳು ಗೌರವಿಸಿವೆ. ಧರ್ಮ ಗುರುಗಳು ಸಹ ವೃದ್ಧಾಪ್ಯವನ್ನು ಜೈವಿಕ ಪ್ರಸಾದವೆಂದು ಸ್ವೀಕರಿಸಿದ್ದಾರೆ.
ಇಸ್ಲಾಮಿ ಜೀವನದಲ್ಲಿ ವೃದ್ಧಾಪ್ಯಕ್ಕೆ ಅತ್ಯಧಿಕ ಗೌರವಾದರಗಳ ಸ್ಥಾನ ನೀಡಲಾಗಿದೆ. ಕುರಾನಿನ ಸುಮಾರು ೧೫ ಕ್ಕಿಂತಲೂ ಹೆಚ್ಚು ಅಧ್ಯಾಯಗಳಲ್ಲಿ (ಅಲ್ ನಹಾಲ್,ಮರಿಯಂ,ಇಮ್ರಾನ್,ಶಫಾತ್,ಯೂಸುಫ್ ಮೊದಲಾದವುಗಳು) ವೃದ್ಧಾಪ್ಯ ಹಾಗೂ ಅದನ್ನು ಸ್ವೀಕರಿಸುವ ಬಗೆ ಮುಂತಾದ ವಿವರಗಳನ್ನು ನೀಡಲಾಗಿದೆ. ಬನಿ ಇಸ್ರಾಯಿಲ್ ಈ ಅಧ್ಯಾಯದ ೨೩- ೨೪ ವಚನಗಳನ್ನು ನೋಡಿ.'…. ನಿಮ್ಮ ತಂದೆ ತಾಯಂದಿರು ವೃದ್ಧಾಪ್ಯವನ್ನು ತಲುಪಿದಾಗ ಅವರೆದುರು ವಿರುದ್ಧವಾಗಿ ಮಾತನಾಡಬೇಡಿ,
ಗದರಿಸಬೇಡಿರಿ. ಅವರ ಜೊತೆಗೆ ಗೌರವದಿಂದ ಮಾತನಾಡಿರಿ. ಅವರನ್ನು ಕುರಿತು ಪ್ರಾರ್ಥಿಸಿರಿ..'
ಇನ್ನು ಹಲವಾರು ಸಂದರ್ಭಗಳಲ್ಲಿ ಪ್ರವಾದಿವರ್ಯರು ಜೀವನದ ಅಂತಿಮ ಘಟ್ಟದಲ್ಲಿ ಇರುವ ವೃದ್ಧರಲ್ಲಿ ಆಶಾವಾದ ಸ್ಫೂರ್ತಿಯನ್ನು ತುಂಬಿರಿ. ಒಬ್ಬ ಯುವಕನು ಒಬ್ಬ ವೃದ್ಧನಿಗೆ ನೆರವು ನೀಡಿದರೆ ದೇವರು ಆ ಯುವಕನಿಗೆ ವೃದ್ಧಾಪ್ಯದಲ್ಲಿ ನೆರವು ನೀಡುವವರನ್ನು ನಿಯಮಿಸುತ್ತಾನೆ...'(ಹದೀಸ್-ಅನಸ್) ಪ್ರವಾದಿವರ್ಯರ ಇನ್ನೊಂದು ವಚನಯಾರು ಕಿರಿಯರಿಗೆ ದಯೆ ಹಿರಿಯರಿಗೆ ಗೌರವ ತೋರಿಸುವುದಿಲ್ಲವೋ ಅಂತವರು ನಮ್ಮವರಲ್ಲ.'
ಎಲ್ಲರ ಜೀವನವು ಬಾಲ್ಯದಲ್ಲಿ ದೌರ್ಬಲ್ಯ, ಅಸಹಾಯಕತೆಯಿಂದ ಪ್ರಾರಂಭವಾಗುತ್ತದೆ. ಹಾಗೆಯೇ ವೃದ್ಧಾಪ್ಯ ಕೂಡ ಕೊನೆಗೊಳ್ಳುತ್ತದೆ. ಅಂತೆಯೇ ವೃದ್ಧಾಪ್ಯದಲ್ಲಿದ್ದವರಿಗೆ ಸೇವೆ ಸಲ್ಲಿಸುವುದು ಒಂದು ಸುಂದರ ಕಲ್ಪನೆ. ಏಕೆಂದರೆ ನಾವು ಒಂದು ದಿನ ವೃದ್ಧರಾಗುತ್ತೇವೆ. ವೃದ್ಧಾಪ್ಯ ಜೀವನದ ಒಂದು ಘಟ್ಟ.. ಅದು ಕೊನೆಅಲ್ಲ. ಬಾಲ್ಯ ಮತ್ತು ಮುಪ್ಪು ಜೀವನದ ಎರಡು ಮುಖ್ಯ ಘಟ್ಟಗಳು. ಒಂದು ಹೊಸ ಜೀವನವನ್ನು ಭರವಸೆಯಿಂದ ಕಾಣುವ ಅಪ್ರಬುದ್ಧ ಘಟ್ಟ. ಇನ್ನೊಂದು ದೈಹಿಕವಾಗಿ, ಭೌತಿಕವಾಗಿ, ಮಾನಸಿಕವಾಗಿ, ಬೆಳವಣಿಗೆ ಹೊಂದಿ ಅನುಭವದಿಂದ ಪಕ್ವಗೊಂಡ ಪ್ರಭುದ್ಧತೆ.. ಇವೆರಡೂ ಘಟ್ಟಗಳಲ್ಲಿ ವ್ಯಕ್ತಿ ಇತರರ ಸಹಾಯವನ್ನು ಬಯಸುತ್ತಾನೆ. ಪ್ರಬುದ್ಧ ಘಟ್ಟದಲ್ಲಿ ವೃದ್ಧಾಪ್ಯ ಸ್ಥಿತಿಯಲ್ಲಿರುವ ವ್ಯಕ್ತಿಗೆ ಯೋಗ್ಯ ರೀತಿಯಿಂದ ಬಾಳಲು ಅವಕಾಶ ಕಲ್ಪಿಸಿ ಕೊಡಬೇಕು.
ಪ್ರವಾದಿವರ್ಯ ಮೊಹಮ್ಮದ್ (ಸ)ಅವರು ಅನೇಕ ಸಂದರ್ಭಗಳಲ್ಲಿ ಹಿರಿಯರನ್ನು ಕುರಿತು ಕಳವಳ ವ್ಯಕ್ತಪಡಿಸಿದ್ದನ್ನು ಅವರ ಅನೇಕ ವಚನಗಳಲ್ಲಿ ನೋಡಬಹುದು. ಏನಾದರೂ ಒಂದರ ಪ್ರಾರಂಭವನ್ನು ವೃದ್ಧರಿಂದ ಪ್ರಾರಂಭಿಸಿರಿ. ಮೊದಲು ಅವರಿಗೆ ಮಾತನಾಡಲು ಬಿಡಿ. ಅವರನ್ನು ಗೌರವದಿಂದ ಕಾಣಿರಿ. ಅವರ ಎದುರಿಗೆ ವಿನಯಶೀಲರಾಗಿರಿ. ತಾಳ್ಮೆಯಲ್ಲಿ ಅವರ ವಿಶ್ವಾಸವನ್ನು ಗಳಿಸಿರಿ…. ಎಂದು ಮುಂತಾಗಿ ವೃದ್ಧಾಪ್ಯದಲ್ಲಿ ಜೀವಿಸುತ್ತಿರುವವರನ್ನು ನೋಡಲು ಉಪದೇಶಿಸಿದ್ದಾರೆ. ಈ ಮೊದಲು ಹೇಳಿದ ಅನಾಮಧೇಯ ಸಂಸ್ಕಾರವಂತನ ಈ ಕೆಲವು ಮಾತುಗಳನ್ನು ಗಮನಿಸಬೇಕು..
ಒಂದಿಷ್ಟು ಸಮಯ ಹಿರಿಯರೊಂದಿಗೆ ಕುಳಿತುಕೊಳ್ಳಿ. ಒಂದು ದಿನ ಅವರು ನಮ್ಮನ್ನು ಬಿಟ್ಟು ಹೋಗುವವರೇ. ಅವರನ್ನು ಮಾತನಾಡಲು ಚರ್ಚಿಸಲು ಹೇಳಲು ಬಿಡಿ. ಒಂದು ದಿನ ಅವರು ಕಾಯಂ ಆಗಿ ಸ್ಥಬ್ಧರಾಗಿ ಬಿಡುವವರು. ಟೊಂಗೆಗಳಿಂದ ಬಾಡಿದ ಎಲೆಗಳನ್ನು ಕೀಳಬೇಡಿ, ಒಂದು ದಿನ ಅವು ತಮ್ಮಿಂದ ತಾವೇ ಉದುರಿ ಬೀಳುತ್ತವೆ.