ಬಾಯಿಯಲ್ಲಿರುವ ಬಿಳಿಮುತ್ತುಗಳ ರಕ್ಷಣೆ…
ನಿಮ್ಮ ಪೇಸ್ಟ್‌ನಲ್ಲಿ ಉಪ್ಪು ಇದೆಯೇ! ಹೀಗೆ ಜಾಹೀರಾತು ಬಂದದ್ದೇ ತಡ ನೋಡುಗರಿಗೆ ಪ್ರಶ್ನೆ ಹುಟ್ಟಿ ಉತ್ತರಗಳು ಪಟ್ಟನೆ ದೊರೆಯುತ್ತದೆ… ಉಪ್ಪು ಇರುವ ಪೇಸ್ಟ್ ಡೆಂಟಲ್ ಹೆಲ್ತ್ ಕಾಪಾಡುತ್ತದೆಯೆಂದು! ಮುಂದಿನ ಬಾರಿ ಮಾರುಕಟ್ಟೆಯಲ್ಲಿ ಹುಡುಕಿ ಹುಡುಕಿ ಒಂದು ಉತ್ತಮ ಬ್ರಾಂಡ್ ಪೇಸ್ಟು ಮನೆಗೆ ಹಾಜರ್….
ಉಪ್ಪು ಆಯ್ತು, ಜೆಲ್, ಲವಂಗ, ಪುದೀನ, ಬೇವು, ತುಳಸಿ ಇದ್ದಿಲು ಹೀಗೆ ಹರ್ಬಲ್ ಪೇಸ್ಟ್‌ಗಳು ಆದವು.. ಆಯುರ್ವೇದ ಪ್ರಾಡಕ್ಟ್ ಅಂತಲೂ, ಹರ್ಬಲ್ ಪ್ರಾಡಕ್ಟ್ ಅಂತಲೂ, ಬ್ರಾಂಡ್ ಅಂತಲೂ ಎಲ್ಲಾ ವಿಧದ ಪೇಸ್ಟುಗಳು ಮನೆಗೆ ಬಂದು ನಕ್ಕಾಯ್ತು… ಇಷ್ಟೆಲ್ಲಾ ವಿಚಾರಗಳ ಪ್ರಸ್ತಾಪವೇ ನಮ್ಮ ದೇಹದ ಮುತ್ತುರತ್ನ ಎಂದು ಕರೆಯುವ ಭಾಗವಾದ ನಮ್ಮ ಸುಂದರ ಹಲ್ಲುಗಳ ರಕ್ಷಣೆ ಬಗ್ಗೆ.
ಹೌದು.. ಯಾವುದೇ ಬ್ರಾಂಡ್ ಪೇಸ್ಟ್‌ನಲ್ಲಿ ಸಿಹಿಗೋಸ್ಕರ ಅಥವಾ ಪರಿಮಳಕ್ಕಾಗಿ ಮತ್ತು ಪೇಸ್ಟಿನಂತೆ ಹದ ಭರಿಸಲು ಕೆಲವು ರಸಾಯನಿಕಗಳನ್ನು ಬಳಸಲಾಗುತ್ತದೆ. ಇವುಗಳನ್ನು ಬರೀ ಹಲ್ಲಿನಷ್ಟೇ ಗಮನದಲ್ಲಿಟ್ಟು ತಯಾರಿಸಲಾಗುತ್ತದೆ. ಹೆಚ್ಚು ಮಕ್ಕಳಿಗೆ ಬಾಯಿಯನ್ನು ಬ್ರಷ್ ಮಾಡುವ ಜೊತೆಗೆ ಪೇಸ್ಟನ್ನು ತಿನ್ನುವ ಅಭ್ಯಾಸ ಇರುತ್ತದೆ. ಇದರಿಂದ ರಾಸಾಯನಿಕ ಪದಾರ್ಥವು ಹಾಗೂ ಸಕ್ಕರೆ ಅಂಶವು ದೇಹದೊಳಗೆ ಹೊಕ್ಕುವುದು, ಜೊತೆಗೆ ಸಕ್ಕರೆ ಕಾಯಿಲೆ ಇರುವವರಿಗೆ ಟೂತ್ ಪೇಸ್ಟ್‌ನಿಂದಲೂ ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುತ್ತದೆ ಎಂಬುದು ವೈದ್ಯರು ಹೇಳುತ್ತಾರೆ. ಆದ್ದರಿಂದ ಆದಷ್ಟು ಪೇಸ್ಟ್ ಅನ್ನು ಆಯ್ಕೆ ಮಾಡುವಾಗ ಉತ್ತಮ ಬ್ರಾಂಡ್ ಪೇಸ್ಟನ್ನು ಆಯ್ಕೆ ಮಾಡುವುದು ಒಳಿತು. ಗಂಟಲು, ಎದೆ, ಅನ್ನನಾಳ, ಮೂಗು, ಕಣ್ಣು ಸೇರಿದಂತೆ ಇಡೀ ತಲೆಭಾಗ ಹೀಗೆ ಪ್ರತಿಯೊಂದು ಕೂಡ ನಮ್ಮ ಬಾಯಿ ಮತ್ತು ಹಲ್ಲುಗಳ ಸಂಪರ್ಕಕ್ಕೆ ಹೊಂದಿಕೊಂಡಿರುತ್ತದೆ. ಹಾಗಾಗಿ ಹಲ್ಲನ್ನು ಮತ್ತು ಬಾಯಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹುಮುಖ್ಯ. ಬಾಯಿಯು ನಮ್ಮ ದೇಹದ ಇತರ ಭಾಗಗಳ ಪ್ರವೇಶದ್ವಾರವಿದ್ದಂತೆ. ಹಾಗಾಗಿ ನಮ್ಮ ದೇಹದ ಇತರ ರೋಗಗಳ ಚಿಹ್ನೆಗಳು ಬಾಯಿಯಲ್ಲಿ ಕಂಡುಬರುವುದು. ಅದೇ ಬಾಯಿಯಲ್ಲಿರುವ ಹಲ್ಲುಗಳಲ್ಲಿಯೂ ಹಲವಾರು ವಿಧದ ತೊಂದರೆಗಳು ಬರುತ್ತದೆ. ಸಾಮಾನ್ಯವಾಗಿ ಹಲ್ಲು ಬಾವು, ಒಸಡು ಸೋಂಕು, ಮುರಿದ ಹಲ್ಲು, ದಂತಕುಳಿ, ಕೊಳೆಯುವ ಹಲ್ಲುಗಳು ಹೀಗೆ ಹಲವು ರೀತಿಯ ತೊಂದರೆಗಳನ್ನು ಇಲ್ಲಿ ಕಾಣಬಹುದು ಇವು ಹಲ್ಲುಗಳ ವಸಡುಗಳು ಅಥವಾ ಬಾಯಿಯಲ್ಲಿರುವ ಸಂಬಂಧಿತ ರಚನೆಗಳ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಇವುಗಳನ್ನು ಚಿಕ್ಕದಾಗಿರುವಾಗಲೇ ನಿವಾರಣೆ ಮಾಡಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಕುಳಿಗಳು ಮತ್ತು ಜಿಂಗೈವಿಟಿಸ್, ಪಿರಿಯಾಂಟೈಟಿಸ್ ನಂತಹ ಕಾಯಿಲೆ ಮತ್ತು ಬಾಯಿ ಕ್ಯಾನ್ಸರ್‌ಗೆ ತಿರುಗುವ ಪರಿಸ್ಥಿತಿಗೂ ಕಾರಣವಾಗಬಹುದು. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದೆ ಹಾಗೇ ಬಿಟ್ಟರೆ ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ದಂತಕ್ಷಯ ಬಾಯಿಯಲ್ಲಿರುವ ಬ್ಯಾಕ್ಟೀರಿಯಗಳು ಸಕ್ಕರೆಯನ್ನು ತಿಂದು ಆಮ್ಲವನ್ನು ಉತ್ಪತ್ತಿ ಮಾಡುತ್ತವೆ, ಇದು ನಂತರದಲ್ಲಿ ಅಲ್ಲಿನ ದಂತ ಕವಚವನ್ನು ಸವೆಸುತ್ತದೆ. ವಸಡು ಕಾಯಿಲೆ ಬ್ಯಾಕ್ಟೀರಿಯದ ಆರಂಭಿಕ ಹಂತವಾಗಿದೆ ನಿರ್ಲಕ್ಷಿಸಿದರೆ ಇದು ಪಿರಿಯಾಂಟೈಟಿಸ್ ಆಗಿ ಬೆಳೆಯಬಹುದು. ಧೂಮಪಾನ, ಅಸಡ್ಡೆ ನೈರ್ಮಲ್ಯ, ಆಮ್ಲ ಮಿಶ್ರಿತ ಪಾನೀಯ ಹಾಗೂ ಆಹಾರಗಳ ಹಲ್ಲುಗಳ ಸವೆತಕ್ಕೆ ಕಾರಣವಾಗಬಹುದು. ಹಲವಾರು ವೈದ್ಯಕೀಯ ಪರಿಸ್ಥಿತಿಗಳು ಹಾಗೂ ಔಷಧಿಗಳಿಂದ ಒಣಬಾಯಿ ಆಗಬಹುದು ಜೊತೆಗೆ ಹಲ್ಲುಗಳಿಗೆ ಹಾನಿಕರವಾಗುವ ಸಾಧ್ಯತೆ ಜಾಸ್ತಿ. ಹಾಗಾಗಿ ಹಲ್ಲುಗಳ ರಕ್ಷಣೆ ತುಂಬಾನೇ ಮುಖ್ಯ.
ತೀವ್ರವಾದ ಹಲ್ಲು ನೋವು ಇದ್ದರೆ ಮೊದಲು ಬೆಚ್ಚಗಿನ ಲವಣಯುಕ್ತ ನೀರಿನಿಂದ ಬಾಯಿಯನ್ನು ತೊಳೆದು ಉಪ್ಪಿನಿಂದ ಬಾಯಿಯನ್ನು ಸ್ವಚ್ಛ ಮಾಡಬೇಕು. ಊತ ಇದ್ದರೆ ಐಸ್ ಪ್ಯಾಕ್‌ಗಳನ್ನು ದವಡೆಗೆ ಇಟ್ಟುಕೊಳ್ಳಬಹುದು. ಲವಂಗದ ಎಣ್ಣೆ ಇಲ್ಲವಾದರೆ ಲವಂಗದ ಪುಡಿ ಅಥವಾ ಲವಂಗವನ್ನು ಹಲ್ಲಿನ ಮೇಲೆ ಇಡಬಹುದು. ಪುದೀನ ಟೀ, ಒಂದು ಟೀ ಚಮಚ ಒಣಗಿದ ಪುದೀನ ಎಲೆಗಳನ್ನು ಒಂದು ಕಪ್ ಕುದಿಯುವ ನೀರಿನಲ್ಲಿ ಹಾಕಿ ೨೦ ನಿಮಿಷಗಳ ಕಾಲ ಕುದಿಸಿ ಚಹಾ ತಣ್ಣಗಾದ ನಂತರ ಅದನ್ನು ಬಾಯಿಯಲ್ಲಿ ತುಂಬಿಕೊಂಡು ಐದು ನಿಮಿಷ ಇಟ್ಟು ಉಗುಳುವುದು. ಒಂದು ಲೀಟರ್ ನೀರಿಗೆ ತುಳಸಿ ಪುದಿನ ಲವಂಗ ಹಾಕಿ ೩೦ ನಿಮಿಷ ಕುದಿಸಿ ತಣ್ಣಗಾದ ನಂತರ ಸೋಸಿ ಶೇಖರಣೆ ಮಾಡಿಟ್ಟುಕೊಳ್ಳಬೇಕು ತುಳಸಿ-ಪುದೀನ-ಲವಂಗದಿಂದ ಮಾಡಿದ ಈ ನೈಸರ್ಗಿಕ ಮೌತ್ ವಾಶ್ ಅನ್ನು ಮನೆಯಿಂದ ಹೊರಗಡೆ ಹೋಗುವಾಗ ಅಥವಾ ಬಂದು ಮಲಗುವ ಮುನ್ನ ಮುಕ್ಕಳಿಸುವುದು ಉತ್ತಮ. ಇದರಿಂದ ಬಾಯಿ ದುರ್ವಾಸನೆ ಬರುವುದಿಲ್ಲ. ಹಾಗೂ ಬಾಯಿಯಲ್ಲಿರುವ ಬ್ಯಾಕ್ಟಿರಿಯಗಳು ಸಾಯುತ್ತವೆ. ಬೇವಿನ ಕಡ್ಡಿ, ಹೊಂಗೆ ಮರದ ಕಡ್ಡಿ, ಮಾವಿನ ಕಡ್ಡಿ, ಇವುಗಳನ್ನು ಹಲ್ಲುಜ್ಜಲು ವಾರಕ್ಕೆ ಎರಡು ಬಾರಿ ಬಳಸಿದರೆ ಉತ್ತಮ. ದಿನಕ್ಕೆ ಎರಡು ಬಾರಿ ಬೆಳಗ್ಗೆ ಮತ್ತು ರಾತ್ರಿ ಹಲ್ಲುಜ್ಜುವುದು ಹಲ್ಲಿನ ಆರೋಗ್ಯಕ್ಕೆ ಉತ್ತಮ. ಹಲ್ಲುಜ್ಜುವ ಸಂದರ್ಭದಲ್ಲಿ ನೇರವಾಗಿ ಉಜ್ಜದೆ ಜಿಗ್ ಜಾಗ್ ಶೈಲಿ(ಮೇಲೆ-ಕೆಳಗೆ)ಯನ್ನು ಬಳಸಿ. ಪ್ರತಿ ನಿತ್ಯ ಆಹಾರವನ್ನು ಸೇವಿಸಿದ ನಂತರ ಮೌತ್ ವಾಶ್ ಬಳಸುವುದು ಆರೋಗ್ಯಕರ. ಮೃದುವಾದ ಬಿರುಗೂದಲುಗಳನ್ನು ಹೊಂದಿರುವ ಟೂತ್ ಬ್ರಷ್ ಅನ್ನು ಬಳಸುವುದು ಉತ್ತಮ. ಪ್ರತಿ ಮೂರು ತಿಂಗಳಿಗೊಮ್ಮೆ ಬ್ರಷ್ ಅನ್ನು ಬದಲಾಯಿಸಿ. ಹಲ್ಲಿನ ಸ್ವಚ್ಛತೆಯನ್ನು ದಂತ ವೈದ್ಯರಿಂದ ಪ್ರತಿ ವರ್ಷಕ್ಕೊಮ್ಮೆ ಮಾಡಿಸುವುದು ಉತ್ತಮ. ಇದರಿಂದ ಮುಂದಾಗಬಹುದಾದ ಸಮಸ್ಯೆಯನ್ನು ಮುಂಚೆಯೇ ಪತ್ತೆಹಚ್ಚಿ ಸರಿಪಡಿಸಬಹುದು. ಹಲ್ಲುಗಳು ಉತ್ತಮ ಸ್ಥಿತಿಯಲ್ಲಿದ್ದರೆ ಆಹಾರದ ಪಚನಕ್ರಿಯೆ ಸರಿಯಾಗಿ ದೇಹಕ್ಕೆ ಉತ್ತಮ ಆರೋಗ್ಯ ದೊರೆಯುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಹಲ್ಲನ್ನು ಸೂಕ್ತ ರೀತಿಯಲ್ಲಿ ಕಾಪಾಡಿಕೊಳ್ಳೋಣ.