ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬಿಜೆಪಿಯತ್ತ ರಾಜ್ ಸೇನೆ?

03:00 AM Nov 04, 2024 IST | Samyukta Karnataka

ಉರ್ದು ಲೇಖಕ ಸಾಹಿರ್ ಲುಧಿಯಾನವಿ ಬರೆದ "ರಾಜ್ ಕಿ ಬಾತ್ ಹೈ ಮೆಹಫಿಲ್ ಮೇ ಕಹೇ ಯಾ ನಾ ಕಹೇ, ನಿಗಾಹೇ ಮಿಲಾನೇ ಕೋ ಜೀ ಚಾಹತಾ ಹೈ" (ಎಲ್ಲರೆದುರು ಹೇಳಬೇಕೋ ಬೇಡವೋ, ಕಣ್ಣುಗಳು ಮಾತ್ರ ಸಂಧಿಸಲು ಹಾತೊರೆಯುತ್ತಿವೆ) ಗೀತೆಯನ್ನು ನೀವು ಕೇಳಿರಬಹುದು. ಸದ್ಯದ ಮಹಾರಾಷ್ಟ್ರದ ರಾಜಕೀಯ ಪಕ್ಷಗಳ ಪರಿಸ್ಥಿತಿ ಇದೆ ರೀತಿಯದ್ದಾಗಿದೆ. ಯಾರು ಯಾರೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಹಾತೊರೆಯುತ್ತಿದ್ದಾರೆ, ಚುನಾವಣಾ ಪೂರ್ವ ಮೈತ್ರಿಗಿಂತ ಚುನಾವಣೋತ್ತರ ಮೈತ್ರಿ ಮಾಡಿಕೊಂಡರೆ ಹೇಗೆ ಅಥವಾ ಗುಪ್ತ ಮೈತ್ರಿಗಳನ್ನು ಮಾಡಿಕೊಂಡು ಫ್ರೆಂಡ್ಲಿ ಫೈಟ್ ಮಾಡಿದರೆ ಹೇಗೆ ಎಂಬ ಆಲೋಚನೆಯಲ್ಲಿ ಮಗ್ನರಾಗಿದ್ದಾರೆ. ಕೆಲವೊಮ್ಮೆ ಅಜಿತ್ ಪವಾರ್ ಬಣ ಮತ್ತೆ ಶರದ್ ಪವಾರ್‌ರತ್ತ ಹೋಗಲಿದೆ ಎಂದು, ಶಿವಸೇನಾ ಉದ್ಧವ್ ಬಣ ಮತ್ತೆ ಬಿಜೆಪಿಯತ್ತ ಹೋಗಲಿದೆ ಎಂದು, ಇನ್ನು ಕೆಲವೊಮ್ಮೆ ಶಿವಸೇನಾ ಶಿಂಧೆ ಬಣ ಮತ್ತೆ ಉದ್ಧವ್ ಕೂಟ ಸೇರಿ ಕೊಳ್ಳಲಿದೆ ಎಂದು ಅಂತೆ ಕಂತೆಗಳ ಸುದ್ದಿ, ಸುದ್ದಿ ಮನೆಯ ಸುತ್ತಮುತ್ತ ತಿರುಗುತ್ತಿವೆ. ಹೀಗೆ ಆಟ ಮುಗಿದ ಮೇಲೆ ಯಾರ ನೋಟ ಯಾರತ್ತಲೋ ಏನೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಮತದಾರ ಪ್ರಭು ತನ್ನ ಸರದಿಗಾಗಿ ಕಾದು ಕುಳಿತಿದ್ದಾನೆ. ಮಹಾ ವಿಕಾಸ್ ಅಘಾಡಿಯಲ್ಲಿರುವ ಮಿತ್ರ ಪಕ್ಷಗಳಾದ ಕಾಂಗ್ರೆಸ್, ಶಿವಸೇನಾ (ಉದ್ಧವ್ ಬಣ) ಎನ್‌ಸಿಪಿ (ಶರದ್ ಪವಾರ್) ನಾಮ ನಿರ್ದೇಶನ ಮಾಡುವ ಕೊನೆಯ ದಿನದವರೆಗೆ ಕ್ಷೇತ್ರ ಹಂಚಿಕೆಯಲ್ಲಿ ನೀ ಕೊಡೆ ನಾ ಬಿಡೆ ಎಂಬಂತೆ ವರ್ತಿಸಿದ ರೀತಿಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೇ ರೀತಿಯ ಪರಿಸ್ಥಿತಿ ಮಹಾಯುತಿಯ ಮಿತ್ರ ಪಕ್ಷಗಳಾದ ಬಿಜೆಪಿ, ಶಿವಸೇನಾ (ಶಿಂಧೆ ಬಣ) ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ಯಲ್ಲೂ ಇದೆ. ಒಟ್ಟಿನಲ್ಲಿ ಅವರವರ ಬಣಗಳ ನಡುವೆ ಅವರವರಿಗೆ ವಿಶ್ವಾಸವಿಲ್ಲ, ಆ ಕಾರಣಕ್ಕೆ ಯಾವೊಬ್ಬ ನಾಯಕನಿಗೂ ನೆಮ್ಮದಿ ಇಲ್ಲ.
ಹೀಗಾಗಲು ಕಾರಣವೇನು? ಗೆಲುವು ಮತ್ತು ಅಧಿಕಾರವೇ ಸಿದ್ಧಾಂತವಾದಾಗ ಹೀಗಾಗುವುದು ಸಹಜ. ಕಾಲದಿಂದ ಕಾಲಕ್ಕೆ ಯುಗಧರ್ಮ, ಕಾಲ ಧರ್ಮ ಹಾಗೂ ನಿಯಮಗಳು ಬೇಕಾದರೆ ಬದಲಾಗಬಹುದು. ಆದರೆ ರಾಜಕೀಯ ಧರ್ಮ ಎಂಬುವುದೇನಾದರೂ ಇದ್ದರೆ ಅದು ಮಾತ್ರ ಬದಲಾಗದು ಎಂಬುದಕ್ಕೆ ಮಹಾರಾಷ್ಟ್ರ ಚುನಾವಣೆ ಮತ್ತೆ ಮತ್ತೆ ಸಾರಿ ಹೇಳುವಂತಿದೆ.
ಇತ್ತೀಚೆಗೆ ಖಾಸಗಿ ಸುದ್ದಿ ವಾಹಿನಿ ಸಂದರ್ಶನದಲ್ಲಿ ನಿರೂಪಕರು ರಾಜ್ ಠಾಕ್ರೆ ಅವರನ್ನು ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂದು ಕೇಳಿದ್ದಾರೆ. ರಾಜ್ ಠಾಕ್ರೆ ಬಹುಶಃ ಮಹಾಯುತಿ ಅಧಿಕಾರಕ್ಕೆ ಬರಬಹುದು ಹಾಗೂ ಬಿಜೆಪಿಯವರೇ ಮುಖ್ಯಮಂತ್ರಿ ಆಗಬಹುದು ಎಂಬ ಹೇಳಿಕೆ ಮಹಾರಾಷ್ಟ್ರದ ರಾಜಕೀಯದಲ್ಲೊಂದು ಸಂಚಲನ ಮೂಡಿಸಿದೆ. ರಾಜ್ ಠಾಕ್ರೆ ಪಕ್ಷ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಅಧಿಕೃತವಾಗಿ ಬಿಜೆಪಿ ನೇತೃತ್ವದ ಮಹಾಯುತಿ ಘಟ ಬಂಧನದಲ್ಲಿ ಇಲ್ಲದಿದ್ದರೂ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಪಕ್ಷಕ್ಕೆ ಹಾಕಿದ ಮತ ಬಿಜೆಪಿಗೆ ಹೋಗಲಿದೆ ಎಂಬ ಅಧಿಕೃತ ಸಂದೇಶವನ್ನು ರಾಜ್ ಠಾಕ್ರೆ ಕಳಿಸಿದಂತಿದೆ. ಅಲ್ಲದೆ ಇದೇ ರೀತಿಯ ಪ್ರಶ್ನೆಯನ್ನು ಫಡ್ನವಿಸ್ ಅವರಿಗೆ ಕೇಳಿದಾಗ ಫಡ್ನವಿಸ್, ರಾಜ್ ಠಾಕ್ರೆ ಈ ಕ್ಷಣಕ್ಕೆ ಮಹಾಯುತಿಯಲ್ಲಿ ಇಲ್ಲ ಎಂಬ ಅಡ್ಡ ಗೋಡೆಯ ಮೇಲೆ ದೀಪವಿಡುವಂತ ಉತ್ತರವನ್ನು ನೀಡಿ ಒಂದು ರೀತಿಯ ಫ್ರೆಂಡ್ಲಿ ಫೈಟ್‌ನ ಸೂಚನೆಯನ್ನು ಕೊಟ್ಟಿದ್ದಾರೆ. ಈ ಬೆಳವಣಿಗೆ ಬಿಜೆಪಿಯ ಮಿತ್ರ ಪಕ್ಷಗಳ ನಾಯಕರಾದ ಮುಖ್ಯಮಂತ್ರಿ ಶಿಂಧೆ ಹಾಗೂ ಅಜಿತ್ ಪವಾರ್ ಇಬ್ಬರಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಾಗಲು ಕಾರಣ ರಾಜಕಾರಣ ಎಂದು ಮತ್ತೆ ಬಿಡಿಸಿ ಹೇಳುವ ಅಗತ್ಯವಿಲ್ಲ. ಕೆಲವೇ ತಿಂಗಳಲ್ಲಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆಗಳು ಎದುರಾಗಲಿವೆ. ಅಲ್ಲಿ ರಾಜ್ ಠಾಕ್ರೆ ಹಾಗೂ ಅವರ ಪಕ್ಷ ನಿರ್ಣಾಯಕ ಎಂಬುದು ಬಿಜೆಪಿಯ ದೂರಾಲೋಚನೆ. ಅಲ್ಲದೆ ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆ ಮಾಹಿಮ್ ಕ್ಷೇತ್ರದಿಂದ ಸ್ಪರ್ಧಿಸಿರುವುದು ಕೂಡ ರಾಜ್ ಈ ನಡೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಿಂದ ಬಿಜೆಪಿ ಸ್ಪರ್ಧಿಸುತ್ತಿಲ್ಲ. ಆದರೆ ಬಿಜೆಪಿಯ ಮಿತ್ರ ಪಕ್ಷ ಶಿವಸೇನಾ ಶಿಂಧೆ ಬಣ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದ್ದರಿಂದ ಶಿವಸೇನಾ ಶಿಂಧೆ ಬಣಕ್ಕೆ ರಾಜ್ ಬಿಜೆಪಿಯ ಹತ್ತಿರವಾಗುವುದು ಅಷ್ಟಾಗಿ ಇಷ್ಟವಾಗುತ್ತಿಲ್ಲ. ಅಲ್ಲದೆ ಮುಂದಿನ ದಿನಗಳಲ್ಲಿ ಬಿಜೆಪಿ ತನ್ನ ಬಲದ ಮೇಲೆ ಹೆಚ್ಚು ಸ್ಥಾನವನ್ನು ಗಳಿಸಿದರೆ ಸ್ವಾಭಾವಿಕವಾಗಿ ಶಿಂಧೆ ಮುಖ್ಯಮಂತ್ರಿ ಸ್ಥಾನದ ಆಸೆಯನ್ನು ಕೈ ಬಿಡಬೇಕು.
ಮೇಲ್ನೋಟಕ್ಕೆ ಬಿಜೆಪಿ ೨೮೮ ಸ್ಥಾನಗಳಲ್ಲಿ ೧೪೬ ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ಉಳಿದ ಸ್ಥಾನಗಳನ್ನು ಮಹಾಯುತಿಯ ಮಿತ್ರ ಪಕ್ಷಗಳಿಗೆ ಬಿಟ್ಟು ಕೊಡಲಾಗಿದೆ. ಆದರೆ ಶಿವಸೇನೆ ಶಿಂಧೆ ಬಣದ ೮೦ ಉಮೇದುವಾರರಲ್ಲಿ ೧೬ ಉಮೇದುವಾರರು ಬಿಜೆಪಿಯಿಂದ ಶಿವಸೇನೆ ಶಿಂಧೆ ಬಣಕ್ಕೆ ಸೇರಿ ಸ್ಪರ್ಧಿಸುತ್ತಿದ್ದಾರೆ. ಅದೇ ರೀತಿ ೪ ಉಮೇದುವಾರರು ಬಿಜೆಪಿಯಿಂದ ಎನ್‌ಸಿಪಿ ಅಜಿತ್ ಪವಾರ್ ಬಣ ಸೇರಿ ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ ಬಿಜೆಪಿ ೧೪೬ ಉಮೇದುವಾರರನ್ನು ಕಣಕ್ಕಿಳಿಸಿದರೂ ಬಿಜೆಪಿಯ ಮಾಜಿ ನಾಯಕರ ಉಮೇದುವಾರಿಕೆಯನ್ನು ಪರಿಗಣಿಸಿದರೆ ಪರೋಕ್ಷವಾಗಿ ಬಿಜೆಪಿ ೧೬೬ ಉಮೇದುವಾರರನ್ನು ಕಣಕ್ಕಿಳಿಸಿದಂತಾಯಿತು. ಹೀಗೆ ಹಲವಾರು ಲೆಕ್ಕಾಚಾರಗಳು ಮುನ್ನೆಲೆಗೆ ಬರುತ್ತಿವೆ. ಆದ್ದರಿಂದ ಏನೇ ಆಗಲಿ, ಈ ಬಾರಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿ ಸರ್ಕಾರ ಮಾಡುವ ಹಕ್ಕನ್ನು ಪ್ರತಿಪಾದಿಸುವುದು ಸರ್ವಸಿದ್ಧ ಎಂಬ ಅಭಿಪ್ರಾಯವಿದೆ. ಆದರೆ ಇದೇ ವಿಷಯವಾಗಿ ಮೂರು ತಿಂಗಳ ಹಿಂದೆ ಮಹಾರಾಷ್ಟç ಚುನಾವಣೆಯಲ್ಲಿ ಯಾರ ಮೇಲುಗೈ ಆಗಬಹುದು ಎಂದು ಯಾರಾದರೂ ಕೇಳಿದ್ದರೆ ನಿರಾಯಾಸವಾಗಿ ಶಿವಸೇನಾ (ಉದ್ಧವ್ ಬಣ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ)ಯ ಮೈತ್ರಿ ಮಹಾ ವಿಕಾಸ್ ಅಘಾಡಿ ಎಂದು ಯಾರೂ ಬೇಕಾದರೂ ಹೇಳುವ ಪರಿಸ್ಥಿತಿ ಇದ್ದದ್ದು ನಿಜ, ಆದರೆ ಪರಿಸ್ಥಿತಿ ಈಗ ಕೊಂಚ ಬದಲಾಗಿದೆ. ವಿಚಿತ್ರವೆಂಬಂತೆ ಲೋಕಸಭೆಯ ಚುನಾವಣೆ ವೇಳೆ ಮಹಾರಾಷ್ಟçದ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ ಕೊಂಚ ತಗ್ಗಿದೆ. ಲೋಕಸಭೆಯ ಚುನಾವಣೆ ವೇಳೆ ರಾಷ್ಟ್ರೀಯ ವಿಷಯಗಳು ಹಿನ್ನೆಲೆಗೆ ಸರಿದು ಸ್ಥಳೀಯ ವಿಷಯಗಳು ಮುನ್ನೆಲೆಗೆ ಬಂದು ವಿರೋಧ ಪಕ್ಷಗಳಿಗಿಂತ ಜನರೇ ಚುನಾವಣೆಯ ಕಮಾನನ್ನು ತಮ್ಮ ಕೈಯಲ್ಲಿ ತೆಗೆದುಕೊಂಡಂತೆ ಭಾಸವಾಗುತಿತ್ತು. ಆದ್ದರಿಂದಲೇ ಬಿಜೆಪಿ ೨೫೦ರ ಅಂಕಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು, ಆದರೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ಸ್ಥಳೀಯ ವಿಷಯಗಳು, ಮರಾಠ ಮೀಸಲಾತಿ ಮುನ್ನೆಲೆಗೆ ಬಂದರೂ ಚುನಾವಣೆಯ ಕಮಾನು ಬಿಜೆಪಿ ನಾಯಕತ್ವದ ಮಹಾಯುತಿ ಹಾಗೂ ಕಾಂಗ್ರೆಸ್, ಉದ್ಧವ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಮಿತ್ರ ಪಕ್ಷಗಳಲ್ಲಿ ಸಮನಾಗಿ ಹಂಚಿಕೆ ಆದಂತೆ ಕಂಡು ಬರುತ್ತಿದೆ. ಅದರಲ್ಲೂ ಹರಿಯಾಣದ ಚುನಾವಣೆಯ ನಂತರ ಹಾಗೂ ಲಾಡಕಿ ಬೆಹನ್ ಯೋಜನೆಯ ೧೫೦೦ ರೂಪಾಯಿಗಳ ಭರವಸೆಯ ನಂತರ ಬಿಜೆಪಿ ನಾಯಕತ್ವದ ಮಹಾಯುತಿಯ ನಾಯಕರಲ್ಲಿ ಗೆಲುವಿನ ಆತ್ಮವಿಶ್ವಾಸ ದುಪ್ಪಟಾಗಿ ರುವುದಂತೂ ಸುಳ್ಳಲ್ಲ. ಸಣ್ಣ ಪುಟ್ಟ ಪಕ್ಷಗಳು ಕೂಡಾ ತಾವೇನು ಕಮ್ಮಿ ಇಲ್ಲ ಎಂದು ಭರವಸೆಯಿಂದ ಮುನ್ನುಗ್ಗುತ್ತಿವೆ, ಅಷ್ಟೇ ಅಲ್ಲ ತ್ರಿಶಂಕು ಸ್ಥಿತಿ ಸೃಷ್ಟಿಯಾದಲ್ಲಿ ಸಿಗಬಹುದಾದ ಖಾತೆಗಳ ನೆನೆದು ಮನಸ್ಸಿನ್ನಲ್ಲೇ ಮಂಡಿಗೆ ತಿನ್ನುತ್ತಿವೆ. ಏಕೆಂದರೆ ಸಣ್ಣ ಪುಟ್ಟ ಪಕ್ಷಗಳಿಗೆ ಯಾರ ಹಂಗು ಇರಲಾರದು. ಅವು ಗಾಳಿ ಬಂದಲ್ಲಿ ತೂರಿ ಸ್ಥಾನ ಗಟ್ಟಿ ಮಾಡಿಕೊಳ್ಳಬಹುದು. ಇತ್ತ ಬಿಜೆಪಿ ತಾನು ಅತ್ಯಂತ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ ಸಾಕು ಮುಂದಿನ ಹಾದಿ ಬಹು ಸುಲುಭ ಎಂದು ಭಾವಿಸುತ್ತಿದೆ. ಹೀಗೆ ಆಯಾ ಪಕ್ಷಗಳು ಅವರವರ ಚಿಂತೆಯಲ್ಲಿ ತೊಡಗಿವೆ. ಆ ಪಕ್ಷಗಳಿಗೆ ಗೆದ್ದರೆ ಅಧಿಕಾರ ಸೋತರೆ ವಿರೋಧ ಪಕ್ಷ ಅದಕ್ಕೂ ಮಿಗಿಲಾಗಿ ಏನು ಆಗಲಾರದು. ಆದರೆ ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಇವರಿಬ್ಬರಿಗೆ ಈ ಚುನಾವಣೆ ಅಳಿವು ಉಳಿವಿನ ಪ್ರಶ್ನೆಯಾಗಿ ಹೊರ ಹೊಮ್ಮಿದೆ. ಆದರೆ ಗುಟ್ಟು ಬಿಟ್ಟು ಕೊಡದ ಮತದಾರ ಪ್ರಭು ಮತದಾನಕ್ಕಾಗಿ ಕಾಯುತ್ತಿದ್ದಾನೆ. ಕುಟುಂಬದವರೇ ರಾಜಕಾರಣದಲ್ಲಿ ತೊಡಗಿಕೊಂಡಾಗ ಕುಟುಂಬ ರಾಜಕಾರಣಕ್ಕೆ ಆದ್ಯತೆ ಕೊಡಬೇಕಾಗಿತ್ತು ಎಂದು ಜನರು ಮರುಕ ಪಟ್ಟರೆ ಅಘಾಡಿಗೆ ಜೈ ಎಂದು ಮಹಾ ವಿಕಾಸ್ ಅಘಾಡಿಗೆ ಮತ್ತೆ ಅಧಿಕಾರ ದೊರಕೀತು. ರಾಜಕಾರಣವೇನು ಕುಟುಂಬದ ಸೊತ್ತೇ? ಎಂದು ಅವರಿಗೇಕೆ ಬಿಟ್ಟು ಕೊಡಬೇಕು ಅಧಿಕಾರದ ಗದ್ದುಗೆ ಎಂದರೆ ಅಘಾಡಿಯ ಆಸೆ ಲಗಾಡಿಯಾದೀತು.

Next Article