ಬಿಜೆಪಿಯವರು ಕತ್ತೆ ಕಾಯ್ತಿತ್ತಿದ್ದರಾ?
ಸಿಬಿಐಗೆ ಎಷ್ಟು ಕೇಸ್ ಕೊಟ್ಟಿದ್ದೇವೆ. ಈಗ ಅವು ಎಲ್ಲಿಗೆ ಬಂದವು
ಕಲಬುರಗಿ: ವಕ್ಫ್ ಮಂಡಳಿ ರದ್ದು ಮಾಡಬೇಕು ಎಂಬ ಬಿಜೆಪಿಯವರ ರಾಜಕೀಯ ಗಿಮಿಕ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗ ಬಿಜೆಪಿಯವರು ಕತ್ತೆ ಕಾಯ್ತಿತ್ತಿದ್ದರಾ? ಎಂದು ತಿರುಗೇಟು ನೀಡಿದ್ದಾರೆ.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಹುಬ್ಬಳ್ಳಿ, ವಿಜಯಪುರ ಮತ್ತಿತರ ಕಡೆ ವಕ್ಫ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಜೆಪಿಸಿ ಕಮೀಟಿ ಭೇಟಿ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಚುನಾವಣೆಗಳು ಬಂದಾಗ ಬಿಜೆಪಿಯವರು ದೊಡ್ಡ ವಿವಾದ ಸೃಷ್ಟಿಸಿ ರಾಜಕೀಯ ತಂತ್ರಗಾರಿಕೆ ಅನುಸರಿಸಿದರೂ ಏನು ಫಲಿಸದು. ಜಂಟಿ ಪಾರ್ಲಿಮೆಂಟ್ ಕಮೀಟಿ ಎಂದರೇನು? ಇಲ್ಲಿಗೆ ಜೆಪಿಸಿ ತಂಡ ಭೇಟಿ ಮಾಡುವುದಾದರೆ ಸಂಬಂಧಿಸಿದ ಸದಸ್ಯರೂ ಬರಬೇಕಲ್ವಾ? ಅವರ ಜತೆ ಬಿಜೆಪಿ ಮಾಜಿ ಸಂಸದರು ಬಂದಿದಲ್ಲದೆ ಅಧ್ಯಕ್ಷರೊಬ್ಬರೇ ಅಧಿಕೃತರು. ಹೀಗಾದರೆ ಹೇಗೆ? ಈ ಕಮೀಟಿಗೆ ಅವರೇನು ಸಂಬಂಧ ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ಆಸ್ತಿ ಸಂಬಂಧ ರೈತರಿಗೆ ಮೊದಲಿನಿಂದಲೂ ನೋಟಿಸ್ ಜಾರಿ ಮಾಡಲಾಗಿತ್ತು. ಈಗೇಕೆ ಬಿಜೆಪಿಯವರು ದೊಡ್ಡ ವಿವಾದ ಸೃಷ್ಟಿಸಿದ್ದಾರೆ. ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪ್ ಮಾಡಿಸುತ್ತಿರುವುದು ಯಾರು? ಇದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಏನ್ ಹೇಳ್ತಾರೆ. ಆಗ ಯಾಕೆ ಪ್ರತಿಭಟನೆ ನಡೆಸಲಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ವಿರುದ್ಧ ಗುಡುಗಿದ್ದಾರೆ.
ವಕ್ಫ್ ಆಸ್ತಿ ಬಗ್ಗೆ ಜಿಐಎಎಸ್ ಮ್ಯಾಪಿಂಗ್‌ಗೆ ಕೇಂದ್ರ ಬಿಜೆಪಿ ಸರ್ಕಾರ ೩೩೦ ಕೋಟಿ ರೂ. ಖರ್ಚು ಮಾಡಿದೆ. ವಕ್ಫ್ ಆಸ್ತಿ ಸಂರಕ್ಷಣೆಗೆ ಮುಂದಾಗಿರುವುದು ಬಿಜೆಪಿನಾ? ಕಾಂಗ್ರೆಸ್‌ನಾ? ಹಾಗಾದರೆ ಕೇಂದ್ರದಲ್ಲಿ ೧೧ ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಯಾಕೆ ರದ್ದು ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಿಬಿಐ ಕೇಸ್ ಏನೇನಾದವು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಬಿಜೆಪಿ ಲೇವಡಿ ಮಾಡಿದ್ದಕ್ಕೆ ಲೋಕಾಯುಕ್ತ ಅದೊಂದು ಸಂವಿಧಾನತ್ಮಕ ಸಂಸ್ಥೆ ಹೊರತು ಅದನ್ನೇ ಸಿಬಿಐ ಎಂದು ಕರೆಯುವುದಕ್ಕೆ ಸಾಧ್ಯನಾ? ಈ ಹಿಂದೆ ನಾವು ಅಧಿಕಾರದಲ್ಲಿ ಸಿಬಿಐಗೆ ಎಷ್ಟು ಕೇಸ್ ಕೊಟ್ಟಿದ್ದೇವೆ. ಈಗ ಅವು ಎಲ್ಲಿಗೆ ಬಂದವು ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಟೀಕಿಸಿದರು. ಆದರೆ ಮುಡಾ ಹಗರಣವನ್ನು ಬಿಜೆಪಿಯವರು ಸುಮ್ಮನೆ ಸಿಬಿಐ ತನಿಖೆಗೆ ಕೊಡಿ ಎನ್ನುವುದಲ್ಲಿ ಯಾವ ಅರ್ಥವಿಲ್ಲ ಎಂದು ಸಮರ್ಥಿಸಿಕೊಂಡರು.
ದಾಖಲೆ ಕೊಡಲಿ
ಅಬಕಾರ ಸಚಿವರ ವಿರುದ್ಧ ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ್ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಆರೋಪದ ಬಗ್ಗೆ ಬಿಜೆಪಿಯವರು ದಾಖಲೆ ಇದ್ದರೆ ಕೊಡಲಿ. ಈಗಾಗಲೇ ಅಬಕಾರಿ ಸಚಿವರು ಸಹ ಉತ್ತರಿಸಿದ್ದು, ಅವರು ಸಹ ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದಾರೆ ಅಲ್ಲವಾ. ಹಾಗಾಗಿ ನಾವು ಎಲ್ಲಿ ಜಾರಿಕೊಂಡು ಹೋಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಇನ್ನು ಬಿಜೆಪಿಯವರು ಪ್ರತಿಭಟನೆ ಮಾಡುವುದಾದರೆ ಮಾಡಲಿ ನಮ್ಮಗೇನು ಅಭ್ಯಂತರ ಇಲ್ಲ ಎಂದು ಟೀಕಿಸಿದ್ದಾರೆ.