ಬಿಜೆಪಿ-ಆರೆಸ್ಸೆಸ್‌ನಿಂದ ಸಂವಿಧಾನ ಬದಲಾವಣೆ
ಬಿಲಾಸ್‌ಪುರ: ಬಿಜೆಪಿಯ ಸೈದ್ಧಾಂತಿಕ ಸಂಘಟನೆಯಾದ ಆರೆಸ್ಸೆಸ್ ಸಂವಿಧಾನವನ್ನು ಬದಲಾಯಿಸಲು ಯತ್ನಿಸುತ್ತಿದೆ. ಬಡವರಿಗೆ ನೀಡಿರುವ ಮೀಸಲಾತಿಯನ್ನು ತೆಗೆಯುವ ಹುನ್ನಾರ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಎಸಗಿದ್ದಾರೆ.
ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಸಕ್ರಿ ಗ್ರಾಮದಲ್ಲಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಜಗತ್ತಿನ ಯಾವುದೇ ಶಕ್ತಿ ಸಂವಿಧಾನವನ್ನು ನಾಶಪಡಿಸಲು ಬಿಡುವುದಿಲ್ಲ ಎಂದು ಘೋಷಿಸಿದರು. ಈ ಬಾರಿಯ ಲೋಕಸಭಾ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ. ಬದಲಾಗಿ ಸಂವಿಧಾನವನ್ನು ಉಳಿಸುವ ಚುನಾವಣೆ. ಈ ಸಂವಿಧಾನ ಕೇವಲ ಪುಸ್ತಕವಲ್ಲ ಅದು ಬಡವರಿಗೆ ಹಕ್ಕು ಮತ್ತು ಅಧಿಕಾರ ನೀಡಿರುವ ವ್ಯವಸ್ಥೆ ಎಂದರು.
ಬಿಜೆಪಿಯವರು ಸಂವಿಧಾನ ಬದಲಾಯಿಸುವುದಾಗಿ, ಮೀಸಲಾತಿ ತೆಗೆದುಹಾಕುವುದಾಗಿ ಹೇಳುತ್ತಿದ್ದಾರೆ. ಹಾಗೇನಾದರೂ ಆದಲ್ಲಿ, ಬುಡಕಟ್ಟು ಸೋದರರು ನೀರು-ಕಾಡು-ಜಮೀನುಗಳಿಂದ ವಂಚಿತರಾಗುತ್ತಾರೆ. ಬಿಜೆಪಿಯ ಚಿಂತನೆ ಮಹಾನ್ ನಾಯಕರಾದ ಗಾಂಧೀಜಿ, ನೆಹರೂ ಮತ್ತು ಅಂಬೇಡ್ಕರ್ ಅವರಿಗಿಂತ ಭಿನ್ನವಾದದ್ದು. ಅವರು ಅದಾನಿ ಮತ್ತು ಅಂಬಾನಿಯಂಥ ಉದ್ಯಮಿಗಳು ನೆರವು ನೀಡುತ್ತಾರೆಯೇ ಹೊರತು ಬಡವರಿಗಲ್ಲ ಎಂದರು.
ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವುದಿಲ್ಲ, ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಬೇಕಾದರೆ ಹೇಳಲಿ ನೋಡೋಣ ಎಂದು ಸವಾಲು ಎಸೆದರು.
ಉದ್ಯೋಗ ಮತ್ತು ಶಿಕ್ಷಣದಲ್ಲಿ ಈಗ ಮೀಸಲಾತಿಗೆ ಶೇಕಡ ೫೦ರಷ್ಟು ಮಿತಿಯನ್ನು ಸುಪ್ರೀಂ ಕೋರ್ಟ್ ಹಾಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಅದನ್ನು ತೆಗೆದುಹಾಕುವುದಾಗಿ ಹೇಳಿದರು. ಕೇವಲ ಶೇಕಡ ೧ರಷ್ಟು ಜನ ದೇಶದ ಶೇಕಡ ೪೦ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದು ಲೆಕ್ಕ ನೀಡಿದ ಅವರು, ೨೨ ಉದ್ಯಮಿಗಳೀಗೆ ೧೬ ಲಕ್ಷ ಕೋಟಿ ರೂಪಾಯಿಯನ್ನು ಮೋದಿ ಸರ್ಕಾರ ನೀಡಿದೆ. ಶೇಕಡ ೨೨ರಷ್ಟು ಜನ ದೇಶದ ಶೇಕಡ ೭೦ರಷ್ಟು ಸಂಪತ್ತನ್ನು ಹೊಂದಿದ್ದಾರೆ ಎಂದರು. ಇಂಡಿಯಾ ಕೂಟ ಅಧಿಕಾರಕ್ಕೆ ಬಂದಲ್ಲಿ ಬಡ ಕುಟುಂಬಗಳ ಒಬ್ಬೊಬ್ಬ ಮಹಿಳೆಗೆ ವರ್ಷಕ್ಕೆ ೧ ಲಕ್ಷ ರೂಪಾಯಿ ನೀಡಲಾಗುತ್ತದೆ. ಜಗತ್ತಿನಲ್ಲಿ ಇಂಥ ಯೋಜನೆಯನ್ನು ಯಾವುದೇ ಸರ್ಕಾರ ರೂಪಿಸಿಲ್ಲ ಎಂದರು ಸಮರ್ಥಿಸಿಕೊಂಡರು.