ಬಿಜೆಪಿ ನಾಯಕರ ಜೊತೆ ಸವದಿ ಸಭೆ
ಬೆಳಗಾವಿ: ಎರಡು ಮೂರು ದಿನಗಳಿಂದ ಕಾಂಗ್ರೆಸ್ ಪಕ್ಷ ಬಿಡಲ್ಲ ಎನ್ನುತ್ತಿರುವ ಶಾಸಕ ಲಕ್ಷö್ಮಣ ಸವದಿ ಸೋಮವಾರ ಬೆಳಗಾವಿಯಲ್ಲಿ ಬಿಜೆಪಿ ನಾಯಕರ ಜೊತೆ ಗೌಪ್ಯ ಸಭೆ ನಡೆಸಿ
ಕಾರಿನಲ್ಲಿ ಸುತ್ತಾಟ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಡಿಸಿಸಿ ಬ್ಯಾಂಕಿನ ಸಭೆಗೆ ಅವರು ಬಂದಿದ್ದರು. ಆದರೆ ಅದಕ್ಕೂ ಪೂರ್ವ ಅವರು ಬಿಜೆಪಿ ಮುಖಂಡರ ಜೊತೆ ಭೋಜನ ಮಾಡಿದ್ದು ಕುತೂಹಲ ಕೆರಳಿಸಿದೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಾಹನದಲ್ಲಿ ಚಿಕ್ಕೋಡಿ ಬಿಜೆಪಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಬಿಜೆಪಿ ಮಾಜಿ ಶಾಸಕ ಮಹಾಂತೇಶ್ ದೊಡ್ಡಗೌಡರ ಇದ್ದರು.
ಬೆಳಗಾವಿಯಲ್ಲಿರುವ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಇವರು ಒಟ್ಟಾಗಿ ಬಂದರು. ಇಲ್ಲಿ ಬ್ಯಾಂಕಿಗೆ ಬರುವ ಮುನ್ನ ಸದಾಶಿವ ನಗರದಲ್ಲಿರುವ ತಮ್ಮ ನಿವಾಸದಲ್ಲಿ
ಈ ಮುಖಂಡರೊಂದಿಗೆ ಗೌಪ್ಯ ಚರ್ಚೆ ನಡೆಸಿದರು. ಆದರೆ ಅಲ್ಲಿ ಕೇವಲ ಡಿಸಿಸಿ ಬ್ಯಾಂಕಿನ ಬಗ್ಗೆ ಅಷ್ಟೇ ಚರ್ಚೆ ನಡೆಯಿತಾ ಅಥವಾ ಮತ್ತೇನಾದರೂ ಪ್ರಸಕ್ತ ರಾಜಕೀಯ ಬೆಳವಣಿಗೆ ಬಗ್ಗೆ ಮಾತುಕತೆ ನಡೆಯಿತಾ ಎನ್ನುವುದು ಗೊತ್ತಾಗಿಲ್ಲ.
ಕಾಂಗ್ರೆಸ್ ಬಿಡಲ್ಲ… ಬಿಡಲ್ಲ.. ಬಿಡಲ್ಲ: ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷö್ಮಣ ಸವದಿ, ತಾವು ಕಾಂಗ್ರೆಸ್ ಬಿಡಲ್ಲ ಎನ್ನುವುದನ್ನು ಪುನರುಚ್ಚರಿಸಿದರು. ಡಿಸಿಸಿ ಬ್ಯಾಂಕ್ ಬೋರ್ಡ್ ಮೀಟಿಂಗ್ ಮಾಡುವ ಸಲುವಾಗಿ ಎಲ್ಲರೂ ಕೂಡಿ ಬಂದಿದ್ದೇವೆ. ವಿಶೇಷ ಏನೂ ಇಲ್ಲ ಎಲ್ಲರೂ ಸೇರಿ ಮೀಟಿಂಗ್ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.