ಬಿಟ್ಟು ಕೊಡುತ್ತಿಲ್ಲ ಗುಟ್ಟು ಹಿಡೀತಾರೆ ಅವರ ಜುಟ್ಟು
ಮೂರೂ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು ಎಂದು ನಿರೂಪಕಿ ಕಿವುಡ ನುಮಿ ಕ್ಷೇತ್ರದ ಜನರನ್ನು ಮಾತನಾಡಿಸಿ ತಿಳಿದುಕೊಳ್ಳೋಣ ಎಂದು ವಿಚಾರ ಮಾಡಿದಳು.
ಕ್ಷೇತ್ರಗಳಿಗೆ ತಿರುಗಾಡಿ ಅವರಿವರನ್ನು ಮಾತನಾಡಿಸಿದಳು. ಅವರೆಲ್ಲ ತಮಗೆ ತಿಳಿದಹಾಗೆ ಹೇಳಿದರು. ತಮ್ಮದೇ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳತೊಡಗಿದರು. ಇವರು ತಮ್ಮ ಮೂಗಿನ ನೇರಕ್ಕೇ ಹೇಳುತ್ತಾರೆ. ಯಾವ ಪಕ್ಷಕ್ಕೂ ಸೇರದ, ರಾಜಕಾರಣ ಗೊತ್ತಿರದ, ಕೇವಲ ಮತ ಹಾಕಿ ಮನೆಗೆ ಬರುವವರನ್ನು ಮಾತನಾಡಿಸಿದರೆ ಚೆನ್ನ ಅಂದುಕೊಂಡಳು. ದನ ಮೇಯಿಸಿಕೊಂಡು ಬರುತ್ತಿರುವ ಲೊಂಡೆನುಮನನ್ನು ನಿಲ್ಲಿಸಿದಳು. ನೋಡಿ ಸಾರ್ ನಾವು ಇಂಗಿಂಗೆ ಚಾನಲ್‌ನಿಂದ ಬರುತ್ತಿದ್ದೇವೆ. ನಿಮಗೆ ಪ್ರಶ್ನೆಗಳನ್ನು ಕೇಳುತ್ತೇನೆ ಉತ್ತರ ಹೇಳಿ ಅಷ್ಟೇ ಸಾಕು ಎಂದು ಆತನ ರೆಸ್ಪಾನ್ಸ್‌ಗೆ ಕಾಯದೇ ಆತನ ಅಂಗಿಗೆ ಮೈಕ್ ಹಾಕಿ, ಕ್ಯಾಮರಾ ನೋಡು ಎಂದಳು.
ಕಿವುಡನುಮಿ: ಸಾರ್ ತಮ್ಮ ಹೆಸರು?
ಲೊಂಡೆನುಮ: ಹನ್ಮಂತ… ಆದರೆ ಜನರು ಲೊಂಡೆನುಮ ಅಂತಾರೆ
ಕಿವುಡನುಮಿ: ಇರಲಿ ನೀವು ಈ ಬಾರಿ ಮತ ಯಾರಿಗೆ ಹಾಕುತ್ತೀರಿ?
ಲೊಂಡೆನುಮ: ನಿಮಗ್ಯಾಕೆ ಬೇಕು? ನೀವು ನಿಂತಿದ್ದೀರಾ?
ಕಿವುಡನುಮಿ: ಇಲ್ಲಿಲ್ಲ… ನಾವು ಟಿವಿಯವರು ಅಲ್ಲವೇ ಅದಕ್ಕೆ ಕೇಳಿದೆ.
ಲೊಂಡೆನುಮ: ಹೂಂ.. ಆಯಿತಾ?
ಕಿವುಡನುಮಿ: ಲೊಂಡೆನುಮ ಅವರೇ ನಿಮ್ಮನ್ನು ಪ್ರಚಾರಕ್ಕೆ ಕರೆದಿಲ್ಲವೇ?
ಲೊಂಡೆನುಮ: ನಾನು ಪ್ರಚಾರಕ್ಕೆ ಹೋದರೆ ದನ ಯಾರು ಅವರಪ್ಪ ಕಾಯ್ತಾರಾ?
ಕಿವುಡನುಮಿ: ಅಲ್ಲ ಹನ್ಮಂತ ಅವರೇ ನಿಮಗೆ ದುಡ್ಡಿನ ಆಮಿಷ ತೋರಿಸಿದರೆ?
ಲೊಂಡೆನುಮ: ನಮಗಂತೂ ಏನೂ ತೋರಿಸಿಲ್ಲ ನಿಮಗೆ ತೋರಿಸಿದರಾ?
ಕಿವುಡನುಮಿ: ಅಲ್ರೀ ಏನ ಕೇಳಿದರೂ ಎಡವಟ್ಟು ಮಾತಾಡ್ತೀರಲ್ಲ?
ಲೊಂಡೆನುಮ: ನಾ ಏನ್ ನಿಮಗೆ ಕೇಳು ಬಾ ಅಂತ ಕರೆದಿರಲಿಲ್ಲವಲ್ಲ?
ಕಿವುಡನುಮಿ: ನೋಡಿದರಾ ಪ್ರೇಕ್ಷಕರೇ, ನಾನು ಸಾಮಾನ್ಯ ಮನುಷ್ಯ ಅಂತ ಪ್ರಶ್ನೆ ಮಾಡಿದರೆ ಈಯಪ್ಪ ಏನೇನೋ ಉತ್ತರ ಕೊಡುತ್ತಾನೆ. ಎಲ್ಲಿದೆ ಡೆಮಾಕ್ರಸಿ? ಎಂದು ಹೇಳುತ್ತ… ಮತದಾರ ಬಿಟ್ಟುಕೊಡುತ್ತಿಲ್ಲ ಗುಟ್ಟು-ಹಿಡೀತಾರೆ ಅವರ ಜುಟ್ಟು ಎಂದು ಪ್ರಾಸಬದ್ಧವಾಗಿ ಹೇಳುತ್ತ ಮತ್ತೆ ನಿಮ್ಮ ಎದುರಿಗೆ ಬರುತ್ತೇನೆ ಎಂದು ಹೋದಳು.