ಬಿಸಿಲೂ ಸಹ ಅವರ ಹಿಡಿತದಲ್ಲಿ…
ಚುನಾವಣೆಗೆ ಸ್ಪರ್ಧಿಸಿದ್ದ ತಿಗಡೇಸಿ ಅವರು, ಸಮಾವೇಶ, ಬಹಿರಂಗ ಭಾಷಣ ಇಟ್ಟುಕೊಂಡಿದ್ದರು. ಆದರೆ ಆ ಭಾಷಣಕ್ಕೆ ಜನರೇ ಬರುತ್ತಿರಲಿಲ್ಲ. ತಿಗಡೇಸಿಗೆ ಅವರ ಮೇಲೆಯೇ ಅನುಮಾನ… ಡೆಲ್ಲಿಗೆ ಆಕಾಶ ಅಗದಿ ಸಮೀಪ. ಈಗ ಸೂರ್ಯನೂ ಇಂಡೈರೆಕ್ಟಾಗಿ ಅವರ ಪಾರ್ಟಿ ಸೇರಿದ್ದಾನೆ ಎಂದು ತಿಗಡೇಸಿಗೆ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಹೋದಲ್ಲಿ ಬಂದಲ್ಲಿ ಅದೇ ಭಾಷಣ ಮಾಡುತ್ತಿದ್ದಾನೆ. ಬಿಸಿಲಿಗೆ ನೆತ್ತಿ ಸುಟ್ಟುಕೊಂಡು ಊರೆಲ್ಲ ತಿರುಗಿ ಭಾಷಣ ಮಾಡುತ್ತಿದ್ದಾನೆ. ಆತನ ಭಾಷಣದ ತುಣುಕು ಹೀಗಿದೆ ನೋಡಿ… ನೋಡಿದ್ರಾ? ಚುನಾವಣೆ ಸಂದರ್ಭದಲ್ಲಿ ಈ ಪಾಟಿ ಬಿಸಿಲು. ಎಂದು ಕಾಣದಂತಹ ಬಿಸಿಲು ಈಗೇಕೆ ಇದೆ. ಮಹಾಜನರೇ ಇದನ್ನು ನೀವು ಅರ್ಥ ಮಾಡಿಕೊಳ್ಳಲೇಬೇಕು. ಇಡಿ-ಏಡಿ-ಸಿಬಿಐ-ಪಿಬಿಐ.. ಅದೂ ಇದೂ ಎಲ್ಲವೂ ಅವರ ಹಿಡಿತದಲ್ಲಿವೆ. ಈ ಬಿಸಿಲೂ ಸಹ ಅವರ ಮುಷ್ಠಿಯಲ್ಲಿಯೇ ಅಡಗಿ ಕುಳಿತಿದೆ. ಈ ರಣಬಿಸಿಲಿನಲ್ಲಿ ಜನರು ಹೊರಗೆ ಬರಬಾರದು. ನಾವು ಮೆರವಣಿಗೆ ಮಾಡಬಾರದು, ಮಾಡಿದರೆ ತಲೆ ಸುಟ್ಟುಹೋಗಿ ಏನೇನೋ ಆಗಿಬಿಡಬೇಕು ಎಂದು ಬೇಕಂತಲೇ ಈ ಸಂದರ್ಭದಲ್ಲಿ ಬಿಸಿಲು ಜಾಸ್ತಿ ಆಗುವ ಹಾಗೆ ಮಾಡಿದ್ದಾರೆ. ನಮ್ಮ ಹುಡುಗರಿಗೆ ಪೋಸ್ಟರ್ ಹಚ್ಚುವುದಕ್ಕೆ, ಬ್ಯಾನರ್ ಕಟ್ಟುವುದಕ್ಕೆ ತೊಂದರೆ ಆಗುತ್ತದೆ. ಬನ್ರೋ ಅಂದರೆ ಬಿಸಿಲಣ್ಣಾ ಅನ್ನುತ್ತಿದ್ದಾರೆ. ಇದರ ಹಿಂದೆ ಯಾರ ಹುನ್ನಾರ ಇದೆ ಎಂದು ನಿಮಗೆ ಗೊತ್ತೇ ಇದೆ. ಇರಲಿ.. ಇರಲಿ.. ಇದೊಂದೇ ಬಾರಿ ನನ್ನನ್ನು ಗೆಲ್ಲಿಸಿ ಹನ್ನೆರಡು ತಿಂಗಳೂ ನಿಮಗೆ ನೆರಳು ಕಾಣುವ ಹಾಗೆ ಮಾಡುತ್ತೇನೆ. ಎಲ್ಲವೂ ನೆರಳಲ್ಲೇ. ಇನ್ನೊಂದು ಬಾರಿ ಬಿಸಿಲಿಗೆ ಜನರು ನರಳದ ಹಾಗೆ ಮಾಡುತ್ತೇನೆ. ನನ್ನ ನಂಬಿ ಓಟುಕೊಟ್ಟರೆ ನೆರಳು ನಿಮ್ಮದಾಗುತ್ತದೆ ಇಲ್ಲದಿದ್ದರೆ ಇಂಥದ್ದೇ ಬಿಸಿಲಲ್ಲಿ ಕುದ್ದು ಹೋಗುತ್ತೀರಿ ಜೋಕೆ.. ಜೋಕೆ.. ಜೋಕೆ ಎಂದು ಹೇಳುವಷ್ಟರಲ್ಲಿ ಭಾಷಣ ಕೇಳಲು ಕುಳಿತಿದ್ದ ಹತ್ತು ಜನರ ಪೈಕೆ ಆರು ಜನರು ಅದಾಗಲೇ ಎದ್ದು ಹೋಗಿರುತ್ತಾರೆ. ಉಳಿದ ನಾಲ್ಕು ಜನರು ಇವನ ಭಾಷಣ ಮತ್ಯಾವಾಗಿದೆ? ಅಂದು ನಾವು ಟೂರು ಹೋಗುವ ಪ್ರೋಗ್ರಾಂ ಹಾಕಿಕೊಳ್ಳುತ್ತೇವೆ ಎಂದು ಅವರೂ ಸಹ ಅಲ್ಲಿಂದ ಜಾಗ ಖಾಲಿ ಮಾಡಿದರು.