ಬಿಹಾರದಲ್ಲಿ ಮತ್ತೆ ಪಲ್ಟಿರಾಮ ರಾಜ್ಯ
ಪಟನಾ: ಮೈತ್ರಿ ಕೂಟಗಳನ್ನು ಪದೇ ಪದೇ ಬದಲಾಯಿಸುವುದರಿಂದ ಪಲ್ಟುರಾಮ್ ಎಂದೇ ಖ್ಯಾತಿ ಬಿಹಾರ ಸಿಎಂ ನಿತೀಶ್ ಕುಮಾರ್ ಇನ್ನೊಂದು ಬಾರಿ ಪಲ್ಟಿ ಹೊಡೆದಿದ್ದಾರೆ. ಭಾನುವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ನಿತೀಶ್ ಗಠಬಂಧನ ಸರ್ಕಾರದಿಂದ ಹೊರಬಂದಿದ್ದು, ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದರಿಂದ ಲೋಕಸಭೆ ಚುನಾವಣೆಗೆ ಮುಂಚಿತವಾಗಿಯೇ ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಬ್ಲಾಕ್‌ಗೆ ಭಾರಿ ಹೊಡೆತ ಬಿದ್ದಂತಾಗಿದೆ.
ಬಿಹಾರದಲ್ಲಿ ಗಠಬಂಧನ ಸರ್ಕಾರ ಉರುಳಿಬಿದ್ದಿದ್ದು, ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ನಿತೀಶ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಹದಿನೆಂಟೇ ತಿಂಗಳಲ್ಲಿ ಆರ್‌ಜೆಡಿಯೊಂದಿಗಿನ ಜೆಡಿಯು ಕೂಡಿಕೆ ಮುರಿದುಬಿದ್ದಿದೆ.
ಬಿಹಾರದ ಮಹಾಗಠಬಂಧನ್ ಮೈತ್ರಿಕೂಟದಲ್ಲಿ ಮತ್ತು ಪ್ರತಿಪಕ್ಷಗಳ ಒಕ್ಕೂಟವಾದ ಇಂಡಿಯಾ ಬ್ಲಾಕ್‌ನಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿಲ್ಲ. ಹೀಗಾಗಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ನಿತೀಶ್ ವಿವರಿಸಿದ್ದಾರೆ.
ರಾಜ್ಯಪಾಲ ರಾಜೇಂದ್ರ ಅರಲೇಕರ್ ಅವರಿಗೆ ರಾಜೀನಾಮೆ ನೀಡಿದ ನಿತೀಶ್, ಬಿಜೆಪಿ ಮತ್ತು ಹಿಂದೂಸ್ಥಾನ್ ಅವಾಮ್ ಮೋರ್ಚಾ (ಎಚ್‌ಎಎಮ್) ಒಳಗೊಂಡಿರುವ ಎನ್‌ಡಿಎ ಮೈತ್ರಿಕೂಟದ ಬೆಂಬಲದೊAದಿಗೆ ಸರ್ಕಾರ ರಚಿಸುವುದಾಗಿ ತಿಳಿಸಿದರು. ಬಿಜೆಪಿ ಶಾಸಕಾಂಗ ಸಭೆಯಲ್ಲಿ ಎನ್‌ಡಿಎ ನೇತೃತ್ವವನ್ನು ನಿತೀಶ್ ಅವರಿಗೆ ಸರ್ವಸಮ್ಮತ ಒಪ್ಪಿಗೆ ದೊರೆತಿದ್ದು, ಹೊಸ ಮಿತ್ರಪಕ್ಷಗಳ ನೆರವಿನೊಂದಿಗೆ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ಬಿಹಾರವನ್ನು ಅತಿ ಹೆಚ್ಚು ಕಾಲ ಆಳಿರುವ ನಿತೀಶ್, ಒಂಬತ್ತನೇ ಬಾರಿ ಸಿಎಂ ಆಗಿದ್ದಾರೆ.