ಬಿ.ಸಿ. ರೋಡ್ ಚಲೋ….: ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಮಂಗಳೂರು: ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಾಗಮಂಗಲ ಗಣೇಶ ಮೆರವಣಿಗೆ ವೇಳೆ ನಡೆದ ಘರ್ಷಣೆಗೆ ಮುಸ್ಲಿಮರನ್ನು ಹೊಣೆಯಾಗಿಸಿ ಪ್ರತಿಭಟನೆ ನಡೆಸಿ ‘ಮಿಲಾದ್ ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ’ ಎಂದು ಶರಣ್ ಪಂಪ್ ವೆಲ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಮತ್ತು ಸದಸ್ಯ ಹಸೈನಾರ್ ಎಂಬವರು ಸವಾಲು ಹಾಕಿ ಸಾಮಾಜಿಕ ಮಾಧ್ಯಮಗಳಲ್ಲಿ ಆಡಿಯೋ ರವಾನಿಸಿದ ಘಟನೆ ಬೆನ್ನಲ್ಲೇ ಧಮ್ ಇದ್ರೆ ಬಿ ಸಿ ರೋಡ್‌ಗೆ ಬಾ ಎಂದು ಹಾಕಿರುವ ಚಾಲೆಂಜ್ ಇದೀಗ ಆತಂತಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಿಸಿ ರೋಡ್ ಚಲೋಗೆ ವಿಹೆಚ್ ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಕರೆ ಕೊಟ್ಟಿದ್ದಾರೆ. ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಬಿ.ಸಿ ರೋಡ್‌ನ ರಕ್ತೇಶ್ವರಿ ದೇವಸ್ಥಾನದ ಜಮಾಯಿಸಿದ್ದಾರೆ. ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್, ಬಜರಂಗದಳ ಮುಖಂಡ ಪುನೀತ್ ಅತ್ತಾವರ ಸ್ಥಳಕ್ಕೆ ಆಗಮಿಸಿದ್ದಾರೆ. ಕೆಎಸ್‌ಆರ್‌ಪಿ ತುಕಡಿಗಳು, ಆರ್ಮ್ ರಿಸರ್ವ್ ಫೋರ್ಸ್ ಸೇರಿದಂತೆ ವಿವಿಧ ತುಕಡಿಗಳ ಮೊಕ್ಕಾಂ ಹೂಡಿವೆ. ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.
ಮಸೀದಿಗೆ ಕಲ್ಲು: ನಗರದ ಹೊರವಲಯದ ಸುರತ್ಕಲ್ ಕಾಟಿಪಳ್ಳ 3ನೇ ಬ್ಲಾಕ್ನಲ್ಲಿರುವ ಬದ್ರಿಯಾ ಜುಮಾ ಮಸೀದಿ ಸಮೀಪ ಭಾನುವಾರ ರಾತ್ರಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ, ಕಲ್ಲು ತೂರಾಟದಿಂದ ಮಸೀದಿಯ ಗಾಜು ಪುಡಿಯಾಗಿದೆ. ಈದ್ ಮಿಲಾದ್ ಮುನ್ನಾ ದಿನವೇ ಘಟನೆ ನಡೆದಿದ್ದು, ಪರಿಸ್ಥಿತಿ ಸ್ಥಳದಲ್ಲಿ ಉದ್ವಿಗ್ನವಾಗಿದೆ. ಇಂದು ಈದ್ ಮಿಲಾದ್ ಹಬ್ಬವೂ ಇರುವ ಕಾರಣ ಸುರತ್ಕಲ್ ಪ್ರದೇಶ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.