For the best experience, open
https://m.samyuktakarnataka.in
on your mobile browser.

ಬೀದಿಗೆ ಬಿದ್ದ ಭ್ರಷ್ಟಾಚಾರ

03:30 AM Aug 11, 2024 IST | Samyukta Karnataka
ಬೀದಿಗೆ ಬಿದ್ದ ಭ್ರಷ್ಟಾಚಾರ

ನಮ್ಮ ಉತ್ತರ ಕರ್ನಾಟಕದ ಇಬ್ಬರು ಮಹಿಳೆಯರ ನಡುವೆ ಜಗಳ ಶುರುವಾಯಿತು ಅಂದರೆ, ನೀ ಏನ್ ಗರತಿ.., ನೀ ಏನ್ ಗರತಿ ಎಂದು ಬೀದಿಗೆ ಬರುವರು. ಅಂತೆಯೇ ಇಂದು ನಾಡಿನ ರಾಜಕೀಯ ಪಕ್ಷದ ನಾಯಕರು, ನೀವು ಭ್ರಷ್ಟಾಚಾರಿಗಳು, ನೀವು ಭ್ರಷ್ಟಾಚಾರಿಗಳು ಎಂದು ಭ್ರಷ್ಟಾಚಾರವನ್ನು ತಬ್ಬಿಕೊಂಡು ಬೀದಿಗೆ ಬಿದ್ದಂತಾಗಿದೆ.
ಸಾರ್ವಜನಿಕ ಸೇವಾಕೇಂದ್ರದಲ್ಲಿರುವ ಸರಕಾರದ ಅಧಿಕಾರಿಗಳು, ಜನಪ್ರತಿನಿಧಿಗಳು ನಿಯಮಬಾಹಿರವಾಗಿ ತಮ್ಮ ಸ್ಥಾನ ಉಪಯೋಗಿಸಿಕೊಂಡು ನಿಯಮ ಉಲ್ಲಂಘಿಸಿಕೊಂಡು ಹೆಚ್ಚಿನ ಸೌಲಭ್ಯದ ಲಾಭವನ್ನು ಕೊಡಿಸುವದು ಇಲ್ಲವೇ ಸ್ವತಃ ಪಡೆಯುವದು ಭ್ರಷ್ಟಾಚಾರ. ಭ್ರಷ್ಟಾಚಾರ ಜಾಗತಿಕ ವಿಸ್ತಾರವನ್ನು ಪಡೆದಿದೆ. ಇತ್ತೀಚೆಗೆ ಭ್ರಷ್ಟಾಚಾರ ಎನ್ನುವದು ಮುಜುಗರವುಂಟು ಮಾಡುವಷ್ಟು ಭಾರಿ ಪ್ರಮಾಣದಲ್ಲಿ ಬೆಳೆದುಬಿಟ್ಟಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕೆಂದು ತೊಡೆ ತಟ್ಟಿದವರು, ಆಮರಣ ಉಪವಾಸ ಕುಳಿತ ಕೆಲವು ದೊಡ್ಡ ದೊಡ್ಡ ಹೋರಾಟಗಾರರೇ ತಮಗೆ ಗೊತ್ತಿಲ್ಲದಂತೆ ಅದರ ಬಲೆಯಲ್ಲಿ ಬೀಳುತ್ತಿರುವುದು ವಿಪರ್ಯಾಸದ ಸಂಗತಿಯೇ ಸರಿ.
ಭ್ರಷ್ಟ ವ್ಯವಸ್ಥೆ ವಿರುದ್ಧ ಫ್ರೆಂಚ್ ಕ್ರಾಂತಿಯಾಯಿತು, ಸೋವಿಯತ್ ಕ್ರಾಂತಿಯಾಯಿತು, ಚೀನಾದ ಕೆಂಪು ಸೈನ್ಯದ ಕ್ರಾಂತಿಯಾಯಿತು. ಅದರಂತೆ ನಮ್ಮ ದೇಶದಲ್ಲೂ ಒಂದು ಅಂತಹ ಕ್ರಾಂತಿ ಆಗದ ಹೊರತು ಭ್ರಷ್ಟಾಚಾರ ನಿರ್ಮೂಲನ ಅಸಾಧ್ಯವೆಂದು ತೋರುತ್ತದೆ.
ಇಂದಿನ ರಾಜಕೀಯ ನಾಯಕರಿಂದ ತಾವು ಉಳಿದುಕೊಳ್ಳಲು ಭ್ರಷ್ಟಾಚಾರ, ಸ್ವಾರ್ಥ, ಪಕ್ಷಪಾತ, ಅಶಿಸ್ತು, ದುರಾಡಳಿತ, ಅಧಿಕಾರ ದುರುಪಯೋಗ ಇತ್ಯಾದಿ ಈ ಸಾಮಾಜಿಕ ಪಿಡುಗುಗಳಿಂದ ನಮ್ಮ ನಾಡು ತತ್ತರಿಸಿಹೋಗಿದೆ. ಇರಲಿ ಎಂದು ಬದಲಿ ಸರಕಾರವನ್ನು ತಂದರೆ ನಾಡಿನ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಇದಕ್ಕೆ ಪರಿಹಾರವಿಲ್ಲವೇ?
ದೇಶದಲ್ಲಿ ಭ್ರಷ್ಟಾಚಾರ ನಿರೋಧ ಕಾನೂನುಗಳು ಸಾಕಷ್ಟಿವೆ. ಆದರೆ ಅವೆಲ್ಲ ಗೆದ್ದಲು ತಿಂದಿವೆ. ಭ್ರಷ್ಟಾಚಾರವನ್ನು ಒಬ್ಬ ಕವಿಗಳು ತಮ್ಮ ಕಾವ್ಯದ ಮೂಲಕ ಈ ರೀತಿ ಹಂಚಿಕೊಂಡಿದ್ದಾರೆ.
ಅಧಿಕಾರ ಮಧವು, ಐಸಿರಿಯ ಮೋಹವು ಬೆಳೆದು ಅಳಿಗಾಲ ಹಣಿಕ್ಕಿತ್ತು, ವಾರಾಂಗನೆಯಾಯ್ತು ವ್ಯಾಪಾರ…. ಉನ್ನತ ಅಧಿಕಾರಿಯನು ಶಾಸಕ ಕೊಳ್ಳುವವನು ಕ್ರಯಕೆ…ತಾಳ ತಪ್ಪಿದ ಜನವು ಕೀಲುತಪ್ಪಿಹುದೀಗ ಆಡಳಿತಯಂತ್ರ ಶಾಸಕರ ಕೈಗೊಂಬೆ ಇಹರು ಮನ್ನೆಯರೆಲ್ಲ, ಅಡಿಯಿಂದ ಮುಡಿವರೆಗೆ ರಾಜ್ಯತಾಂತ್ರಿಕವಾದಿ, ಪರಿಚಾರಕರಿಂದ ಆಪ್ತ ಸಚಿವರು ಮತ್ತೆ ವಿಚಾರಕರದವರೆಗೆ ಉತ್ಕೋಚ ಗ್ರಹಣವಿದೆ. ಈ ಮಾತುಗಳ ಮೂಲಕ ವ್ಯಾಪಕ ಭ್ರಷ್ಟಾಚಾರವನ್ನು ತಿವಿದಿದ್ದಾರೆ.
ಮನುಷ್ಯ ಜೀವನಶೈಲಿಯು ಕೆಲವೊಂದು ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪರಿಸ್ಥಿತಿ ಬೇರೆಯಾದಂತೆ ಅವನಲ್ಲಿ ರೂಪುಗೊಂಡ ಮನಸ್ಸು ಬದಲಾಗುತ್ತದೆ. ಕೇವಲ ಅನುಕೂಲವಾದ ಪರಿಸ್ಥಿತಿಯಲ್ಲಿರುವವರೆಗೆ ಆ ವ್ಯಕ್ತಿಯ ಸ್ವರೂಪವು ಸ್ಪಷ್ಟವಾಗಿ ಕಂಡುಬರುವುದಿಲ್ಲ. ಹೊಸ ಸನ್ನಿವೇಶವನ್ನು ಎದುರಿಸಬೇಕಾದ ಕಾಲಕ್ಕೆ ಅವನಲ್ಲಿರುವ ಗುಣಗಳು ಚೆನ್ನಾಗಿ ಹೊರಬರುವವು. ಆದ್ದರಿಂದ ಪರಿಸ್ಥಿತಿಯೊಡನೆ ಹೋರಾಡುತ್ತಿರುವಾಗಲೇ ಮನುಷ್ಯನ ಸ್ವಭಾವ, ಮನೋಭಾವಗಳು ಆತನ ಗುಣಗಳು ಕಾಣಸಿಗಬಹುದು.
ಅಂತೆಯೇ ಅಂತಹ ಗುಣಗಳನ್ನು ನಾಡಿನ ರಾಜಕಾರಣಿಗಳಿಂದ ಅನೇಕ ಗುಣಗಳು ಹೊರಬಂದಿವೆ. `ಕೈ ಚಾಚುವದನ್ನು ಕಲಿಸಿಬಿಟ್ಟು ಬಿಡಿಸುವುದು ಸುಲಭವಲ್ಲ’. ಇದು ಪ್ರಜೆಗಳಿಗೆ,ಸರಕಾರಿ ಸೇವೆ ಸಲ್ಲಿಸಿರುವವರಿಗೆ, ಜನಪ್ರತಿನಿಧಿಗಳಿಗೆ ಈ ಮಾತು ಅನ್ವಯಿಸಿದೆ. ಆ ಕಾರಣದಿಂದ ಭ್ರಷ್ಟಾಚಾರ ಇಂದು ಬೀದಿಗೆ ಬಿದ್ದಿರುವುದನ್ನು ಕಾಣಬಹುದು.
ಭ್ರಷ್ಟಾಚಾರಿ ವಿರೋಧಿ ಭಾವನೆಯನ್ನು ಇಂದಿನ ಮಕ್ಕಳು ಮತ್ತು ಯುವಕರಲ್ಲಿ ಬೆಳೆಸಬೇಕು. ಇವುಗಳನ್ನು ಹೇಳಿದರೆ ಸಾಕಾಗುವುದಿಲ್ಲ. ಇದು ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ನೀರು ಸುರಿದಂತಲ್ಲ. ಶಾಲಾ ಕಾಲೇಜುಗಳಲ್ಲಿ ಭ್ರಷ್ಟಾಚಾರಿ ವಿರೋಧಿ ಕಾರ‍್ಯಕ್ರಮಗಳನ್ನು ಆಚರಿಸಬೇಕು. ಪ್ರಜಾಪ್ರಭುತ್ವದ ಆಳವಾದ ಜ್ಞಾನ ಕೊಡಬೇಕು.
ಪ್ರಜೆಗಳಲ್ಲಿ ಪ್ರಜಾಪ್ರಭುತ್ವದ ಆಳವಾದ ಪ್ರಜ್ಞೆ ಇಲ್ಲದೇ ಹೋದರೆ ಯಾವ ದೇಶವೂ ನಾಗರಿಕ ದೇಶ ಎನಿಸಿಕೊಳ್ಳುವುದಿಲ್ಲ. ಆ ನಾಗರಿಕ ದೇಶದ ನಾಗರಿಕರಿಂದ ಗಾಂಭೀರ್ಯ ಪ್ರಜ್ಞೆ ಬರುತ್ತದೆ. ಮನುಷ್ಯನಿಂದ ಈ ಪ್ರಜೆಯನ್ನು ತೆಗೆದುಬಿಟ್ಟರೆ ಮನುಷ್ಯ ಪಶುವಾಗುತ್ತಾನೆ. ಗಾಂಭೀರ್ಯ ಪ್ರಜ್ಞೆ ಮತ್ತು ಭ್ರಷ್ಟಾಚಾರ ಒಂದೇ ಕಡೆಗೆ ಇರಲಾರವು. ಆದ್ದರಿಂದ ಜನರು ಗಾಂಭೀರ್ಯ ಪ್ರಜ್ಞೆಯುಳ್ಳವರಾಗಿರಬೇಕು. ಆಗ ದೇಶ ಭ್ರಷ್ಟಾಚಾರಮುಕ್ತ ದೇಶವಾಗಲು ಸಾಧ್ಯ.