For the best experience, open
https://m.samyuktakarnataka.in
on your mobile browser.

ಬೀಳಲಿರುವ ಈ ಹನಿಗಳು

04:00 AM Aug 30, 2024 IST | Samyukta Karnataka
ಬೀಳಲಿರುವ ಈ ಹನಿಗಳು

ಯೂನಿಸೆಫ್‌ನ ಇತ್ತೀಚಿನ ಒಂದು ವರದಿಯ ಪ್ರಕಾರ ಜಗತ್ತಿನಲ್ಲಿ ಸುಮಾರು ೧೫೦ ದಶಲಕ್ಷ ಅನಾಥರಿದ್ದಾರೆ. ಇವರೆಲ್ಲ ಅನಾಥರಾದುದು ಮಾನವ ನಿರ್ಮಿತ ಯುದ್ಧ, ಹಿಂಸಾತ್ಮಕ ಗಲಭೆ, ದಂಗೆ, ನಿಸರ್ಗ ನಿರ್ಮಿತ ಪ್ರವಾಹ, ಭೂಕಂಪ ಮುಂತಾದ ದುರಂತಗಳಿಂದ. ಈ ರೀತಿ ಇರುವ ಅನಾಥರು ಅನಾದಿ ಕಾಲದಿಂದಲೂ ಸಮಾಜದಲ್ಲಿರುವುದು ನಾಗರಿಕ ಸಮಾಜದ ಗಮನಕ್ಕೆ ಬಂದೇ ಇಲ್ಲ.
ಕುರಾನಿನ ಅನೇಕ ಅಧ್ಯಾಯಗಳಲ್ಲಿ ಈ ಅನಾಥರ ಪಾಲನೆ, ಪೋಷಣೆ, ರಕ್ಷಣೆ ಕುರಿತು ಆದೇಶ ಉಪದೇಶ ಹಾಗೂ ಸಂದೇಶಗಳನ್ನು ವಿವರಿಸಲಾಗಿದೆ.
ಈ ವಚನಗಳನ್ನು ನೋಡಿ..
ಅಧ್ಯಾಯ ಅನ್ನಿಸಾ(೨), ಅನಾಥರ ಸೊತ್ತನ್ನು ಅವರಿಗೆ ಕೊಟ್ಟುಬಿಡಿ. ಅವರ ಸೊತ್ತನ್ನು ಸೇವಿಸಬೇಡಿ. ಇದೇ ಅಧ್ಯಾಯದ ೩೬, ೧೦, ೧೨೭ರ ವಚನಗಳಲ್ಲಿ ಅನಾಥರ ನಿರ್ಗತಿಕರ ಹಕ್ಕುಗಳನ್ನು ಮಾನ್ಯ ಮಾಡುತ್ತ ಸ್ಪಷ್ಟವಾದ ಆಜ್ಞೆಗಳನ್ನು ನೀಡಲಾಗಿದೆ. ಅನಾಥರು ವಿವಾಹ ವಯಸ್ಸಿನವರಾಗಲು ಯೋಗ್ಯರಾದಾಗ ಅವರ ಸಂಪತ್ತನ್ನು ಅವರಿಗೆ ಒಪ್ಪಿಸಿರಿ. ಅನಾಥರ ಸಂಪತ್ತನ್ನು ಅಕ್ರಮವಾಗಿ ಉಪಯೋಗಿಸುವವರನ್ನು ನರಕಾಗ್ನಿಗೆ ಎಸೆಯಲಾಗುವುದು. ಅನಾಥರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಅನಾಥರಿಗಾಗಿ ಖರ್ಚು ಮಾಡಿರಿ. ಅನಾಥರ ಹಿತಾಸಕ್ತಿಗಳನ್ನು ಪರಿಗಣಿಸಿ ಸಂಬಂಧಿಕರಾಗಿರುವ ನಾಥರನ್ನು ಪೋಷಿಸಿರಿ. ಅನಾಥರನ್ನು ಗದ್ದರಿಸಬೇಡಿರಿ. ಅನಾಥರನ್ನು ದೂರ ತಳ್ಳಬೇಡಿರಿ.
ಅನಾಥರನ್ನು ಸಹ ಗೌರವಿಸಿ, ಅನಾಥ ಹೆಣ್ಣು ಮಕ್ಕಳಿಗೆ ನ್ಯಾಯ ಪಾಲಿಸಿರಿ. ಇಂತಹ ಹಲವಾರು ಆಜ್ಞೆಗಳೊಂದಿಗೆ ಅನೇಕ ಸ್ಪಷ್ಟನೆಗಳನ್ನು ಕುರಾನ ನೀಡಿದೆ. `ಯಾವ ಮನೆಯಲ್ಲಿ ಅನಾಥನೊಬ್ಬನ ಪಾಲನೆ ಪೋಷಣೆ ನಡೆದಿದೆಯೋ ಆ ಮನೆ ಜಗತ್ತಿನ ಅತ್ಯಂತ ಶ್ರೇಷ್ಠವಾದ ಮನೆ.' ಅನಾಥರೆಂದರೆ ಅವರೆಲ್ಲ ಬೀಳಲಿರುವ ಹನಿಗಳ ಹಾಗೆ.. ಅವುಗಳಿಗೆ ನಾವು ಬೊಗಸೆಯೊಡ್ಡಿ ಸಾಗರದಂತಹ ಆಸರೆ ನೀಡಬೇಕೆಂಬುದೇ ಕುರಾನಿನ ಆಸೆ. ತಾವೇ ಅನಾಥರಾಗಿ ಬೆಳೆದು ಪ್ರವಾದಿವರ್ಯ ಮುಹಮ್ಮದ (ಸ)ಅವರು ತಮ್ಮ ಅನೇಕ ವಚನ (ಹದೀಸ)ಗಳಲ್ಲಿ ಇಂತಹ ಆಶಾ ಭಾವನೆಯನ್ನು ಹೊಂದಿದ್ದಾರೆ.
ಪ್ರವಾದಿವರ್ಯ ಮೊಹಮ್ಮದ್ (ಸ) ಅವರ ವಚನಗಳಂತೂ ಪದೇ ಪದೇ ಅನಾಥರ ಬಗ್ಗೆ ವಿವರಣೆಗಳು ಬರುತ್ತವೆ. ಯಾರು ಅನಾಥರನ್ನು ಪೋಷಿಸುತ್ತಾರೆಯೋ ಅಂಥವರು ನನ್ನೊಂದಿಗೆ ಸ್ವರ್ಗವನ್ನು ಪ್ರವೇಶಿಸುತ್ತಾರೆ. ಅನಾಥನೊಬ್ಬನ ತಲೆ ಸವರುತ್ತ, ಆತನ ಮೈದಡವುತ್ತಾನೋ ಅಂಥವನಿಗೆ ಅಲ್ಲಾಹನು ಅಪಾರ ಕರುಣೆಯನ್ನು ದಯಪಾಲಿಸುವನು.
ಇಸ್ಲಾಮಿ ವಿದ್ವಾಂಸರು ಸಹ ಅನಾಥರ, ನಿರ್ಗತಿಕರ ಕಾಳಜಿ ಪಾಲನೆ ಕುರಿತು ಹೇಳುತ್ತ ನೀವು ಒಬ್ಬ ಅನಾಥ ಮಗುವಿನ ಪ್ರಯೋಜಕರಾಗಿ ಪ್ರತಿ ತಿಂಗಳು ಜಕಾತಿನ ರೂಪದಲ್ಲಿ ಸಹಾಯ ಮಾಡಬಹುದು.
ಕುರಾನಿನ ಈ ವಚನ (೫:೨೩) ಅತ್ಯಂತ ಮಾರ್ಮಿಕವಾದದ್ದು. ಯಾರು ಒಂದು ಅನಾಥ ಮಗುವಿನ ಜೀವನವನ್ನು ರಕ್ಷಿಸುವರೋ ಅವರು ಇಡೀ ಮಾನವ ಕುಟುಂಬವನ್ನು ರಕ್ಷಿಸಿದಂತೆ. ಅನಾಥ ಮಕ್ಕಳಿಗೆ ಅವರ ತಂದೆ ತಾಯಿ ಕೊರತೆ ಆಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬನ ನಾಗರಿಕನ ಕರ್ತವ್ಯವಾಗಬೇಕೆಂದು ಕುರಾನಿನ ಆಸೆ.