ಬೆಳೆ ವಿಮೆ ಪರಹಾರ ಕೊಡಿಸಲು ಕೇಂದ್ರ ಕೃಷಿ ಸಚಿವರಿಗೆ ಬೊಮ್ಮಾಯಿ ಪತ್ರ
ಬೆಂಗಳೂರು: ಹಾವೇರಿ ಜಿಲ್ಲೆಯ ರೈತರ ಬೆಳೆ ವಿಮೆಯನ್ನು PMFBY ಅಡಿಯಲ್ಲಿ ಶೀಘ್ರವಾಗಿ ಇತ್ಯರ್ಥ ಪಡಿಸುವಂತೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶಿವರಾಜ್ ಸಿಂಗ್ ಚೌಹ್ವಾಣ್ ಅವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಸಂಸದ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ.
ನೀವು ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾಗಿ ನೇಮಕವಾಗಿರುವುದಕ್ಕೆ ತುಂಬು ಹೃದಯದ ಅಭಿನಂದನೆಗಳು ನಿಮಗೆ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಇರುವ ಅಪಾರ ಜ್ಞಾನದ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ.
ಕರ್ನಾಟಕದ ನನ್ನ ಲೋಕಸಭಾ ಕ್ಷೇತ್ರ ಹಾವೇರಿ ಜಿಲ್ಲೆಯ ರೈತರು 2023-24ನೇ ಸಾಲಿನ ಖಾರಿಫ್ ಹಂಗಾಮಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷ ಕಳೆದರೂ ಅವರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ ದೊರಕಿಲ್ಲ. ಹಾವೇರಿ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರವನ್ನು ವಿತರಿಸಲು ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, (RGICL) ಜವಾಬ್ದಾರಿಯನ್ನು ಹೊಂದಿದ್ದು, ಸದರಿ ಕಂಪನಿಯು ಕೆಲವೊಂದು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದು ಅವರ ಆಕ್ಷೇಪಣೆಗಳಿಗೆ ಜಿಲ್ಲಾ ಮಟ್ಟದ ಮೇಲ್ವಿಚಾರಣೆ ಸಮಿತಿಯು ಸಮರ್ಪಕ ಉತ್ತರವನ್ನು ಸಲ್ಲಿಸಿದೆ. ರಿಲಾಯನ್ಸ್ ಜನರಲ್ ಇನ್ಸುರೆನ್ಸ್ ಕಂಪನಿ ಎತ್ತಿರುವ ಆಕ್ಷೇಪಗಳು ನ್ಯಾಯಸಮ್ಮತವಾಗಿಲ್ಲ, ಅಲ್ಲದೇ ವಿಮೆ ಪರಿಹಾರ ನೀಡಲು ಅನಗತ್ಯ ವಿಳಂಬ ತಂತ್ರ ಅನುಸರಿಸುತ್ತಿರುವಂತೆ ಕಾಣಿಸುತ್ತಿದೆ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.