ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬೇಂದ್ರೆ… ಮರೆಯಲಾಗದ ಮುಗದ ಕೆರೆ

03:31 AM Oct 26, 2024 IST | Samyukta Karnataka

ಸಹಸ್ರಮಾನದ ಸಾವಿರದ ಕವಿ ಶಬ್ದ ಗಾರುಡಿಗ ಅಂಬಿಕಾತನಯದತ್ತರ ನಾಲ್ವತ್ತಮೂರನೆಯ ಪುಣ್ಯ ಸ್ಮರಣೆ ಅಂಗವಾಗಿ ಬೇಂದ್ರೆ ಮತ್ತು ಅವರ ಕಾವ್ಯದೊಂದಿಗೆ ಅವಿನಾಭಾವ ನಂಟು ಹೊಂದಿರುವ ಧಾರವಾಡ ಜಿಲ್ಲೆ ಮುಗದ ಕೆರೆ ದಡದಲ್ಲಿ ಇದೇ ೨೬ರಂದು (ಶನಿವಾರ) ವಿಶಿಷ್ಟ ಕವಿ ಸ್ಮರಣೆ ನಡೆಯಲಿದೆ.

ನರಬಲಿ' ಎನ್ನುವ ಕವಿತೆಯೊಂದನ್ನು ಕವಿ ದ.ರಾ.ಬೇಂದ್ರೆ ೧೯೩೦ರಲ್ಲಿ ರಚಿಸುತ್ತಾರೆ. ಕೆಲವು ಕಡೆ ಅದರ ವಾಚನವೂ ಆಗುತ್ತದೆ. ಓದುವಲ್ಲಿ, ಹಾಡುವಲ್ಲಿ ತಮ್ಮದೇ ಆದ ವಿಶಿಷ್ಟ ಧ್ವನಿ ಹೊಂದಿದ್ದ ಬೇಂದ್ರೆಯವರು ಹಲವಾರು ಸಭೆಗಳಲ್ಲಿ ಈ ಕವನ ವಾಚಿಸಿ ಅಥವಾ ಹಾಡಿ ಕಾವ್ಯಾಸಕ್ತರನ್ನು ಆಕರ್ಷಿಸಿರಲೂ ಸಾಕು. ನಂತರದಲ್ಲಿ ಇದು ೧೯೩೨ ರಲ್ಲಿ ಪ್ರಕಾಶಿತಗೊಂಡ ಅವರ "ಗರಿ" ಕವನ ಸಂಕಲನದಲ್ಲಿ ಸೇರ್ಪಡೆಯಾಗಿ ಕನ್ನಡಿಗರ ಕೈ ಸೇರಿತು. ಆಗ ಬ್ರಿಟಿಷ್ ಸರ್ಕಾರದ ದೃಷ್ಟಿಗೆ ಇದು ಬಿದ್ದು ಈ ಕವನ ಜನರನ್ನು ಸಾಮ್ರಾಜ್ಯಶಾಹಿಯ ವಿರುದ್ಧ ಹುರಿದೆಬ್ಬಿಸಲು ರಚಿಸಿದ್ದೆಂಬ ಆರೋಪದ ಮೇಲೆ ಧಾರವಾಡ ಬ್ರಿಟಿಷ್ ಅಧಿಕಾರಿಗಳು ೧೯೩೨-೩೩ರಲ್ಲಿ ಬೇಂದ್ರೆಯವರಿಗೆ ಶಿಕ್ಷೆ ವಿಧಿಸಿ ಹಿಂಡಲಗ ಜೈಲಿಗೆ ಕಳುಹಿಸುತ್ತಾರೆ. ಅದು ಸಾಮ್ರಾಜ್ಯಶಾಹಿ ಬ್ರಿಟಿಷ್ ಸರ್ಕಾರದ ವಿರುದ್ಧ ರಚಿಸಿದ ಕವಿತೆ ಎಂದು ಯಾರು ಆ ಕವನದ ವಿಶ್ಲೇಷಣೆ ಮಾಡಿ ಅಧಿಕಾರಿಗಳಿಗೆ ತಿಳಿಸಿದರೋ ಎನ್ನುವುದು ಇಂದಿಗೂ ಒಂದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ, ಇರಲಿ. ಈ ಕುರಿತು ತಮ್ಮ ಆತ್ಮ-ಕಥನದಲ್ಲಿ ಬೇಂದ್ರೆಯವರು ಬರೆದದ್ದನ್ನು ಗಮನಿಸಬೇಕು: ಗರಿ'ಯಲ್ಲಿ ನರಬಲಿ' ಎಂಬ ಒಂದು ಕವನವಿದೆ. ಅದು ಮೊದಲುಜಯಕರ್ನಾಟಕ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಕವನದ ಮೇಲೆ ಧಾರವಾಡದ ಆಗಿನ ಡಿಸ್ಟ್ರಿಕ್ಟ ಕಲೆಕ್ಟರರ ವಕ್ರದೃಷ್ಟಿ ಬಿದ್ದಿತ್ತು. ನಾನು ಆ ಕವನದಲ್ಲಿ "ಸ್ವಾತಂತ್ರ‍್ಯ ಯುದ್ಧವು ನರಬಲಿಯನ್ನು ಬೇಡುತ್ತದೆ ಎಂದು ಪ್ರತಿಪಾದಿಸುತ್ತಿದ್ದೇನೆ" ಎಂಬ ಭ್ರಮೆ ಹಿಡಿಯಿತು.
ಅಧಿಕಾರಿಗಳಿಗೆ ನಾನು ಹಿಂಸಾತ್ಮಕ ಚಳವಳಿಗೆ ಪ್ರಚೋದನೆ ಕೊಡತಕ್ಕವನೆಂಬ ಸಂಶಯ ಹುಟ್ಟಿಕೊಂಡಿತು. ಸಾಹಿತ್ಯ-ಸಂಸ್ಕೃತಿ ಚಳವಳಿ ಮಾಡುವ ಒಬ್ಬ ಬಡ ಶಾಲಾ ಮಾಸ್ತರನು ನಿಜವಾಗಿ ಇಷ್ಟು ಉಗ್ರನಾಗಲು ಧೈರ್ಯ ಪಡಲಾರ ಎಂಬ ಭಾವ ಅವರಿಗೆ ಇದ್ದರೂ, ಕಾವ್ಯದಿಂದ ಇವನು ಕುಚೋದ್ಯ ಮಾಡುತ್ತ ಇರಬೇಕು ಎಂಬ ಗೃಹಿಕೆಯಿಂದ ಅವರು ನನ್ನನ್ನು ಶಿಕ್ಷೆಗೆ ಗುರಿಮಾಡಿ, ಬೇರೆ ಸಾಹಿತಿಗಳಿಗೆ ಪಾಠ ಕಲಿಸಬೇಕೆಂದು ಛಲ ತೊಟ್ಟಂತೆ ತೋರಿತು. ಇದರಿಂದ ರಾಜಕೀಯ ಪರಿಣಾಮ ಏನಾಯಿತೋ ನಾನು ಹೇಳಲಾರೆ. ಆದರೆ, ನನ್ನ ಮಟ್ಟಿಗೆ ನಾನು, ೧೯೩೨ ರಿಂದ ೧೯೪೧ರ ವರೆಗಿನ ವನವಾಸ ಭೋಗಿಸಿದಂತೆ ತೊಳಲಾಡಬೇಕಾಯಿತು. ಈ ತಾಪವನ್ನು ನಾನು ಸಾಕಷ್ಟು ಸಹನೆಯಿಂದ ಸ್ವೀಕರಿಸಿದ್ದರಿಂದ ನನ್ನ ಸತ್ವವೃದ್ಧಿಯಾಯಿತು."
ಮೇಲಿನ ಅವರ ಆತ್ಮಕಥನದ ಭಾಗವನ್ನು ಓದಿದಾಗ ಕರಳು ಚುರಕ್ ಎನ್ನುತ್ತದೆ. ಹಿಂಡಲಗಿ ಜೈಲಿನಲ್ಲಿ ಬೇಂದ್ರೆಯವರನ್ನು ಇಟ್ಟರು. ಅಲ್ಲಿಯೂ ಕೂಡ ಓದು, ಕಾವ್ಯ ರಚನೆ ಪ್ರಾರಂಭವಾಯಿತು. ಅಲ್ಲಿದ್ದ ಕೈದಿಗಳು ಸಹ ಇವರ ಮಾತು, ಕವಿತೆಯ ಓದು ಆಲಿಸಲು ಸೇರುತ್ತಿದ್ದರಂತೆ. ಅಲ್ಲಿ ಬೇಂದ್ರೆಯವರು ಆಗಲೇ ಅಲ್ಲಿದ್ದ ಜೋಗ ಎನ್ನುವವರಿಗೆ ದಾಸಬೋಧೆ' ಯನ್ನು ಓದಿ ಹೇಳುತ್ತಿದ್ದರೆಂದು ಡಾ.ವಾಮನ ಬೇಂದ್ರೆ ಬರೆಯುತ್ತಾರೆ. ಅವರ ಸಮಗ್ರ ಕವನ ಸಂಕಲನಗಳನ್ನು ಅಂದರೆ ಡಾ.ವಾಮನ ಬೇಂದ್ರೆಯವರು ಸಂಪಾದಿಸಿದಔದುಂಬರ ಗಾಥೆ' ಮತ್ತು ಬಿಡಿ ಕವನ ಸಂಕಲನಗಳನ್ನು ನಾನು ಕೂಲಂಕಷವಾಗಿ ಪರಿಶೀಲಿಸಿ ನೋಡಿದಾಗ ಹಿಂಡಲಗಿ ಜೈಲಿನಲ್ಲಿ ಬರೆದ ಮೂರು ಕವಿತೆಗಳು ನನ್ನ ಕಣ್ಣಿಗೆ ಬಿದ್ದವು. ಬಹುಶಃ ಇನ್ನೂ ಸಾಕಷ್ಟು ಕವಿತೆಗಳನ್ನು ಅವರು ಜೈಲಿನಲ್ಲಿ ಬರೆದಿರಲು ಸಾಕು. ಅದರಲ್ಲಿ ಒಂದು ಕವಿತೆ "ಇದೊ ಪಂಜರ (ರಚನೆ : ೨೫.೦೭.೧೯೩೨ ನಾದಲೀಲೆ ಕವನ ಸಂಕಲನ.) ದಲ್ಲಿ ಬರುವ ಸಾಲುಗಳು ಜೈಲಿನ ವಾತಾವರಣ ಮತ್ತು ಕವಿಯ ಮನಸ್ಥಿತಿಯ ನೈಜ ಚಿತ್ರಣ ಕಣ್ಣ ಮುಂದೆ ಬರುವಂತೆ ಮಾಡುತ್ತವೆ:
" ಇದೊ ಪಂಜರ ಅದೊ
ಮುಗಿಲು!
ಒಂದು ಕಿರಿದು ಒಂದಗಲು!
ಅಲ್ಲಿ ಇರುಳಿನಲ್ಲಿ ಬೆಳಗು"
ಎಂದು ಹೇಳುತ್ತಾ ಕೊನೆಯಲ್ಲಿ ಹೇಳುತ್ತಾರೆ:
" ಸಂಕಟಗಳದದು ಮಾಲೆ;
ಹರಿಯ ಕಲಿಸಲಿದು ಶಾಲೆ.
ಆ ತಿಳಿವಿಗೆ ಇಲ್ಲಿ ಹಗಲು"
ಜೈಲು ಸಂಕಟಗಳ ಮಾಲೆ. ಅದು ನಮ್ಮನ್ನು ನಾವು ಅರಿತುಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎನ್ನುವುದರ ಕಲ್ಪನೆ ನೀಡುತ್ತದೆ. ಜೈಲು ಒಂದು ಕತ್ತಲು. ಹಗಲಾಗುವುದು ರಾತ್ರಿ ದೀಪ ಹಚ್ಚಿದಾಗ ಮಾತ್ರ ಎನ್ನುವ ಸತ್ಯ, ಅಲ್ಲಿರುವ ನೊಣ, ನೊರಜು, ಸೊಳ್ಳೆಗಳ ಕಾಟ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೇಗೆ ಹಾಳು ಮಾಡುತ್ತದೆ ಎನ್ನುವುದನ್ನು ಈ ಕವಿತೆ ನಮ್ಮ ಅಂದಿನ ಅವರ ಜೈಲುವಾಸ ತಿಳಿಸುತ್ತದೆ. ಜೈಲು ಒಂದು ಪಂಜರ. ಅದು ಕಿರಿದು. ಹೊರಗಿನ ಮುಗಿಲು ಹಿರಿದಾದದ್ದು ಎನ್ನುವ ಅನುಭವವನ್ನು ನೀಡುತ್ತದೆ.
"ಕಾಣುವ ಕಣ್ಕಟ್ಟಿಲ್ಲ" ಎನ್ನುವ ಇನ್ನೊಂದು ಕವಿತೆಯಲ್ಲಿ ಇಲ್ಲಿ ಇನಿಸು ದಣಿವಿಲ್ಲ! ಮಣಿಹವಿಲ್ಲ ತಣಿವಿಲ್ಲ' ಎನ್ನುವ ಸಾಲುಗಳು ಬರುತ್ತವೆ. ಜೈಲಿನಲ್ಲಿ ಏನೂ ಕೆಲಸ ಅಥವಾ ಕಾರ್ಯಭಾರ ಇಲ್ಲ. ಆದರೆ ತೃಪ್ತಿಯೂ ಇಲ್ಲ. ಸಮಾಧಾನವೂ ಇಲ್ಲ ಎನ್ನುವುದನ್ನು ಗಮನಿಸಬಹುದಾಗಿದೆ. ೦೧.೦೮.೧೯೩೨ ರಂದು ಬರೆದಅದುವರೆಗೂ' ಕವಿತೆಯಲ್ಲಿ "ಜೀವ ಬೇಯುತಿರುವನು" ಎನ್ನುವ ಸಾಲು ಬರುತ್ತದೆ. ಆದರೆ ಎಲ್ಲದಕ್ಕೂ ತಾಳ್ಮೆ ಬೇಕು ಎಂದುಕೊಳ್ಳುತ್ತಾರೆ.
ಮುಂದೆ ಕೆಲ ದಿನಗಳಲ್ಲಿ ಬೇಂದ್ರೆಯವರ ಕಕ್ಕನವರ ಆರೋಗ್ಯ ಕೆಟ್ಟದ್ದರಿಂದ ಅವರು ಜೈಲಿನಿಂದ ಹೊರಬರುತ್ತಾರೆ. ಆದರೆ ಬ್ರಿಟಿಷ್ ಸರ್ಕಾರ ಅದುವರೆಗೂ ಜೈಲು ಕೈದಿಯಾಗಿದ್ದ ಅವರನ್ನು ನಜರು ಕೈದಿಯನ್ನಾಗಿ ಮಾಡಿ ನಜರುಬಂದಿ, ಸ್ಥಾನಬದ್ಧತೆಯಲ್ಲಿ ಇರಬೇಕಾದವರು ಎಂದು ಪರಿಗಣಿಸಿ ಧಾರವಾಡಕ್ಕೆ ಹತ್ತು ಕಿಮೀ ದೂರದಲ್ಲಿರುವ ಮುಗದ ಗ್ರಾಮದ ಒಂದು ಮನೆಯಲ್ಲಿ ಇಡುತ್ತದೆ. ಊರಿನ ಹಿರಿಯರು ನಾನು ಮತ್ತು ಸ್ನೇಹಿತರು ಇತ್ತೀಚೆಗೆ ಮುಗದಕ್ಕೆ ಹೋದಾಗ ಆ ಮನೆ ಅಂದಿನ ಹಿರಿಯರು ಆಗಿದ್ದ ತಿಪ್ಪಣ್ಣ ಹುಲಕೊಪ್ಪ ಎಂಬುವವರಿಗೆ ಸೇರಿದ್ದು ಎಂದು ಗೊತ್ತಾಯಿತು. ಮೊದಮೊದಲಿಗೆ ಅವರನ್ನು ಭೆಟ್ಟಿಯಾಗಲೂ ಯಾರೂ ಬರುತ್ತಿರಲಿಲ್ಲ. ಗ್ರಾಮಸ್ಥರು ಮತ್ತು ಹೊರಗಿನವರು ಅವರನ್ನು ಭೇಟಿಯಾಗಲು ಏನಾದರೂ ಕಾಯಿದೆ ಕಟ್ಟಳೆ ಇರಬಹುದೆಂದು ಹೆದರಿದ್ದರು. ಆದರೆ ಬರಬರುತ್ತ ಧಾರವಾಡದ ಗೆಳೆಯರ ಗುಂಪಿನ ಸದಸ್ಯರು, ಖಾಸಾ ಸ್ನೇಹಿತರು ಮತ್ತು ಗ್ರಾಮಸ್ಥರು ಅವರ ಮಾತು, ಕವಿತಾ ವಾಚನ ಕೇಳಲು ಕಾತರರಾಗಿದ್ದರು. ಅಲ್ಲಿಯ ನಯನ ಮನೋಹರ ಕೆರೆ, ಕೆರೆಯ ದಂಡೆಯ ಮೇಲಿನ ದುರ್ಗಾದೇವಿ ದೇವಾಲಯ ಅವರು ನಿತ್ಯ ಕೂಡುವ, ಧ್ಯಾನಿಸುವ, ಗದ್ಯ ಪದ್ಯ ಬರೆಯುವ ಪುಣ್ಯಸ್ಥಳವಾಗಿತ್ತು. ಧಾರವಾಡದಿಂದ ಹೋಗುತ್ತಿದ್ದ ಸಮಾನಮನಸ್ಕ ಗೆಳೆಯರ ಕೂಡ ಸಹ ಬೇಂದ್ರೆಯವರು ಇಲ್ಲಿಯೇ ಮಾತನಾಡುತ್ತಾ ಕುಳಿತುಕೊಳ್ಳುತ್ತಿದ್ದರು. ಅವರು ಅಲ್ಲಿದ್ದಾಗ ಬರೆದ ಒಟ್ಟು ಕವಿತೆಗಳು ಏಳು. ಇನ್ನೂ ಹೆಚ್ಚು ಬರೆದಿರುವ ಸಾಧ್ಯತೆಯೂ ಇದೆ. ಆದರೆ ರಚನೆಯ ದಿನಾಂಕ ಮತ್ತು ಇಸ್ವಿ ಗಣನೆಗೆ ತೆಗೆದುಕೊಂಡು ನೋಡಿದಾಗ ಸಿಕ್ಕಿದ್ದು ಏಳು. ಅವುಗಳೆಂದರೆ: ಮಲ್ಲಾಡದ ಗಿಣಿಯೆ, ಸಚ್ಚಿದಾನಂದ, ನಾದಲೀಲೆ, ನಾನು ಬಡವಿ, ಮನುವಿನ ಮಕ್ಕಳು, ಹೆಣದ ಹಿಂದೆ.
ಭಾವಗೀತ: ಭಾವಗೀತ' ಕವಿತೆ ಕನ್ನಡ ಕಾವ್ಯಲೋಕದಲ್ಲಿ ಅತೀ ಹೆಚ್ಚು ವಿಶ್ಲೇಷಣೆಗೆ ಒಳಗಾದ ಕವಿತೆ. ಮೊದಲ ಸಾಲುಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ' ಅವರಿಗೆ ಮುಗದದಲ್ಲಿ ಸ್ವಪ್ನದಲ್ಲಿ ದೊರಕಿದ್ದು. ಅದನ್ನು ಮುಗದದ ದುರ್ಗಾದೇವಿ ಕರುಣಿಸಿದ್ದು ಎಂದು ಕೆಲವರು ಅಭಿಪ್ರಾಯಪಡುತ್ತಾರೆ. ಮುಗದದ ಈ ಏಳೂ ಕವಿತೆಗಳು ಕವಿಯ ಮುಗದ ವಾಸ್ತವ್ಯದ ಹಾಗೂ ಕವಿಯ ಕಾವ್ಯ ಬೆಳವಣಿಗೆಯ ಅಭ್ಯಾಸ ಮಾಡಲು ಅತ್ಯಂತ ಸಹಕಾರಿಯಾಗಿವೆ. ೧೯೩೭ರಲ್ಲಿ ಪ್ರಕಟವಾದ ಅವರ ಕವನ ಸಂಕಲನ `ಸಖೀಗೀತ' ದಲ್ಲಿ ಹಿಂಡಲಗಿ ಮತ್ತು ಮುಗದದ ಕುರಿತು ಬೇಂದ್ರೆಯವರು ಬರೆಯುತ್ತಾರೆ :
" ನರಬಲಿ ಕವನವು
ಬಲಿಮಾಡಿತೆನ್ನನು
ಹೆಳವನಿದ್ದಲ್ಲಿಗೆ ಹೊಳೆ
ಬಂದಿತು
ಮನೆಯನು ಮುರಿದಿತು
ಹಾರು ವಿಹಂಗಮ !
ಜಂಗಮ-ದೀಕ್ಷೆಯು
ನಿನಗೆಂದಿತು.
ಪ್ರಾಣದ ಒಗರಷ್ಟು
ಹಿಂಡಿತು ಹಿಂಡಲಿಗೆ
ಮುಗದದ ಮಲೆಗಾಳಿ
ಮುಂದೆಳೆದಿತು".
ಸ್ಥಾನಬದ್ಧತೆ (ನಜರುಬಂದಿ) ಅವಧಿ ಮುಗಿದ ಮೇಲೂ ಅವರಿಗೆ ಕೊನೆಯವರೆಗೂ ಮುಗದದ ನಂಟು, ಪ್ರೀತಿ ಕಡಿಮೆಯಾಗಲಿಲ್ಲ. ಅವರ ಮನೆಯ ಅಕ್ಕ ಪಕ್ಕದಲ್ಲಿ ಇದ್ದವರು, ಊರಿನ ಹಿರಿಯರು ಆಗಾಗ ಬಂದು ಹೋಗುತ್ತಿದ್ದರಂತೆ. ಅವರೂ ಪ್ರತಿ ಮಂಗಳವಾರ (ಧಾರವಾಡ ಸಂತಿಯ ವಾರ) ಸಾಧನಕೇರಿ ಮನೆಯ ಗೇಟಿನ ಹತ್ತಿರ ನಿಂತು ಮುಗದದ ಜನರಿಗಾಗಿ ಕಾಯುತ್ತಿದ್ದರಂತೆ. ಮುಗದದ ಹಿರಿಯರು ತಮ್ಮ ಹಿರಿಯರು ಬೇಂದ್ರೆಯವರ ಕುರಿತು ಹೇಳುತ್ತಿದ್ದದ್ದನ್ನು ಈಗಲೂ ಖುಷಿಯಿಂದ ಹಂಚಿಕೊಳ್ಳುತ್ತಾರೆ. ಇದನ್ನೆಲ್ಲವನ್ನು ಗಮನದಲ್ಲಿರಿಸಿಕೊಂಡು ಧಾರವಾಡದ ಜಿ. ಬಿ. ಮೆಮೋರಿಯಲ್ ಟ್ರಸ್ಟ್, ಸಕ್ರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್, ಕುರ್ತಕೋಟಿ ಟ್ರಸ್ಟ್ ಮತ್ತು ಮುಗದದ ಗ್ರಾಮಪಂಚಾಯತಿ ಮತ್ತು ಊರಿನ ಅನೇಕ ಸಂಘಟನೆಗಳ ಸಹಕಾರದೊಂದಿಗೆ ಬೇಂದ್ರೆಯವರ ೪೩ ನೆಯ ಪುಣ್ಯಸ್ಮರಣೆಯನ್ನು ಮುಗದದಲ್ಲಿಯ ಕೆರೆ ದಂಡೆಯ ಮೇಲಿರುವ ದುರ್ಗಾದೇವಿ ಸನ್ನಿಧಾನದಲ್ಲಿ ಆಚರಿಸಲಾಗುತ್ತಿದೆ.

Next Article