ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸೈಲ್ ದೋಷಿ
ಕಾರವಾರ: ಬೆಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಸತೀಶ್ ಸೈಲ್ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ಶುಕ್ರವಾರ ಘೋಷಣೆ ಮಾಡಲಿದೆ.
ಬೆಲಿಕೇರಿ ಅದಿರು ನಾಪತ್ತೆ ಪ್ರಕರಣದ ೬ ಪ್ರಕರಣಗಳಲ್ಲಿ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಈ ಪ್ರಕರಣಗಳ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಮೊದಲ ಮೂರು ಪ್ರಕರಣದಲ್ಲಿನಲ್ಲಿ ತೀರ್ಪು ನೀಡಿದ್ದು, ಶಾಸಕ ಸತೀಶ್ ಸೈಲ್ ಸೇರಿದಂತೆ ಎಲ್ಲಾ ಆರೋಪಿಗಳು ದೋಷಿಗಳು ಎಂದು ೮೨ನೇ ಸಿಸಿಹೆಚ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಗಜಾನನ ಭಟ್ ತೀರ್ಪು ನೀಡಿದ್ದಾರೆ. ಇನ್ನು ತೀರ್ಪು ಹೊರ ಬಿಳುತ್ತಿದ್ದಂತೆ ಪೊಲೀಸ್ ಕಷ್ಟಡಿಗೆ ಪಡೆಯದಂತೆ ಆರೋಪಿಗಳ ಪರ ವಕೀಲರು ಮನವಿ ಮಾಡಿದ್ದರು. ಆದರೆ ಒಮ್ಮೆ ತೀರ್ಪು ನೀಡಿದ ಬಳಿಕ ಅವಕಾಶ ಇಲ್ಲ ಎಂದಿರುವ ನ್ಯಾಯಾಲಯ ಆರೋಪಿಗಳನ್ನು ಕಷ್ಟಡಿಗೆ ಪಡೆಯಲು ಸೂಚನೆ ನೀಡಿದೆ.
ಏನಿದು ಪ್ರಕರಣ?
೨೦೦೯ರಿಂದ ೨೦೧೦ರ ಮೇ ತಿಂಗಳವರೆಗೆ ಬೇಲಿಕೇರಿ ಬಂದರಿನ ಮೂಲಕ ಸುಮಾರು ೮೮.೦೬ ಲಕ್ಷ ಮೆಟ್ರಿಕ್ ಟನ್ ಅದಿರು, ೭೩ ರಫ್ತು ಕಂಪನಿಗಳ ಮೂಲಕ ವಿದೇಶಕ್ಕೆ ಹೋಗಿತ್ತು ಎಂಬುದನ್ನು ಸಿಇಸಿ ವರದಿಯಲ್ಲಿ ಪಟ್ಟಿ ಮಾಡಲಾಗಿತ್ತು. ಇಷ್ಟು ಪ್ರಮಾಣ ಅದಿರುವು ರಫ್ತಾಗಿದ್ದರೂ, ಕೇವಲ ೩೮.೨೨ಲಕ್ಷ ಮೆಟ್ರಿಕ್ ಟನ್‌ನಷ್ಟು ಅದಿರಿಗೆ ಮಾತ್ರವೇ ಅದಿರು ಕಳುಹಿಸಲು ಪರವಾನಗಿ (ಎಂಡಿಪಿ)ಯನ್ನು ಪಡೆಯಲಾಗಿತ್ತು. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಬಿಐ ಸುಮಾರು ೫೦ ಲಕ್ಷ ಮೆಟ್ರಿಕ್‌ನಷ್ಟು ಅದಿರು ಅಕ್ರಮವಾಗಿ ವಿದೇಶಗಳಿಗೆ ಹೋಗಿತ್ತು ಎಂಬುದನ್ನು ತನಿಖೆ ವೇಳೆ ಕಂಡುಕೊಳ್ಳಲಾಗಿತ್ತು. ರಫ್ತಾಗಿರುವ ಅದಿರನಲ್ಲಿ ೭.೨೩ ಲಕ್ಷ ಮೆಟ್ರಿಕ್ ಟನ್ ಅದಿರನ್ನು ಕಳುಹಿಸಿರುವುದು ಸತೀಶ್ ಸೈಲ್ ಒಡೆತನದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿ. ಎಂಬ ಬಗ್ಗೆ ಆರೋಪ ಇತ್ತು. ಜುಂಜುನ್‌ಬೈಲ್ ಸ್ಟಾಕ್‌ಯಾರ್ಡ್ ಸೇರಿದಂತೆ ಇತರೆ ಅದಿರು ಸಾಗಣೆದಾರರ ಜತೆ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ನಿಕಟ ವ್ಯವಹಾರ ನಡೆಸಿತ್ತು ಎಂಬುದಕ್ಕೆ ಸಿಬಿಐ ತನಿಖಾ ತಂಡ ದಾಖಲೆಗಳನ್ನು ಕಲೆ ಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.