ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬೈಗುಳ ಸಂಹಿತೆ

03:58 AM Oct 30, 2024 IST | Samyukta Karnataka

ವಿಶಾಲು ಕಿಟಕಿ ಆಚೆ ನೋಡುತ್ತಾ ಹೇಳಿದಳು.
“ನೋಡ್ರಿ ಆ ಎದುರು ಮನೆ ಮೀನಾಕ್ಷಿ ಮಗ, ಆ ಕತ್ತೆ ಸ್ಕೂಲ್‌ಗೆ ಹೋಗೋಕೇ ತಕರಾರು, ಈ ಸಲ ಅವ್ನು ಎಸ್.ಎಸ್.ಎಲ್.ಸಿ.ಗೆ ಕಟ್ಟಿದ್ದಾನೆ. ಶಾಲೆಗೆ ಹೋಗೋ ಅಂದ್ರೆ ಹೋಗಲ್ಲ ಅಂತಿದ್ದಾನೆ ಗೂಬೆ.”
“ಹೋಲ್ಡಾನ್, ಹೋಲ್ಡಾನ್, ವಿಶಾಲು”
ನಾನು ದಿನ ಪತ್ರಿಕೆಯಲ್ಲಿದ್ದ ಸುದ್ದಿ ತೋರಿಸಿ ಎಚ್ಚರಿಸಿದೆ.
“ನೋಡಿ ವಿಶಾಲು, ಸರ್ಕಾರ ಬಿಹಾರದಲ್ಲಿ ಹೊಸ ಕಾನೂನು ತಂದಿದೆ, ಆ ಕಾನೂನು ಪ್ರಕಾರ ನಾವು ಕತ್ತೆ, ಒಂಟೆ, ಗೂಬೆ ಅಂತ ವಿದ್ಯಾರ್ಥಿಗಳಿಗೆ ಬೈದ್ರೆ ಶಿಕ್ಷೆ ಆಗುತ್ತೆ” ಎಂದೆ.
“ಬಿಹಾರ್‌ನಲ್ಲಾ? ಅದೆಂತ ಕಾನೂನು?” ಕೇಳಿದಳು ವಿಶಾಲು.
“ಬಿಹಾರ್ ಸರ್ಕಾರಿ ಶಾಲೆಗಳಲ್ಲಿ, ಮೇಸ್ಟ್ರುಗಳು ವಿದ್ಯಾರ್ಥಿಗಳನ್ನ ಕತ್ತೆ ಅಂತ ಬೈತಾ ಇದ್ರು, ಎತ್ತರಕ್ಕೆ ಇರೋ ಹುಡುಗನ್ನ ಒಂಟೆ ಅಂತಾ ಇದ್ರು, ಸೋಮಾರಿಗಳ್ನ ಎಮ್ಮೆ ಅಂತಾ ಇದ್ರು, ಈ ರೀತಿ ಬೈಯ್ಯೋ ಹಾಗಿಲ್ಲ ಅಂತ ಸರ್ಕಾರ ಕಾನೂನೇ ಹೊರಡಿಸಿದೆ. ಶಾಲೇಲಿ ಬೈದರೆ ಶಿಕ್ಷಕರಿಗೇ ಶಿಕ್ಷೆ” ಎಂದು ಪತ್ರಿಕೆ ತೋರಿಸಿದೆ.
“ಶಾಲಾ ಮಕ್ಕಳು ತಪ್ಪು ಮಾಡಿದಾಗ ಹೊಡೆಯದೆ, ಬೈಯದೆ ಅವರನ್ನ ಮುದ್ದಿಸೋಕೆ ಆಗುತ್ತಾ? ಹ್ಯಾಗೆ ವಿದ್ಯಾರ್ಥಿಗಳನ್ನ ಕಂಟ್ರೋಲ್‌ಗೆ ತರೋದು?” ಎಂದಳು.
“ನೋಡಿ ವಿಶಾಲು, ಬಿಹಾರದ ಕತೆ ಹೇಳೋದಾದ್ರೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಕಟ್ಟು ನಿಟ್ಟಿನ ಮಾರ್ಗ ಸೂಚನೆಗಳನ್ನ ಕಳೆದ ವಾರ ಹೊರಡಿಸಿದೆ. ಕತ್ತೆ ಅಂದ್ರೆ, ಒಂಟೆ ಅಂದ್ರೆ ಟೀಚರ್ ಮೇಲೆ ಆ್ಯಕ್ಷನ್ ತಗೊಳ್ತಾರೆ”
“ಕತ್ತೆಗೂ ದುಃಖ ಆಗುತ್ತೆ, ಇಂಥ ಅಯೋಗ್ಯನ್ನ ನನಗೆ ಹೋಲಿಸಿದರಲ್ಲಾ ಅಂತ ಬೇಸರಿಸುತ್ತೆ” ಎಂದು ಕಾಮಿಡಿ ಮಾಡಿದ ವಿಶ್ವ, “ಎಷ್ಟೋ ಸಲ ನನಗೆ ನಾನೇ ಕತ್ತೆ ನನ್ಮಗ ಅಂತ ಗಟ್ಟಿಯಾಗಿ ಬೈದುಕೊಳ್ತೀನಿ. ಅದು ಓಕೇನಾ? ಎಂದು ಕೇಳಿದ.
“ಸೆಲ್ಫ್ ಅಸೆಸ್ಮೆಂಟ್ ಪ್ರಾಮಾಣಿಕವಾಗಿರುತ್ತೆ, ಅದು ಓಕೆ” ಎಂದೆ.
“ಈ ಕಾನೂನು ಹ್ಯಾಗ್ ಬಂತು?” ವಿಶಾಲು ಕೇಳಿದಳು.
“ಪೇರೆಂಟ್ಸು ಸರ್ಕಾರಕ್ಕೆ ಕಂಪ್ಲೇಟ್ ಮಾಡಿದ್ದಾರೆ, ನಮ್ಮ ಮಕ್ಕಳನ್ನ ಇಲ್ಲಿನ ಶಿಕ್ಷಕರು ಹೀಗೆಲ್ಲಾ ಬೈತಾ ಇದ್ದಾರೆ ಅಂತ. ಆಗ ಸರ್ಕಾರ ಎಚ್ಚೆತ್ತುಕೊಳ್ತು, ಬಾಲ್ಯದಲ್ಲೇ ಬೈಗುಳ ಕೇಳಿದರೆ ದೊಡ್ಡವರಾಗಿ ರಾಜಕಾರಣಕ್ಕೆ ಬಂದಾಗ ಅದನ್ನೇ ಪ್ರಯೋಗಿಸ್ತಾರೆ. ಇದನ್ನು ಮೊಗ್ಗಲ್ಲೇ ಚಿವುಟಬೇಕು ಅಂತ ಕಾನೂನು ಜಾರಿ ಮಾಡ್ತು” ಎಂದೆ.
“ಅದೇ ಪೇರೆಂಟ್ಸ್ ತಮ್ಮ ಮಕ್ಕಳಿಗೆ ಮನೇಲಿ ಕೋತಿ ನನ್ಮಗ ಅಂತ ಬೈಯೋದಿಲ್ವಾ?” ಎಂದು ವಿಶ್ವ ಕೇಳಿದ.
“ಕೋತಿ ನನ್ಮಗ ಅಂದಾಗ ಪೇರೆಂಟ್ಸ್ ಅರ‍್ನೇ ಕೋತಿ ಅಂತ ಬೈಕೊಳ್ತಾರೆ, ಅದು ಸರಿ” ಎಂದೆ
“ಸರ್ಕಾರ ಏನೆಲ್ಲ ಕಾನೂನು ರ‍್ತಾ ಇದೆ, ಮಕ್ಕಳನ್ನ ಮಾತಾಡ್ಸೋ ಹಾಗೇ ಇಲ್ವಾ ನಾವು? ನಾವು ಚಿಕ್ಕ ಮಕ್ಕಳಾಗಿದ್ದಾಗ ಬೆತ್ತದ ಏಟು ನಮ್ಮ ಮೇಲೆ ಒಳ್ಳೆ ಪರಿಣಾಮ ಬರ‍್ತಾ ಇತ್ತು, ಕೆಲವು ಸಲ ನಮ್ಮ ಗಣಿತ ಮೇಸ್ಟ್ರು ಹೆಂಗ್ ಹೊಡಿತಾ ಇದ್ರು ಅಂದ್ರೆ ಊಟಾನೇ ಮಾಡೋಕ್ ಆಗ್ತಾರ‍್ಲಿಲ್ಲ, ಬೆರಳುಗಳೆಲ್ಲ ಊದ್ಕೊಂಡ್ ಬಿಡೋದು” ಎಂದ ವಿಶ್ವ. ಗಂಡನ ಮಾತನ್ನು ಒಪ್ಪಿದ ವಿಶಾಲು ತನ್ನ ಶಾಲೆಯ ಬಗ್ಗೆ ಹೇಳೋಕೆ ಶುರು ಮಾಡಿದಳು.
“ಅದು ನಿಜ. ನಮಗಂತೂ ಇನ್ನೂ ದೊಡ್ಡ ಶಿಕ್ಷೆ, ಶಾಲಾ ಗಿಡಗಳಿಗೆ ಒಂದು ಮೈಲಿ ದೂರದಿಂದ ನೀರು ತರಬೇಕಿತ್ತು, ತಪ್ಪು ಮಾಡಿದವರಿಗೆ ನೀರು ತರೋದೇ ಶಿಕ್ಷೆ ಆಗಿತ್ತು” ವಿಶಾಲು ತನ್ನ ವಿದ್ಯಾರ್ಥಿ ಕಾಲದ ಕಷ್ಟವನ್ನು ಹೇಳಿದಳು.
“ಈಗ ಆ ರೀತಿ ಇಲ್ವೇ, ವಿದ್ಯಾರ್ಥಿಗಳ ಕೈಯಲ್ಲಿ ನೀರು ರ‍್ಸೋ ಹಾಗಿಲ್ಲ, ಕಸ ಗುಡ್ಸೋ ಹಾಗಿಲ್ಲ, ಯಾವುದೋ ಶಾಲೆಯಲ್ಲಿ ಡಸ್ಟರ್ ತಗೊಂಡು ಬ್ಲ್ಯಾಕ್ ಬೋರ್ಡ್ ಒರೆಸು ಅಂತ ವಿದ್ಯಾರ್ಥಿಗೆ ಹೇಳಿದ್ದು ಪೊಲೀಸ್ ಕೇಸ್ ಆಗಿ ಕೂತಿದೆ” ಎಂದೆ. ವಿಶ್ವ ಬೇಸರದಿಂದ ಪೇಚಾಡಿದ.
“ನಮ್ಮ ಕಾಲ್ದಲ್ಲಿ ತಿಂಗಳಿಗೆ ಒಂದು ಸಲ ಶ್ರಮದಾನ ಅಂತ ಸ್ವಚ್ಛತಾ ಕಾರ್ಯಕ್ರಮ ಇಟ್ಕೊಳ್ತಾ ಇದ್ವಿ, ಶಾಲೆಯ ಸುತ್ತ ಬೆಳೆದಿರೋ ಪಾರ್ಥೇನಿಯಂ ಗಿಡಗಳ್ನ ಕಿತ್ಹಾಕೋದು, ಮುಳ್ಳುಗಳನ್ನೆಲ್ಲ ತೆಗೆಯೋದು, ಕಸ ಗುಡಿಸೋದು, ರೂಮುಗಳ್ನೆಲ್ಲ ಸ್ವಚ್ಛ ಮಾಡೋದು, ಕಿಟಕಿ ಒರೆಸೋದು ಎಲ್ಲಾ ಮಾಡ್ತಾ ಇದ್ವಿ ಆದರೆ ಈಗ ಆ ರೀತಿ ಮಕ್ಕಳಿಂದ ಮಾಡ್ಸೋಕ್ ಹೋದ್ರೆ ಪೊಲೀಸರು ಬಂದು ಮಾಸ್ತ್‌ರ ಜೈಲಿಗೆ ಎಳ್ಕೊಂಡ್ ಹೋಗ್ತಾರೆ” ಎಂದು ವಿಶ್ವ ನುಡಿದ.
“ಕತ್ತೆ ಒಂಟೆ ಅಂತ ಬೈಬಾರ್ದು. ಇಂಥ ಪದಗಳ್ನ ಬಳಸೋ ಹಾಗಿಲ್ಲ ಅಂದಾಗ ಪರ್ಯಾಯವಾಗಿ ಬೇರೆ ಬೈಗುಳ ಪದಗಳ್ನ ಸರ್ಕಾರವೇ ಒದಗಿಸಬೇಕು” ಎಂದಳು ವಿಶಾಲು.
“ಒಂದು ಐಡಿಯಾ, ಕನ್ನಡ ಮೀಡಿಯಂ ಪಾಟ ಆದ್ರೂ ಇಂಗ್ಲೀಷ್‌ನಲ್ಲಿ ಬೈರಿ, ಕನ್ನಡದಲ್ಲಿ ಬೈಯೋ ಬದಲು ಡಾಂಕಿ, ಕ್ಯಾಮೆಲ್ ಅಂತನ್ನಿ, ಹಿಂದಿಯಲ್ಲಿ ಉಲ್ಲೂಕಾ ಪಟ್ಟೆ ಅನ್ನಿ, ಕನ್ನಡದ ಸೋಮಾರಿ ಕಟ್ಟೆ ಸೇರಿಸಿ” ಎಂದೆ.
“ಮಕ್ಕಳಿಗೆ ಕ್ಯಾಮೆಲ್ ಅಂದ್ರೆ ಇಷ್ಟ, ಡಾಂಕಿ ಅಂದ್ರೂ ಇಷ್ಟ, ಹೊಗಳಿಕೆ ಅಂತ ಕುಣಿದಾಡ್ತಾರೆ, ನಮ್ಮ ಕಂಟ್ರೋಲ್‌ಗೆ ಸಿಗೊಲ್ಲ” ಎಂದಳು ವಿಶಾಲು.
“ಬಿಹಾರದ ಸರ್ಕಾರಿ ಶಾಲೆಗಳಲ್ಲಿ ಏನ್ನೇನ್ ಆಗ್ತಿದೆ ಗೊತ್ತಾ? ವರ್ಷಕ್ಕೆ ಎರಡು ಸಲ ಪೋಷಕರ ಸಭೆ ನಡೆಯುತ್ತೆ, ಆ ಸಭೆಯಲ್ಲಿ ಪ್ರಸ್ತಾಪ ಆದ ವಿಷಯ ಇದು, ಶಿಕ್ಷಕರು ಹ್ಯಾಗೆ ಮಕ್ಕಳನ್ನ ಮೌಲ್ಯಮಾಪನ ಮಾಡ್ತಾರೋ ಅದೇ ಥರ ಮಕ್ಕಳು ಶಿಕ್ಷಕರನ್ನ ಮೌಲ್ಯಮಾಪನ ಮಾಡಬೇಕು ಅಂತಿದ್ದಾರೆ ಪೇರೆಂಟ್ಸ್” ಎಂದೆ.
ವಿಶ್ವನಿಗೆ ಒಂದು ಐಡಿಯಾ ಹೊಳೆಯಿತು.
“ಈಗ ಸರ್ಕಾರ ತನ್ನ ಗೆಜೆಟ್‌ನಲ್ಲಿ ಯಾವ್ ಯಾವ್ ಪದ ನಿಷೇಧ ಮಾಡಿದೆಯೋ ಅದನ್ನ ಬಿಟ್ಟು ಟೀರ‍್ಸ್ ಬೇರೆ ಹೊಸ ಬೈಗುಳ ಪದಗಳ್ನ ಬಳಸಬಹುದಲ್ಲ, ಕತ್ತೆ ಬದಲು ಹೇಸರಗತ್ತೆ, ಕೊಟ್ಟಿಗೆ ಗೂಬೆ ಅಂದ್ರೆ ಹೇಗೆ?” ಎಂದ ವಿಶ್ವ.
“ಹೌದ್ರೀ ಆ ರೀತಿ ಮಾಡಿದ್ರೆ ಸಿಕ್ಹಾಕೊಳೋದೇ ಇಲ್ಲ” ಎಂದಳು ವಿಶಾಲು.
“ಹೊಸ ಬೈಗುಳ ಮತ್ಯಾವುದು ಇದೆ?” ಎಂದು ಕೇಳಿದ ವಿಶ್ವ.
“ಮುಳ್‌ಹಂದಿ, ಗೋರಿಲ್ಲ, ಚಿಂಪಾಂಜಿ, ಕಾಡು ಪಾಪ ಅಂತ ಬೈಗಳನ್ನ ಬಳಸಿದ್ರೆ ಸರ್ಕಾರ ಏನ್ ಮಾಡುತ್ತೆ? ಪ್ರತಿಯೊಂದು ಪದದ ಮೇಲು ನಿಷೇಧ ತರೋಕೆ ಆಗೊಲ್ಲ” ಎಂದಳು ವಿಶಾಲು.
“ಆ ಪದಗಳು ಕತ್ತೆಗಿಂತ ಪವರ್‌ಫುಲ್ ಆಗಿವೆ. ಖಂಡಿತವಾಗಿಯೂ ಬಳಸಬಹುದು ಯಾರು ಏನೂ ಮಾಡೋಕೆ ಆಗೊಲ್ಲ.” ಎಂದ ನಾನು ಪತ್ರಿಕಾ ಸುದ್ದಿಯ ಕಡೆ ಸಾಲನ್ನು ಚೆಕ್ ಮಾಡಿದೆ. “ಪ್ರಾಣಿಗಳಿಗೆ ಹೋಲಿಸಿ ಹುಡುಗರನ್ನು ಬೈಯ್ಯಬಾರದು ಎಂಬ ಕಾನೂನು ಸದ್ಯದಲ್ಲೇ ಬರಲಿದೆ” ಎಂದಿತ್ತು.
“ಅಲ್ಲಿಗೆ ಯಾವ ಪ್ರಾಣಿಗೂ ಹೋಲಿಕೆ ಮಾಡಬಾರದು, ಏಯ್ ಜೇಡಿ ಮಣ್ಣು, ಹಳೇ ಇಟ್ಟಿಗೆ, ಬ್ಲೋ ಹೋದ ಬಾಲು, ಮುರಿದು ಹೋದ ಕೋಲು” ಅಂತ ಬೈದರೆ ಪ್ರಾಬ್ಲಂ ಇರೊಲ್ಲ ಎಂದಾಗ ಇಬ್ಬರೂ ಒಪ್ಪಿದರು.

Next Article