ಬ್ಯಾಂಕ್ ಕಿರುಕುಳ ಆರೋಪ: ಆತ್ಮಹತ್ಯೆ
ಮಂಗಳೂರು: ಸಾಲ ಮರುಪಾವತಿ ವಿಚಾರದಲ್ಲಿ ಮಂಗಳೂರು ಕ್ಯಾಥೋಲಿಕ್ ಕೋ-ಅಪರೇಟಿವ್(ಎಂಸಿಸಿ) ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದಿವ್ಯಾಂಗ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಗರಕ್ಕೆ ಹೊರವಲಯದ ಫೆರ್ಮಾಯಿ ಎಂಬಲ್ಲಿ ನಡೆದಿದೆ.
ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ(೪೬) ಆತ್ಮಹತ್ಯೆ ಮಾಡಿಕೊಂಡವರು. ಮನೋಹರ್ ಎಂಸಿಸಿ ಬ್ಯಾಂಕ್‌ನಿಂದ ೧೫ ಲಕ್ಷ ಸಾಲ ಪಡೆದಿದ್ದರು. ಕೊರೊನಾ ಬಳಿಕ ನಷ್ಟಕ್ಕೀಡಾಗಿ ಬ್ಯಾಂಕ್ ಸಾಲ ಕಟ್ಟಲು ಆಗಿರಲಿಲ್ಲ. ಹೀಗಾಗಿ ಬ್ಯಾಂಕ್‌ನ ಆಡಳಿತ ಮಂಡಳಿ ಮನೆ ಜಪ್ತಿ ಮಾಡಲು ಮುಂದಾಗಿದೆ. ಇದರಿಂದ ನೊಂದ ಮನೋಹರ್ ಪಿರೇರಾ ಅವರು ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, "ಮೂರು ವರ್ಷಗಳಿಂದ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ ೯ ಲಕ್ಷ ರೂ. ಸಾಲ ಬಾಕಿ ಇದೆ. ಹೀಗಾಗಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ" ಎಂದು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಬಳಿಕ, ವಿಡಿಯೋವನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿ, ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್ ಅಧ್ಯಕ್ಷ ವಿರುದ್ಧ ಮನೋಹರ್ ಪಿರೇರಾ ಸಹೋದರ ಜೀವನ್ ಪಿರೇರಾ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಲ್ ಲೋಬೋ ಬಂಧನವಾಗಿದೆ.
ಸ್ಪಷ್ಟೀಕರಣ..
ವ್ಯಕ್ತಿಯೊಬ್ಬರು ಎಂ.ಸಿ.ಸಿ. ಬ್ಯಾಂಕಿನಿಂದ ಸಾಲವನ್ನು ಪಡೆದಿದ್ದು, ಕಷ್ಟ ಸಮಯದಲ್ಲಿ ಮರುಪಾವತಿ ಮಾಡದೇ ಇದ್ದರಿಂದ ಸಾಲ ವಸೂಲಾತಿಗಾಗಿ ಕಾನೂನಿನ ಅವಕಾಶದಡಿ ವಸೂಲಾತಿ ಕ್ರಮ ಕೈಗೊಳ್ಳಲಾಗಿತ್ತು. ಅದಲ್ಲದೆ ಸಾಲಗಾರರಿಗೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಸಾಲವನ್ನು ಮರುಪಾವತಿ ಮಾಡಲು ಒಂದು ಅವಕಾಶವನ್ನು ಸಹ ನೀಡಲಾಗಿತ್ತು. ಅದರೂ ಸಾಲಗಾರರು ಸಾಲವನ್ನು ಮರುಪಾವತಿ ಮಾಡಿರುವುದಿಲ್ಲ.
ಸಾಲಗಾರರು ತಮ್ಮ ಉಳಿತಾಯ ಖಾತೆಯನ್ನು ವೈಯಕ್ತಿಕ ನೆಲೆಯಲ್ಲಿ ವ್ಯವಹರಿಸುತ್ತಾ ಬಂದಿರುತ್ತಾರೆ. ಅದರಲ್ಲಿ ಯಾರು ಮಧ್ಯ ಪ್ರವೇಶಿಸಿರಿವುದಿಲ್ಲ ಅವರು ತಮ್ಮ ವೈಯಕ್ತಿಕ ಸಮಸ್ಯೆಯಿಂದ ಈ ಕೃತ್ಯವನ್ನು ಎಸಗಿದ್ದು, ಅನಾವಶ್ಯಕವಾಗಿ ಬ್ಯಾಂಕಿನ ಅಧ್ಯಕ್ಷರ ಹೆಸರನ್ನು ಬಳಸಿ ಅಧ್ಯಕ್ಷರ ಮತ್ತು ಬ್ಯಾಂಕಿನ ಹೆಸರು ಹಾಳು ಮಾಡುವ ಪ್ರಯತ್ನ ಮಾಡಲಾಗಿದೆ. ಆದ್ದರಿಂದ ಸಾರ್ವಜನಿಕರು ಹಾಗೂ ಬ್ಯಾಂಕಿನ ಗ್ರಾಹಕರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪು ಹೇಳಿಕೆಗಳಿಗೆ ಕಿವಿಕೊಡಬಾರದಾಗಿ ತಿಳಿಯಪಡಿಸಲಾಗಿದೆ.