ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಬ್ಯಾಟು v/s ಓಟು

03:00 AM May 08, 2024 IST | Samyukta Karnataka

ವಿಶ್ವ ಮತ್ತು ವಿಶಾಲು ಟಿ.ವಿ. ಮುಂದೆ ಕುಳಿತು ರಿಮೋಟಿಗಾಗಿ ಕಿತ್ತಾಡುತ್ತಿದ್ದರು. ಐ.ಪಿ.ಎಲ್. ಮ್ಯಾಚ್ ನೋಡುವ ಆಸಕ್ತಿ ವಿಶ್ವನಿಗೆ, ಚುನಾವಣೆಗೆ ನಿಂತ ರಾಜಕಾರಣಿಗಳ ಆಸ್ತಿಯ ವಿವರ ನೋಡುವ ಆಸೆ ವಿಶಾಲುಗೆ. ಆರ್.ಸಿ.ಬಿ. ತಂಡ ಇನ್ನೇನು ಗೆಲ್ಲುತ್ತದೆ ಎಂಬ ಗ್ಯಾರಂಟಿ ವಿಶ್ವನಿಗೆ ಮೂಡುತ್ತಿತ್ತು. ಸಿಕ್ಸರ್‌ಗಳ ಅಬ್ಬರ ಶುರುವಾಗಿತ್ತು.
“ರೀ ಕೊಡಿ ಇಲ್ಲಿ” ಎಂದು ರಿಮೋಟನ್ನು ವಿಶಾಲು ಕಿತ್ತುಕೊಂಡ ನ್ಯೂಸ್ ಹಾಕಿದಳು.
“ನೋಡ್ರಿ ಇವರ ದೌಲತ್ತು, ಉತ್ತರಪ್ರದೇಶದಲ್ಲಿ ಎಂ.ಪಿ. ಸೀಟಿಗಾಗಿ ಕೆಲವರು ಕಂಟೆಸ್ಟ್ ಮಾಡ್ತಿದ್ದಾರೆ, ಇವರ ಆಸ್ತಿ ಒಂದು ಸಾವಿರ ಕೋಟಿ ಅಂತೆ ರೀ, ಹೋದ ಸಲ ಐನೂರು ಕೋಟಿ ಇತ್ತಂತೆ. ಐದೇ ವರ್ಷದಲ್ಲಿ ಹೆಂಗ್ ಡಬ್ಬಲ್ ಆಯ್ತು?” ಎಂದಳು ವಿಶಾಲು. ಕ್ರಿಕೆಟ್ ಆಟದ ಕ್ಲೈಮ್ಯಾಕ್ಸ್ ತಪ್ಪಿದ್ದಕ್ಕೆ ವಿಶ್ವನಿಗೆ ಸಿಟ್ಟು ಶುರುವಾಯ್ತು.
“ವಿಶಾಲು ಕಡೇ ಓರ‍್ರು, ಆರ್.ಸಿ.ಬಿ.ನ ಗೆಲ್ಲಿಸಬೇಕು, ಕೊಡು ಇಲ್ಲಿ” ಎಂದು ರಿಮೋಟನ್ನು ಕಿತ್ತುಕೊಂಡ ಕ್ರಿಕೆಟ್ ಹಾಕಿದಾಗ ಕೇವಲ ಒಂದು ರನ್ ಅಂತರದಿಂದ ಆರ್.ಸಿ.ಬಿ. ಸೋತು ಸುಣ್ಣವಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಕಲ್ಕತ್ತ ನೈಟ್ ರೈರ‍್ಸ್ ರೈಡ್ ಮಾಡೇಬಿಟ್ಟಿದ್ದರು.
“ರೀ ಕೊಡ್ರಿ ಇಲ್ಲಿ, ಯಾರ್ ಯಾರ್ ಆಸ್ತಿ ಎಷ್ಟು ಅಂತ ಹೇಳ್ತಾ ಇದ್ದಾರೆ. ಅದನ್ನ ನೋಡೋದ್ ಬಿಟ್ಟು ಯಾವ್ದೋ ಗೂಟ ನೆಡೋ ಆಟ ಅಂತೆ” ಎಂದು ಮತ್ತೆ ರಿಮೋಟ್ ಕಿತ್ತುಕೊಳ್ಳಲು ಜಗ್ಗಾಟ ನಡೆಸಿದಳು.
ಗಂಡ ಹೆಂಡಿರ ಜಗಳ ನಡೆಯುತ್ತಿದ್ದ ಈ ಹಂತದಲ್ಲಿ ನಾನು ವಿಶ್ವನ ಮನೆಗೆ ಎಂಟ್ರಿ ಕೊಟ್ಟೆ, ದಂಪತಿಗಳು ಜಗಳ ನಿಲ್ಲಿಸಿ ನನ್ನ ನೋಡಿ ಮುಗುಳು ನಕ್ಕರು.
“ನಮಸ್ಕಾರ, ಬನ್ನಿ ಬನ್ನಿ” ಎಂದಳು ವಿಶಾಲು.
“ನಿಮ್ಮಿಬ್ಬರ ಜಗಳ ಬೀದಿಗೂ ಕೇಳಿಸ್ತಾ ಇತ್ತು, ಏನ್ ಸಮಾಚಾರ?” ಎಂದಾಗ ವಿಶ್ವ
“ಆಟದ ಕಡೇ ಓವರ್ ನೋಡಲು ಅವಕಾಶವಾಗಲಿಲ್ಲ, ಆರ್.ಸಿ.ಬಿ. ಸೋತಿದ್ದಕ್ಕೆ ವಿಶಾಲುವೇ ಕಾರಣ” ಎಂದು ರಿಮೋಟ್ ಕಿತ್ತುಕೊಂಡ ಮಡದಿಯ ಮೇಲೆ ಗೂಬೆ ಕೂರಿಸಿದ.
“ರೀ ಐ.ಪಿ.ಎಲ್. ನಲ್ಲಿ ಕ್ರಿಕೆಟ್ ಕಲಿಗಳನ್ನ ಹರಾಜು ಹಾಕರ‍್ತಾರೆ, ಅವರು ಬಂದು ಹಣಕ್ಕಾಗಿ ಆಡ್ತಾರೆ. ಇಷ್ಟ ಬಂದ್ಹಾಗೆ ಚಚ್ತಾರೆ, ಯಾರೋ ಗೆಲ್ತಾರೆ ಯಾರೋ ಬೀಳ್ತಾರೆ. ದೇಶ ದೇಶಗಳ ನಡುವೆ ಕ್ರಿಕೆಟ್ ಆದಾಗ ನಾವು ನೋಡಬೇಕು, ಏ ಟೀಮ್, ಬಿ ಟೀಮ್ ಅಂತ ಫ್ರೆಂಡ್ಲಿ ಮ್ಯಾಚ್ ಆಡುವಾಗ ನಾವ್ಯಾಕ್ ನೋಡಿ ಸಮಯ ಪೋಲು ಮಾಡಬೇಕು” ಎಂದು ರೇಗಿದಳು.
“ವಿಶಾಲು, ನೀವೇನ್ ನೋಡ್ತಾ ಇದ್ರಿ?” ಎಂದೆ.
“ಉತ್ತರ ಭಾರತದಲ್ಲಿ ಚುನಾವಣೆಗೆ ನಿಂತ ಸ್ಪರ್ಧಾಳುಗಳ ಆಸ್ತಿ ವಿವರ ನೋಡ್ತಿದ್ದೆ, ವರ್ಷದಿಂದ ವರ್ಷಕ್ಕೆ ಕೋಟಿಗಳಲ್ಲಿ ಇವರ ಆಸ್ತಿ ಬೆಳಿತಾನೇ ಇದೆ, ಹಣ ಬೆಳೆಸೋಕೆ ಗೊಬ್ಬರ ಯಾವುದು ಹಾಕ್ತಾರೆ?” ಎಂದು ಕೇಳಿದಳು ವಿಶಾಲು.
“ಅವರ ತಲೇಲಿ ಇರೋ ಗೊಬ್ಬರ ಸಾಕು” ಎಂದು ವಿಶ್ವ ರೇಗಿ ಮ್ಯಾಚ್ ಸಾರಾಂಶ ನೋಡಲು ಬೇಡಿದರೂ ವಿಶಾಲು ರಿಮೋಟ್ ಕೊಡಲು ಒಪ್ಪಲಿಲ್ಲ.
“ನೀವು ಹೈಲೈಟ್ಸ್ ನೋಡೋ ಹಾಗಿದ್ರೆ ನಾನು ಮೇನ್ ಸ್ವಿಚ್ ಆಫ್ ಮಾಡ್ತೀನಿ” ಅಂದಳು.
“ಜಗಳ ಬೇಡ, ನಾನು ಬಂದಿರೋದು ನಿಮ್ಮ ಮನೆಯಲ್ಲಿ ಸಿಗೋ ಘಮಘಮ ಕಾಫಿ ಕುಡಿಯೋಕೆ, ನೀವು ಹಿಂಗೆ ರಿಮೋಟ್‌ಗಾಗಿ ಕಿತ್ತಾಡ್ತಾ ಇದ್ರೆ ನಾನು ಹೊರಟು ಬಿಡ್ತೀನಿ” ಎಂದು ಹೆದರಿಸಿದೆ. ಟಿ.ವಿ. ಆಫ್ ಮಾಡಿ ಕೂತರು. ವಿಶಾಲು ಪ್ರಶ್ನೆ ಒಂದನ್ನು ಹಾಕಿದಳು.
“ನನಗೊಂದು ಅನುಮಾನ ಇದೆ, ಆಸ್ತಿ ಇಲ್ದೇ ಇರೋ ಕೆಲವರು, ಎರಡು ಸಲ ಎಲೆಕ್ಷನ್‌ಗೆ ನಿಂತು ಗೆದ್ದರೆ ಸಾಕು ಕೋಟಿಗಳಿಗೆ ಬೆಳೀತಾರೆ. ಇಲ್ಲೊಬ್ಬ ಅಭ್ಯರ್ಥಿಯ ಆಸ್ತಿ ಮೊದಲ ಸಲ ಒಂದು ಕೋಟಿ ಇತ್ತು, ಎರಡನೇ ಸಲ ನಾಲ್ಕು ನೂರು ಕೋಟಿ ಆಯ್ತು, ಈಗ ಮೂರನೇ ಸಲ ಸಾವಿರ ಕೋಟಿ ಸರದಾರ, ಇದು ಹ್ಯಾಗೆ?”
“ಒಂದೊಂದು ರನ್ ಗಳಿಸೋದು ಕ್ರಿಕೆಟ್‌ನಲ್ಲಿ ಕಷ್ಟ, ಆದರೆ ಒಂದೊಂದು ಕೋಟಿ ಗಳಿಸೋದು ರಾಜಕಾರಣದಲ್ಲಿ ಸುಲಭ” ಎಂದು ವಿಶ್ವ ಒಂದು ಗೂಗ್ಲಿ ಎಸೆದ.
“ಸಾಕು ಚರ್ಚೆ, ನನಗೆ ಕ್ರಿಕೆಟ್ಟು ಇಷ್ಟ ಇಲ್ಲ, ರಾಜಕೀಯನೂ ಇಷ್ಟ ಇಲ್ಲ” ಎಂದೆ.
“ಅವರ ಹಣ ಅದ್ ಹೆಂಗೆ ದುಪ್ಪಟ್ಟು ಆಗುತ್ತೆ” ಎಂದು ಕೇಳಿದಳು ವಿಶಾಲು.
“ಗಣಿತದಲ್ಲಿ ಜಿಯೋಮ್ಯಾಟ್ರಿಕಲ್ ಪ್ರೋಗ್ರೆಷನ್ ಅಂತ ಒಂದ್ ಇದೆ, ಹಿಂದೆ ಒಬ್ಬ ರಾಜ ಇದ್ನಂತೆ, ಅವನು ತನಗೆ ಸಹಾಯ ಮಾಡಿದ ಪ್ರಜೆಗೆ ಏನ್ ಬೇಕಾದ್ರೂ ಕೇಳು ಅಂದ್ನಂತೆ ಅದಕ್ಕೆ ಅವನು ಕ್ಯಾಲೆಂಡರ್‌ನ್ನು ಮುಂದಿಟ್ಟು ಮೊದಲ ದಿನ ನನಗೆ ಹತ್ತು ರೂಪಾಯಿ ಕೊಡಿ ಸಾಕು, ಎರಡನೇ ದಿನ ಡಬ್ಬಲ್ ಮಾಡಿದರೆ ಇಪ್ಪತ್ತು ಆಗುತ್ತೆ, ಮೂರನೇ ದಿನಕ್ಕೆ ನಲವತ್ತು ಕೊಡಿ, ಆಮೇಲೆ ೮೦ ರೂಪಾಯಿ ಅಂತ ೩೦ ದಿನಗಳಿಗೆ ಇಂಡೆಂಟ್ ಮಾಡಿದನಂತೆ”
“ಅಯ್ಯೋ ಅಷ್ಟೇ ತಾನೇ” ಎಂದು ಒಪ್ಪಿಕೊಂಡ ರಾಜ ಕಡೆ ಕಡೆಯಲ್ಲಿ ೨೮, ೨೯, ೩೦ನೇ ದಿನ ಲಕ್ಷ ದಾಟಿ ಕೋಟಿಗೆ ಬಂದು ಬಿಡ್ತು ಮೊತ್ತ, ರಾಜ ಸುಸ್ತು ಹೊಡೆದ. ಅದನ್ನೇ ಜಿಯೋಮ್ಯಾಟ್ರಿಕಲ್ ಪ್ರೋಗ್ರೆಷನ್ ಅಂತಾರೆ” ಎಂದೆ.
“ನಾನು ನಮ್ಮ ಯಜಮಾನರಿಗೆ ಹೇಳ್ತಾ ರ‍್ತೀನಿ, ಸುಮ್ನೆ ಗುಮಾಸ್ತ ಆಗಿ ದುಡಿಯೋದ್ ಬಿಟ್ಟು ಎಲೆಕ್ಷನ್‌ಗೆ ನಿಂತ್ಕೊಳ್ಳಿ, ನಮ್ಮ ಮನೆಯಲ್ಲಿ ಟ್ರಂಕು, ಗೋಣಿಚೀಲಗಳಿವೆ, ಹಣ ತುಂಬಿಸಿ ಇಡಬಹುದು” ಎಂದಳು.
“ಆದರೆ ಸಾಹಿತಿ, ಕಲಾವಿದರಿಗೆ ಎಲೆಕ್ಷನ್‌ನಲ್ಲಿ ಗೆಲವು ಸಿಗೊಲ್ಲ” ಎಂದೆ.
“ಯಾಕ್ ಹಂಗ್ ಅಂತೀರ, ದುಡ್ಡು ಇರೋರು ಮಾತ್ರ ಎಲೆಕ್ಷನ್‌ಗೆ ನಿಂತರೆ ಓಟು ಕೊಡ್ತಾರೆ, ಜ್ಞಾನ, ಬುದ್ಧಿ ಇದ್ದವರಿಗೆ ಬೆಲೆನೇ ಇಲ್ಲವಾ” ಎಂದಳು.
“ಸರಸ್ವತಿ ಮಾತ್ರ ಇದ್ದವರಿಗೆ ಓಟಿನ ಲಕ್ಷ್ಮೀ ಒಲಿಯೊಲ್ಲ” ಎಂದ ವಿಶ್ವನ ಮಾತನ್ನು ನಾನು ಬೆಂಬಲಿಸಿದೆ.
“ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ್ ಕಾರಂತರು ಎಲೆಕ್ಷನ್‌ಗೆ ನಿಂತ್ರು, ಸೋತ್ರು, ಹೊಸ ಶೈಲಿಯ ಕಾವ್ಯದ ಪ್ರವರ್ತಕ ಗೋಪಾಲಕೃಷ್ಣ ಅಡಿಗರು ಕಾಲೇಜ್ ಪ್ರಿನ್ಸಿಪಾಲ್‌ಗಿರಿ ತೊರೆದು ಬಂದು ಎಲೆಕ್ಷನ್‌ಗೆ ನಿಂತರು, ಸೋತರು, ಸಾಹಿತ್ಯ ಸರಸ್ವತಿಗೆ ಚುನಾವಣೇಲಿ ಜಾಗ ಇಲ್ಲ” ಎಂದೆ.
“ಹಾಗಾದ್ರೆ ನಮ್ಮ ಯಜಮಾನರು ಎಂ.ಪಿ. ಎಲೆಕ್ಷನ್‌ಗೆ ಇಂಡಿಪೆಂಡೆಂಟ್ ಆಗಿ ನಿಂತರೆ ಗೆಲ್ಲೋದು ಕಷ್ಟನಾ?” ಎಂದು ವಿಶಾಲು ಮತ್ತೆ ಪ್ರಶ್ನಿಸಿದಳು.
“ಕ್ರಿಕೆಟ್ಟಲ್ಲಿ ಐ.ಪಿ.ಎಲ್.ಗೆ ಸೆಲೆಕ್ಟ್ ಆಗಬೇಕಾದ್ರೆ ಎಷ್ಟೊಂದ್ ಹಂತಗಳು ದಾಟಿ ಬರಬೇಕು. ಚೆನ್ನಾಗಿ ಆಡೋವರನ್ನ ಹರಾಜು ಹಾಕ್ತಾರೆ, ಟೀಮುಗಳ್ನ ಮಾಡ್ತಾರೆ, ಅದೇ ರೀತಿ ನಾವು ರಾಜಕಾರಣಿಗಳನ್ನು ಯಾಕೆ ಹರಾಜು ಹಾಕಬರ‍್ದು?” ಎಂದು ಕೇಳಿದಳು ವಿಶಾಲು.
“ಕ್ರಿಕೆಟ್‌ನಲ್ಲಿ ಜಾತಿ, ಧರ್ಮ ಇಲ್ಲ, ಆದರೆ ರಾಜಕಾರಣದಲ್ಲಿ ಅದೇ ದೊಡ್ಡ ಅಸ್ತ್ರ” ಎಂದಾಗ ವಿಶಾಲು ನಿರಾಸೆಯಿಂದ ತೆಪ್ಪಗಾದಳು.

Next Article