For the best experience, open
https://m.samyuktakarnataka.in
on your mobile browser.

ಬ್ಯಾರೇಜ್ ಮೇಲಿಂದ ಹರಿದುಬಂದ ಕೃಷ್ಣೆ

04:28 AM May 28, 2024 IST | Samyukta Karnataka
ಬ್ಯಾರೇಜ್ ಮೇಲಿಂದ ಹರಿದುಬಂದ ಕೃಷ್ಣೆ

ಸಿದ್ದಯ್ಯ ಹಿರೇಮಠ
ಮೋಳೆ(ಬೆಳಗಾವಿ): ಕೊಲ್ಲಾಪುರ ಜಿಲ್ಲೆಯ ರಾಜಾಪುರ ಬ್ಯಾರೇಜ್ ಮೂಲಕ ಕರ್ನಾಟಕಕ್ಕೆ ಹರಿದುಬರುವ ನೀರನ್ನು ತಡೆಹಿಡಿದಿದ್ದ ಮಹಾರಾಷ್ಟ್ರಕ್ಕೆ ಕೃಷ್ಣೆಯೇ ಬುದ್ಧಿ ಕಲಿಸಿದಂತಿದೆ. ನಿನ್ನೆಯಷ್ಟೇ ಬ್ಯಾರೇಜ್‌ನ ಗೇಟ್ ಹಾಕಿದ್ದ ಮಹಾ ಸರ್ಕಾರಕ್ಕೆ ಮುಖಭಂಗವಾಗುವ ರೀತಿಯಲ್ಲಿ ನೈಸರ್ಗಿಕವಾಗಿ ಕೃಷ್ಣಾ ನದಿಗೆ ನೀರು ಹರಿದುಬರಲಾರಂಭಿಸಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಹಾಗೂ ಸಹ್ಯಾದ್ರಿ ಶ್ರೇಣಿಯಲ್ಲಿ ಕಳೆದ ನಾಲ್ಕಾರು ದಿನಗಳಿಂದ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ.
ಮಹಾರಾಷ್ಟ್ರ ಸರ್ಕಾರ ಮೊಂಡುತನ ಮಾಡಿ ರಾಜಾಪುರ ಬ್ಯಾರೇಜ್ ಗೇಟ್ ಹಾಕಿದರೂ ಸೇತುವೆ ಮೇಲಿಂದ ನೀರು ಹರಿದುಬರುತ್ತಿದ್ದು ಮಹಾರಾಷ್ಟ್ರ ಸರಕಾರಕ್ಕೆ ತಿರುಮಂತ್ರವಾದಂತಾಗಿದೆ.
ಕೃಷ್ಣಾ ನದಿಯ ಉಪ ನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ನದಿಗಳ ಒಳ ಹರಿವು ಹೆಚ್ಚಾಗಿದೆ. ಇದರಿಂದಾಗಿ ಕರ್ನಾಟಕದತ್ತ ನೀರು ಹರಿದುಬರುತ್ತಿದ್ದು ಮಹಿಷವಾಡಗಿ ಸೇತುವೆ ದಾಟಿದ್ದು ಇನ್ನೆರಡು ದಿನಗಳಲ್ಲಿ ಹಿಪ್ಪರಗಿ ಅಣೆಕಟ್ಟೆಗೆ ನೀರು ತಲುಪಲಿದೆ.

ರೈತರ ಮೊಗದಲ್ಲಿ
ಭೀಕರ ಬರಗಾಲದಿಂದ ಗಡಿ ಭಾಗದ ಹಳ್ಳಿಗಳು ಹಾಗೂ ಕೃಷ್ಣಾ ತೀರದ ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿದ ಮಳೆಯಿಂದಾಗಿ ರಾಜಾಪುರ ಬ್ಯಾರೇಜ್ ಮೂಲಕ ಕೃಷ್ಣೆಗೆ ನೀರು ಹರಿದುಬಂದಿತ್ತು. ಆದರೆ ಮಹಾರಾಷ್ಟ್ರ ಸರಕಾರ ನಿನ್ನೆಯಷ್ಟೇ ಬ್ಯಾರೇಜ್‌ನ ಗೇಟ್ ಬಂದ್ ಮಾಡಿ ರೈತರ ಆಸೆಗೆ ತಣ್ಣೀರೆರಚಿತ್ತು. ಆದರೆ ಬ್ಯಾರೇಜ್ ಮೇಲ್ಭಾಗದಿಂದ ಸೋಮವಾರ ಮತ್ತೆ ಕೃಷ್ಣೆಗೆ ನೀರು ಹರಿದುಬರುತ್ತಿದ್ದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರೈತರು ಮತ್ತೆ ಕಬ್ಬು ನಾಟಿ ಮಾಡಲು ಸಜ್ಜಾಗಿದ್ದಾರೆ.