For the best experience, open
https://m.samyuktakarnataka.in
on your mobile browser.

ಭಗವಂತನ ಸಿಸಿ ಕ್ಯಾಮೆರಾಗಳು

03:00 AM Mar 12, 2024 IST | Samyukta Karnataka
ಭಗವಂತನ ಸಿಸಿ ಕ್ಯಾಮೆರಾಗಳು

ಮನುಷ್ಯನ ವರ್ತನೆಗಳನ್ನು ಸತತ ಗಮನಿಸುವ ಸೂಕ್ಷ್ಮ ವ್ಯವಸ್ಥೆ ಈ ಸೃಷ್ಟಿಯಲ್ಲಿ ಇದೆ.
`ಆದಿತ್ಯ ಚಂದ್ರೌ ಅನಲಾನಿಲೌಚ | ದ್ಯೌಃ ಭೂಮಿ ಆಪಃ ಹೃದಯಂ ಯಮಶ್ಚ || ಅಹಶ್ಚ ರಾತ್ರಿಶ್ಚ ಉಭೇ ಚ ಸಂಧ್ಯೇ ಧರ್ಮಶ್ಚ ಜಾನಾತಿ ನರಸ್ಯ ವೃತ್ತಮ್' || ಪ್ರಸಿದ್ಧವಾದ ಈ ಶ್ಲೋಕವು ಮನುಷ್ಯನ ಎಲ್ಲ ವರ್ತನೆಗಳನ್ನು ಗಮನಿಸುವ ಸಿಸಿ ಕ್ಯಾಮರಾಗಳು ಎಲ್ಲೆಲ್ಲಿ ಇರುತ್ತವೆ ಎಂಬುದನ್ನು ಹೇಳುತ್ತದೆ. ಎಷ್ಟೇ ಗುಟ್ಟಾಗಿ ಮಾಡಿದ್ದರೂ ಎಲ್ಲ ವರ್ತನೆಗಳನ್ನು ಗಮನಿಸುವವರಿದ್ದಾರೆ. ಆದುದರಿಂದ ಮನುಷ್ಯ ತನ್ನ ವರ್ತನೆಗಳನ್ನು ತುಂಬಾ ಎಚ್ಚರಿಕೆಯಿಂದ ಸರಿಯಾಗಿಟ್ಟುಕೊಂಡು ಹೋಗಬೇಕು.
ಸೂರ್ಯ-ಚಂದ್ರರು ಮೊದಲನೇ ಸಿ.ಸಿ ಕ್ಯಾಮೆರಾ. ಆದುದರಿಂದಲೇ ಹಿಂದೆ ರಾಜ-ಮಹಾರಾಜರು ದಾನ ಶಾಸನ ಬರೆಸುವಾಗ ಸೂರ್ಯ-ಚಂದ್ರರನ್ನು ಸಾಕ್ಷಿಯಾಗಿ ಉಲ್ಲೇಖ ಮಾಡುತ್ತಿದ್ದರು. ಅನೇಕ ಯುಗಗಳ ಪರ್ಯಂತವೂ ಇರುವ ಸಾಕ್ಷಿಗಳು ಈ ಇಬ್ಬರು. ಸೂರ್ಯನು ತುಂಬಾ ದೂರ ಇದ್ದರೂ ಅವನ ಕಿರಣಗಳ ಮೂಲಕ ಎಲ್ಲ ಜೀವಿಗಳ ನೇರ ಸಂಬಂಧವನ್ನು ಹೊಂದಿದ್ದಾರೆ. ಆದ್ದರಿಂದ ಎಲ್ಲ ಜೀವಗಳ ಸನ್ನಡತೆ-ದುರ್ನಡತೆಗಳು ಅವನಿಗೆ ಗೊತ್ತಾಗುತ್ತವೆ.
‘ಅನಲ’ಅಂದರೆ ಅಗ್ನಿ, ಅನಿಲ ಎಂದರೆ ವಾಯು. ಅಜ್ಞಾನಿಗಳು ಅಂದುಕೊಂಡಂತೆ ಇವುಗಳು ಅಚೇತನಗಳಲ್ಲ. ನಮ್ಮನ್ನು ಸದಾ ಗಮನಿಸುತ್ತವೆ. ‘ದ್ಯೌಃ’ಎಂದರೆ ಮೇಲಿರುವ ಬೆಳಕಿನ ಲೋಕ, ಭೂಮಿ ನಮಗೆ ಆಶ್ರಯವಾಗಿರುವ ಲೋಕ. ಅದು ಕೆಳಗಿದೆ. ಈ ಇಬ್ಬರನ್ನೂ ತಂದೆ-ತಾಯಿಗಳೆಂದು ಕರೆಯುವ ರೂಢಿ ಉಂಟು. ಇವರಿಬ್ಬರೂ ಮಕ್ಕಳಾದ ಎಲ್ಲ ಜೀವಗಳನ್ನು ಗಮನಿಸುತ್ತಾರೆ. ‘ಆಪಃ’ಎಂದರೆ ನೀರು. ನೀರು ಪರಮಾತ್ಮ ಚೈತನ್ಯದ ಆವಾಸ ಸ್ಥಾನ. ಸಕಲ ದೇವತಾ ಸ್ವರೂಪಿ. ಕೇವಲ ಜಡ ವಸ್ತುವಲ್ಲ. ಆದುದರಿಂದ ನೀರು ನಮ್ಮನು ಗಮನಿಸುತ್ತದೆ.
‘ಹೃದಯ’ಎಂದರೆ ನಮ್ಮ ಅಂತರಂಗ ಮನಸ್ಸು. ನಾವು ಏನೇ ಕೆಲಸ ಮಾಡಿದರೂ ಮನಸ್ಸಿನ ಮೂಲಕವೇ ಆಗಿರುತ್ತದೆ. ಅಂತಃಸಾಕ್ಷಿಗೆ ಗಮನಕ್ಕೆ ಬರದಂತೆ ಏನನ್ನೂ ಮಾಡಲು ಸಾಧ್ಯವಿಲ್ಲ. ಯಾವುದೋ ಒಂದು ಕ್ಷಣದಲ್ಲಿ ತಪ್ಪು ಕೆಲಸವನ್ನು ಯಾವುದೋ ಆಗ್ರಹಕ್ಕೆ ಒಳಗಾಗಿ ಮಾಡಿದ್ದರೂ ಅಂತಃಸಾಕ್ಷಿ ಅದನ್ನು ತಪ್ಪೆಂಬುದಾಗಿಯೇ ಸೂಚಿಸುತ್ತದೆ. ಹೀಗೆ ಮಾಡಿದ ತಪ್ಪು ಕೆಲಸಗಳ ನೆನಪು ಕಾಲಾನಂತರ ಮುಳ್ಳಿನಂತೆ ಚುಚ್ಚುತ್ತದೆ.
‘ಯಮ’ಎಂದರೆ ಮೃತ್ಯು ದೇವತೆ. ಆತನ ಕಣ್ಣು ಕಟ್ಟಿಸಲು ಯಾರಿಂದಲೂ ಸಾಧ್ಯವಿಲ್ಲ. ಹಗಲು-ರಾತ್ರಿಗಳ ವ್ಯಾಪ್ತಿಗೆ ಎಲ್ಲ ಜೀವಿಗಳು ಒಳಪಟ್ಟಿದ್ದಾರೆ. ಆದ್ದರಿಂದ ಅವು ಜೀವಿಗಳನ್ನು ಗಮನಿಸುತ್ತವೆ. ಬೆಳಗಿನ ಕಾಲ ಮತ್ತು ಸಂಧ್ಯಾಕಾಲ ಇವು ಎಲ್ಲರನ್ನು ಗಮನಿಸುತ್ತವೆ. ಧರ್ಮ ಪುರುಷನ ಎಲ್ಲರ ಧರ್ಮಾಧರ್ಮಗಳನ್ನು ಗಮನಿಸುತ್ತಾನೆ.
ಹೀಗೆ ಇವಿಷ್ಟು ಭಗವಂತನ ನಿರ್ಮಿಸಿರುವ ಸಿ.ಸಿ ಕ್ಯಾಮೆರಾಗಳು. ಇವುಗಳ ಮೂಲಕ ಭಗವಂತನು ನಮ್ಮ ಚರ್ಯೆಗಳನ್ನು ಗಮನಿಸುತ್ತಾನೆ. ಆದ್ದರಿಂದಲೇ ಅವನು ಸರ್ವಜ್ಞ. ಒಟ್ಟಾರೆ ನಾವು ಹುಷಾರಾಗಿರಬೇಕು.