ಭದ್ರಾ ಜಲಾಶಯಕ್ಕೆ ಅಭದ್ರತೆ
ಮೈಸೂರು ಮಹಾರಾಜರು ತಮ್ಮ ಪತ್ನಿಯ ಬಂಗಾರದ ಒಡವೆಗಳನ್ನು ಮಾರಾಟ ಮಾಡಿ ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರ ಆಣೆಕಟ್ಟು ಕಟ್ಟಿಸಿದ್ದಾರೆ. ಶತಮಾನದ ಈ ಜಲಾಶಯ ಈಗಲೂ ಗಟ್ಟಿಮುಟ್ಟಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು, ಕಬಿನಿ, ಹಾರಂಗಿ ಜಲಾಶಯಗಳು, ಶಿವಮೊಗ್ಗ-ಚಿಕ್ಕಮಗಳೂರು ಜಿಲ್ಲೆಯ ಗಡಿಯಲ್ಲಿರುವ ಭದ್ರಾ ಜಲಾಶಯ, ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಗುಣಮಟ್ಟ ಆಗಿನ ಕಾಲದ ಎಂಜಿನಿಯರ್‌ಗಳ ಕಾರ್ಯದಕ್ಷತೆ ತೋರಿಸುತ್ತದೆ. ಇವೆಲ್ಲ ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಕನಸಿನ ಕೂಸುಗಳು. ಈ ಜಲಾಶಯಗಳ ಸುತ್ತಮುತ್ತಲಿನ ಪ್ರದೇಶಗಳೆಲ್ಲ ಸೂಕ್ಷ್ಮ ಪ್ರದೇಶಗಳಾಗಿದ್ದು, ಬಫರ್ ಝೋನ್ ವ್ಯಾಪ್ತಿಗೆ ಬರುತ್ತವೆ. ಅಣೆಕಟ್ಟುಗಳ ಸುತ್ತಮುತ್ತ ಬೃಹತ್ ಕಟ್ಟಡಗಳ ನಿರ್ಮಾಣ, ಗಣಿಗಾರಿಕೆ, ಮರಳು ಗಾರಿಕೆ ಸೇರಿದಂತೆ ಜಲಾಶಯಕ್ಕೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಅಂತಹದೊಂದು ಅವೈಜ್ಞಾನಿಕ ಕಾಮಗಾರಿಯನ್ನು ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯದ ತಳಭಾಗದಲ್ಲಿ ನಡೆಸಲಾಗುತ್ತಿದೆ.
ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಈ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸುವಂತೆ ಭದ್ರಾ ಅಚ್ಚುಕಟ್ಟು ರೈತರು ಹೋರಾಟ ನಡೆಸುತ್ತಿದ್ದಾರೆ. ಭದ್ರಾ ಜಲಾಶಯವು ಮಧ್ಯ ಕರ್ನಾಟಕದ ೬ ಜಿಲ್ಲೆಗಳ ಸುಮಾರು ೪.೫ ಲಕ್ಷ ಎಕರೆ ಪ್ರದೇಶದ ಕೃಷಿಗೆ ನೀರಾವರಿ ಮೂಲವಾಗಿದೆ. ಜಲಾಶಯ ಭರ್ತಿ ಆದರೆ ಮಾತ್ರ ಈ ಆರು ಜಿಲ್ಲೆಗಳ ಕೃಷಿ, ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು ಗರಿಗೆದರುತ್ತವೆ. ಭದ್ರಾ ಜಲಾಶಯದ ನೀರು ಪೋಲಾದರೆ, ಕೊನೆಭಾಗದ ಜಮೀನುಗಳಿಗೆ ನೀರು ಹರಿಯದಿದ್ದರೆ, ಜಲಾಶಯಕ್ಕೇನಾದರೂ ಧಕ್ಕೆ ಬಂದರೆ ವಿಶೇಷವಾಗಿ ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ರೈತರು ಸಿಡಿದೇಳುತ್ತಾರೆ. ಈಗಾಗಲೇ ಈ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದಾರೆ.
ಹೀಗಿರುವಾಗ ಭದ್ರಾ ಡ್ಯಾಂ ಬುಡದಲ್ಲೇ ಸುಮಾರು ೧೬ ಎಕರೆ ಬಫರ್ ಝೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿಗಳನ್ನು ಸದ್ದಿಲ್ಲದೆ ಮಾಡುತ್ತಿರುವುದು ಸರಿಯಲ್ಲ. ಕುಡಿಯುವ ನೀರು ಪೂರೈಕೆಯ ಯೋಜನೆ ಕಾರ್ಯಗತಗೊಳಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ, ಜಲಾಶಯ ಇರುವ ಸೂಕ್ಷö್ಮ ಪ್ರದೇಶದಲ್ಲಿ ಅದರಲ್ಲೂ ಬಫರ್ ಝೋನ್ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಕ್ಕೆ ವಿರೋಧವಿದೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ವಿವಿಧ ಹಳ್ಳಿಗಳಿಗೆ ಕುಡಿಯುವ ನೀರೊದಗಿಸಲು ಜಲಜೀವನ ಮಿಷನ್‌ನಡಿ ಸುಮಾರು ೫೦೦ ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಇದೇ ಪ್ರದೇಶದಲ್ಲಿ ಏನಾದರೂ ಕಾಮಗಾರಿ ಮುಂದುವರೆಸಿದರೆ, ಭದ್ರಾ ಅಣೆಕಟ್ಟೆಯ ಅಭದ್ರತೆಗೆ ಕಾರಣವಾಗಲಿದೆ. ತಕ್ಷಣ ನೀರಾವರಿ ಇಲಾಖೆ ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ಮಾಡಿ, ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವುದು ಅತ್ಯಂತ ತುರ್ತಾಗಿ ಆಗಬೇಕಿದೆ.
ಜಲಾಶಯ ರಿಪೇರಿಗೂ ನಿರ್ಲಕ್ಷ್ಯ
೧೯೬೨ರಲ್ಲಿ ಗಾರೆ, ಸುಣ್ಣ ಮತ್ತು ಕಲ್ಲು ಬಳಸಿ ಭದ್ರಾ ಡ್ಯಾಂ ನಿರ್ಮಿಸಿರುವುದರಿಂದ ಸಹಜವಾಗಿಯೇ ಡ್ಯಾಂನ ತಳಭಾಗದಲ್ಲಿ ನೀರು ಸೋರಿಕೆಯಾಗುತ್ತಿದೆ. ಈ ಸೋರಿಕೆ ತಡೆಗಟ್ಟಬೇಕು. ಹಳೆಯಾದಾಗಿರುವ ಡ್ಯಾಂನ ಗೇಟ್ ಸರಿಪಡಿಸಿ, ಗಟ್ಟಿಗೊಳಿಸುವ ಕೆಲಸವನ್ನು ಸರ್ಕಾರ ತ್ವರಿತವಾಗಿ ಕೈಗೊಳ್ಳಬೇಕಿದೆ. ಆಧುನಿಕ ತಂತ್ರಜ್ಞಾನದ ಮೂಲಕ ಜಲಾಶಯದ ತಳಭಾಗದಲ್ಲಿ ಸೋರಿಕೆಯನ್ನು ತಡೆಗಟ್ಟಲು ಮತ್ತು ಗೇಟ್ ಸರಿಪಡಿಸುವುದು ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳುವ ಅಗತ್ಯ ಇದೆ. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿದ ಡ್ಯಾಂ ನಿರ್ವಹಣೆಯ ಕ್ರೇನ್‌ಗಳನ್ನು ರೀ-ಕಂಡೀಷನ್ ಮಾಡಿಸಬೇಕು. ಜಲಾಶಯದ ಎಡ ಮತ್ತು ಬಲದಂಡೆ ಕಾಲುವೆಗಳ ರಿಪೇರಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಡ್ಯಾಂ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗವು ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ೧೦೦ ಕೋಟಿ ರೂಪಾಯಿ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ರಾಜ್ಯ ಸರ್ಕಾರ ಮಾತ್ರ ಮೌನವಾಗಿರುವುದು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕೂಡ ಜಾಣ ಕಿವುಡರಂತೆ ವರ್ತಿಸುತ್ತಿರುವುದು ರೈತರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ. ಇಂತಹ ತುರ್ತು ಅಗತ್ಯದ ವೆಚ್ಚಗಳನ್ನು ಮಾಡುವ ಸರ್ಕಾರ ಕೂಡ ಬದ್ಧತೆ ಪ್ರದರ್ಶಿಸಬೇಕಿದೆ.
ಭದ್ರಾ ಕಾಡಾ ಅಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ತಕ್ಷಣ ಭದ್ರಾ ಜಲಾಶಯದ ಬಫರ್ ಝೋನ್ ಪ್ರದೇಶದಲ್ಲಿ ನಡೆದಿರುವ ಜೆಜೆಎಂ ಕಾಮಗಾರಿ ನಿಲ್ಲಿಸಬೇಕು. ಈ ಕಾಮಗಾರಿ ಕೈಗೊಳ್ಳಲು ಬೇರೆ ಕಡೆ ಜಾಗ ಗುರುತಿಸಬೇಕು, ಭದ್ರಾ ಜಲಾಶಯದ ಭದ್ರತೆಯ ಕ್ರಮ ಕೈಗೊಳ್ಳಲು ತಕ್ಷಣ ೧೦೦ ಕೋಟಿ ರೂ. ಬಿಡುಗಡೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ. ಆದರೆ ಈವರೆಗೂ ಉಭಯ ಜಿಲ್ಲೆಗಳ ಸಚಿವರು, ಕಾಡಾ ಸಮಿತಿ ಅಧ್ಯಕ್ಷರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು, ಅಚ್ಚುಕಟ್ಟುದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ
ಮಲೆನಾಡಿನ ಜೀವವೈವಿಧ್ಯ ಇರುವ ಸೂಕ್ಷ್ಮ ಪ್ರದೇಶಗಳಲ್ಲಿ, ಜಲಾಶಯಗಳಿರುವ ಬಫರ್ ಝೋನ್ ಪ್ರದೇಶಗಳಲ್ಲಿ ಗಣಿಗಾರಿಕೆ ಕೈಗೊಳ್ಳುವಂತಿಲ್ಲ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಎನ್.ಆರ್ ಪುರ ತಾಲೂಕಿನ ಭೈರಾಪುರದಲ್ಲಿ ಅರಣ್ಯ ಪ್ರದೇಶದಲ್ಲೇ ಅಕ್ರಮ ಗಣಿಗಾರಿಕೆ, ಎರಡು ವರ್ಷಗಳಿಂದ ನಡೆಯುತ್ತಿದೆ. ಯಾವುದೇ ಪರವಾನಿಗೆ ಇಲ್ಲದೆ ಸರ್ಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ಗಣಿಗಾರಿಕೆ ಚಟುವಟಿಕೆ ನಡೆಯುತ್ತಿದೆ. ಹಾಗೆಯೇ ಸಾಗರ, ಹೊಸನಗರ ತಾಲೂಕುಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಕಣ್ಣೆದುರೇ ಅಕ್ರಮವಾಗಿ ಜೆಂಬಿಟ್ಟಿಗೆ ಗಣಿಗಾರಿಕೆ ನಡೆಯುತ್ತಿದ್ದರೂ ಮೌನವ್ರತ ಅನುಸರಿಸುತ್ತಿದ್ದಾರೆ. ಕಲ್ಲು ಕ್ವಾರಿಗಳಲ್ಲಿ ಕಲ್ಲು ಬ್ಲಾಸ್ಟ್ ಮಾಡುವುದರಿಂದ ಭಯಭೀತಗೊಂಡ ಪ್ರಾಣಿಗಳು ನಾಡಿಗೆ ನುಗ್ಗುತ್ತಿವೆ. ಅಕ್ರಮ ಮರಳು ಗಣಿಗಾರಿಕೆಯಿಂದ ನದಿಯ ಸ್ವರೂಪವೇ ಬದಲಾಗುತ್ತಿದೆ. ಇದರಿಂದ ಅನೇಕ ಜೀವಹಾನಿಗಳೂ ಆಗಿರುವ ವರದಿಯಾಗಿವೆ. ಇದು ಕೇವಲ ತುಂಗ ಇಲ್ಲವೆ ಭದ್ರ ನದಿಯ ಮರಳುಗಾರಿಕೆಯ ಸಮಸ್ಯೆ ಅಲ್ಲ. ಮುಂದೆ ಎರಡೂ ನದಿಗಳು ಸಂಗಮಗೊಂಡು ತುಂಗಭದ್ರಾ ನದಿಯಾಗಿ ಹರಿಯುವ ಕಡೆಯಲ್ಲಿ ಅಕ್ರಮ ಗಣಿಗಾರಿಕೆ ಜೋರಾಗಿಯೇ ಇದೆ. ಶಿವಮೊಗ್ಗ, ಹರಿಹರ, ಹೊನ್ನಾಳಿ, ಹರಪನಹಳ್ಳಿ, ಹಡಗಲಿ ತಾಲೂಕುಗಳಲ್ಲಿ ವ್ಯಾಪಕವಾಗಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಮಾರಾಟ ನಡೆಯುತ್ತಿರುವುದು ಬಹಿರಂಗ ಸತ್ಯ. ಸ್ವತಃ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ತವರು ಜಿಲ್ಲೆಯಲ್ಲಿ ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆ ಗಣಿಗಾರಿಕೆ, ನಡೆಯುತ್ತಿದೆ. ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಕಣ್ಣಿದ್ದೂ ಕುರುಡಾಗಿ ವರ್ತಿಸುತ್ತಿದ್ದಾರೆ.
ಭದ್ರಾ ಜಲಾಶಯದ ಭದ್ರತೆ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಅದರಲ್ಲೂ ವಿಶೇಷವಾಗಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಶಾಸಕರು, ಸಂಸದರು ಈ ಭಾಗದ ಜೀವನಾಡಿ ಭದ್ರಾ ಜಲಾಶಯದ ಭದ್ರತೆಗೆ ನಿಗಾ ವಹಿಸಬೇಕು. ಎಲ್ಲೆಲ್ಲಿ ಜನಪ್ರತಿನಿಧಿಗಳೇ ಅಕ್ರಮಗಳಲ್ಲಿ ಭಾಗಿಯಾಗಿದ್ದರೂ ಅಧಿಕಾರಿಗಳು ಯಾವ ಮುಲಾಜಿಲ್ಲದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಮೂಲಕ ದಿಟ್ಟತನ ಪ್ರದರ್ಶಿಸಬೇಕಿದೆ.