For the best experience, open
https://m.samyuktakarnataka.in
on your mobile browser.

ಭಾರತದ ಭದ್ರತೆಗೆ ಜನರಲ್ ತಿಮ್ಮಯ್ಯ ಕನಸು

03:00 AM May 11, 2024 IST | Samyukta Karnataka
ಭಾರತದ ಭದ್ರತೆಗೆ ಜನರಲ್ ತಿಮ್ಮಯ್ಯ ಕನಸು

ಭಾರತೀಯ ಸೇನಾಪಡೆಯ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ (ಎಸ್‌ಎಫ್‌ಎಫ್) ಒಂದು ರಹಸ್ಯ ಮತ್ತು ವಿಶೇಷ ಪಡೆಯಾಗಿದ್ದು, ಮೂಲತಃ ಟಿಬೆಟಿಯನ್ ನಿರಾಶ್ರಿತರನ್ನು ಒಳಗೊಂಡಿದೆ. ಈ ಪಡೆಯ ಪ್ರಾಥಮಿಕ ಉದ್ದೇಶವೆಂದರೆ, ಚೀನಾಗೆ ಪ್ರತಿಯಾಗಿ, ಟಿಬೆಟಿಯನ್ ಗಡಿಯಾದ್ಯಂತ ಚೀನಾಗೆ ಪ್ರತಿಕ್ರಿಯೆ ನೀಡುವುದಾಗಿದೆ. ಎಸ್‌ಎಸ್‌ಎಫ್ ವೈಶಿಷ್ಟ್ಯವೇ ಇದರ ಸ್ಥಾಪನೆಯಾಗಿದ್ದು, ೧೯೬೦ರ ದಶಕದಲ್ಲಿ ಅಮೆರಿಕಾದ ಗುಪ್ತಚರ ಸಂಸ್ಥೆಯಾದ ಸೆಂಟ್ರಲ್ ಇಂಟಲಿಜೆನ್ಸ್ ಏಜೆನ್ಸಿಯ(ಸಿಐಎ) ತರಬೇತಿ ಮತ್ತು ಆರ್ಥಿಕ ಬೆಂಬಲದೊಡನೆ ಇದನ್ನು ಸ್ಥಾಪಿಸಲಾಗಿತ್ತು.
ಎಸ್‌ಎಫ್‌ಎಫ್ ಹಿನ್ನೆಲೆ
೧೯೬೨ರಲ್ಲಿ, ಹಿಮಾಲಯದಲ್ಲಿನ ಗಡಿ ವಿವಾದದ ಕಾರಣದಿಂದ ಭಾರತ ಮತ್ತು ಚೀನಾಗಳ ಸಂಬಂಧ ಹಾಳಾಗತೊಡಗಿತ್ತು. ಇದನ್ನು ಸರಿಪಡಿಸಲು ಸಾಕಷ್ಟು ಮಾತುಕತೆಗಳು, ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಿದರೂ, ಅವುಗಳು ಯಶಸ್ಸು ಕಂಡಿರಲಿಲ್ಲ. ಗಡಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ, ಭಾರತ ಮತ್ತು ಚೀನಾ ಎರಡೂ ದೇಶಗಳು ಗಡಿಯಾದ್ಯಂತ ಹೆಚ್ಚಿನ ಸೇನಾ ತುಕಡಿಗಳನ್ನು ನಿಯೋಜಿಸಿದವು. ಇದರ ಪರಿಣಾಮವಾಗಿ, ಅಲ್ಲಲ್ಲಿ ಗಡಿ ಚಕಮಕಿಗಳು ನಡೆದು, ಅಂತಿಮವಾಗಿ ಅಕ್ಟೋಬರ್ ೧೯೬೨ರಲ್ಲಿ ಭಾರತ-ಚೀನಾಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ನಡೆಯಿತು.
ಚೀನಾದ ಜೊತೆಗಿನ ಯುದ್ಧದಲ್ಲಿ ಭಾರೀ ಸೋಲು ಅನುಭವಿಸಿದ ಬಳಿಕ, ಭಾರತೀಯ ಸೇನೆಗೆ ಗಡಿ ಪ್ರದೇಶಗಳಲ್ಲಿ ವಿಶೇಷ ಪಡೆಗಳನ್ನು ಹೊಂದುವುದರ ಮಹತ್ವದ ಅರಿವಾಯಿತು. ಇದರ ಪರಿಣಾಮವಾಗಿ, ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ (ಎಸ್‌ಎಫ್‌ಎಫ್) ಅಥವಾ `ಎಸ್ಟಾಬ್ಲಿಷ್ಮೆಂಟ್ ೨೨' ಸ್ಥಾಪನೆಯಾಯಿತು.
ಜಾರಿಗೆ ಬಂದ ಹಾದಿ
೧೯೫೦ರ ದಶಕದ ಕೊನೆಯ ಭಾಗದಲ್ಲಿ, ಭಾರತಕ್ಕೆ ಚೀನಾದಿಂದ ಸಂಭಾವ್ಯ ಅಪಾಯದ ಆತಂಕ ಹೆಚ್ಚಾಗುತ್ತಿತ್ತು. ಆಗ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ತಿಮ್ಮಯ್ಯನವರು, ಚೀನಾದ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ, ಟಿಬೆಟಿಯನ್ ನಿರಾಶ್ರಿತರಿಂದ ಕೂಡಿದ ಪ್ಯಾರಾ ಮಿಲಿಟರಿ ಪಡೆಯೊಂದನ್ನು ಸ್ಥಾಪಿಸುವ ಸಲಹೆ ನೀಡಿದರು. ಆದರೆ, ಭಾರತದ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂ ಅವರು ಈ ಸಲಹೆಯನ್ನು ತಿರಸ್ಕರಿಸಿದರು.
ಅಕ್ಟೋಬರ್ ೨೦, ೧೯೬೨ರಂದು ಭಾರತ ಮತ್ತು ಚೀನಾಗಳ ನಡುವೆ ಯುದ್ಧ ಆರಂಭಗೊಂಡಿತು.
ನವೆಂಬರ್ ೧೪, ೧೯೬೨ರಂದು ಜವಾಹರಲಾಲ್ ನೆಹರೂ ಅವರ ನಿರ್ದೇಶನದಲ್ಲಿ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಸ್ಥಾಪನೆಗೊಂಡಿತು.
ನವೆಂಬರ್ ೨೧, ೧೯೬೨ರಂದು ಕದನ ವಿರಾಮ ಮತ್ತು ಚೀನಾದ ಗೆಲುವಿನೊಡನೆ ಭಾರತ-ಚೀನಾ ಯುದ್ಧ ಮುಕ್ತಾಯಗೊಂಡಿತು.
೧೯೬೨ - ೧೯೬೪ರಲ್ಲಿ ಎಸ್‌ಎಸ್‌ಎಫ್‌ಗೆ ಅರಣ್ಯ ಮತ್ತು ಪರ್ವತ ಪ್ರದೇಶಗಳ ಯುದ್ಧಕ್ಕೆ ಸಂಬಂಧಿಸಿದಂತೆ ಸಿಐಎ ಮತ್ತು ಭಾರತದ ಇಂಟಲಿಜೆನ್ಸ್ ಬ್ಯೂರೋ ತೀವ್ರ ತರಬೇತಿ ನೀಡಿದವು.
೧೯೬೪ರಲ್ಲಿ ಎಸ್‌ಎಫ್‌ಎಫ್ ವಾಯು ತರಬೇತಿ ಆರಂಭಗೊಳಿಸಿತು.
೧೯೬೮ರಲ್ಲಿ ಎಸ್‌ಎಫ್‌ಎಫ್ ವಾಯು ಯುದ್ಧದಲ್ಲಿ ಸಂಪೂರ್ಣ ಅರ್ಹತೆ ಸಾಧಿಸಿ, ಅರಣ್ಯ ಮತ್ತು ಪರ್ವತ ಪ್ರದೇಶಗಳ ಯುದ್ಧದಲ್ಲಿ ತಜ್ಞ ಪಡೆ ಎನಿಸಿಕೊಂಡಿತು.
೧೯೭೧ರಲ್ಲಿ ಎಸ್‌ಎಫ್‌ಎಫ್ ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿತು.
೧೯೭೧ರಲ್ಲಿ ಭಾರತ ಮತ್ತು ಅಮೆರಿಕಾಗಳ ನಡುವಿನ ಸಂಬಂಧ ಹದಗೆಡತೊಡಗಿತು. ಆದ್ದರಿಂದ ಸಿಐಎ ಎಸ್‌ಎಫ್‌ಎಫ್‌ನ ತರಬೇತಿಯಿಂದ ಹಿಂದೆ ಸರಿದು, ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡು, ಧನಸಹಾಯವನ್ನೂ ನಿಲ್ಲಿಸಿತು.
ಎಸ್‌ಎಫ್‌ಎಫ್ ಸ್ಥಾಪನೆಯ ಇತಿಹಾಸ
೧೯೫೦ರ ದಶಕದ ಕೊನೆಯಲ್ಲೇ ಭಾರತೀಯ ಸೇನಾ ಮುಖ್ಯಸ್ಥರಾದ ಜನರಲ್ ಕೆ ಎಸ್ ತಿಮ್ಮಯ್ಯನವರು ವಿಶೇಷ ಪಡೆಯ ಸ್ಥಾಪನೆಯ ಅವಶ್ಯಕತೆಯನ್ನು ಪ್ರಸ್ತಾಪಿಸಿದ್ದರು. ಆದರೆ ಆರಂಭದಲ್ಲಿ ರಾಜಕೀಯ ನಾಯಕರು ಈ ಸಲಹೆಯನ್ನು ತಿರಸ್ಕರಿಸಿದ್ದರು. ಆದರೆ, ಭಾರತ - ಚೀನಾ ನಡುವೆ ಯುದ್ಧ ಆರಂಭಗೊಂಡ ಬಳಿಕ, ವಿಶೇಷ ಪಡೆ ಆರಂಭಿಸುವ ಕುರಿತು ದೇಶದ ನಾಯಕತ್ವಕ್ಕೆ ಆಸಕ್ತಿ ಮರುಕಳಿಸಿತು.
ಚುಶಿ ಗಾಂಗ್‌ಡ್ರುಕ್ (ಟಿಬೇಟಿಯನ್ ಗೆರಿಲ್ಲಾ ಗುಂಪು), ಆರ್&ಎಡಬ್ಲು (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ - ಭಾರತದ ಪ್ರಮುಖ ಗುಪ್ತಚರ ಸಂಸ್ಥೆ) ಮತ್ತು ಸಿಐಎ ನಡುವೆ ಒಂದು ಅಧಿಕೃತ ಒಪ್ಪಂದ ನೆರವೇರಿತು. ಒಪ್ಪಂದದ ಭಾಗವಾಗಿದ್ದ ಮೂರು ಪಕ್ಷಗಳಿಗೂ ಭಾರತ - ಚೀನಾ ಗಡಿಯಲ್ಲಿ ಚೀನಾದಿಂದ ಸಂಭವಿಸಬಹುದಾದ ಅಪಾಯವನ್ನು ಎದುರಿಸಲು ತಮ್ಮದೇ ಆದ ಕಾರಣಗಳಿದ್ದವು.
ಚುಶಿ ಗ್ಯಾಂಗ್‌ಡ್ರುಕ್: ಸಿಜಿ ಗೆರಿಲ್ಲಾ ತಂತ್ರವನ್ನು ಬಳಸಿಕೊಂಡು ಹೋರಾಡುತ್ತಿದ್ದ ಟಿಬೆಟಿಯನ್ ಯೋಧರ ಗುಂಪಾಗಿತ್ತು. ಅವರು ಟಿಬೆಟ್ ಚೀನಾದ ಭಾಗವಾಗದೆ, ಸ್ವತಂತ್ರ ರಾಷ್ಟçವಾಗಿರಬೇಕು ಎಂಬ ವಾದದಲ್ಲಿ ನಂಬಿಕೆ ಇಟ್ಟಿದ್ದರಿಂದ, ಎಸ್‌ಎಫ್‌ಎಫ್ ಯೋಜನೆಯ ಭಾಗವಾದರು.
ರಾ: ಭಾರತ ಚೀನಾಗೆ ಸಂಬಂಧಿಸಿದಂತೆ ಭದ್ರತಾ ಕಳವಳಗಳನ್ನು ಹೊಂದಿತ್ತು. ಭಾರತಕ್ಕೆ ತನ್ನ ಗಡಿಗಳ ಮೇಲೆ ಸಾರ್ವಭೌಮತ್ವ ಹೊಂದುವ ಅವಶ್ಯಕತೆಯಿತ್ತು. ಎಸ್‌ಎಫ್‌ಎಫ್ ಸ್ಥಾಪನೆಗೊಂಡಾಗ, ಭಾರತವಿನ್ನೂ ಅಧಿಕೃತವಾಗಿ ಚೀನಾದೊಡನೆ ಯುದ್ಧದಲ್ಲಿ ನಿರತವಾಗಿತ್ತು.
ಸಿಐಎ: ಶೀತಲ ಸಮರದ ಅವಧಿಯಲ್ಲಿ, ಅಮೆರಿಕಾಗೆ ಚೀನಾದಿಂದ ಬರಬಹುದಾದ ಕಮ್ಯುನಿಸ್ಟ್ ಅಪಾಯಗಳ ಕುರಿತು ಬಹಳಷ್ಟು ಕಳವಳಗಳಿದ್ದವು. ಇಂತಹ ಸನ್ನಿವೇಶದಲ್ಲಿ, ಭಾರತದ ವಿಶೇಷ ಪಡೆಗೆ ನೆರವು ನೀಡುವುದು ತನ್ನ ಕಾರ್ಯತಂತ್ರದ ಯೋಜನೆಗಳಿಗೆ ಪೂರಕ ಎಂದು ಸಿಐಎ ಭಾವಿಸಿತ್ತು.
ಇದೆಲ್ಲದರ ಪರಿಣಾಮವಾಗಿ, ಚುಶಿ ಗ್ಯಾಂಗ್‌ಡ್ರುಕ್, ಸಿಐಎ ಮತ್ತು ರಾ ನಡುವೆ ನೆಹರೂ ಆಡಳಿತದ ನಿರ್ದೇಶನದಂತೆ ಒಂದು ಅರೆಸೇನಾಪಡೆಯನ್ನು ಸ್ಥಾಪಿಸುವ ಒಪ್ಪಂದಕ್ಕೆ ಬರಲಾಯಿತು. ಎಸ್‌ಎಫ್‌ಎಫ್ ಸ್ಥಾಪನೆಯ ಮೂಲ ಉದ್ದೇಶ ಗ್ರಾಮೀಣ ಮತ್ತು ಅರಣ್ಯ ಪ್ರದೇಶದ ಯುದ್ಧದಲ್ಲಿ ಪ್ರಾವೀಣ್ಯತೆ ಸಾಧಿಸುವುದು ಮತ್ತು ಭಾರತ - ಟಿಬೆಟ್ ಗಡಿಯಾದ್ಯಂತ ಕಣ್ಗಾವಲು ವ್ಯವಸ್ಥೆ ಸ್ಥಾಪಿಸುವುದಾಗಿತ್ತು.
ಎಸ್‌ಎಫ್‌ಎಫ್ ೧೯೬೨ರಲ್ಲಿ ಭಾರತದ ಉತ್ತರದ ರಾಜ್ಯವಾದ ಉತ್ತರಾಖಂಡದ ಚಕ್ರಾತಾ ಪಟ್ಟಣದಲ್ಲಿ ಸ್ಥಾಪಿತವಾಯಿತು. ಈ ಪ್ರದೇಶ ಟಿಬೆಟ್ ಗಡಿಗೆ ಸನಿಹದಲ್ಲಿದ್ದು, ಟಿಬೆಟಿಯನ್ ನಿರಾಶ್ರಿತರನ್ನು ದೊಡ್ಡ ಸಂಖ್ಯೆಯಲ್ಲಿ ಹೊಂದಿತ್ತು.
ಆರಂಭದಲ್ಲಿ ಎಸ್‌ಎಫ್‌ಎಫ್ ಪಡೆ ಚಕ್ರಾತದಲ್ಲಿ ವಾಸಿಸುತ್ತಿದ್ದ ೫,೦೦೦-೬,೦೦೦ ಟಿಬೆಟಿಯನ್ ನಿರಾಶ್ರಿತರನ್ನು ಹೊಂದಿತ್ತು. ಅವರಲ್ಲಿ ಬಹಳಷ್ಟು ಜನರು ಚುಶಿ ಗಾಂಗ್‌ಡ್ರುಕ್ ಪಡೆಯಲ್ಲಿ ಹೋರಾಡಿದ ಅನುಭವ ಹೊಂದಿದ್ದರು. ಎಸ್‌ಎಫ್‌ಎಫ್ ತನ್ನ ಉತ್ಕರ್ಷದ ಅವಧಿಯಲ್ಲಿ ಅತ್ಯಧಿಕ ಎಂದರೆ ೧೨,೦೦೦ ಸದಸ್ಯರನ್ನು ಹೊಂದಿತ್ತು.
ಕಾರ್ಯತಂತ್ರಗಳು, ತಂತ್ರಗಳು ಮತ್ತು ಕಾರ್ಯಾಚರಣೆ (ಟಿಟಿಪಿ)
ಗಡಿ ಚಕಮಕಿಗಳು ಮತ್ತು ಉತ್ತರದ ಗಡಿಗಳಾಚೆಯಿಂದ ಬರಬಲ್ಲ ಅಪಾಯಗಳನ್ನು ಪರಿಗಣಿಸಿ, ಭಾರತ ದುರ್ಗಮ ಪ್ರದೇಶಗಳಲ್ಲಿ ಹೋರಾಡುವ ಅವಶ್ಯಕತೆಯನ್ನು ಮನಗಂಡಿತ್ತು. ಗಡಿ ಪ್ರದೇಶಗಳಲ್ಲಿ ನಿಯೋಜಿತವಾದ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಪಡೆಗೆ ಅರಣ್ಯ ಮತ್ತು ಪರ್ವತ ಪ್ರದೇಶಗಳಲ್ಲಿ ಯುದ್ಧ ನಡೆಸಲು ತೀವ್ರ ತರಬೇತಿ ನೀಡಲಾಯಿತು.
ಭಾರತೀಯ ಸೇನಾ ಪಡೆಯಿಂದ ಸ್ವತಂತ್ರ ಸಂಸ್ಥೆಯಾದ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಒಂದು ಅರೆಸೇನಾ ಪಡೆಯಾಗಿ ಕಾರ್ಯಾಚರಿಸುತ್ತಿದ್ದು, ಇದರ ಮುಖ್ಯಸ್ಥರು ರಾ ನಿರ್ದೇಶಕರಿಗೆ ವರದಿ ಮಾಡುತ್ತಾರೆ. ಎಸ್‌ಎಫ್‌ಎಫ್ ಆರು ಬಟಾಲಿಯನ್‌ಗಳನ್ನು ಹೊಂದಿದ್ದು, ಅವುಗಳನ್ನು ವಿಕಾಸ್ ಯುನಿಟ್‌ಗಳೆಂದು ಕರೆಯಲಾಗುತ್ತದೆ.
ಆರಂಭದಲ್ಲಿ ಎಸ್‌ಎಫ್‌ಎಫ್ ತನ್ನ ಆಯುಧಗಳಿಗೆ ಬಹುಪಾಲು ಅಮೆರಿಕಾ ಪೂರೈಸುತ್ತಿದ್ದ ಎಂ-೧, ಎಂ-೨, ಮತ್ತು ಎಂ-೩ ಮೆಷಿನ್ ಗನ್ನುಗಳ ಮೇಲೆ ಅವಲಂಬಿತವಾಗಿತ್ತು. ಆದರೆ, ೧೯೬೦ರ ದಶಕದಲ್ಲಿ ಎಸ್‌ಎಫ್‌ಎಫ್ ಮಹತ್ವದ ಕಾರ್ಯತಂತ್ರದ ಗೆಲುವುಗಳನ್ನು ಸಾಧಿಸಿದ ಬಳಿಕ, ಅಮೆರಿಕಾ ಮತ್ತು ರಾ ಎಸ್‌ಎಫ್‌ಎಫ್‌ಗೆ ಹೆಚ್ಚಿನ ಆಯುಧ ಮತ್ತು ಸೌಕರ್ಯಗಳನ್ನು ಒದಗಿಸಿದವು. ಇದರಲ್ಲಿ ವಾಯು ತರಬೇತಿಗಾಗಿ ವಿಮಾನವೂ ಸೇರಿತ್ತು.
ಯುದ್ಧದ ಕಾರ್ಯಾಚರಣೆಗಳ ಜೊತೆಗೆ, ಎಸ್ಟಾಬ್ಲಿಷ್ಮೆಂಟ್ ೨೨ ಚೀನಾದ ಅಣ್ವಸ್ತ್ರ ಮತ್ತು ಕ್ಷಿಪಣಿ ಯೋಜನೆಗಳ ಕುರಿತು ಮಾಹಿತಿ ಕಲೆಹಾಕಲು ಟಿಬೆಟಿನ ಗಡಿಯಾದ್ಯಂತ ಬೇಹುಗಾರಿಕಾ ಕಾರ್ಯಾಚರಣೆಗಳನ್ನೂ ನಡೆಸಿತ್ತು.
ಹಿಂದೆ ಸರಿದ ಸಿಐಎ
೧೯೭೧ರಲ್ಲಿ, ಸಿಐಎ ತನ್ನ ಪಡೆಯನ್ನು ಎಸ್‌ಎಫ್‌ಎಫ್ ತರಬೇತಿಯಿಂದ ಹಿಂಪಡೆಯಿತು. ರಿಚರ್ಡ್ ನಿಕ್ಸನ್ ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ಆರಂಭದಲ್ಲಿ, ಭಾರತ - ಪಾಕಿಸ್ತಾನ ಯುದ್ಧದ ವೇಳೆ ಅಮೆರಿಕಾ ಪಾಕಿಸ್ತಾನಕ್ಕೆ ಬಹಿರಂಗವಾಗಿ ಬೆಂಬಲ ನೀಡಿತು. ಇದರಿಂದಾಗಿ ಭಾರತ ಮತ್ತು ಅಮೆರಿಕಾ ರಾಜತಾಂತ್ರಿಕ ಸಂಬಂಧ ಕುಸಿಯತೊಡಗಿತ್ತು. ಈ ಹದಗೆಡುವಿಕೆಯ ಪರಿಣಾಮವಾಗಿ, ಸಿಐಎ ಎಸ್‌ಎಫ್‌ಎಫ್ ತರಬೇತಿ ಮತ್ತು ಧನಸಹಾಯದಿಂದ ಹಿಂದೆ ಸರಿಯಿತು.
ಕೆಲವು ವರದಿಗಳ ಪ್ರಕಾರ, ಸಿಐಎ ಹೊರನಡೆದುದರಿಂದ ಉಂಟಾದ ನಿರ್ವಾತವನ್ನು ರಷ್ಯಾದ ಕೆಜಿಬಿ ಬಳಸಿಕೊಂಡಿತು. ಎಸ್‌ಎಫ್‌ಎಫ್ ಪಡೆಗಳಿಗೆ ಹೆಚ್ಚುವರಿ ತರಬೇತಿ ನೀಡಲು ಸೋವಿಯತ್ ಒಕ್ಕೂಟ ತನ್ನ ಕೆಜಿಬಿ ಯೋಧರನ್ನು ಬಳಸಿಕೊಂಡಿತ್ತು.
ಆಧುನಿಕ ಎಸ್‌ಎಫ್‌ಎಫ್
ಎಸ್‌ಎಫ್‌ಎಫ್ ತನ್ನ ಸ್ಥಾಪನೆಯ ಬಳಿಕ, ಭಾರತ ಕೈಗೊಂಡ ಬಹಳಷ್ಟು ಕಾರ್ಯತಂತ್ರದ ಕಾರ್ಯಾಚರಣೆಗಳಲ್ಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಿದೆ. ೧೯೭೧ರ ಬಾಂಗ್ಲಾದೇಶ ವಿಮೋಚನಾ ಯುದ್ಧ ಮತ್ತು ೧೯೮೪ರ ಆಪರೇಶನ್ ಬ್ಲೂಸ್ಟಾರ್‌ಗಳು ಎಸ್‌ಎಫ್‌ಎಫ್ ಕಾರ್ಯಾಚರಣೆಗಳಿಗೆ ಕೆಲವು ಉದಾಹರಣೆಗಳಾಗಿವೆ.
ಎಸ್‌ಎಫ್‌ಎಫ್ ಭಾರತದ ಒಂದು ವಿಶಿಷ್ಟ ಅರೆಸೇನಾ ಪಡೆಯಾಗಿ ಮುಂದುವರಿದಿದೆ. ಇದಕ್ಕೆ ಅಧಿಕಾರಿಗಳನ್ನು ಮುಖ್ಯ ಸೇನೆಯಿಂದ ನೇಮಿಸಲಾಗುತ್ತದೆ. ಇಂದಿನ ಎಸ್‌ಎಫ್‌ಎಫ್ ಯೋಧರು ವಾಯು, ಪರ್ವತ, ಅರಣ್ಯ ಮತ್ತು ಜಲ ಪ್ರದೇಶಗಳಲ್ಲಿ ಯುದ್ಧ ನಡೆಸುವ ತರಬೇತಿಗಳನ್ನು ಹೊಂದುತ್ತಾರೆ.
ತಾಂತ್ರಿಕವಾಗಿ ಸ್ಪೆಷಲ್ ಫ್ರಾಂಟಿಯರ್ ಫೋರ್ಸ್ ಸ್ವತಂತ್ರ ಪಡೆಯಾದರೂ, ಎಸ್‌ಎಫ್‌ಎಫ್ ನಾಯಕತ್ವ ತರಬೇತಿ ಮತ್ತು ಪ್ರಗತಿಯ ವರದಿಗಳನ್ನು ರಾ ನಿರ್ದೇಶಕರಿಗೆ ಸಲ್ಲಿಸುತ್ತದೆ. ಎಸ್‌ಎಫ್‌ಎಫ್ ಭಾರತೀಯ ಸೇನೆಯಲ್ಲಿನ ಏಕೈಕ ಮೂಲ ಟಿಬೆಟಿಯನ್ ಪಡೆಯಾಗಿದೆ.
ಎಸ್‌ಎಫ್‌ಎಫ್ ಸ್ಥಾಪನೆಯಾದ ಬಳಿಕ, ರಾಜಕೀಯ ಚಿತ್ರಣಗಳು ಸಾಕಷ್ಟು ಬದಲಾದರೂ, ಅದು ಭಾರತದ ಕಾರ್ಯತಂತ್ರ ಮತ್ತು ಗುಪ್ತಚರ ಕಾರ್ಯಾಚರಣೆಗಳ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸುತ್ತಲೇ ಬಂದಿದೆ.