ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾರತದ ಸೇವೆಗೆ ಮುಡಿಪಾದ ಜೀವನ

02:30 AM Jul 01, 2024 IST | Samyukta Karnataka

ಭಾರತದ ಮಾಜಿ ಉಪರಾಷ್ಟ್ರಪತಿ ಮತ್ತು ರಾಜಕೀಯ ಮುತ್ಸದ್ದಿ ಎಂ. ವೆಂಕಯ್ಯ ನಾಯ್ಡು ಅವರು ಇಂದು ೭೫ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಸುದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಆಶಿಸುತ್ತೇನೆ ಮತ್ತು ಅವರ ಎಲ್ಲಾ ಹಿತೈಷಿಗಳು ಮತ್ತು ಬೆಂಬಲಿಗರಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಸಮರ್ಪಣೆ, ಹೊಂದಾಣಿಕೆ ಮತ್ತು ಸಾರ್ವಜನಿಕ ಸೇವೆಗೆ ಅಚಲವಾದ ಬದ್ಧತೆಯ ನಾಯಕನ ಕುರಿತು ಸಂಭ್ರಮಿಸಲು ಇದೊಂದು ಸಂದರ್ಭವಾಗಿದೆ.

ರಾಜಕೀಯ ರಂಗದಲ್ಲಿ ಅವರ ಆರಂಭಿಕ ದಿನಗಳಿಂದ ಉಪರಾಷ್ಟ್ರಪತಿಯವರೆಗೆ, ವೆಂಕಯ್ಯ ನಾಯ್ಡು ಅವರ ವೃತ್ತಿಜೀವನವು ಭಾರತ ರಾಜಕೀಯದ ಸಂಕೀರ್ಣತೆಗಳನ್ನು ಸುಲಭವಾಗಿ ಮತ್ತು ನಮ್ರತೆಯಿಂದ ಪರಿಹರಿಸುವ ಅವರ ಅನನ್ಯ ಸಾಮರ್ಥ್ಯಕ್ಕೆ ಮಾದರಿಯಾಗಿದೆ. ಅವರ ವಾಕ್ಚಾತುರ್ಯ, ಜಾಣ್ಮೆ ಮತ್ತು ಅಭಿವೃದ್ಧಿಯ ವಿಷಯಗಳ ಮೇಲಿನ ದೃಢವಾದ ಗಮನವು ಪಕ್ಷಾತೀತವಾಗಿ ಗೌರವವನ್ನು ಗಳಿಸಿಕೊಟ್ಟಿದೆ.
ವೆಂಕಯ್ಯ ನಾಯ್ಡು ಮತ್ತು ನಾನು ದಶಕಗಳಿಂದ ಪರಸ್ಪರ ಜೊತೆಯಲ್ಲಿದ್ದೇವೆ. ಒಟ್ಟಿಗೆ ಕೆಲಸ ಮಾಡಿದ್ದೇವೆ. ಅವರ ಜೀವನದಲ್ಲಿ ಸಾಮಾನ್ಯವಾದ ಒಂದು ಸಂಗತಿ ಎಂದರೆ, ಅದು ಜನರ ಮೇಲಿನ ಪ್ರೀತಿ. ಅವರ ಹೋರಾಟ ಮತ್ತು ರಾಜಕೀಯ ಜೀವನವು ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿ ನಾಯಕನಾಗಿ ಪ್ರಾರಂಭವಾಯಿತು. ಪ್ರತಿಭೆ, ವಾಕ್ಚಾತುರ್ಯ ಮತ್ತು ಸಂಘಟನಾ ಕೌಶಲ್ಯವನ್ನು ಪರಿಗಣಿಸಿ, ಅವರನ್ನು ಯಾವುದೇ ರಾಜಕೀಯ ಪಕ್ಷವೂ ಸ್ವಾಗತಿಸುತ್ತಿತ್ತು. ಆದರೆ ಅವರು ಸಂಘ ಪರಿವಾರದೊಂದಿಗೆ ಕೆಲಸ ಮಾಡಲು ಆದ್ಯತೆ ನೀಡಿದರು. ಏಕೆಂದರೆ ಅವರು ರಾಷ್ಟç ಮೊದಲು ದೃಷ್ಟಿಕೋನದಿಂದ ಪ್ರೇರಿತರಾಗಿದ್ದರು. ಅವರು ಆರ್‌ಎಸ್‌ಎಸ್, ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ನಂತರ ಜನಸಂಘ ಮತ್ತು ಬಿಜೆಪಿಯನ್ನು ಬಲಪಡಿಸಿದರು.
ಸುಮಾರು ೫೦ ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಹೇರಿದಾಗ, ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಧುಮುಕಿದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರನ್ನು ಆಂಧ್ರಪ್ರದೇಶಕ್ಕೆ ಆಹ್ವಾನಿಸಿದ್ದಕ್ಕಾಗಿ ಅವರನ್ನು ಜೈಲಿಗೆ ಹಾಕಲಾಯಿತು. ಪ್ರಜಾಪ್ರಭುತ್ವದ ಬಗೆಗಿನ ಈ ಬದ್ಧತೆಯನ್ನು ಅವರ ರಾಜಕೀಯ ಜೀವನದಲ್ಲಿ ಮತ್ತೆ ಮತ್ತೆ ಕಾಣಬಹುದು. ೧೯೮೦ರ ದಶಕದ ಮಧ್ಯಭಾಗದಲ್ಲಿ, ಎನ್‌ಟಿಆರ್ ಅವರ ಸರ್ಕಾರವನ್ನು ಕಾಂಗ್ರೆಸ್ ವಜಾಗೊಳಿಸಿದಾಗ, ಅವರು ಮತ್ತೆ ಪ್ರಜಾಪ್ರಭುತ್ವದ ಆದರ್ಶಗಳನ್ನು ರಕ್ಷಿಸುವ ಚಳವಳಿಯ ಮುಂಚೂಣಿಯಲ್ಲಿದ್ದರು.
೧೯೭೮ರಲ್ಲಿ, ಆಂಧ್ರಪ್ರದೇಶವು ಕಾಂಗ್ರೆಸ್‌ಗೆ ಮತ ಹಾಕಿತು, ಆದರೆ ಅವರು ಆ ಪ್ರವೃತ್ತಿಯನ್ನು ಸೋಲಿಸಿ, ಯುವ ಶಾಸಕರಾಗಿ ಆಯ್ಕೆಯಾದರು. ಐದು ವರ್ಷಗಳ ನಂತರ, ಎನ್‌ಟಿಆರ್ ಸುನಾಮಿ ರಾಜ್ಯವನ್ನು ಆವರಿಸಿದಾಗಲೂ, ಬಿಜೆಪಿ ಶಾಸಕರಾಗಿ ಆಯ್ಕೆಯಾದರು, ಹೀಗಾಗಿ ರಾಜ್ಯಾದ್ಯಂತ ಬಿಜೆಪಿಯ ಬೆಳವಣಿಗೆಗೆ ದಾರಿ ಮಾಡಿಕೊಟ್ಟರು.
ವೆಂಕಯ್ಯ ನಾಯ್ಡು ಅವರ ಮಾತು ಕೇಳಿದವರೆಲ್ಲ ಅವರ ವಾಕ್ಚಾತುರ್ಯವನ್ನು ಮೆಲುಕು ಹಾಕುತ್ತಾರೆ. ಯುವ ಶಾಸಕರಾಗಿದ್ದ ದಿನಗಳಿಂದ, ಶಾಸಕಾಂಗ ವ್ಯವಹಾರಗಳಲ್ಲಿ ನಿಷ್ಠುರತೆ ಮತ್ತು ತಮ್ಮ ಕ್ಷೇತ್ರದ ಜನರ ಪರವಾಗಿ ದನಿಯಾದದ್ದಕ್ಕಾಗಿ ಗೌರವಕ್ಕೆ ಪಾತ್ರರಾಗಲಾರಂಭಿಸಿದರು. ಎನ್‌ಟಿಆರ್‌ರಂತಹ ಧೀಮಂತರು ಅವರ ಪ್ರತಿಭೆಯನ್ನು ಗಮನಿಸಿದರು ಮತ್ತು ಅವರು ತಮ್ಮ ಪಕ್ಷಕ್ಕೆ ಸೇರಬೇಕೆಂದು ಬಯಸಿದ್ದರು. ಆದರೆ ಅವರು ತಮ್ಮ ಮೂಲ ಸಿದ್ಧಾಂತದಿಂದ ವಿಮುಖರಾಗಲಿಲ್ಲ. ಆಂಧ್ರಪ್ರದೇಶದಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು, ಹಳ್ಳಿ-ಹಳ್ಳಿಗಳನ್ನು ಸುತ್ತಿ ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಸಂಪರ್ಕ ಸಾಧಿಸಿದರು. ವಿಧಾನಸಭೆಯಲ್ಲಿ ಪಕ್ಷವನ್ನು ಮುನ್ನಡೆಸಿ, ಆಂಧ್ರಪ್ರದೇಶದ ಬಿಜೆಪಿಯ ಅಧ್ಯಕ್ಷರಾದರು.
೧೯೯೦ರ ದಶಕದಲ್ಲಿ ಬಿಜೆಪಿಯ ಕೇಂದ್ರ ನಾಯಕತ್ವವು ವೆಂಕಯ್ಯ ಅವರ ಪ್ರಯತ್ನಗಳನ್ನು ಗಮನಿಸಿತು. ೧೯೯೩ರಲ್ಲಿ ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ರಾಷ್ಟ್ರ ರಾಜಕೀಯದಲ್ಲಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ಹದಿಹರೆಯದವರಾಗಿದ್ದಾಗ ಅಟಲ್ ಮತ್ತು ಅಡ್ವಾಣಿ ಅವರ ಭೇಟಿಗಳ ಸಂದರ್ಭದಲ್ಲಿ ಪ್ರಚಾರ ಘೋಷಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಅವರೊಂದಿಗೆ ನೇರವಾಗಿ ಕೆಲಸ ಮಾಡುವಂತಾದದ್ದು ನಿಜಕ್ಕೂ ಅದ್ಭುತವಾದ ಕ್ಷಣವಾಗಿತ್ತು. ಅವರು ಪ್ರಧಾನ ಕಾರ್ಯದರ್ಶಿಯಾಗಿ, ಪಕ್ಷವನ್ನು ಅಧಿಕಾರಕ್ಕೆ ತರುವುದು ಹೇಗೆ ಮತ್ತು ರಾಷ್ಟ್ರವು ಮೊದಲ ಬಿಜೆಪಿ ಪ್ರಧಾನಿಯನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ಗಮನಹರಿಸಿದ್ದರು. ದೆಹಲಿಗೆ ತೆರಳಿದ ನಂತರ ಹಿಂತಿರುಗಿ ನೋಡದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಗಾದಿಗೆ ಏರಿದರು.
೨೦೦೦ದಲ್ಲಿ, ಅಟಲ್ ಜಿ ಅವರು ವೆಂಕಯ್ಯ ನಾಯ್ಡು ಅವರನ್ನು ಸಚಿವರಾಗಿ ಸರ್ಕಾರಕ್ಕೆ ಸೇರಿಸಿಕೊಳ್ಳಲು ಬಯಸಿದಾಗ, ವೆಂಕಯ್ಯ ಅವರು ತಕ್ಷಣವೇ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಬಗೆಗಿನ ತಮ್ಮ ಆದ್ಯತೆಯನ್ನು ತಿಳಿಸಿದರು. ಇದು ಅಟಲ್ ಜೀ ಸೇರಿದಂತೆ ಎಲ್ಲರನ್ನೂ ಗೊಂದಲಕ್ಕೊಳಪಡಿಸಿತು. ಇಲ್ಲಿ ಒಬ್ಬ ನಾಯಕನಿಗೆ ಯಾವ ಖಾತೆ ಬೇಕು ಎಂದು ಕೇಳಲಾಯಿತು ಮತ್ತು ಅವರ ಮೊದಲ ಆಯ್ಕೆ ಗ್ರಾಮೀಣಾಭಿವೃದ್ಧಿಯಾಗಿತ್ತು. ಆದರೆ, ವೆಂಕಯ್ಯ ಸ್ಪಷ್ಟವಾಗಿದ್ದರು-ಅವರೊಬ್ಬ ರೈತನ ಮಗ, ತಮ್ಮ ಆರಂಭಿಕ ದಿನಗಳನ್ನು ಹಳ್ಳಿಗಳಲ್ಲಿ ಕಳೆದವರು. ಕೆಲಸ ಮಾಡಲು ಬಯಸಿದ್ದು ಗ್ರಾಮೀಣಾಭಿವೃದ್ಧಿಯಾಗಿತ್ತು. ಸಚಿವರಾಗಿ, ಅವರು `ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ'ಯ ಪರಿಕಲ್ಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಲವು ವರ್ಷಗಳ ನಂತರ, ೨೦೧೪ರ ಎನ್‌ಡಿಎ ಸರ್ಕಾರವು ಅಧಿಕಾರ ವಹಿಸಿಕೊಂಡಾಗ, ಅವರು ನಗರಾಭಿವೃದ್ಧಿ, ವಸತಿ ಮತ್ತು ನಗರ ಬಡತನ ನಿರ್ಮೂಲನೆಯಂತಹ ನಿರ್ಣಾಯಕ ಖಾತೆಗಳನ್ನು ನಿರ್ವಹಿಸಿದರು. ಅವರ ಅಧಿಕಾರಾವಧಿಯಲ್ಲಿ ನಾವು ಪ್ರಮುಖವಾದ ಸ್ವಚ್ಛ ಭಾರತ್ ಮಿಷನ್ ಮತ್ತು ಪ್ರಮುಖ ನಗರಾಭಿವೃದ್ಧಿ ಸಂಬಂಧಿತ ಯೋಜನೆಗಳನ್ನು ಪ್ರಾರಂಭಿಸಿದೆವು. ಪ್ರಾಯಶಃ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಎರಡರಲ್ಲೂ ಇಷ್ಟೊಂದು ವ್ಯಾಪಕ ಅವಧಿಗೆ ಶ್ರಮಿಸಿದ ಏಕೈಕ ನಾಯಕರು ಅವರು.
ನಾನು ೨೦೧೪ ರಲ್ಲಿ ದೆಹಲಿಗೆ ಬಂದಾಗ, ನಾನು ರಾಷ್ಟç ರಾಜಧಾನಿಗೆ ಹೊರಗಿನವನಾಗಿದ್ದೆ, ಹಿಂದಿನ ಒಂದೂವರೆ ದಶಕಗಳಿಂದ ಗುಜರಾತ್ ನಲ್ಲಿ ಕೆಲಸ ಮಾಡಿದ್ದೆ. ಅಂತಹ ಸಮಯದಲ್ಲಿ, ವೆಂಕಯ್ಯ ಅವರ ಒಳನೋಟಗಳು ತುಂಬಾ ಉಪಯುಕ್ತವಾದವು. ಅವರು ಪರಿಣಾಮಕಾರಿ ಸಂಸದೀಯ ವ್ಯವಹಾರಗಳ ಸಚಿವರಾಗಿದ್ದರು-ಅವರು ದ್ವಿಪಕ್ಷೀಯತೆಯ ವೈಶಿಷ್ಟ್ಯವನ್ನು ತಿಳಿದಿದ್ದರು, ಅದೇ ಸಮಯದಲ್ಲಿ ಸಂಸದೀಯ ನಡವಳಿಕೆ ಮತ್ತು ನಿಯಮಗಳ ವಿಷಯಕ್ಕೆ ಬಂದಾಗ ಕಟ್ಟುನಿಟ್ಟಾಗಿದ್ದರು.
೨೦೧೭ರಲ್ಲಿ, ಮೈತ್ರಿಕೂಟವು ಅವರನ್ನು ಉಪರಾಷ್ಟçಪತಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತು. ನಾವು ಸಂದಿಗ್ಧತೆಗೆ ಸಿಲುಕಿದ್ದೆವು-ವೆಂಕಯ್ಯ ಅವರಂತಹ ದೊಡ್ಡ ವ್ಯಕ್ತಿತ್ವವನ್ನು ತುಂಬುವುದು ಹೇಗೆ ಎಂದು ನಾವು ಯೋಚಿಸಿದೆವು, ಆದರೆ ಅದೇ ಸಮಯದಲ್ಲಿ, ಉಪರಾಷ್ಟçಪತಿ ಸ್ಥಾನಕ್ಕೆ ಅವರಿಗಿಂತ ಉತ್ತಮ ಅಭ್ಯರ್ಥಿ ಇಲ್ಲ ಎಂದು ನಮಗೆ ತಿಳಿದಿತ್ತು. ಸಚಿವ ಸ್ಥಾನ ಹಾಗೂ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಂದರ್ಭದಲ್ಲಿ ಅವರು ಮಾಡಿದ ಭಾಷಣವನ್ನು ಮರೆಯಲು ಸಾಧ್ಯವೇ ಇಲ್ಲ. ಪಕ್ಷದ ಜೊತೆಗಿನ ಒಡನಾಟ ಮತ್ತು ಅದನ್ನು ಕಟ್ಟುವ ಪ್ರಯತ್ನಗಳನ್ನು ನೆನಪಿಸಿಕೊಂಡಾಗ ಅವರಿಗೆ ಕಣ್ಣೀರನ್ನು ತಡೆಯಲಾಗಲಿಲ್ಲ. ಇದು ಅವರ ಆಳವಾದ ಬದ್ಧತೆ ಮತ್ತು ಹಂಬಲದ ಒಂದು ನೋಟವನ್ನು ನೀಡಿತು. ಉಪರಾಷ್ಟ್ರಪತಿಯಾದ ಮೇಲೆ ತಮ್ಮ ಕಚೇರಿಯ ಘನತೆಯನ್ನು ಹೆಚ್ಚಿಸುವ ಹಲವಾರು ಕ್ರಮಗಳನ್ನು ಕೈಗೊಂಡರು. ಅವರು ರಾಜ್ಯಸಭೆಯ ಅತ್ಯುತ್ತಮ ಸಭಾಪತಿಯಾಗಿದ್ದರು, ಯುವ ಸಂಸದರು, ಮಹಿಳಾ ಸಂಸದರು ಮತ್ತು ಮೊದಲ ಬಾರಿಯ ಸಂಸದರಿಗೆ ಮಾತನಾಡಲು ಅವಕಾಶ ಸಿಗುವಂತೆ ಮಾಡಿದರು. ಅವರು ಹಾಜರಾತಿಗೆ ಹೆಚ್ಚಿನ ಒತ್ತು ನೀಡಿದರು, ಸಮಿತಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಿದರು ಮತ್ತು ಸದನದಲ್ಲಿ ಚರ್ಚೆಯ ಮಟ್ಟವನ್ನು ಹೆಚ್ಚಿಸಿದರು.
೩೭೦ ಮತ್ತು ೩೫(ಎ) ವಿಧಿಗಳನ್ನು ರದ್ದು ಮಾಡುವ ನಿರ್ಧಾರವನ್ನು ರಾಜ್ಯಸಭೆಯಲ್ಲಿ ಮಂಡಿಸಿದಾಗ, ವೆಂಕಯ್ಯ ನಾಯ್ಡು ಸಭಾಪತಿ ಪೀಠದಲ್ಲಿದ್ದರು. ಇದು ಅವರಿಗೆ ಭಾವನಾತ್ಮಕ ಕ್ಷಣವಾಗಿತ್ತು. ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ಅಖಂಡ ಭಾರತದ ಕನಸಿನಿಂದ ಆಕರ್ಷಿತನಾದ ಯುವಕನೊಬ್ಬ ಅಂತಿಮವಾಗಿ ಅದನ್ನು ಸಾಧಿಸಿದಾಗ ಸಭಾಪತಿಯ ಪೀಠದಲ್ಲಿದ್ದರು.
ಕೆಲಸ ಮತ್ತು ರಾಜಕೀಯದ ಹೊರತಾಗಿ, ಅಪಾರ ಹಸಿವಿನ ಓದುಗ ಮತ್ತು ಬರಹಗಾರ ಕೂಡ. ದೆಹಲಿಯ ಜನರು ಅವರನ್ನು ನಗರಕ್ಕೆ ವೈಭವದ ತೆಲುಗು ಸಂಸ್ಕೃತಿಯನ್ನು ತಂದ ವ್ಯಕ್ತಿ ಎಂದು ಕರೆಯುತ್ತಾರೆ. ಅವರ ಯುಗಾದಿ ಮತ್ತು ಸಂಕ್ರಾಂತಿ ಕಾರ್ಯಕ್ರಮಗಳು ನಗರದ ಅತ್ಯಂತ ಪ್ರೀತಿಯ ಕೂಟಗಳು.
ಉಪರಾಷ್ಟ್ರಪತಿಯಾದ ನಂತರವೂ ವೆಂಕಯ್ಯ ಅವರು ಸಕ್ರಿಯ ಸಾರ್ವಜನಿಕ ಜೀವನವನ್ನು ನಡೆಸಿದರು. ಅವರು ಇಷ್ಟದ ವಿಷಯಗಳ ಬಗ್ಗೆ ಅಥವಾ ರಾಷ್ಟ್ರದಾದ್ಯಂತ ನಡೆಯುವ ವಿವಿಧ ಬೆಳವಣಿಗೆಗಳ ಬಗ್ಗೆ, ಕರೆ ಮಾಡಿ ಕೇಳುತ್ತಾರೆ. ಇತ್ತೀಚೆಗಷ್ಟೇ ಸರ್ಕಾರ ಮೂರನೇ ಅವಧಿಗೆ ಅಧಿಕಾರಕ್ಕೆ ಬಂದಾಗ ಅವರನ್ನು ಭೇಟಿಯಾಗಿದ್ದೆ. ಅವರು ಸಂತೋಷಪಟ್ಟರು. ಯುವ ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಮತ್ತು ಸೇವೆ ಮಾಡುವ ಉತ್ಸಾಹ ಹೊಂದಿರುವ ಎಲ್ಲರೂ ಅವರ ಬದುಕಿನಿಂದ ಕಲಿಯುತ್ತಾರೆ ಮತ್ತು ಆ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದು ನಾನು ಆಶಿಸುತ್ತೇನೆ.

Next Article