For the best experience, open
https://m.samyuktakarnataka.in
on your mobile browser.

ಭಾರತವು ಜಗದ್ಗುರುವಾಗಲು ನೀಡಿದ ಸಂದೇಶ

02:18 PM Dec 26, 2023 IST | Samyukta Karnataka
ಭಾರತವು ಜಗದ್ಗುರುವಾಗಲು ನೀಡಿದ ಸಂದೇಶ

ಬೆಳಗಾವಿಯಲ್ಲಿ ಈ ಸಲ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಆಗಿದೆ. ಒಂದು ತಿಂಗಳ ಅಭಿಯಾನದಲ್ಲಿ ಭಗವಂತನ ಸಂಕಲ್ಪದಂತೆ ನಾಲ್ಕು ಪ್ರಮುಖ ಕಾರ್ಯಕ್ರಮಗಳು ಏರ್ಪಟ್ಟವು. ನಾಲ್ಕು ಪ್ರಮುಖ ಕಾರ್ಯಕ್ರಮಗಳು ಭಾರತ ಜಗದ್ಗುರುವಾಗಲು ಬೇಕಾಗುವ ಪ್ರಮುಖ ನಾಲ್ಕು ಉಪಾಯಗಳಾಗಿದ್ದುದ್ದು ಭಗವಂತನ ಸಂದೇಶವೆಂಬುದಾಗಿ ನಾವು ಭಾವಿಸುತ್ತೇವೆ.
ನಡೆದ ನಾಲ್ಕು ಪ್ರಮುಖ ಕಾರ್ಯಕ್ರಮಗಳೆಂದರೆ ೧) ಮಕ್ಕಳಿಗೆ ಭಗವದ್ಗೀತೆ ಕಲಿಕೆ ೨) ಭಗವದ್ಗೀತೆ ಮತ್ತು ಕಾನೂನು ಎಂಬ
ವಿಚಾರಸಂಕಿರಣ ೩) ಭಗವದ್ಗೀತೆ ಮತ್ತು ನಿರ್ವಹಣಾಶಾಸ್ತ್ರ (ಮ್ಯಾನೆಜ್‌ಮೆಂಟ್) ಎಂಬ ಕಾರ್ಯಗಾರ ೪) ಗೀತಾ ಸಮನ್ವಯ ಎಂಬ ಚಿಂತನಗೋಷ್ಠಿ ಇವು ಭಾರತವು ಜಗದ್ಗುರುವಾಗಲು ಬೇಕಾಗುವ ನಾಲ್ಕು ಪ್ರಮುಖ ಸಂದೇಶಗಳನ್ನು ಕೊಡುತ್ತವೆ. ಭಾರತವು ಜಗದ್ಗುರುವಾಗಲು ಭಾರತೀಯರೆಲ್ಲರಿಗೆ ಚಿಕ್ಕವಯಸ್ಸಿನಿಂದಲೇ ಆಧ್ಯಾತ್ಮಿಕ ಶಿಕ್ಷಣ ಅಗತ್ಯ. ಆಧ್ಯಾತ್ಮಿಕತೆಯ ಬೆಂಬಲವಿಲ್ಲದೆ ಯಾವ ಸಾಧನೆಯೂ ಪರಿಪೂರ್ಣವಾಗುವುದಿಲ್ಲ. ಅದಕ್ಕಾಗಿ ಎಲ್ಲಾ ಶಾಲಾಮಕ್ಕಳಿಗೆ ಭಗವದ್ಗೀತೆಯ ಶಿಕ್ಷಣ ಬೇಕು. ಇದು ಮೊದಲನೇ ಕಾರ್ಯಕ್ರಮದ ಸಂದೇಶ. ಯಾವುದೇ ದೇಶ ಸುದೃಢವಾಗಲು ಗಟ್ಟಿಯಾದ ಕಾನೂನು ಅಗತ್ಯ. ಅನ್ಯಾಯವನ್ನು ಸರಿಪಡಿಸದಿದ್ದರೆ ಯಾವುದೇ ಸಾಮೂಹಿಕ ಸಾಧನೆ ನಿಲ್ಲುವುದಿಲ್ಲ. ಇದಕ್ಕಾಗಿ ನಮ್ಮ ಕಾನೂನು ವ್ಯವಸ್ಥೆ ಇನ್ನಷ್ಟು ಸುದೃಢವಾಗಲು ಭಗವದ್ಗೀತೆಯ
ಚಿಂತನೆ ಎಲ್ಲಾ ನ್ಯಾಯಾಧೀಶರಿಗೆ ಅಗತ್ಯ. ಎಲ್ಲಾ ವಕೀಲರಿಗೂ ಸಿಕ್ಕಿದರೆ ಇನ್ನೂ ಉತ್ತಮ. ಎರಡನೇ ಕಾರ್ಯಕ್ರಮ ಈ ಸಂದೇಶವನ್ನು ಕೊಡುತ್ತವೆ. ಔದ್ಯೋಗಿಕ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯಾಗಬೇಕೆಂಬುದು ಇಂದಿನ ಎಲ್ಲರ ಬಯಕೆ. ಉದ್ಯಮಿಗಳಿಗೆ ಮತ್ತು ಕಾರ್ಮಿಕರಿಗೆ ಭಗವದ್ಗೀತೆಯನ್ನು ಅವಲಂಬಿಸಿದ ನಿರ್ವಹಣಾ ತರಬೇತಿ (ಮ್ಯಾನೆಜ್‌ಮೆಂಟ್ ಕೋರ್ಸ್) ಅಗತ್ಯವಿದೆ. ಇದು ಉದ್ಯೋಗಿಗಳ ಮತ್ತು ಕಾರ್ಮಿಕರ ಕಾರ್ಯಕ್ಷಮತೆ ಹೆಚ್ಚಿಸುವುದು ಈಗಾಗಲೇ ಪ್ರಯೋಗಗಳಿಂದ ಕಂಡುಬಂದಿದೆ. ಈ ಸಂದೇಶವನ್ನು ಅಭಿಯಾನದ ಮೂರನೇ ಕಾರ್ಯಕ್ರಮ ಕೊಡುತ್ತವೆ. ಭಾರತವು ತತ್ವಜ್ಞಾನಿಗಳ ದೇಶ ಹಾಗಾಗಿ ಅನೇಕ ಮತಪಂಥಗಳು ಇಲ್ಲಿ ಇವೆ. ಅವುಗಳಿಗೆ ಅನುಸಾರವಾಗಿ ಬೇರೆ ಬೇರೆ ಧಾರ್ಮಿಕ ಪರಂಪರೆಗಳು ಅಥವಾ ಮಠಗಳು ಇವೆ. ಇವುಗಳ ಸಮನ್ವಯ ಅವಶ್ಯಕವಿದೆ. ವಿವಿಧ ಮತಪಂಥಗಳಲ್ಲಿ ಏಕತೆ ಸಾಧಿಸದಿದ್ದರೆ ಭಾರತೀಯತೆ ಉಳಿಯುವುದು ಕಷ್ಟವಾಗಬಹುದು. ಆದ್ದರಿಂದ ಎಲ್ಲಾ ಮಠಗಳು ಈ ರೀತಿಯಲ್ಲಿ ಒಂದಾಗಬೇಕಾದದ್ದು ಇಂದಿನ ಅತ್ಯಂತ ಪ್ರಮುಖ ಆದ್ಯತೆಗಳಲ್ಲಿ ಒಂದು. ಈ ಸಂದೇಶವನ್ನು ಅಭಿಯಾನದ ನಾಲ್ಕನೇ ಕಾರ್ಯಕ್ರಮ ಕೊಡುತ್ತದೆ. ಒಟ್ಟಾರೆ ಈ ನಾಲ್ಕನ್ನು ನಾವು ಆಚರಣೆಗೆ ತಂದರೆ ಭಾರತವು ಜಗದ್ಗುರುವಾಗುವುದರಲ್ಲಿ ಸಂದೇಹವಿಲ್ಲ.