ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾರತೀಯ ನ್ಯಾಯ ವ್ಯವಸ್ಥೆಯ ನ್ಯಾಯಪರತೆ

02:31 AM Nov 24, 2024 IST | Samyukta Karnataka

ಭಾರತೀಯ ನ್ಯಾಯದಾನ ವ್ಯವಸ್ಥೆಯಲ್ಲಿ ನ್ಯಾಯದ ತರ್ಕ-ವಿತರ್ಕ ನಡೆಯುತ್ತಲೇ ಇರುತ್ತದೆ. ಒಮ್ಮೊಮ್ಮೆ ಅನೇಕರ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ. ಕೆಳ ಕೋರ್ಟು ಕೊಟ್ಟ ತೀರ್ಪನ್ನು ಮೇಲಿನ ಕೋರ್ಟು ಪೂರ್ಣ ತೆಗೆದುಹಾಕಿದ ಅನೇಕ ಉದಾಹರಣೆಗಳಿವೆ. ಕೂದಲೆಳೆಯಷ್ಟು ಅಂತರದಲ್ಲಿ ಇಡೀ ತೀರ್ಪೇ ಬದಲಾಗಿರುತ್ತದೆ. ನ್ಯಾಯದ ಸೂಕ್ಷ್ಮದರ್ಶಕ ಕಣ್ಣಿಗೆ ಯಾರೂ ಎಣಿಸದ ಸೂಕ್ಷ್ಮತೆ ಕಾಣಿಸುತ್ತದೆ. ಇತ್ತೀಚೆಗಂತೂ ಎಲ್ಲದಕ್ಕೂ ಕೋರ್ಟು ಮೆಟ್ಟಲು ಹತ್ತುವುದನ್ನು ಜನರು ಹವ್ಯಾಸವಾಗಿ ಮಾಡಿಕೊಂಡಿರುವುದು ನ್ಯಾಯ ವ್ಯವಸ್ಥೆಯಲ್ಲಿ ಅವರು ಇಟ್ಟಿರುವ ವಿಶ್ವಾಸವನ್ನು ತೋರಿಸುತ್ತದೆ. ನ್ಯಾಯಾಧೀಶರೂ ಯಾವುದೇ ಪೂರ್ವಾಗ್ರಹಕ್ಕೆ ಒಳಗಾಗದೇ ಒತ್ತಡಕ್ಕೆ ಈಡಾಗದೇ ವಿಶುದ್ಧವಾದ ನ್ಯಾಯವನ್ನು ಎತ್ತಿ ಹಿಡಿಯುತ್ತಾರೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ೨,೭೫೦ ಎಕರೆ ಬಗರ್ ಹುಕುಂ ಜಮೀನನ್ನು ೧೪೭೦ ಮಂದಿ ನಕಲಿ ಮತ್ತು ಅಕ್ರಮ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಅನ್ನುವ ಪ್ರಕರಣದಲ್ಲಿ ತಹಶೀಲ್ದಾರರಿಗೆ ಕೊಟ್ಟ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಮತ್ತು ಮೂಲ ದಾಖಲೆ ತಿರುಚಿರುವುದನ್ನೂ ಒಳಗೊಂಡು ಎಲ್ಲ ಕಾನೂನುಬಾಹಿರ ಕೃತ್ಯಗಳನ್ನು ತಹಶೀಲ್ದಾರ್ ಅವರೇ ಮಾಡಿದ್ದು ಅಂತಹವರಿಗೆ ಹೇಗೆ ನಿರೀಕ್ಷಣಾ ಜಾಮೀನು ಸಿಕ್ಕಿತು ಎಂದು ಪ್ರಶ್ನಿಸಿ ಆ ಕುರಿತು ವಿವರಣೆ ನೀಡಲು ಸೂಚಿಸಿತು. ತಾಲೂಕಿನ ಸಾರ್ವಜನಿಕ ಸ್ವತ್ತುಗಳನ್ನು ಕಾಯುವ ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಅಕ್ಷಮ್ಯ ಅಪರಾಧ. ಜಮೀನು ಕಬಳಿಸುವ ಚೋರರಿಗೆ ದಂಡಿಸಬೇಕಾದ ಅಧಿಕಾರಿಯೇ ಅಪರಾಧಿಯಾದರೆ ಹೇಗೆ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಲ್ಲವೇ?
ಬೆಂಗಳೂರಿನಲ್ಲಿ ಸಂಭವಿಸಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡ ಅಪಘಾತವೊಂದರಲ್ಲಿ ತಂದೆ-ಮಗಳು ಸಾವನ್ನಪ್ಪಿದರು. ಸ್ಫೋಟವು ಆಕಸ್ಮಿಕವಾಗಿದೆ, ಟ್ರಾನ್‌ಫಾರ್ಮರ್‌ಗಳನ್ನು ನಿರ್ವಹಣೆ ಮಾಡುವುದು ಗುತ್ತಿಗೆದಾರರ ಕೆಲಸ, ಅವರ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದ್ದು ಬೆಸ್ಕಾಂನ ಕಿರಿಯ ಇಂಜಿನಿಯರ್ ಅವರಿಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ಅಲ್ಲದೇ ಮೃತರ ವಲಂಬಿತರಿಗೆ ಪರಿಹಾರ ಪಾವತಿ ಮಾಡಲಾಗಿದೆ. ಆದ್ದರಿಂದ ಇಂಜಿನಿಯರ್ ವಿರುದ್ಧ ಪ್ರಕರಣವನ್ನು ರದ್ದುಪಡಿಸಬೇಕೆನ್ನುವ ಬೇಡಿಕೆಯನ್ನು ಹೈಕೋರ್ಟ್ ತಳ್ಳಿಹಾಕಿದೆ. ಪರಿಹಾರವನ್ನು ಕೊಟ್ಟ ಮಾತ್ರಕ್ಕೆ ಇಂಜಿನಿಯರ್‌ನ ಕರ್ತವ್ಯಲೋಪವನ್ನು ನಿರ್ಲಕ್ಷಿಸಲಾಗದು. ಅವರು ವಿಚಾರಣೆಯನ್ನು ಎದುರಿಸಿ ಆರೋಪ ಮುಕ್ತರಾಗಲಿ ಎಂದಿತು. ನಿರ್ದಿಷ್ಟಪಡಿಸಿದ ವ್ಯಾಪ್ತಿಯಲ್ಲಿನ ಪರಿವರ್ತಕಗಳನ್ನು ನಿರ್ವಹಣೆ ಮಾಡುವುದು ಇಂಜಿನಿಯರ್ ಅವರ ಹೊಣೆ. ದೂರು ಬಂದ ತಕ್ಷಣ ಕ್ರಮ ಕೈಗೊಂಡಿದ್ದರೆ ಅವಘಡವನ್ನು ತಪ್ಪಿಸಬಹುದಿತ್ತು. ಅವರು ಅದನ್ನು ಸರಿಯಾಗಿ ಮಾಡದೇ ದಾಖಲಾದ ಹಲವಾರು ದೂರುಗಳನ್ನು ಸಹ ಬಾಕಿ ಉಳಿಸಿಕೊಂಡಿದ್ದಾರೆ. ಬೆಸ್ಕಾಂ ಪರಿಹಾರವನ್ನು ಪಾವತಿ ಮಾಡಿ ಕೈ ತೊಳೆದುಕೊಂಡರೆ ಆಗದು. ಸಂಬಂಧಿಸಿದವರ ಕರ್ತವ್ಯಲೋಪದ ವಿಚಾರಣೆ ಆಗಬೇಕೆಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು.
ಸರಕಾರದ ಅನೇಕ ಇಲಾಖೆಗಳಲ್ಲಿ ಈ ರೀತಿಯ ನಿರ್ಲಕ್ಷ್ಯದ ಮತ್ತು ಕರ್ತವ್ಯಲೋಪದಿಂದ ಹಲವಾರು ದುರ್ಘಟನೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ಜವಾಬ್ದಾರಿ ಹೊತ್ತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡದೇ ತೇಪೆ ಹಚ್ಚುವ ಕೆಲಸ ನಡೆಯುತ್ತದೆ. ಸಾರ್ವಜನಿಕ ಆಸ್ತಿ ಕಬಳಿಕೆ, ಸರಕಾರಿ ಕಟ್ಟಡಗಳ ನಿರ್ವಹಣೆ, ಮೈದಾನ, ಆಸ್ಪತ್ರೆ, ಸ್ಮಶಾನ ಇತ್ಯಾದಿಗಳ ನಿರ್ವಹಣೆ ಇಲ್ಲದೇ, ಗೋಡೆ, ಕಾಂಪೌಂಡ್, ಗೇಟುಗಳು ಬಿದ್ದು ಅಮಾಯಕರ ಬಲಿ ತೆಗೆದುಕೊಂಡಿವೆ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮವಹಿಸುವುದಾಗಿ ಬರೀ ಬಾಯಿ ಮಾತಲ್ಲಿ ಹೇಳಿ, ಮತ್ತ್ಯಾರೋ ಮೇಲೆ ಗೂಬೆ ಕೂರಿಸಿ ಪರಿಹಾರ ಕೊಟ್ಟು ಕರ್ತವ್ಯಚ್ಯುತಿ ಮಾಡಿದ ಅಧಿಕಾರಿಗಳನ್ನು ರಕ್ಷಿಸಲಾಗುತ್ತದೆ ಎನ್ನುವ ಗುಮಾನಿ ಇದೆ. ಇದನ್ನು ನ್ಯಾಯಾಲಯ ಸೂಕ್ಷ್ಮವಾಗಿ ಗಮನಿಸಿದೆ.
ಬೆಂಗಳೂರಿನ ಪ್ರತಿಷ್ಠಿತ ಹೊಟೇಲೊಂದರ ನೌಕರನೊಬ್ಬ ಅಡುಗೆ ಎಣ್ಣೆ ಪ್ಯಾಕೆಟನ್ನು ಕದ್ದರು, ಸೆಕ್ಯುರಿಟಿ ಗಾರ್ಡ್ ಕೊಟ್ಟ ದೂರು ಮತ್ತು ಕಳ್ಳಾಟದ ಸಿಸಿಟಿವಿ ದೃಶ್ಯಾವಳಿ ಆದರಿಸಿ ಶಿಸ್ತು ಪ್ರಾಧಿಕಾರ ಅವನನ್ನು ಕೆಲಸದಿಂದ ವಜಾಗೊಳಿಸಿತ್ತು. ಆ ನೌಕರನು ಕಾರ್ಮಿಕ ನ್ಯಾಯಾಲಯಕ್ಕೆ ಅಪೀಲ್ ಮಾಡಿದ. ಕಾರ್ಮಿಕ ನ್ಯಾಯಾಲಯ ವಿಚಾರಣೆ ನಡೆಸಿ ನೌಕರನನ್ನು ಕೆಲಸಕ್ಕೆ ಪುನಃ ತೆಗೆದುಕೊಳ್ಳಬೇಕು ಮತ್ತು ಬಾಕಿ ವೇತನ ನೀಡಬೇಕೆಂದು ತೀರ್ಪಿತ್ತಿತು. ಆಗ ಹೋಟೆಲ್ ಮಾಲೀಕರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದರು. ಕಳವು ಮಾಡಿದ್ದು ನಿಜ. ಸಿಸಿ ಕ್ಯಾಮೆರಾ ಮತ್ತು ಸೆಕ್ಯುರಿಟಿ ಹೇಳಿಕೆಯಂತಹ ಪುರಾವೆಗಳಿವೆ. ಸ್ವತಃ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆದ್ದರಿಂದ ಪೊಲೀಸ್ ದೂರು ದಾಖಲಾಗಿಸಿಲ್ಲ. ದೂರನ್ನು ದಾಖಲಿಸದಿರುವುದೇ ಅಪರಾಧವೆಂಬಂತೆ ಬಿಂಬಿಸಬಾರದು. ಕೈಗಾರಿಕಾ ಸಂಘರ್ಷ ಕಾಯ್ದೆ (ಐಡಿ) ಸೆಕ್ಷನ್ II ಎ ರ ಪ್ರಕಾರ ಅಧಿಕಾರವನ್ನು ಚಲಾಯಿಸುವಾಗ ಸಹಾನುಭೂತಿ ಸರಿಯಲ್ಲ. ಅಪರಾಧ ದೊಡ್ಡದಿರಲಿ ಅಥವಾ ಚಿಕ್ಕದಿರಲಿ ತಪ್ಪು ತಪ್ಪೇ. ಕಳ್ಳತನ/ವಂಚನೆ ಸಾಬೀತು ಆದ ಮೇಲೂ ಸಹಾನುಭೂತಿ ತೋರುವುದು ನ್ಯಾಯಕ್ಕೆ ಅಪಚಾರವೆಸಗಿದಂತೆ ಅಥವಾ ನಂಬಿಕೆಗೆ ದ್ರೋಹ ಬಗೆದಂತೆ ಎಂದು ಹೈಕೋರ್ಟ್ ಕಾರ್ಮಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿತು. ಶಿಸ್ತು ಪ್ರಾಧಿಕಾರವು ನೌಕರರನ್ನು ವಜಾ ಮಾಡಿದ್ದನ್ನು ಎತ್ತಿ ಹಿಡಿಯಿತು. ಅಡಿಕೆ ಕದ್ದು ಕಳೆದುಕೊಂಡ ಮಾನ ಆನೆ ಕೊಟ್ಟರೂ ಮರಳಿಬಾರದು.
ತುಮಕೂರಿನ ವ್ಯಕ್ತಿಯೊಬ್ಬ ಅಕ್ರಮ ಸರಾಯಿ ತಯಾರಿಕೆ ಮತ್ತು ಮಾರಾಟದಲ್ಲಿ ತೊಡಗಿಕೊಂಡಿದ್ದ ಆತನ ಜೊತೆಯಲ್ಲಿ ಆತನ ಹೆಂಡತಿ ಅದಕ್ಕೆ ನೆರವು ನೀಡಿದ್ದಳು. ಆದ್ದರಿಂದ ಆಕೆಯನ್ನು ಅಪರಾಧಿ ಎಂದು ಪರಿಗಣಿಸಬೇಕೆಂದು ದೂರುದಾರರು ಕೋರ್ಟಿಗೆ ಮನವಿಯನ್ನು ಸಲ್ಲಿಸಿದ್ದರು. ಆರೋಪಿ ಪತಿಯ ಜೊತೆಗಿದ್ದಾರೆ ಎನ್ನುವ ಕಾರಣಕ್ಕೆ ಪತ್ನಿಯೂ ಆರೋಪಿಯೆನ್ನಲಾಗುವುದಿಲ್ಲ. ಒಂದೇ ಮನೆಯಲ್ಲಿ ವಾಸವಾಗಿದ್ದರೆಂದ ಮಾತ್ರಕ್ಕೆ ಅಥವಾ ಸಂಬಂಧಿ ಎಂದ ಮಾತ್ರಕ್ಕೆ ಎಲ್ಲರನ್ನೂ ಅಪರಾಧಿಗಳೆನ್ನಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿತು. ರಾಮಾಯಣವನ್ನು ಬರೆದ ಆದಿಕವಿ ವಾಲ್ಮೀಕಿಯ ಜೀವನದ ಘಟನೆಯನ್ನು ಇದು ನೆನಪಿಸುತ್ತದೆ. ಸಂಸಾರವನ್ನು ನಡೆಸಲು ರತ್ನಾಕರನು ನಡೆಸುತ್ತಿದ್ದ ದರೋಡೆ, ಕಳ್ಳತನಕ್ಕೆ ತಾವು ಹೊಣೆಗಾರರಲ್ಲ ಎಂದು ಅವನ ಪತ್ನಿ ಮ್ತು ಮಕ್ಕಳು ರತ್ನಾಕರನ ಮುಖದ ಮೇಲೆ ಹೊಡೆದಂತೆ ಹೇಳಿದರು. ಸಂಸಾರ ನಡೆಸುವುದು ಅದನ್ನು ಕಟ್ಟಿಕೊಂಡವನ ಜವಾಬ್ದಾರಿ. ಹೇಗೆ ಅದನ್ನು ನಿರ್ವಹಿಸುತ್ತಾನೆ ಎನ್ನುವುದು ಅವನಿಗೆ ಬಿಟ್ಟಿದ್ದು. ಅದಕ್ಕೆ ಅವನು ಮಾಡುವ ಪಾಪದಲ್ಲಿ ತಾವು ಪಾಲುದಾರರಲ್ಲ ಎನ್ನುವುದು ಅವರ ಸ್ಪಷ್ಟ ವಿಚಾರವಾಗಿತ್ತು. ಈ ಮಾತು ರತ್ನಾಕರನ ಕಣ್ಣು ತೆರೆಸಿತು. ಪಶ್ಚಾತ್ತಾಪಕ್ಕಾಗಿ ತಪಸ್ಸಿಗೆ ಕುಳಿತನು. ಸುತ್ತಲೆಲ್ಲ ವಲ್ಮಿಕ (ಹುತ್ತ) ಬೆಳೆಯಿತು. ವಾಲ್ಮೀಕಿಯಾಗಿ ರಾಮಾಯಣದಂತಹ ಶ್ರೇಷ್ಠವಾದ ಮಹಾಕಾವ್ಯಯನ್ನು ಜಗತ್ತಿಗೆ ಕಾಣಿಕೆಯಾಗಿ ಕೊಟ್ಟನು.
ಭಾರತೀಯ ಸಮಾಜದಲ್ಲಿ ನುಸಳಿ, ತಳವೂರಿರುವ ಅಸ್ಪೃಶ್ಯತೆ ಮತ್ತು ಜಾತಿಯತೆಯನ್ನು ತೊಡೆದು ಹಾಕಲು ಅಸ್ಪçಶ್ಯತಾ ನಿವಾರಣಾ ಕಾನೂನನ್ನು ಜಾರಿಗೆ ತರಲಾಗಿದೆ. ಜಾತಿನಿಂದನೆಯನ್ನು ಮಾಡುವವರ ವಿರುದ್ಧ ತಕ್ಷಣ ದೂರು ದಾಖಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಸಾಮಾಜಿಕ ಸಾಮರಸ್ಯವನ್ನು ತರುವಲ್ಲಿ ಗಂಭೀರವಾದ ಈ ಕಾಯಿದೆಯನ್ನು ಅನೇಕರು ಉಪೇಕ್ಷಿತ ಬಂಧುಗಳ ಮೇಲಾಗುತ್ತಿರುವ ಶೋಷಣೆಯನ್ನು, ದಬ್ಬಾಳಿಕೆಯನ್ನು ಮತ್ತು ಅಕ್ರಮಗಳನ್ನು ಎದುರಿಸಲು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದಾರೆ. ಆದರೆ ಇನ್ನೂ ಕೆಲವರು ಇದನ್ನು ತಮ್ಮ ಸೀಮಿತ ಸ್ವಾರ್ಥ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳುವ ಯತ್ನಗಳು ಇತ್ತೀಚಿಗೆ ಹೆಚ್ಚುತ್ತಿವೆ. ವೈಯುಕ್ತಿಕ ನೆಲೆಯಲ್ಲಾದ ಮನಸ್ತಾಪಗಳನ್ನೂ ಸಾರ್ವಜನಿಕವಾಗಿ ಆದ ನಿಂದನೆಯೆಂದು ಆಪಾದಿಸಿ ಸುಳ್ಳು ಕೇಸು ದಾಖಲಿಸಿ ಕಿರಿಕಿರಿ ಉಂಟುಮಾಡುವ ಪ್ರಸಂಗಗಳೂ ಇವೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ನ್ಯಾಯಾಲಯವು ಇಂತಹ ಸುಳ್ಳು ಕೇಸುಗಳನ್ನು ಬರಖಾಸ್ತು ಮಾಡುವುದರ ಜೊತೆಗೆ ದೂರುದಾರರಿಗೆ ಎಚ್ಚರಿಕೆ ದಂಡವನ್ನೂ ವಿಧಿಸಿದೆ.
ಇದೇ ರೀತಿಯ ದುರುಪಯೋಗಕ್ಕೆ ಬಳಸಲ್ಪಟ್ಟ ಇನ್ನೊಂದು ಕಾಯಿದೆ ಎಂದರೆ ವರದಕ್ಷಿಣೆ ವಿರೋಧಿ ಕಾನೂನು. ಸಂವಿಧಾನದತ್ತ ಈ ಸುರಕ್ಷತೆಯನ್ನು ಕೆಲವರು ಮಹಿಳೆಯರಿಗೆ ಗಂಡಿನವರ ಕಡೆಯಿಂದ ಆಸ್ತಿ ಮತ್ತು ಹಣವನ್ನು ಪೀಕಿಸುವ ಸಲುವಾಗಿ ಅವರಿಗೆ ಕಿರಿಕಿರಿ ಉಂಟು ಮಾಡಿ ವಿಚ್ಛೇದನ ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಅನೇಕ ಕೇಸುಗಳನ್ನು ಸಹ ಮಾನ್ಯ ನ್ಯಾಯಾಲಯ ಸೂಕ್ಷ್ಮವಾಗಿ ಗಮನಿಸಿ, ಸೂಕ್ತವಾಗಿ ಪ್ರತಿಕ್ರಿಯಿಸಿದೆ.
ಇತ್ತೀಚೆಗೆ ಪೋಕ್ಸೋ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಯತ್ನಗಳು ನಡೆಯುತ್ತಿವೆ. ಬೇಕಾದಾಗಲೆಲ್ಲ ಜೊತೆಗೆ ಇದ್ದು (Living together), ಖುಷಿಯಾಗೇ ಇದ್ದು ಬೇಡವೆಂದ ಕ್ಷಣ ತನ್ನ ಮನಸ್ಸಿಗೆ ವಿರುದ್ಧವಾಗಿ ಸಂಪರ್ಕ ಬೆಳೆಸಿದ್ದಾರೆಂದು ಆರೋಪಿಸುವವರೂ ಹುಟ್ಟುಕೊಂಡಿದ್ದಾರೆ. ಇಂತಹುದನ್ನು ಪೋಕ್ಸೋ ಕಾಯ್ದೆ ಅಡಿ ದೂರುವವರೂ ಇದ್ದಾರೆ. ಜೊತೆಗಾರರನ್ನು ಶೋಷಿಸುವ ಅಸ್ತ್ರವನ್ನಾಗಿ ಕಾನೂನು ಬಳಕೆ ಮಾಡುವುದರ ವಿರುದ್ಧ ಜನಜಾಗೃತಿ, ಕಟ್ಟುನಿಟ್ಟಿನ ಕ್ರಮಗಳಾಗಬೇಕಿದೆ. ನ್ಯಾಯಾಲಯದ ಸಾಕ್ಷಿಗಳ ಆಧಾರದ ಮೇಲೆ ತೀರ್ಪು ಕೊಡುವುದರಿಂದ ಯಾವುದೇ ಸಾಕ್ಷಾö್ಯಧಾರಗಳ ಸಿಗದಂತೆ ಕ್ರೈಮ್ ಮಾಡುವ ಚಾಣಾಕ್ಷಣತನವನ್ನು ಕೆಲವರು ಮೈಗೂಡಿಸಿಕೊಂಡಿರುತ್ತಾರೆ. ಒಬ್ಬರ ದೌರ್ಬಲ್ಯಗಳನ್ನು ಬಳಸಿಕೊಂಡ ತಮ್ಮ ಇಚ್ಛೆ ಪೂರೈಸಿಕೊಂಡು ನಂತರ ತಿರುಗಿ ಬೀಳುವ ಮಹಾಶಯರೂ ಇರುತ್ತಾರೆ. ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಚಿಂತೆಯಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವುದೇನೋ ಆದರ್ಶದ ಮಾತು. ಆದರೆ ನೂರು ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದರಿಂದ ಸಮಾಜಕ್ಕೆ ಹೋಗುವ ಸಂದೇಶವೇನು? ಆದರಿಂದ ಬರುವ ಪೀಳಿಗೆಯ ಮೇಲಾಗುವ ಪರಿಣಾಮಗಳೇನು? ನ್ಯಾಯ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಇದು ಪೆಟ್ಟು ಕೊಡುವುದಿಲ್ಲವೇ?
ಪತಿ-ಪತ್ನಿಯರು, ಸ್ನೇಹಿತರು, ಸಂಬಂಧಿಕರು ಜಗಳವಾಡುವಾಗ ಸಿಟ್ಟಿನ ಭರದಲ್ಲಿ ಸಾಯಿ ಹೋಗು, ನೀನು ಸತ್ತರೆ ನಾವು ಆನಂದದಿಂದ ಇರುತ್ತೇವೆ ಎಂದು ಹೇಳಿದ ಮಾತ್ರಕ್ಕೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧವಾಗುವುದಿಲ್ಲ. ಸೂಕ್ಷ÷್ಮ ಸ್ವಭಾವದ ವ್ಯಕ್ತಿಗಳು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು. ಸಾಕ್ಷ್ಯಾಧಾರಗಳು ಆರೋಪಿಗಳ ಕೃತ್ಯದಿಂದಲೇ ಮೃತನು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಬಲವಾಗಿ ಸಾಬೀತುಪಡಿಸದ ಹೊರತು ಅಪರಾಧ ನಿಶ್ಚಯವಾಗುವುದಿಲ್ಲ ಎಂದು ಹೈಕೋರ್ಟ್ ನಿಖರ ಸಾಕ್ಷಿಗಳ ಕೊರತೆಯಿಂದಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪವನ್ನು ರದ್ದುಪಡಿಸಿದೆ. ಹೀಗೆ ನ್ಯಾಯವಾದಿಗಳು ಚಾಪೆಯ ಬುಡಕ್ಕೆ ನುಸುಳಿದರೆ ನ್ಯಾಯಾಧೀಶರು ರಂಗೋಲಿ ಕೆಳಗೆ ನುಸುಳುತ್ತಾರೆ. ನ್ಯಾಯದ ಪರಾಮರ್ಶೆಗೆ ಇದು ಸ್ವಾಗತಾರ್ಹವೇ. ತರ್ಕ-ವಿತರ್ಕಗಳಿಂದ ನ್ಯಾಯಕ್ಕೆ ಜಯ ಸಿಕ್ಕರೆ ಅದು ಒಳ್ಳೆಯದೇ. ಈ ಮಂಥನದಲ್ಲಿಸತ್ಯಮೇವ ಜಯತೆ'' ಎಂಬ ನುಡಿಯಂತೆ ನ್ಯಾಯ ಪುಟಿದೆದ್ದು ಬಂದರೆ ನ್ಯಾಯ ವ್ಯವಸ್ಥೆಗೆ ಒಂದು ಅರ್ಥ ಬರುತ್ತದೆ. ಅದರ ವಿಶ್ವಾಸಾರ್ಹತೆಯೂ ಹೆಚ್ಚುತ್ತದೆ.

Next Article