ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾರತ-ಚೀನಾ ಗಡಿ ಮುಂದೇನು ತಿಳಿಯದು

08:10 PM Oct 26, 2024 IST | Samyukta Karnataka

ಭಾರತ -ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಮಾತುಕತೆ ನಡೆದಿದೆಯೇ ಹೊರತು ಮತ್ತೇನೂ ಆಗಿಲ್ಲ. ಮುಂದೇನು ಎಂಬುದು ಇನ್ನೂ ತಿಳಿಯದು. ಈಗಲೇ ಏನನ್ನೂ ಹೇಳಲು ಬರುವುದಿಲ್ಲ. ಭಾರತ ಎಲ್ಲವನ್ನೂ ಹೇಳಲು ಉತ್ಸಾಹ ತೋರುತ್ತಿದೆ. ಚೀನಾ ಇನ್ನೂ ಮೌನದಲ್ಲೇ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಇದು ಬಗೆಹರಿಯಬೇಕು. ಭಾರತದ ವಿದೇಶಾಂಗ ಸಚಿವರು, ವಿದೇಶಾಂಗ ಕಾರ್ಯದರ್ಶಿ, ಮಿಲಿಟರಿ ಮುಖ್ಯಸ್ಥರು ಹೇಳಿಕೆಗಳನ್ನು ನೀಡಿದ್ದಾರೆ. ಚೀನಾದ ಪರವಾಗಿ ಸಚಿವಾಲಯದ ವಕ್ತಾರರ ಒಂದು ಹೇಳಿಕೆ ಹೊರತುಪಡಿಸಿದರೆ ಬೇರೆ ಏನೂ ಕೇಳಿ ಬರುತ್ತಿಲ್ಲ. ಇದಕ್ಕೆ ಕಾರಣ ಈಗಲೇ ಹೇಳುವುದು ಕಷ್ಟ. ಚೀನಾದಲ್ಲಿ ಪ್ರಜಾಪ್ರಭುತ್ವ ಇಲ್ಲ. ಅಲ್ಲಿಯ ಜನರ ವಾಕ್ ಸ್ವಾತಂತ್ರö್ಯಕ್ಕೆ ಮಿತಿ ಇದೆ. ಭಾರತದಲ್ಲಿ ಪ್ರತಿದಿನ ಕೂಗಾಟ- ಹಾರಾಟ ನಡೆಯುತ್ತಿರುತ್ತದೆ. ಏಕೆಂದರೆ ಇಲ್ಲಿ ಪ್ರಜಾಪ್ರಭುತ್ವ ಇದೆ. ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಅಮೆರಿಕ ೪೦ ಚಿನ್ನ, ೪೪ ಬೆಳ್ಳಿ ೪೨ ಕಂಚು, ಚೀನಾ ೩೯ ಚಿನ್ನ, ೨೭ ಬೆಳ್ಳಿ, ೨೪ ಕಂಚು ಪದಕಗಳನ್ನು ಪಡೆದವು. ಭಾರತ ಪಡೆದದ್ದು ೧ ಬೆಳ್ಳಿ ಮತ್ತು ೫ ಕಂಚು ಪದಕ ಮಾತ್ರ. ಆದರೆ ನಮ್ಮ ದೇಶದ ಸಂಭ್ರಮ ಹೇಳತೀರದು. ಅದೇರೀತಿ ಭಾರತ-ಚೀನಾ ಗಡಿ ವಿಚಾರದಲ್ಲಿ ಭಾರತದ ಸಂಭ್ರಮಕ್ಕೆ ಮಿತಿ ಇರುವಂತೆ ಕಂಡು ಬರುತ್ತಿಲ್ಲ. ಎರಡೂ ದೇಶಗಳ ಪ್ರಧಾನಿಗಳು ಪೂರ್ವ ಲಡಾಖ್‌ನಲ್ಲಿ ಜಂಟಿ ಸೇನಾ ಗಸ್ತಿಗೆ ಒಪ್ಪಿದ್ದಾರೆ. ೧೫ ದಿನಕ್ಕೊಮ್ಮೆ ಇದು ನಡೆಯಬೇಕೆಂದು ತೀರ್ಮಾನವಾಗಿದೆ. ಇದು ಇಷ್ಟೇ ಆಗಿರುವುದು.
ಮಾರ್ಚ್-ಏಪ್ರಿಲ್ ೨೦೨೦ ರಂದು ಗಡಿಯಲ್ಲಿ ಚೀನಾ ಸೈನಿಕರು ಭಾರತದ ಪ್ರದೇಶಕ್ಕೆ ಅತಿಕ್ರಮಣ ಮಾಡಿಕೊಂಡರು. ಇದು ಮೇ ೫ ರಂದು ಭಾರತಕ್ಕೆ ತಿಳಿಯಿತು. ಭಾರತ ಸೈನಿಕರು ಚೀನಾಸೈನಿಕರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದರು. ಘರ್ಷಣೆ ನಡೆದು ೨೦ ಭಾರತೀಯ ಸೈನಿಕರ ಬಲಿದಾನವಾಯಿತು. ಚೀನಾ ಕಡೆ ಸಾವು ನೋವು ಎಷ್ಟು ಎಂಬುದು ತಿಳಿಯಲಿಲ್ಲ. ಜೂನ್ ೨೦ ರಂದು ಪ್ರಧಾನಿ ಸರ್ವ ಪಕ್ಷಗಳ ಸಭೆ ಕರೆದು ಗಡಿಯಲ್ಲಿ ಏನೂ ನಡೆದಿಲ್ಲ ಎಂದರು. ಆದರೆ ಮಿಲಿಟರಿ ಅಧಿಕಾರಿಗಳು ಘರ್ಷಣೆ ನಡೆದಿರುವುದನ್ನು ಒಪ್ಪಿಕೊಂಡರು. ೧ ಸಾವಿರ ಚ.ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದ್ದಾರೆ ಎಂಬುದು ತಿಳಿಯಿತು. ಚೀನಾ ಗಾಲ್ವನ್ ಪ್ರದೇಶವನ್ನು ಹಿಡಿದಿಟ್ಟುಕೊಂಡಿದೆ. ಭಾರತ ದೇಪಸಾಂಗ್ ಮತ್ತು ದೇಮ್‌ಚೋಕ್ ಬಿಟ್ಟುಕೊಡುವಂತೆ ಕೇಳುತ್ತಿದೆ. ಚೀನಾ ಒಪ್ಪಿಲ್ಲ. ಅಕ್‌ಸಾಯ್ ಚಿನ್‌ನಲ್ಲಿ ಚೀನಾ ಕೆಲವು ಕಟ್ಟಡಗಳನ್ನು ನಿರ್ಮಿಸಿದೆ. ಹಿಂದೆ ಇದೇರೀತಿ ಒಪ್ಪಂದವಾದರೂ ಚೀನಾ ಪ್ರದೇಶವನ್ನು ಬಿಟ್ಟುಕೊಡಲಿಲ್ಲ. ಚೀನಾ ಗಡಿಯಲ್ಲಿ ಸೇತುವೆ ನಿರ್ಮಿಸಿದೆ, ೫ ಜಿ ಇಂಟರ್‌ನೆಟ್ ಸಂಪರ್ಕ ಕಲ್ಪಿಸಿಕೊಂಡಿದೆ. ಭಾರತ ಸಾಕಷ್ಟು ತಾಳ್ಮೆಯಿಂದ ವರ್ತಿಸುತ್ತಿದೆ. ಚೀನಾ ವರ್ತನೆ ಹೀಗೇ ಎಂದು ಹೇಳಲು ಬರುವುದಿಲ್ಲ. ಯಾವಾಗ ಬೇಕಾದರೂ ಮನಸ್ಸು ಬದಲಿಸುವ ಅಪಾಯವಿದೆ. ಗಾಲ್ವನ್, ಪಾಂಕಾಂಗ್, ಹಾಟ್‌ಸ್ಪಿçಂಗ್‌ಗಳಲ್ಲಿ ವಾತಾವರಣ ತಿಳಿಗೊಂಡಿಲ್ಲ. ಮೇಲೆ ಒಪ್ಪಂದಗಳು ನಡೆಯುತ್ತಿದ್ದರೂ ಒಳಗೆ ಇನ್ನೂ ಅನುಮಾನ ಹೊಗೆ ಇದ್ದೇ ಇದೆ.
ಎರಡೂ ದೇಶದ ಸೈನಿಕರು ಹಿಂದಕ್ಕೆ ಸರಿಯುವುದು ಹಾಗೂ ಅಲ್ಲಿ ಸಹಜಸ್ಥಿತಿ ಮರಳುವುದು ಇನ್ನೂ ದೂರದ ಮಾತು ಎಂಬುದು ಸತ್ಯ. ಅದರತ್ತ ಈಗ ಮೊದಲ ಹೆಜ್ಜೆ ಇಡಲಾಗಿದೆ ಎಂಬುದಂತೂ ನಿಜ. ಇದರ ಬಗ್ಗೆ ಕಾಂಗ್ರೆಸ್ ಸಾಕಷ್ಟು ಪ್ರಶ್ನೆಗಳು ಎತ್ತಿವೆ. ಉಳಿದ ಪ್ರತಿಪಕ್ಷಗಳು ಮಾತ್ರ ದಿವ್ಯಮೌನವಹಿಸಿವೆ. ದುರ್ದೈವದ ಸಂಗತಿ ಎಂದರೆ ಕಳೆದ ೪ ವರ್ಷಗಳಿಂದ ಇದರ ಬಗ್ಗೆ ಸಂಸತ್ತಿನ ಉಭಯ ಸದನದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಭಾರತ- ಚೀನಾ ನಡುವೆ ಸಮಗ್ರ ಒಪ್ಪಂದ ನಡೆಯುತ್ತದೆಯೇ ಶಾಂತಿ ನೆಲೆಸುತ್ತದೆಯೇ? ಈಗಲೇ ಹೇಳುವುದು ಕಷ್ಟ. ಈ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಗಳನ್ನು ಇಡುವುದು ಅಗತ್ಯ. ಸೇನೆಯನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯುವ ಮುನ್ನ ಎಚ್ಚರವಹಿಸುವುದು ಅಗತ್ಯ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾಗುತ್ತದೆ ಎಂಬುದನ್ನು ಈಗಲೇ ಊಹಿಸುವುದು ಕಷ್ಟ. ಭಾರತ- ಚೀನಾ ಗಡಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಇತರ ದೇಶಗಳು ಬಹಳ ಕಾತುರದಿಂದ ನೋಡುವುದು ಸಹಜ. ಇದರ ಬಗ್ಗೆ ವಿದೇಶಾಂಗ ಸಚಿವಾಲಯ ಎಲ್ಲವನ್ನೂ ಪರಿಶೀಲಿಸಿ ತೀರ್ಮಾನ ಕೈಗೊಳ್ಳಬೇಕು. ಇನ್ನೂ ಸಂಭ್ರಮದ ದಿನಗಳು ಬಂದಿಲ್ಲ. ಚೀನಾ ಯಾವ ರೀತಿ ವರ್ತಿಸುತ್ತದೆ ಎಂಬುದು ಬಹಳ ಮುಖ್ಯ. ನಮ್ಮ ಗಡಿಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ತೀರ್ಮಾನಗಳಾಗುತ್ತವೆ ಎಂಬುದನ್ನು ಅವಲೋಕಿಸುವುದೂ ಅಗತ್ಯ. ಪ್ರಜಾಪ್ರಭುತ್ವದಲ್ಲಿ ಯಾವುದೇ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾದರೆ ಅದರ ಪೂರ್ವಾಪರಗಳನ್ನು ಅಳೆದುಸುರಿದು ನೋಡುವುದು ಅಗತ್ಯ. ಈ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆಗಳು ಅನಿವಾರ್ಯ. ಭಾರತ ಪರಿಪಕ್ವ ದೇಶವಾಗಿರುವುದರಿಂದ ಇದರ ನಿರ್ಧಾರ ಉಳಿದ ದೇಶಗಳಿಗೆ ಮಾದರಿ.

Next Article