ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಭಾರತ ಸಮರ್ಪಿತ ಬಾಳಪುಷ್ಪ

03:19 AM Nov 28, 2024 IST | Samyukta Karnataka

ಭಗವಂತನ ಮಕ್ಕಳಾದ ನಾವೆಲ್ಲರೂ ಸಮಾನರು. ತರತಮದ ಭಾವವಿಲ್ಲದೆ ತನ್ನಂತೆಯೇ ಇರುವ ಇನ್ನೊಂದು ಜೀವವನ್ನು ತನ್ನಷ್ಟೇ ಪ್ರೀತಿಸುವ ವ್ಯಕ್ತಿಯೇ ನಿಜವಾದ ಮಾನವ. ಕರುಣೆ ಮತ್ತು ಪ್ರೇಮವಿಲ್ಲದ ಮನುಜ ಬದುಕಿಯೂ ಸತ್ತಂತೆ. ದೇವರ ಸೃಷ್ಟಿಯ ಪ್ರತಿಯೊಂದೂ ಸದಾ ಸ್ವೀಕಾರಾರ್ಹ' ಎಂಬ ಉದಾತ್ತ ಚಿಂತನೆಗಳನ್ನು ಬಿತ್ತಿ ಆದರ್ಶ ಸಮಾಜದ ನಿರ್ಮಾಣಕ್ಕೆ ಪ್ರೇರಣೆಯಾದ ಮಹಾತ್ಮಾ ಜ್ಯೋತಿಬಾ ಫುಲೆ ಆಧುನಿಕ ಭಾರತದ ಸಮಾನತೆಯ ಹರಿಕಾರರೆಂದರೆ ಅತಿಶಯೋಕ್ತಿಯಲ್ಲ. ಮಹಾರಾಷ್ಟ್ರದ ಕಟಗುಣವೆಂಬ ಹಳ್ಳಿಯ ಗೋವಿಂದರಾವ್ ಫುಲೆ-ಚಿಮಣಾಬಾಯಿ ದಂಪತಿಗಳಿಗೆ ಜನಿಸಿದ ಜ್ಯೋತಿರಾವ್, ಎಳವೆಯಲ್ಲೇ ಗದ್ದೆ ಕೆಲಸ, ಹೂಬೆಳೆ, ವ್ಯಾಪಾರದ ಒಳಪಟ್ಟನ್ನು ಕಲಿತು ಜೀವನ ವಿಶ್ವವಿದ್ಯಾಲಯದ ವಿದ್ಯಾವಾರಿಧಿ ಪದವಿ ಸಂಪಾದಿಸಿದರು. ಸಾಮಾಜಿಕವಾಗಿ ಹಿಂದುಳಿದಿದ್ದ ಕುಟುಂಬವಾಗಿದ್ದರಿಂದ ಸಹಜವಾಗಿಯೇ ಫುಲೆ ಶಿಕ್ಷಣದತ್ತ ಮುಖಮಾಡಲಿಲ್ಲ. ಆದರೆ ತರುಣನ ಓದುವ ಆಸೆಯನ್ನು ಮನಗಂಡ ಪರಿಚಿತರೊಬ್ಬರ ಸಹಕಾರದಿಂದ ಶಾಲಾಭ್ಯಾಸಕ್ಕೆ ಅವಕಾಶ ದೊರಕಿತು. ಬದುಕು ಅರ್ಥವಾಗುವ ಮೊದಲೇ ಸಾವಿತ್ರಿಬಾಯಿಯೊಡನೆ ಸಪ್ತಪದಿ ತುಳಿದ ಜ್ಯೋತಿಬಾ ಅನಕ್ಷರಸ್ಥ ಪತ್ನಿಯ ಗುರುವಾಗಿ, ವಿದ್ಯಾಭ್ಯಾಸಕ್ಕೆ ನೆರವಾದರು. ತನ್ನ ಪತ್ನಿಯು ಸರ್ವಗುಣಸಂಪನ್ನೆಯಾಗಿ ಮನೆ ಬೆಳಗಿದರಷ್ಟೇ ಸಾಲದು, ನಾಡಿನ ಹೆಣ್ಮಕ್ಕಳಿಗೆ ಸ್ಫೂರ್ತಿಚಿಲುಮೆಯಾಗಬೇಕೆಂಬ ಅವರಾಸೆಗೆ ಭಗವಂತನೂ ಅಸ್ತು ಅಂದ. ಉತ್ತರದಲ್ಲಿ ರಾಜಾರಾಮ ಮೋಹನರಾಯರು, ಈಶ್ವರಚಂದ್ರ ವಿದ್ಯಾಸಾಗರರು ಸೃಷ್ಟಿಸಿದ ಸ್ತ್ರೀ ಸಮಾನತೆಯ ಗಾಳಿ ದಕ್ಷಿಣಕ್ಕೆ ಬೀಸಿರಲಿಲ್ಲ. ಅಸ್ಪೃಶ್ಯತೆ, ಅಸಮಾನತೆ, ಶಿಕ್ಷಣರಾಹಿತ್ಯದಿಂದ ಬಹುಜನರ ಬದುಕು ಬರಡಾದಾಗ ನೊಂದವರ ಬಾಳಿಗೆ ಆಶಾಕಿರಣವಾಗಿ, ಭರವಸೆಯ ಬೆಳಕಾಗಿ ಮೂಡಿಬಂದ ಫುಲೆ ಹೊಸ ಇತಿಹಾಸ ನಿರ್ಮಿಸಿದರು. ಕೇವಲ ಹುಟ್ಟಿನ ಕಾರಣದಿಂದಾಗಿ ಪರಸ್ಪರ ದೂರ ಸರಿಯುವ ಸ್ಥಿತಿಯನ್ನು ವಿರೋಧಿಸಿದ ಫುಲೆ, ಸಾಮಾಜಿಕ ಏಕತೆಯನ್ನು ಸಾಧಿಸಲು ಶ್ರಮಿಸಿದರು. ವಿದೇಶೀ ಆಕ್ರಮಣದ ಪ್ರಭಾವ ಹಾಗೂ ಒಡೆದಾಳುವ ನೀತಿಯ ಕುತಂತ್ರದಿಂದ ಪರಸ್ಪರ ದೂರಾಗಿದ್ದ ಭಾರತೀಯರನ್ನು ಶಿಕ್ಷಣ ಮತ್ತು ಸ್ವಾಭಿಮಾನದ ಮೂಲಕ ಒಂದಾಗಿಸುವ ಪ್ರಯತ್ನಕ್ಕೆ ಕೈಹಾಕಿದ ಫುಲೆ, ಸಹಧರ್ಮಿಣಿಯ ಸಹಕಾರದಿಂದ ಕನ್ಯಾಪಾಠಶಾಲೆಯ ಯೋಜನೆ ರೂಪಿಸಿದಾಗ ಎದುರಾದ ವಿರೋಧವನ್ನು ಪರಿಗಣಿಸದೆ ಮುನ್ನುಗ್ಗಿದರು. ಸೇವಾಕಾರ್ಯ ಹಾಗೂ ಧರ್ಮಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಬ್ರಾಹ್ಮಣ ಮುಖಂಡ ತಾತ್ಯಾಸಾಹೇಬ ಭಿಡೆಯವರ ಮನೆಯಲ್ಲೇ ದಕ್ಷಿಣ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ, ಉಳ್ಳವರಿಗೆ ಮಾತ್ರ ಶಿಕ್ಷಣವೆಂಬ ಯೋಚನೆಯನ್ನು ಬದಿಗೊತ್ತಿಹೆಣ್ಮಕ್ಕಳು ಓದಿದರೆ ದೇಶವೇ ಬೆಳಗಿದಂತೆ' ಎಂದು ಉದ್ಗರಿಸಿದರು. ಭಿಡೆಯವರ ನಿರಂತರ ಪ್ರೋತ್ಸಾಹ ಹಾಗೂ ಎಲ್ಲಾ ವರ್ಗಗಳ ಸಹಕಾರದಿಂದ ಶಾಲೆಯ ಕೀರ್ತಿ ಹತ್ತಾರು ಊರುಗಳಿಗೆ ತಲುಪಿ ಮಹಿಳಾ ಶಿಕ್ಷಣ ಅನಿವಾರ್ಯವೆಂಬ ಪರಿಸ್ಥಿತಿಯನ್ನು ನಿರ್ಮಿಸಿತು. ಪೈಶಾಚಿಕ ಆಕ್ರಮಣಗಳಿಂದ ಕಣ್ಮುಚ್ಚಿದ್ದ ಭಾರತದ ದಕ್ಷಿಣ ಭಾಗದಲ್ಲಿ ಮಹಿಳಾ ಜ್ಞಾನಕೇಂದ್ರಗಳನ್ನು ತೆರೆದ ಕೀರ್ತಿ ಸಲ್ಲಬೇಕಾದ್ದು ಫುಲೆ ದಂಪತಿಗಳಿಗೆ. ವಿಧವಾ ವಿವಾಹವನ್ನು ಊಹಿಸುವುದೂ ಅಸಾಧ್ಯವಾಗಿದ್ದ ಕಾಲಘಟ್ಟದಲ್ಲಿ ಪುನರ್ವಿವಾಹವನ್ನು ಬೆಂಬಲಿಸಿದ ಫುಲೆ, ಅನಾಥ ಮಕ್ಕಳ ರಕ್ಷಣೆಗೆ ಆಶ್ರಮ ಸ್ಥಾಪಿಸಿದರು. ಹಳ್ಳಿಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಜನಸಾಮಾನ್ಯರನ್ನು ಆಗ್ರಹಿಸಿ ಮಾನಸಿಕವಾಗಿ ವ್ಯಕ್ತಿವ್ಯಕ್ತಿಗಳು ಬದಲಾಗದೆ ಸಾಮಾಜಿಕ ಕ್ರಾಂತಿ ಸಾಧ್ಯವಿಲ್ಲವೆಂದು ಬಲವಾಗಿ ನಂಬಿದ್ದರು. ಮಾನವಕಲ್ಯಾಣ, ಸಾಮಾಜಿಕ ಸಾಮರಸ್ಯ, ಸರಳವಾದ ಧಾರ್ಮಿಕ ಆಚರಣೆಗಳು, ದಮನಿತರ ಸಮಾನತೆಯ ಒತ್ತಾಯದ ಹಿನ್ನೆಲೆಯಲ್ಲಿ ಸತ್ಯಶೋಧಕ ಸಮಾಜವನ್ನು ಸ್ಥಾಪಿಸಿ ನವಮನ್ವಂತರ ಶಿಲ್ಪಿಯೆಂದು ಜನಜನಿತರಾದರು. ಸಾಮಾನ್ಯ ಮಾನವನೂ ಮಾಧವನಾಗುವ ಹಾದಿಯನ್ನು ಸರಳವಾಗಿ ವಿವರಿಸಿದ ಫುಲೆ ಚಿಂತನೆಗಳು ಸರ್ವಪ್ರಶಂಸೆಗೆ ಪಾತ್ರವಾಯಿತು. ಸಮಾಜ ಸುಧಾರಕರಾಗಿ, ಚಿಂತಕರಾಗಿ ಜನಾದರಕ್ಕೆ ಪಾತ್ರರಾಗಿ ಅರ್ಹವಾಗಿಯೇ `ಮಹಾತ್ಮಾ' ಸ್ಥಾನಕ್ಕೇರಿ, ಆಡುಮಾಡುಗಳ ನಡುವೆ ವ್ಯತ್ಯಾಸವಿಲ್ಲದಂತೆ ಬದುಕಿದ ಯುಗಪ್ರವರ್ತಕ ಫುಲೆಯವರು ಆರ್ತರ ಬದುಕಿಗೆ ಬೆಳಕಾದ ನಿಜವಾದ ಜ್ಯೋತಿ.
ಸ್ವಂತಕ್ಕೆಂದು ಎಳ್ಳಷ್ಟೂ ಯೋಚಿಸದೆ ಸರ್ವಸ್ವವನ್ನೂ ಬಡಜನರ ಹಿತಕ್ಕಾಗಿ ಸಮರ್ಪಿಸಿ ಸಂತನಂತೆ ಬದುಕಿದ ನಿಸ್ವಾರ್ಥ ಜನಸೇವಕರ ನೆನಪಾದಾಗ ಕಣ್ಣೆದುರು ಬರುವ ಮೊಟ್ಟಮೊದಲ ವ್ಯಕ್ತಿ ಮಹಾತ್ಮಾ ಠಕ್ಕರ್ ಬಾಪಾ. ಭಾರತ ಪ್ರದಕ್ಷಿಣೆಗೈದು ಆರ್ತರ, ಅವಕಾಶ ವಂಚಿತರ ಧ್ವನಿಯಾಗಿ, ಗುಡ್ಡಗಾಡು ಜನರ ಶಕ್ತಿಯಾಗಿ ದೀನರ ಬಾಳು ಬೆಳಗಿದ ಮಾನವತಾವಾದಿ ಬಾಪಾ ಜನಿಸಿದ್ದು ಗುಜರಾತಿನ ಭಾವನಗರದ ವಿಠಲದಾಸ್ ಠಕ್ಕರ್-ಸಯೀಬಾ ದಂಪತಿಗಳಿಗೆ ಅಮೃತಲಾಲ್ ಠಕ್ಕರ್ ಎಂಬ ಬಾಲನಾಮದಿಂದ. ಬಾಲ್ಯದ ಸಂಸ್ಕಾರ ಶಿಕ್ಷಣ ಪಡೆದುದು ಅಪ್ಪನ ಬಳಿ. ಊರಿನ ಬಡ ಮಕ್ಕಳ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಕರ್ತವ್ಯವೆಂದು ಪರಿಗಣಿಸಿದ ತಂದೆಯ ಸೇವಾಗುಣವನ್ನು ನೋಡುತ್ತಲೇ ಬೆಳೆದ ಅಮೃತಲಾಲರು ಇಂಜಿನಿಯರಿಂಗ್ ಪದವಿಯನ್ನು ಮುಗಿಸಿ ಕೆಲಕಾಲ ರೈಲ್ವೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದರು. ಪೋರಬಂದರಿನಲ್ಲಿ ಉದ್ಯೋಗಿಯಾಗಿ ಇಲಾಖೆಯಲ್ಲಿ ಉತ್ತಮ ಹೆಸರು ಸಂಪಾದಿಸಿ ಉಗಾಂಡಾದಲ್ಲೂ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿದರು. ಭಾರತಕ್ಕೆ ಮರಳಿದ ಬಳಿಕ ಸಾಂಗ್ಲಿ ಹಾಗೂ ಮುಂಬೈ ಪಾಲಿಕೆಗಳ ಮುಖ್ಯ ತಂತ್ರಜ್ಞರಾಗಿ ವೃತ್ತಿಯನ್ನು ಮುಂದುವರೆಸಿದ ಅಮೃತಲಾಲರು ಬಹುಬೇಗ ಜನಪ್ರಿಯರಾದರು. ವಿದೇಶೀ ಶಿಕ್ಷಣವನ್ನು ಪಡೆದಿದ್ದರೂ ಭಾರತಪ್ರೀತಿಯನ್ನು ಮರೆಯದ ಮಹಾನುಭಾವರಾಗಿ ಕಂಗೊಳಿಸಿದ ಬಾಪಾರ ಮುಂದಿನ ಹೆಜ್ಜೆಯೆಲ್ಲವೂ ಭಾರತದ ಉನ್ನತಿಗಾಗಿ ಮಾತ್ರವೇ ಮೀಸಲಾದುದು ದೇಶದ ಸೌಭಾಗ್ಯ.
ಪ್ರತಿಯೊಂದು ಮನೆ, ಕಚೇರಿ, ಸಾರ್ವಜನಿಕ ಕಾರ್ಯಕ್ರಮಗಳಿಂದ ಒಟ್ಟಾಗುವ ಕಸವನ್ನು ವಿಲೇವಾರಿಗೈವ ಕಾರ್ಮಿಕರು, ಒಳಚರಂಡಿಯ ಸಮರ್ಪಕ ವ್ಯವಸ್ಥೆಯಲ್ಲಿ ನಿತ್ಯವೂ ತೊಡಗಿಸಿಕೊಳ್ಳುವ ಕೂಲಿಯಾಳುಗಳ ಬವಣೆಯನ್ನು ಗಮನಿಸಿದ ಠಕ್ಕರ್, ಬಡಜನರ ಸುಖಜೀವನದ ಸದುದ್ದೇಶದಿಂದ ಸಾಮಾಜಿಕ ಜಾಗೃತಿಯ ಆಂದೋಲನಕ್ಕೆ ಧುಮುಕಿದರು. ಇತರರ ಕಷ್ಟಕ್ಕೆ ನೆರವಾಗುವ ಮನಸ್ಥಿತಿಯೇನೋ ಒಳ್ಳೆಯದೇ. ಆದರೆ ತನ್ನ ಆದಾಯ, ಮುಂದಿನ ಜೀವನ ನಿರ್ವಹಣೆಯ ಬಗ್ಗೆ ಕ್ಷಣಕಾಲವೂ ವಿಮರ್ಶಿಸದೆ ಸಮಾಜಜೀವನ ವ್ಯವಸ್ಥೆಯಿಂದ ಮಾರುದೂರ ಉಳಿದಿರುವವರ ನೆಮ್ಮದಿಗಾಗಿ ತಪಸ್ವಿಯಾಗಿ ಬದಲಾದರು. ಗೋಪಾಲಕೃಷ್ಣ ಗೋಖಲೆಯವರು ಪ್ರಾರಂಭಿಸಿದ ಭಾರತ ಸೇವಕ ಸಮಾಜದ ಸಕ್ರಿಯ ಸದಸ್ಯರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡ ಅಮೃತಲಾಲರು ಗಾಂಧೀಜಿಯವರ ವಿಚಾರಗಳಿಂದ ಪ್ರೇರಿತರಾಗಿ ಅಸ್ಪೃಶ್ಯತಾ ನಿವಾರಣಾ ಸಂಘವನ್ನು ಸ್ಥಾಪಿಸಿದರು. ಭಿಲ್ ಸೇವಾ ಮಂಡಲದ ಮೂಲಕ ಗುಡ್ಡಗಾಡಿನ ಜನರ ಉದ್ಧಾರಕ್ಕಾಗಿ ಶ್ರಮಿಸಿ ಭಾರತೀಯ ಆದಿಮಜಾತಿ ಸೇವಕ ಸಂಘವನ್ನೂ ಸ್ಥಾಪಿಸಿದರು. ಸದಾ ಚತುರತೆಯಿಂದ ಓಡಾಡಿ ಪ್ರತಿಯೊಬ್ಬನ ಸಣ್ಣ ಪ್ರಶ್ನೆಗೂ ನಿಖರವಾಗಿ ಉತ್ತರಿಸಿ ಅಪಾರವಾದ ಸಾಧುಜನಪ್ರೀತಿ ಗಳಿಸಿದ ಅಮೃತಲಾಲರನ್ನು ಗಾಂಧೀಜಿ, 'ಬಾಪಾ' ಎಂದು ಸಂಬೋಧಿಸಿದ ತರುವಾಯ ಅವರು ಠಕ್ಕರ್ ಬಾಪಾ ಎಂದೇ ಪ್ರಸಿದ್ಧರಾದರು. ಅಸಹಾಯಕರ ಪರಿಸ್ಥಿತಿಯನ್ನು ಅವಲೋಕಿಸುವ ಹಿನ್ನೆಲೆಯಲ್ಲಿ ಠಕ್ಕರ್ ಬಾಪಾ ಭಾರತ ಪ್ರವಾಸ ಕೈಗೊಂಡದ್ದು ದುರ್ಬಲರ ಏಳಿಗೆಗೆ ವರದಾನವಾಗಿ ಪರಿಣಮಿಸಿತು. ಬಂಗಾಳದ ಹಳ್ಳಿಗಳ ದುರವಸ್ಥೆ, ಒರಿಸ್ಸಾದ ಬರಡು ಭೂಮಿ, ಅಸ್ಸಾಮಿನ ಕಾಡು, ಗುಜರಾತಿನ ಗುಡಿಸಲು ನಿವಾಸಿಗಳು, ಮಹಾರಾಷ್ಟ್ರದ ಕೇರಿಗಳು, ತಮಿಳುನಾಡಿನ ಅಸ್ಪೃಶ್ಯ ಓಣಿಗಳು, ನಾಗ್ಪುರದ ಬುಡಕಟ್ಟು ಜನರ ನಿತ್ಯಜೀವನದ ದುರಿತ ದುಮ್ಮಾನಗಳನ್ನು ಪ್ರತ್ಯಕ್ಷ ವೀಕ್ಷಿಸಿದ ಬಾಪಾ, ಮೂವತ್ತೈದು ವರ್ಷಗಳ ಕಾಲ ಸೇವಾ ಚಟುವಟಿಕೆಗಳ ಭಾಗವಾದರು. ಗ್ರಾಮೀಣ ಭಾರತದ ಪ್ರಜೆಗಳ ಬದುಕು ಸುಧಾರಿಸದೆ ದೇಶದ ಪ್ರಗತಿ ಸರ್ವಥಾ ಅಸಾಧ್ಯವೆಂದು ಸ್ವತಂತ್ರ ಭಾರತದ ಜನಪ್ರತಿನಿಧಿಗಳಿಗೆ ತಿಳಿಹೇಳಿದರು. ಮೇಲುಕೀಳೆಂಬ ಭಾವನೆ ತೊರೆದು ಸಮರಸ ಭಾರತ ನಿರ್ಮಾಣದ ಕನಸಿಗಾಗಿ ಚಂದನದಂತೆ ತನ್ನ ಬದುಕನ್ನು ತೇಯ್ದು, ಗಿರಿಕಾನನವಾಸಿ ಬಡಜನರ ಸಶಕ್ತ, ಸದೃಢ ಬದುಕಿಗಾಗಿ ಅಹರ್ನಿಶಿ ದುಡಿದ ಸೇವಾಜೀವಿ ಠಕ್ಕರ್ ಬಾಪಾ, ಸೇವೆಯನ್ನು ವ್ರತವೆಂದು ಸ್ವೀಕರಿಸಿದ ಆದರ್ಶವಾದಿ.
ಭಾರತದ ಸಾಮಾಜಿಕ ಮತ್ತು ರಾಷ್ಟ್ರೀಯ ಪರಿವರ್ತನೆಗೆ ಬಹುದೊಡ್ಡ ಕೊಡುಗೆಯಿತ್ತು ದೇಶದೇಳಿಗೆಗಾಗಿ ಸದಾ ಶ್ರಮಿಸಿದ ಉಭಯ ಧೀಮಂತರ ಸ್ಮೃತಿ ಮತ್ತು ಜನ್ಮದಿನವಿಂದು. ಸಮಾನತೆಯ ಮಂತ್ರದಿಂದ ಮುನ್ನುಗ್ಗುತ್ತಿರುವ ಭಾರತಕ್ಕೆ ಜ್ಯೋತಿಸ್ವರೂಪರಾದ ಫುಲೆ ಮತ್ತು ಪ್ರಚಂಡ ಸೇವಾ ಶಕ್ತಿಯಿಂದಲೇ ಪ್ರಪಂಚ ಗೆಲ್ಲುತ್ತಿರುವ ಹೊಸ ಹಿಂದುಸ್ಥಾನಕ್ಕೆ ಪ್ರೇರಣೆಯಾದ ಬಾಪಾರ ನೆನಪು ಮಾಸದಿರಲಿ.

Next Article