ಭಿಡೆ ಗುರೂಜಿ ಎಂಬ ತರುಣರ ಸಂತ
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಗೆದ್ದು ಇತಿಹಾಸ ನಿರ್ಮಿಸಿದೆ. ಇತ್ತ ಮಹಾ ಅಘಾಡಿಯ ಮಿತ್ರ ಪಕ್ಷಗಳು ಮತ್ತು ಇತರೆ ಸಣ್ಣ ಪುಟ್ಟ ಪಕ್ಷಗಳು ಸೋಲಿಗೆ ಇವಿಎಂ ಕಾರಣ ಎಂದು ವಿನಾಕಾರಣ ದೂರುತ್ತಿವೆ. ಆದರೆ, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಈ ಗೆಲುವಿನ ರೂವಾರಿಗಳಾದ ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು, ಕೀರ್ತನಕಾರರು ಹಾಗೂ ಛತ್ರಪತಿ ಭಕ್ತ, ತರುಣರ ಸಂತ ಭಿಡೆ ಗುರೂಜಿ ಇವರಿಗೆ ಧನ್ಯತಾ ಭಾವದಿಂದ ಕೈ ಮುಗಿಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರ್ದಿಷ್ಟ ಸಂಖ್ಯೆಗಳನ್ನು ಪಡೆದು ಗುರಿ ತಲುಪಲು ಪಟ್ಟ ಪಡಿಪಾಟಲು ನಾವೆಲ್ಲರೂ ನೋಡಿದ್ದೇವೆ. ಒಂದು ಹಂತದಲ್ಲಿ ನಡ್ಡಾಜಿ ಅತಿಯಾದ ಆತ್ಮವಿಶ್ವಾಸದಿಂದ ಈಗ ಆರ್‌ಎಸ್‌ಎಸ್ ಅವಶ್ಯಕತೆ ನಮಗಿಲ್ಲ ಎಂಬುವಂತೆ ಬಿಂಬಿಸುವ ಹೇಳಿಕೆಯನ್ನು ಕೊಟ್ಟು ಪೇಚಿಗೆ ಸಿಲುಕಿದ್ದು ನಂತರ ಬಿಜೆಪಿಯ ಗಳಿಕೆ ಇಳಿಕೆ ಆದದ್ದು ಎಲ್ಲವೂ ಜಗಜ್ಜಾಹಿರವಾದ ಸಂಗತಿ. ಅಂದರೆ ಆರ್‌ಎಸ್‌ಎಸ್ ಎಂಬ ಸಂಘಟನೆ ಚುನಾವಣಾ ಹೊಸ್ತಿಲಲ್ಲಿ ಶಸ್ತç ತ್ಯಾಗ ಮಾಡಿದರೆ ಏನಾದೀತು ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಅದೇ ರೀತಿ ಇನ್ನೇನು ಬಿಜೆಪಿಯ ಸೋಲು ಸರ್ವ ಸಿದ್ಧ ಎಂದಾಗ ಆರ್‌ಎಸ್‌ಎಸ್ ರಂಗ ಪ್ರವೇಶಿಸಿದರೆ ಏನಾದೀತು ಎಂಬುದಕ್ಕೆ ಹರಿಯಾಣ ಹಾಗೂ ಮಹಾರಾಷ್ಟ್ರದ ಗೆಲುವು ತಾಜಾ ಉದಾಹರಣೆ. ಹರಿಯಾಣದಲ್ಲಂತೂ ಇನ್ನೇನು ಕಾಂಗ್ರೆಸ್ ಗೆದ್ದೇ ಬಿಟ್ಟಿತು ಎಂಬ ವಾತಾವರಣವಿದ್ದಾಗ ಕಾಂಗ್ರೆಸ್‌ನಿಂದ ಗೆಲುವನ್ನು ಕಸಿದುಕೊಂಡಿದ್ದು ಇದೇ ಆರ್‌ಎಸ್‌ಎಸ್‌ನ ಚುನಾವಣಾ ನಿರ್ವಹಣೆ ಹಾಗೂ ನಡೆಸಿದ ಹದಿನಾರು ಸಾವಿರ ಸಣ್ಣ ಪುಟ್ಟ ಸಭೆಗಳು. ಇತ್ತೀಚಿಗೆ ನಡೆದ ಮಹಾರಾಷ್ಟ್ರದ ಚುನಾವಣೆಯಲ್ಲಾದದ್ದು ಇದೇ. ಒಂದು ವರದಿಯ ಪ್ರಕಾರ ಆರ್‌ಎಸ್‌ಎಸ್ ಅರವತ್ತು ಸಾವಿರಕ್ಕೂ ಹೆಚ್ಚು ಸಣ್ಣ ಪುಟ್ಟ ಸಭೆಗಳನ್ನು ನಡೆಸಿತ್ತಂತೆ. ಅದಲ್ಲದೆ ಈ ಬಾರಿ ಬಿಜೆಪಿಯ ಕೈ ಹಿಡಿದದ್ದು ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು, ಕೀರ್ತನಕಾರರು ಹಾಗೂ ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕೈ ಹಿಡಿದೆತ್ತಿದ್ದು ಒಂದು ಕಾಲದ ಆರ್‌ಎಸ್‌ಎಸ್ ಸ್ವಯಂ ಸೇವಕರು ಹಾಗೂ ಇಂದು ಲಕ್ಷಾಂತರ ತರುಣರಿಗೆ ಛತ್ರಪತಿ ಶಿವಾಜಿ ಮಹಾರಾಜರ ವೀರಗಾಥೆಯನ್ನು ಭೋದಿಸಿ ತರುಣರಲ್ಲಿ ದೇಶ, ದೇವ ಹಾಗೂ ಧರ್ಮದೆಡೆ ಭಕ್ತಿಯ ಜ್ಯೋತಿ ಬೆಳಗಿಸುತ್ತಿರುವ ಬರಿಕಾಲ ಸಂತ "ಭಿಡೆ ಗುರೂಜಿ". ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕೈ ತಪ್ಪಬಹುದಾಗಿದ್ದ ಮರಾಠ ಮತಗಳು ಭಿಡೆ ಗುರೂಜಿ ಅವರ ಪ್ರಭಾವದಿಂದ ಬಿಜೆಪಿ ತೆಕ್ಕೆಗೆ ಸೇರಿವೆ, ಹಾಗಾದರೆ ಯಾರಿವರು ಭಿಡೆ ಗುರೂಜಿ.
ತೊಂಬತ್ತರರ ಹೊಸ್ತಿಲಲ್ಲಿರುವ ಸಂಭಾಜಿರಾವ್ ವಿನಾಯಕ ರಾವ್ ಭಿಡೆ ಅವರನ್ನು ಅವರ ಅನುಯಾಯಿಗಳು ಭಕ್ತಿಯಿಂದ ಭಿಡೆ ಗುರೂಜಿ ಎಂದು ಕರೆಯುತ್ತಾರೆ. ಭಿಡೆ ಗುರೂಜಿ "ಶಿವಪ್ರತಿಷ್ಠಾನ ಹಿಂದುಸ್ತಾನ" ಎಂಬ ಸಂಘಟನೆಯ ಅಧ್ಯಕ್ಷರು. ಈ ಸಂಸ್ಥೆಯಡಿಯಲ್ಲಿ ಲಕ್ಷಾಂತರ ತರುಣರಿಗೆ ದೇಶದ ಬಗ್ಗೆ, ಶಿವಾಜಿ ಮಹಾರಾಜರ ಹಾಗೂ ಸಂಭಾಜಿ ಮಹಾರಾಜರ ಧ್ಯೇಯದ ಬಗ್ಗೆ, ತ್ಯಾಗದ ಬಗ್ಗೆ ತಿಳಿ ಹೇಳಿ ಒಂದಿಡೀ ದೇಶ ಭಕ್ತರ ಪಡೆಯನ್ನೇ ರಚಿಸಿದ್ದಾರೆ. ಇವರು ಕರೆ ಕೊಟ್ಟರೆ ಮುಗಿಯಿತು ಅದು ಎಷ್ಟೇ ಕಷ್ಟ ಸಾಧ್ಯದ ವಿಷಯವಾಗಿರಲಿ ತರುಣರ ಪಡೆ ಹಿಂದೆ ಸರಿಯುವುದಿಲ್ಲ ಅದನ್ನು ಸಾಧಿಸಿಯೇ ಸಿದ್ಧ. ಅಂದರೆ ಭಿಡೆ ಗುರೂಜಿಯ ಮಾತು ತರುಣರಿಗೆ ವೇದ ವಾಕ್ಯ. ಅವರ ಜೀವನ ಶೈಲಿ ಕೂಡ ಅಷ್ಟೇ ಸರಳ ನೀವು ಕೊಲ್ಹಾಪುರದ ಕೆಂಪು ಬಸ್ ಅನ್ನು ಹತ್ತಿ ಸಾಂಗ್ಲಿಗೆ ಪ್ರಯಾಣ ಬೆಳಿಸುತ್ತಿದ್ದರೆ ಅವರು ನಿಮ್ಮ ಪಕ್ಕಕ್ಕೆ ಬಂದು ಸಾಮಾನ್ಯ ನಾಗರಿಕರಂತೆ ಕುಳಿತರು ಕುಳಿತುಕೊಂಡಿರಬಹುದು. ಶ್ವೇತ ವರ್ಣದ ಧೋತ್ರ ಮೇಲೊಂದು ಶ್ವೇತ ವರ್ಣದ ಅಂಗಿ ತಲೆಗೊಂದು ಬಿಳಿ ಟೊಪ್ಪಿ ಕೆಲವೊಮ್ಮೆ ಕೆಂಪು ಹಾಗೂ ಕೇಸರಿ ಪಗಡ. ಯಾವುದೇ ಕಾರಣಕ್ಕೂ ಪಾದರಕ್ಷೆಗಳನ್ನು ಧರಿಸುವುದಿಲ್ಲ, ಇಂದಿಗೂ ಬೆಳಗಾಗುವುದು ಸೂರ್ಯ ನಮಸ್ಕಾರ ಹಾಗೂ ಸಾವಿರ ದಂಡಗಳಿಂದ. ಅದು ಯಾವುದೇ ಪರಿಸ್ಥಿತಿ ಇರಲಿ ಕಾಡು ಮೇಡಿನ, ಕೋಟೆ ಕೊತ್ತಲೆಗಳ ದಾರಿ ಇರಲಿ ಕಾಲಿಗೆ ಪಾದರಕ್ಷೆಗಳನ್ನು ಮೆಟ್ಟಿದ್ದೆ ಇಲ್ಲ. ಇನ್ನು ಇರುವ ಆಸ್ತಿ ಎರಡು ಜೊತೆ ಬಟ್ಟೆಗಳು ಅಷ್ಟೇ. ಹೀಗೆ ಭಿಡೆ ಗುರೂಜಿ ಎಂದರೆ ನುಡಿದಂತೆ ನಡೆಯುವ ಬರಿಕಾಲಿನ ಸಂತ. ಇವರಿಗೆ ತಲೆದೂಗದ ರಾಜಕೀಯ ನಾಯಕರಿಲ್ಲ ಮೋದಿಜಿ, ಉದಯನರಾಜೆ ಭೋಸಲೆ (ಶಿವಾಜಿ ಮಹಾರಾಜರ ವಂಶಸ್ಥರು) ಎನ್‌ಸಿಪಿ ನಾಯಕ ಆರ್‌ಆರ್ ಪಾಟೀಲ್, ಏಕನಾಥ್ ಶಿಂದೆ, ದೇವೇಂದ್ರ ಫಡ್ನವೀಸ್, ಠಾಕ್ರೆ ಪರಿವಾರ ಎಲ್ಲರೂ ಇವರಿಗೆ ತಲೆಬಾಗುವವರೇ. ಹೀಗೆ ಭಿಡೆ ಗುರೂಜಿ ಅವರಿಗೆ ರಾಜಕಾರಣಿಗಳ ಒಡನಾಟವಿದ್ದರೂ ಕೂಡ ಇವರು ಸಕ್ರಿಯ ರಾಜಕಾರಣದಿಂದ ಗಾವುದ ಗಾವುದ ದೂರ. ಆದರೆ ದೇಶ ದೇವ ಹಾಗೂ ಧರ್ಮದ ವಿಷಯ ಬಂದಾಗ ಇಂತಹವರು ಎನ್ನದೆ ಯಾರನ್ನಾದರೂ ತರಾಟೆಗೆ ತೆಗೆದು ಕೊಳ್ಳುವ ಸ್ವಭಾವ. ಸೋಶಿಯಲ್ ಮೀಡಿಯಾಗಳು ದಾಂಗುಡಿ ಇಡುವ ಮುನ್ನವೇ ಭಿಡೆ ಗುರೂಜಿ ಬಸ್ಸಿನಲ್ಲಿ, ಕೆಲವೊಮ್ಮೆ ಕಾಲ್ನಡಿಗೆಯಲ್ಲಿಯೇ ಸಂಚರಿಸಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರ ಕನಸಿನ ಭಾರತವನ್ನು ಕಟ್ಟಲು ಹಳ್ಳಿಗಳಿಗೆ, ಪಟ್ಟಣಗಳಿಗೆ ಹಾಗೂ ನಗರಗಳಿಗೆ ಸಂಚರಿಸಿ ತರುಣರ ಬೃಹತ್ ಪಡೆಯನ್ನೇ ಸೃಷ್ಟಿಸಿದ್ದರು. ಆದರೆ ಆ ತರುಣ ಪಡೆಯನ್ನು ಯಾವುದೇ ವೈಯಕ್ತಿಕ ಲಾಭಕ್ಕಾಗಿ ಆಗಲಿ ಅಥವಾ ರಾಜಕೀಯ ಲಾಭಕ್ಕಾಗಿ ಬಳಸಿಕೊಂಡವರಲ್ಲ. ಕೆಲ ರಾಜಕೀಯ ವ್ಯಕ್ತಿಗಳು ಸೆಕ್ಯುಲರ್ ಮುಖವಾಡದಡಿ ಇವರ ಮೇಲೆ ಕೆಲವೊಮ್ಮೆ ಹಲ್ಲೆಗೂ ಮುಂದಾಗಿದ್ದರು ಎಂಬುದು ವಿಪರ್ಯಾಸ. ಆದರೆ, ಭಿಡೆ ಗುರೂಜಿ ಮಾತ್ರ ತಮ್ಮ ತರುಣ ವರ್ಗಕ್ಕೆ ಭೋದಿಸುತ್ತಿರುವುದು ದೇವ, ದೇಶ, ಧರ್ಮಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಜೀವನ ಶೈಲಿಯಲ್ಲಿ ಇಂತಹವುದು ಸಹಜ ಇಂತಹವರನ್ನು ನಿರ್ಲಕ್ಷಿಸಿರಿ ಎಂದು. ಅಲ್ಲದೆ ಗುರೂಜಿ ಬೃಹತ್ ಸಂಕಲ್ಪವನ್ನು ಮಾಡಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರಿಗೆ ಅಂದಾಜು ೧೨೮೦ ಕೆಜಿ ಚಿನ್ನದ ಸಿಂಹಾಸನವನ್ನು ಅವರ ಪಟ್ಟಾಭಿಷೇಕವಾದ ಜಾಗ ರಾಯಘಡದಲ್ಲಿಯೇ ಮರು ಪ್ರತಿಷ್ಠಾಪಿಸುವ ಪಣ ತೊಟ್ಟಿದ್ದಾರೆ. ಈ ಮಹತ್ಕಾರ್ಯಕ್ಕೆ ಹಣ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ರಾಜಕೀಯ ನಾಯಕರನ್ನು ಸಂಪೂರ್ಣವಾಗಿ ದೂರವಿಟ್ಟಿರುವುದು ಮತ್ತೊಂದು ವಿಶೇಷ.
ಹೀಗೆ ಭಿಡೆ ಗುರೂಜಿ ಅವರ ಶಿವ ಪ್ರತಿಷ್ಠಾನ ಹಿಂದೂಸ್ತಾನ್ ತರುಣರಲ್ಲಿ ಶಿವ ಭಕ್ತಿ, ದೇಶ ಭಕ್ತಿ ಹಾಗೂ ಧರ್ಮ ಭಕ್ತಿಯ ಬೀಜ ಬಿತ್ತುತ್ತಿದೆ. ಪರಿಣಾಮವಾಗಿ ಅಸಂಖ್ಯಾತ ತರುಣರು ಶಿವಾಜಿ ಹಾಗೂ ಸಂಭಾಜಿ ಮಹಾರಾಜರು ನಡೆದ ಸನ್ಮಾರ್ಗದಲ್ಲಿ ನಡೆಯುವ ಸಂಕಲ್ಪ ತೊಟ್ಟಿದ್ದಾರೆ. ಹಿಂದೂ ರಾಷ್ಟ್ರ ದೇವೋ ಭವ ಎಂಬ ವಿಶೇಷವಾದ ವೃತದ ದೀಕ್ಷೆ ತೊಟ್ಟಿದ್ದಾರೆ. ವೃತದಿಂದ ವೃತ್ತಿ ಹಾಗೂ ವೃತ್ತಿಯಿಂದ ರಾಷ್ಟ್ರಹಿತಕ್ಕಾಗುವ ಕೃತಿ ಸೃಷ್ಟಿಸಲು ಸಾಧ್ಯ ಎಂಬ ನಂಬಿಕೆ ಭಿಡೆ ಗುರೂಜಿ ಅವರದು. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಶಿವ ಪ್ರತಿಷ್ಠಾನ ಹಮ್ಮಿಕೊಂಡಿದೆ. ಅವುಗಳಲ್ಲಿ ದುರ್ಗಾ ಮಾತಾ ದೌಡ, ಬಲಿದಾನ್ ಮಾಸ್ ಹಾಗೂ ಗಡ್ಕೋಟ್ ಮೋಹಿಮ್ ಅಂತಹ ಕಾರ್ಯಕ್ರಮಗಳು ವಿಶೇಷವಾದುದು.
ಪ್ರತಿ ನವರಾತ್ರಿಯಂದು, ಮಹಾರಾಷ್ಟ್ರದಾದ್ಯಂತ ಶಿವಪ್ರತಿಷ್ಠಾನದ ಸದಸ್ಯರು ತಮ್ಮ ತಮ್ಮ ಪಟ್ಟಣಗಳಲ್ಲಿ ಸೇರಿ ದೇವಸ್ಥಾನದ ಕಡೆಗೆ ದುರ್ಗೆಯನ್ನು ಭಜಿಸುತ್ತ ಓಡುವ ವಿಶಿಷ್ಟ ಪರಂಪರೆ ಹುಟ್ಟು ಹಾಕಿ ಈ ಉತ್ಸವಕ್ಕೆ ದುರ್ಗಾ ಮಾತಾ ದೌಡ್ ಎಂದು ನಾಮಕರಣ ಮಾಡಿದ್ದಾರೆ. ಅಷ್ಟೇ ಆಗಿದ್ದರೆ ಏನು ವಿಶೇಷ ಅನ್ನುತ್ತಿದ್ದೀರಿ, ಆದರೆ ಶಿವ ಪ್ರತಿಷ್ಠಾನದ ತರುಣರು ಅಂದು ದೇಶದ ಹಿತಕ್ಕಾಗಿ ಉಪವಾಸವನ್ನು ಆಚರಿಸುತ್ತಾರೆ, ತರುಣರ ಉಪವಾಸ ವೈಯಕ್ತಿಕ ಬೇಡಿಕೆಗಳಿಗಲ್ಲ. ಅವರ ಪ್ರಾರ್ಥನೆ ದೇಶಕ್ಕಾಗಿ, ಆದ್ದರಿಂದ ದುರ್ಗಾ ಮಾತಾ ದೌಡ್ ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಮಹಾರಾಷ್ಟ್ರದಲ್ಲಿ "ರಾಷ್ಟ್ರೀಯ ನವರಾತ್ರಿ" ಎಂಬಂತೆ ಆಚರಿಸಲ್ಪಡುತ್ತಿದೆ. ಅದೇ ರೀತಿ ಛತ್ರಪತಿ ಸಂಭಾಜಿ ಮಹಾರಾಜ್ ತನ್ನ ಜೀವವನ್ನು ದೇಶಕ್ಕಾಗಿ ತ್ಯಾಗ ಮಾಡಿದ ದಿನವನ್ನು ಗುರೂಜಿ ಅನುಯಾಯಿಗಳು ಬಲಿದಾನ ದಿವಸ್ ಎಂದು ಆಚರಿಸುತ್ತಾರೆ. ಸಂಭಾಜಿ ಮಹಾರಾಜ್‌ರನ್ನು ದುರಳ ಔರಂಗಜೇಬ ಸರಿ ಸುಮಾರು ಒಂದು ತಿಂಗಳು ಬಂಧನದಲ್ಲಿಟ್ಟು ಕಿರುಕುಳ ಕೊಟ್ಟಿದ್ದನು. ಈ ನಿಟ್ಟಿನಲ್ಲಿ ಸಂಭಾಜಿ ಮಹಾರಾಜರಿಗೆ ಗೌರವ ಸಲ್ಲಿಸಲು ಫಾಲ್ಗುಣದ ಮೊದಲ ದಿನದಿಂದ ಫಾಲ್ಗುಣ ಅಮಾವಾಸ್ಯೆಯವರೆಗೆ ದಿನಂಪ್ರತಿ ತರುಣರೆಲ್ಲರೂ ಸೇರಿ ಭಿಡೆ ಗುರೂಜಿ ಅವರೇ ರಚಿಸಿದ ಸ್ವರಾಜ್ಯ ಶ್ಲೋಕಗಳನ್ನು ಪಠಿಸಿ ಆ ಮೂವತ್ತು ದಿನಗಳ ಕಾಲ ಸ್ವರಾಜ್ಯಕ್ಕಾಗಿ ಸಿಹಿತಿಂಡಿಗಳು ಮತ್ತು ಮನರಂಜನೆಯನ್ನು ತ್ಯಜಿಸಿ ಉಪವಾಸವನ್ನು ಕೈಗೊಳ್ಳುತ್ತಾರೆ.
ಇನ್ನು "ಗಡ್ಕೋಟ್ ಮೋಹಿಮ್" ಇದು ಶಿವಪ್ರತಿಷ್ಠಾನ ಆಯೋಜಿಸುವ ಮತ್ತೊಂದು ವಿಶಿಷ್ಟ ಕಾರ್ಯಕ್ರಮ. ಶಿವಾಜಿ ಮಹಾರಾಜರ ನೆನಪಿನಲ್ಲಿ ಶಿವಾಜಿಯ ದೇಶ ಪ್ರೇಮದ ಪ್ರತೀಕವಾಗಿ ಸಾವಿರಾರು ಯುವಕರು ಪ್ರತಿಕೂಲ ವಾತಾವರಣದಲ್ಲಿ ಕಾಡು ಮೇಡಿನ ಕೋಟೆ ಕೊತ್ತಲಗಳ ದಾರಿಯಲ್ಲಿ ಕಾಲ್ನಡಿಗೆಯಲ್ಲಿ ಪ್ರಯಾಣಿಸಿ, ಪ್ರಯಾಣಿಸುತ್ತಿರುವ ಸ್ಥಳದ ಐತಿಹಾಸಿಕ ಮಹತ್ವವನ್ನು ಇತಿಹಾಸಕಾರ ಮೂಲಕ ಪರಿಚಯಿಸುವ ಕೆಲಸವನ್ನು ಭಿಡೆ ಗುರೂಜಿ ತನ್ಮಯತೆಯಿಂದ ನಡೆಸಿಕೊಡುತ್ತಾರೆ. ಆಶ್ಚರ್ಯದ ವಿಷಯವೆಂದರೆ ಗುರೂಜಿ ಅವರು ವೃದ್ಧಾಪ್ಯದ ಹೊರತಾಗಿಯೂ ಪ್ರಾರಂಭದಿಂದ ಕೊನೆಯವರೆಗೆ ಎಲ್ಲಿಯೂ ವಿಶ್ರಾಂತಿ ಪಡೆಯದೆ ತರುಣ ಸಾಗರದೊಂದಿಗೆ ನಾಲ್ಕರಿಂದ ಐದು ದಿನಗಳ ಕಾಲ ನಡಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೀಗೆ ಭಿಡೆ ಗುರೂಜಿ ದೇಶಕ್ಕಾಗಿ, ಶಿವಾಜಿಯ ಧ್ಯೇಯಕ್ಕಾಗಿ ಚಂದನದ ಕೊರಡಿನಂತೆ ತಮ್ಮ ಜೀವನವನ್ನೇ ತೇಯುತ್ತಿದ್ದಾರೆ. ಇಂತಹ ಗುರೂಜಿ ಅವರ ಬಗ್ಗೆ ಮಹಾ ಅಘಾಡಿಯ ಮಿತ್ರ ಪಕ್ಷಗಳ ಹೇಳಿಕೆಗಳು ಹಾಗೂ ಪವಾರ್ ಅವರ ಕೃಪಾ ಪೋಷಿತ ಬ್ರಿಗೇಡ್ ಅಡಿಯಲ್ಲಿ ಸ್ವಾಮಿ ಸಮರ್ಥರ ಬಗ್ಗೆ ಆಡಿದ ಉಘಡ ಬಾಬಾ ಅಂದರೆ ಬರಿ ಮೈಯಲ್ಲಿ ಅಡ್ಡಾಡುವವರನ್ನು ಹೇಗೆ ನಮಿಸುವುದು ಎಂಬಂತ ಅರ್ಥ ಬರುವಂತಹ ಹೇಳಿಕೆಗಳು ಭಕ್ತರನ್ನು ರೊಚ್ಚಿಗೆಬ್ಬಿಸಿತು. ಈ ಕೃತ್ಯವನ್ನು ಕಾಳ್ಗಿಚ್ಚಿನಂತೆ ಮನೆ ಮನೆಗೆ ತಲುಪಿಸಿ ``ಏಕ್ ಹೈ ತೊ ಸೇಫ್ ಹೈ'' ಎಂಬ ಅಭಂಗ ಹಾಡಿದ್ದು ವಿಠ್ಠಲನ ಭಕ್ತ ಮಂಡಳಿ ವಾರ್ಕರಿಗಳು ಹಾಗೂ ಕೀರ್ತನಕಾರರು. ಹೀಗಾಗಿ ಜಾತಿಯ ಸಂಕೋಲೆಯಲ್ಲಿ ಛಿದ್ರವಾಗಲಿದ್ದ ಮರಾಠ ಮತಗಳು ಒಟ್ಟಾಗಿ ಸೇರಿ ಅಘಾಡಿಯ ಲಗಾಡಿ ತೆಗೆದಿದೆ.